Advertisement

ನುಡಿಸಿರಿಯಲ್ಲಿ ಮನಸ್ಸಿಗೂ ಹಬ್ಬ , ಹೊಟ್ಟೆಗೂ ಹಬ್ಬ!

10:32 AM Dec 03, 2017 | Team Udayavani |

ಮೂಡಬಿದಿರೆ (ಆಳ್ವಾಸ್‌): ಆಳ್ವಾಸ್‌ ನುಡಿಸಿರಿ ಅಪೂರ್ವ ಸಾಹಿತ್ಯ ಸಮ್ಮೇಳನ ಮಾತ್ರವಲ್ಲ, ಭೋಜನಕ್ಕೂ ಹೆಸರಾಗಿದೆ. ಇಲ್ಲಿನ ಊಟ-ಉಪಾಹಾರಗಳಿಗೂ ಗೋಷ್ಠಿಗಳಷ್ಟೇ ಮಹತ್ವ ನೀಡಲಾಗಿದೆ. 14ನೇ ವರ್ಷದ ಆಳ್ವಾಸ್‌ ನುಡಿಸಿರಿ ನಡೆಯುತ್ತಿದ್ದು, ಈ ಬಾರಿ ಗರಿಷ್ಠ ಮಂದಿ ಊಟ-ಉಪಾಹಾರ ಸ್ವೀಕರಿಸಿದ ದಾಖಲೆ ಬರೆಯುತ್ತಿದ್ದಾರೆ. 

Advertisement

ಇದಕ್ಕೆ ಪೂರಕವಾಗಿ ಊಟೋಪಚಾರ ಸಮಿತಿಯ ಎಲ್ಲರೂ ಅಹರ್ನಿಶಿ ಶ್ರಮಿಸುತ್ತಿದ್ದಾರೆ. ನುಡಿಸಿರಿ ಮಾರ್ಗದರ್ಶಕ ಡಾ | ಎಂ. ಮೋಹನ್‌ ಆಳ್ವ ಅವರ ನಿರ್ದೇಶನದಂತೆ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ. ಮೆನು ಆಯ್ಕೆಯನ್ನೂ ಅವರೇ ನಡೆಸಿದ್ದಾರೆ. ಎಷ್ಟೇ ಜನ ಬಂದರೂ ಲೋಪವಿಲ್ಲದಂತೆ ಸಂದರ್ಭ ನಿಭಾಯಿಸಲು ಆಳ್ವರ ತಂಡ ಸಿದ್ಧವಾಗಿಯೂ ಇದೆ. 

ಶುಚಿ, ರುಚಿಯಾದ ಊಟ
ಸಮ್ಮೇಳನದ ಮೊದಲ ದಿನ 70 ಸಾವಿರ ಮಂದಿ ಭೋಜನ ಸವಿದರೆ, ಎರಡನೆಯ ದಿನವಾದ ಶನಿವಾರ ಮಧ್ಯಾಹ್ನ ಮತ್ತು ರಾತ್ರಿ ಭೋಜನ ಸ್ವೀಕರಿಸಿದವರ ಸಂಖ್ಯೆ ಒಂದೂವರೆ ಲಕ್ಷ ದಾಟಿತು! ಬೆಳಗ್ಗೆ ಸುಮಾರು 40 ಸಾವಿರ ಮಂದಿ ಉಪಾಹಾರ ಸ್ವೀಕರಿಸಿದ್ದರು.  

ಗೋವಿಂದೂರು ಪ್ರಮೋದ್‌ ಹೆಗ್ಡೆ ಅವರ ಮೇಲುಸ್ತುವಾರಿಯಲ್ಲಿ ಮೂಡಬಿದಿ ರೆಯ ಸನತ್‌ಕುಮಾರ್‌, ಬೆಳುವಾಯಿಯ ರಾಜೇಂದ್ರ  ಮತ್ತು ಬಳಗ ಸಹಕರಿಸುತ್ತಿದ್ದಾರೆ. ಸೂರ್ಯ ಭಟ್‌, ಬಾಲಕೃಷ್ಣ ಶೆಟ್ಟಿ, ದೇವಿಪ್ರಸಾದ್‌ ಶೆಟ್ಟಿ ಅವರ ನೇತೃತ್ವದಲ್ಲಿ ವಿವಿಧ ತಂಡಗಳು ವಿವಿಧ ಹೊಣೆ ನಿರ್ವಹಿಸುತ್ತಿವೆ. ನುಡಿಸಿರಿ ಮತ್ತು ಕೃಷಿಸಿರಿಯ ಎರಡು ಕಡೆ ಈ ಬಾರಿ ಭೋಜನ ಶಾಲೆ ನಿರ್ಮಿಸಲಾಗಿದೆ. 250ಕ್ಕೂ ಹೆಚ್ಚು ಬಾಣಸಿಗರಿದ್ದಾರೆ. 1500ರಷ್ಟು ವಿದ್ಯಾರ್ಥಿಗಳ ಸಹಿತ ಭೋಜನ ವ್ಯವಸ್ಥೆಗೆ ಸ್ವಯಂಸೇವಕರು ನೇಮಕವಾಗಿದ್ದಾರೆ. 
 
