Advertisement

ಪುನೀತ್‌ ರಾಜ್‌ಕುಮಾರ್‌ ನಿಜವಾದ ಜನನಾಯಕ: ಶ್ರೀ

01:45 PM Nov 15, 2021 | Team Udayavani |

ದಾವಣಗೆರೆ: ಈಚೆಗೆ ನಿಧನರಾದ ಚಿತ್ರನಟ ಪುನೀತ್‌ ರಾಜ್‌ಕುಮಾರ್‌ ನಿಜವಾದ ಜನನಾಯಕ ಆಗಿದ್ದರು ಎಂದು ದಾವಣಗೆರೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ಸ್ಮರಿಸಿದರು.

Advertisement

ದಾವಣಗೆರೆ ಜಿಲ್ಲೆ ವಾದ್ಯಗೋಷ್ಠಿ ಕಲಾವಿದರ ಸಂಘದ ವತಿಯಿಂದ ಶಿವಯೋಗಿ ರಂಗಮಂದಿರದಲ್ಲಿ ಆಯೋಜಿಸಿದ್ದ ಅಪ್ಪು ಗೀತ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿನಿಮಾದಲ್ಲಿ ಬಣ್ಣ ಹಾಕಿಕೊಂಡು ನಾಯಕನಾಗುವುದು ಬಹಳ ಸುಲಭ. ಆದರೆ, ನಿಜವಾದ ಜನ ನಾಯಕನಾಗುವುದು ಕಷ್ಟ. ಅದಕ್ಕೆ ಅಪವಾದ ಎನ್ನುವಂತೆ ಪುನೀತ್‌ ರಾಜಕುಮಾರ್‌ ಅವರು ನಿಜವಾದ ಜನನಾಯಕನಾಗಿ ಬೆಳೆದರು ಎಂದು ತಿಳಿಸಿದರು.

ಪುನೀತ್‌ ರಾಜ್‌ಕುಮಾರ್‌ ಅವರು ಬಾಲ್ಯದಿಂದಲೇ ನಟನೆ ಮಾಡುತ್ತ ಹಲವಾರು ಚಿತ್ರಗಳ ಮಾಡುವ ಮೂಲಕ ನಾಡಿನ ಪ್ರಶಂಸೆ ಪಡೆದಿದ್ದಾರೆ. ಸಿನಿಮಾ ಕ್ಷೇತ್ರದಲ್ಲಿ ನಟನೆಯ ಜೊತೆಗೆ ಅತ್ಯುತ್ತಮ ಸಮಾಜಮುಖೀ ಕೆಲಸಗಳು ಮಾಡುವ ಮೂಲಕ ಸಾರ್ಥಕತೆ ಬದುಕ ಸಾಗಿಸಿದ್ದಾರೆ. ಈಗ ಅವರು ನಮ್ಮೊಂದಿಗೆ ಭೌತಿಕವಾಗಿ ಇಲ್ಲ. ಆದರೆ, ಎಲ್ಲರ ಹೃದಯದಲ್ಲಿ ಪೂಜಿಸಲ್ಪಡುತ್ತಿದ್ದಾರೆ. ಮಾನವರಾಗಿ ಜನಿಸಿದ ಮೇಲೆ ಬದುಕಿದರೆ ಹೀಗೆ ಬದುಕಬೇಕು ಎಂಬುದ ತೋರಿಸಿ ಕೊಟ್ಟಿದ್ದಾರೆ. ಪ್ರತಿಯೊಬ್ಬರಿಗೆ ಮಾದರಿಯಾಗಿದ್ದಾರೆ ಎಂದು ತಿಳಿಸಿದರು.

ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ. ನಾರಾಯಣಗೌಡ ಬಣ) ಜಿಲ್ಲಾ ಅಧ್ಯಕ್ಷ ಎಂ.ಎಸ್‌. ರಾಮೇಗೌಡ ಮಾತನಾಡಿ ಒಬ್ಬ ಕಲಾವಿದ ಹೇಗೆ ಇರಬೇಕು ಎಂಬುದನ್ನ ಪುನೀತ್‌ ರಾಜ್‌ಕುಮಾರ್‌ ತೋರಿಸಿಕೊಟ್ಟು ಹೋಗಿದ್ದಾರೆ. ಅಪ್ಪು ಅವರು ಎಲ್ಲರನ್ನೂ ಅಪ್ಪಿಕೊಳ್ಳುವ ಮನಸ್ಸು ಮತ್ತು ಒಪ್ಪಿಕೊಳ್ಳುವ ಹೃದಯ ಶ್ರೀಮಂತಿಕೆಯುಳ್ಳ ಮಹಾನ್‌ ಕಲಾವಿದ. ಪುನೀತ್‌ ರಾಜಕುಮಾರ್‌ ಅವರು ಮಾಡಿದ ಸಾಧನೆ ದೇಶಕ್ಕೆ ಮಾದರಿಯಾಗಿದೆ. ಎಲ್ಲ ರಾಜಕಾರಣಿಗಳು ಅಂತಹ ಮಾದರಿ ಕೆಲಸ ಮಾಡಿದರೆ ಭಾರತದಲ್ಲಿ ಬಡತನ ನಿರ್ಮೂಲನೆ ಮಾಡಲು ಸಹಕಾರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಇಂದಿನ ಯುವ ಜನಾಂಗಕ್ಕೆ ಮಾದರಿಯಾಗಿರುವ ಅಪ್ಪು ಅವರು ಇನ್ನು ಬಹಳ ಕಾಲ ನಮ್ಮೊಂದಿಗೆ ಇರಬೇಕಿತ್ತು. ಬಾಳಿ ಬದುಕ ಬೇಕಾಗಿತ್ತು. ಸಾವಿರಾರು ಜನರಿಗೆ ಬದುಕು ಕಟ್ಟಿಕೊಟ್ಟ ಪುನೀತ್‌ ರಾಜಕುಮಾರ್‌ ಅವರು ಎಲ್ಲರಿಗೂ ಮಾರ್ಗದರ್ಶಿ. ತಂದೆ ರಾಜಕುಮಾರ್‌ ಹೆಸರು ಮಾಡಿದರೆ. ಮಗ ಪುನೀತ್‌ ರಾಜ್‌ಕುಮಾರ್‌ ಮತ್ತೂಂದು ರೀತಿಯಲ್ಲಿ ಹೆಸರು ಮಾಡಿ ಕನ್ನಡದ ಕೀರ್ತಿ ಬೆಳೆಸಿ ಕೀರ್ತಿ ತಂದಿದ್ದಾರೆ. ಆದರೆ, ಅಂತಹವರು ಇಂದಿಗೆ ನಮ್ಮೊಂದಿಗಿಲ್ಲ ಎಂಬುದು ಬೇಸರದ ಸಂಗತಿ ಎಂದು ವಿಷಾದಿಸಿದರು.

Advertisement

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರವಿಚಂದ್ರ, ಲೇಡೀಸ್‌ ಕ್ಲಬ್‌ ಅಧ್ಯಕ್ಷೆ ಅಮೀರಾಬಾನು ವಾದ್ಯಗೋಷ್ಠಿ ಕಲಾವಿದರ ಸಂಘದ ಅಧ್ಯಕ್ಷ ಪರಮೇಶ್‌, ಹರೀಶ್‌, ಪರಮೇಶ್‌, ಮಂಜುನಾಥ್‌ ಇತರರು ಇದ್ದರು. ಪುನೀತ್‌ ರಾಜ್‌ಕುಮಾರ್‌ರವರ ಹಾಡುಗಳ ಹಾಡುವ ಮೂಲಕ ಗೀತ ನುಡಿನಮನ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next