Advertisement

ಮಣಿಪುರದಲ್ಲಿ ಮಹಿಳೆಯರ ನಗ್ನ ಮೆರವಣಿಗೆ ಅಮಾನವೀಯ

11:26 PM Jul 20, 2023 | Team Udayavani |

ಮೇ ತಿಂಗಳ ಆರಂಭದಿಂದ ಶುರುವಾಗಿರುವ ಮಣಿಪುರ ಹಿಂಸಾಚಾರ ಇನ್ನೂ ತಹಬಂದಿಗೆ ಬಂದಿಲ್ಲ. ಪ್ರತಿದಿನವೂ ಒಂದಿಲ್ಲೊಂದು ಕಡೆಗಳಲ್ಲಿ ಹಿಂಸಾಚಾರ ನಡೆಯುತ್ತಿದ್ದು, ಅಮಾಯಕ ಜೀವಗಳು ಬಲಿಯಾಗುತ್ತಿವೆ. ಹಿಂಸಾಚಾರ ತಡೆಗಟ್ಟುವ ನಿಟ್ಟಿನಲ್ಲಿ ಸ್ಥಳೀಯ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರಗಳು ಮಾಡಿದ ಎಲ್ಲ ಕಾರ್ಯಗಳು ಸಂಪೂರ್ಣವಾಗಿ ಯಶ ಕೊಟ್ಟಿಲ್ಲ ಎಂಬುದಕ್ಕೆ ಮತ್ತೆ ಮತ್ತೆ ಜರಗುತ್ತಿರುವ ಪ್ರಕರಣಗಳೇ ಸಾಕ್ಷಿಯಾಗಿವೆ.

Advertisement

ಇದೆಲ್ಲದರ ಮಧ್ಯೆ ಮಣಿಪುರದಲ್ಲಿ ನಡೆದಿರುವ ಅಮಾನವೀಯ ಮತ್ತು ನಾಗರಿಕ ಸಮಾಜ ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲದಿರುವಂಥ ಘಟನೆ ಬುಧವಾರವಷ್ಟೇ ಬೆಳಕಿಗೆ ಬಂದಿದೆ. ಮೇ ತಿಂಗಳಲ್ಲಿ ನಡೆದಿದೆ ಎನ್ನಲಾದ ಘಟನೆಯೊಂದರಲ್ಲಿ ಪುರುಷರ ಗುಂಪೊಂದು ಇಬ್ಬರು ಮಹಿಳೆಯರನ್ನು ನಗ್ನವಾಗಿ ಮೆರವಣಿಗೆ ಮಾಡಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಅಷ್ಟೇ ಅಲ್ಲ, ಈ ಘಟನೆ ಬಳಿಕ ಇಬ್ಬರು ಮಹಿಳೆಯರಲ್ಲಿ ಒಬ್ಟಾಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ. ಅತ್ಯಾಚಾರ ತಡೆಯಲು ಯತ್ನಿಸಿದ ಆಕೆಯ ಸಹೋದರನನ್ನೂ ಗುಂಪು ಹತ್ಯೆ ಮಾಡಿದೆ.

ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಇಡೀ ದೇಶವೇ ಬೆಚ್ಚಿ ಬಿದ್ದಿದೆ. ದೇಶದ ಬಹುತೇಕ ಎಲ್ಲ ಪಕ್ಷಗಳೂ ಘಟನೆಯನ್ನು ಖಂಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕಠಿನ ಶಿಕ್ಷೆಯಾಗಲೇಬೇಕು ಎಂದು ಆಗ್ರಹಿಸುತ್ತಿವೆ. ನಾಗರಿಕ ಜಗತ್ತಿನಲ್ಲಿ ಇಂಥ ಘಟನೆಗಳು ನಡೆಯುವುದೇ ಹೇಯವಾಗಿದೆ ಎಂಬ ಅಭಿಪ್ರಾಯವೂ ಸಮಾಜದ ಎಲ್ಲ ಕಡೆಗಳಿಂದಲೂ ಕೇಳಿಬರುತ್ತಿದೆ.