ಶನಿವಾರ ಏನೇನಿತ್ತು? 
ಬೆಳಗ್ಗೆ: ಇಡ್ಲಿ ಸಾಂಬಾರ್‌, ಜೈನ್‌ ಕೇಕ್‌, ಶ್ಯಾಮಿಗೆ ಬಾತ್‌, ಟೀ- ಕಾಫಿ.

ಮಧ್ಯಾಹ್ನ: ಉಪ್ಪಿನಕಾಯಿ, ಅಲಸಂಡೆ ಪಲ್ಯ, ಗುಳ್ಳ ನುಗ್ಗೆ ಗಸಿ, ಚಪಾತಿ, ಟೊಮೆಟೊ ಸಾರು, ತೋವೆ, ಅನ್ನ, ಸಾಂಬಾರು, ಹೆಸರು ಸಾಗು ಪಾಯಸ, ಬೂಂದಿಲಾಡು, ಮೊಸರು. 

Advertisement

ರಾತ್ರಿ: ಉಪ್ಪಿನಕಾಯಿ, ಹಲಸಿನ ಕಾಯಿ ಕಡಲೆ, ಸೌತೆ-ಅಲಸಂಡೆ ಬೀಜ ಸಾಂಬಾರು, ಸಾರು, ತೋವೆ, ಅನ್ನ, ಗೋಧಿ ಕಡಿ ಪಾಯಸ, ಚಪಾತಿ.
 
ಸ್ವತ್ಛತೆಗೆ 350 ಜನರ ತಂಡ 
ಊಟೋಪಚಾರದ ಎರಡೂ ಕಡೆಯಲ್ಲೂ ಸ್ವತ್ಛತೆ ಅತೀವ ಕಾಯ್ದುಕೊಳ್ಳಲಾಗಿದೆ. ಇದಕ್ಕಾಗಿ 350 ಮಂದಿ ಕಾರ್ಯಕರ್ತರ ತಂಡವಿದೆ. ಹಾಳೆಯ ತಟ್ಟೆ, ಲೋಟಗಳನ್ನು ಟ್ರಾಕ್ಟರ್‌ಗಳಲ್ಲಿ ಸಂಗ್ರಹಿಸಿ ತ್ಯಾಜ್ಯ ನಿರ್ವಹಣೆಯ ಸ್ಥಳದತ್ತ ಸಾಗಿಸಲಾಗುತ್ತಿದೆ. ಪ್ರೇಮನಾಥ ಶೆಟ್ಟಿ, ಧರ್ಮೇಂದ್ರ ಬಲ್ಲಾಳ್‌, ಸುಧಾಕರ ಪೂಜಾರಿ ಅವರು ಇದರ ಉಸ್ತುವಾರಿ ಹೊಣೆ ಹೊತ್ತಿದ್ದಾರೆ.  

ಖಡಕ್‌ ರೊಟ್ಟಿ ಖುಷಿ 
ನುಡಿಸಿರಿಗೆ ಉತ್ತರ ಕರ್ನಾಟಕದಿಂದ ಅಧಿಕ ಸಂಖ್ಯೆ ಪ್ರತಿನಿಧಿಗಳು ಇರುತ್ತಾರೆ. ಆದ್ದರಿಂದ ಈ ಬಾರಿ ಖಡಕ್‌ ರೊಟ್ಟಿ ಮೆನುವಿನಲ್ಲಿದೆ ಅದರ ಜತೆ ನೆಲಗಡಲೆ ಖಾರ ಚಟ್ನಿ, ಮೊಸರು ನೀಡಲಾಗುತ್ತಿದೆ. 

 ರವಿವಾರದ ಮೆನು ಏನಿದೆ? 
ಬೆಳಗ್ಗೆ: ಇಡ್ಲಿ ಸಾಂಬಾರು, ಪೈನಾಪಲ್‌ ಕೇಕ್‌, ಟೊಮೆಟೊ ಬಾತ್‌, ಟೀ-ಕಾಫಿ. 
ಮಧ್ಯಾಹ್ನ: ಉಪ್ಪಿನಕಾಯಿ, ತೊಂಡೆ ಕಾಯಿ ಕಡ್ಲೆ, ಚಪಾತಿ, ಅನ್ನ, ಬಟಾಟೆ ಅಲಸಂಡೆ ಬೀಜ, ತೋವೆ, ಸಾಂಬಾರು, ಜಿಲೇಬಿ, ಶ್ಯಾಮಿಗೆ ಪಾಯಸ, ಮೊಸರು. 
ರಾತ್ರಿ: ಸುವರ್ಣಗಡ್ಡೆ ಕಡ್ಲೆ, ಕುಂಬಳಕಾಯಿ ಪದಾರ್ಥ, ತೋವೆ, ಸಾರು, ಅನ್ನ, ಕಡ್ಲೆ ಬೇಳೆ ಪಾಯಸ, ಚಪಾತಿ.

ಅಬ್ಬಬ್ಟಾ.. ಅಬ್ಬಬ್ಟಾ..!
ನುಡಿಸಿರಿಯಲ್ಲಿ ಬಗೆಬಗೆಯ ಖಾದ್ಯ ವೈವಿಧ್ಯಗಳ ತಯಾರಿಗೆ ಜೀನಸು, ತರಕಾರಿ, ಎಣ್ಣೆ ಇತ್ಯಾದಿ ಪರಿಕರಗಳ ಪ್ರಮಾಣವೆಷ್ಟು? ಎಂದು ಕೇಳಿದರೆ ಅಬ್ಬಬ್ಟಾ ಅನ್ನಿಸದಿರದು.  

ಅಕ್ಕಿ ಸೋನಾಮಸೂರಿ- 250 ಕ್ವಿಂಟಾಲ್‌, ಕುಚ್ಚಿಗೆ ಅಕ್ಕಿ- 100 ಕ್ವಿಂ.; ಗೋಧಿ ಹಿಟ್ಟು- 65 ಕ್ವಿಂ., ಸಕ್ಕರೆ- 800 ಕೆ.ಜಿ., ಬೆಲ್ಲ- 400 ಕೆಜಿ, ಗೇರುಬೀಜ- 300 ಕೆಜಿ, ಉದ್ದಿನ ಬೇಳೆ- 15 ಕ್ವಿಂ., ರಸಂ ಹುಡಿ- 25 ಕೆ.ಜಿ., ತೊಗರಿಬೇಳೆ- 100 ಕ್ವಿಂ., ಹೆಸರು ಬೇಳೆ- 80 ಕ್ವಿಂ., ಹಾಲಿನ ಹುಡಿ- 200 ಕೆಜಿ. ಇನ್ನುಳಿದಂತೆ ಅಗತ್ಯಕ್ಕೆ ತಕ್ಕಷ್ಟು ಇಡಿ ಹೆಸರು, ರವೆ, ಒಣ ದ್ರಾಕ್ಷಿ, ಲವಂಗ, ಚೆಕ್ಕೆ, ಗಸಗಸೆ, ಇಂದು, ಮೆಂತೆ, ಬಟಾಣಿ, ಟೇಬಲ್‌ ಸಾಲ್ಟ್- 40 ಕ್ವಿಂ., ಅಕ್ಕಿ ಹಿಟ್ಟು- 2 ಕ್ವಿಂ., ಟೀ ಹುಡಿ- 225 ಕೆಜಿ, ಕಾಫಿ ಹುಡಿ- 50 ಕೆಜಿ, ಶ್ಯಾವಿಗೆ 300 ಕೆಜಿ. ತುಪ್ಪ- 8 ಕ್ವಿಂ., ಎಣ್ಣೆ- 100 ಡಬ್ಬ ತರಿಸಲಾಗಿದೆ. 4 ಲಕ್ಷ ತಟ್ಟೆ ಲೋಟೆಗಳನ್ನು ಸುಳ್ಯದಿಂದ ತರಿಸಲಾಗಿದೆ. 

ತರಕಾರಿ : ಅಲಸಂಡೆ- 4000 ಕೆಜಿ, ಊರಿನ‌ ತೊಂಡೆಕಾಯಿ- 2100 ಕೆಜಿ, ಕಾಯಿ ಮೆಣಸು- 400 ಕೆಜಿ, ಬಟಾಟೆ- 2400 ಕೆಜಿ, ಲಿಂಬೆ- 1500, ಗುಳ್ಳ- 350 ಕೆ.ಜಿ., ಸೌತೆ- 500 ಕೆಜಿ, ಚೀನಿಕಾಯಿ- 1700 ಕೆಜಿ, ಸುವರ್ಣಗೆಡ್ಡೆ- 2700 ಕೆಜಿ, ಕೊತ್ತಂಬರಿ ಸೊಪ್ಪು- 300 ಕೆಜಿ, ಕುಂಬಳಕಾಯಿ- 2300 ಕೆಜಿ, ಟೊಮೆಟೊ- 1000 ಕೆಜಿ, ನುಗ್ಗೆ- 50 ಕೆಜಿ, ಅನಾನಸು- 100 ಕೆಜಿ, ಇತ್ಯಾದಿ. ತರಕಾರಿಗಳನ್ನು ಚಿಕ್ಕಮಗಳೂರಿಂದ ಸಂಗ್ರಹಿಸಲಾಗಿದೆ. 

 ಮನೋಹರ ಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next