ಮೇ 3ರಂದು ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಅಲ್ಲಿನ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ಮೈತೇಯಿ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ನೀಡುವ ವಿಚಾರ ಸಂಬಂಧ ಈ ಗಲಾಟೆ ಆರಂಭವಾಗಿದ್ದು, ತಾರ್ಕಿಕ ಅಂತ್ಯ ಕಾಣುವಲ್ಲಿ ಅಲ್ಲಿನ ಸರಕಾರ ಇನ್ನೂ ಸಫ‌ಲವಾಗಿಲ್ಲ. ಈಗಾಗಲೇ ರಾಜ್ಯದಲ್ಲಿ 150ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ಇದರ ನಡುವೆಯೇ ನಾಗರಿಕ ಜಗತ್ತೇ ನಾಚಿಕೆಪಡುವಂಥ ಇಂಥ ಘಟನೆಗಳು ನಡೆದಿರುವುದು ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ಭಾರತದ ಮರ್ಯಾದೆ ಹೋಗುವಂಥ ಸ್ಥಿತಿ ನಿರ್ಮಾಣವಾಗಿದೆ.

ಈ ಘಟನೆ ಬಗ್ಗೆ ಪ್ರಧಾನಿ ಮೋದಿಯವರೂ ಪ್ರತಿಕ್ರಿಯೆ ನೀಡಿದ್ದು, ದುಷ್ಕರ್ಮಿಗಳ ವಿರುದ್ಧ ಕಠಿನ ಕ್ರಮದ ಭರವಸೆಯನ್ನೂ ನೀಡಿದ್ದಾರೆ. ಸುಪ್ರೀಂಕೋರ್ಟ್‌ ಕೂಡ ಈ ವೀಡಿಯೋ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಥಳೀಯ ಸರಕಾರ ಕಠಿನ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೇ ನಾವೇ ಕ್ರಮಕ್ಕೆ ಮುಂದಾಗುತ್ತೇವೆ ಎಂಬ ಕಟು ಸಂದೇಶವನ್ನೂ ರಾಜ್ಯ ಸರಕಾರಕ್ಕೆ ರವಾನಿಸಿದೆ.

Advertisement

ಒಟ್ಟಾರೆಯಾಗಿ ಮಣಿಪುರದಲ್ಲಿ ನಡೆದಿರುವಂಥ ಘಟನೆ ಅತ್ಯಂತ ಹೀನಾಯವಾದದ್ದು. ಪ್ರಸ್ತುತ ಜಗತ್ತಿನಲ್ಲಿ ಮತ್ತು ಕಾನೂನು ಕಟ್ಟಳೆಗಳು ಕಠಿನವಾಗಿರುವ ಕಾಲದಲ್ಲಿಯೂ ಇಂಥ ಘಟನೆಗಳು ನಡೆಯುತ್ತವೆ ಎಂದರೆ ಅದು ಅವಮಾನವೇ ಸರಿ. ಅಲ್ಲದೆ ಗುಂಪುಗಳು ಸೇರಿ ನಡೆಸುವ ಇಂಥ ಘಟನೆಗಳಿಂದ ನೊಂದವರು ಸರಕಾರ ಮತ್ತು ಇಡೀ ವ್ಯವಸ್ಥೆಯ ಮೇಲೆ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ. ಈ ಪ್ರಕರಣದಲ್ಲಿಯೂ ಆಗಿರುವುದು ಇದೇ. ಈಗ ಬಿಡುಗಡೆಯಾಗಿರುವ ವೀಡಿಯೋದಲ್ಲಿನ ಘಟನೆ ನಡೆದಿರುವುದು ಮೇ ತಿಂಗಳಲ್ಲಿ. ಆದರೆ ಈಗ ಅದು ಬಹಿರಂಗಗೊಂಡಿದೆ. ಅಂದರೆ ಸಂತ್ರಸ್ತರು ತಮ್ಮ ನೋವನ್ನು ಇದುವರೆಗೂ ಹೇಳಿಕೊಳ್ಳಲಾಗದ ಸ್ಥಿತಿ ಉದ್ಭವವಾಗಿತ್ತು ಎಂದರೆ ಅದು ನಾಚಿಕೆಗೇಡಿನ ವಿಚಾರವೇ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next