Advertisement

ರಾಜ್ಯದಲ್ಲಿ ಎನ್‌ಟಿಆರ್‌ ಭವನ

02:15 PM Jul 07, 2018 | Team Udayavani |

ಬೆಂಗಳೂರು: ಕನ್ನಡದಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರಂತೆ ತೆಲುಗಿನಲ್ಲಿ ನಟರತ್ನ ಡಾ.ಎನ್‌ಟಿಆರ್‌ ಕೂಡ ಅಪಾರ ಅಭಿಮಾನಿ ಬಳಗ ಹೊಂದಿದ್ದಾರೆ. ಅವರ ಹೆಸರಿನಲ್ಲಿ ರಾಜ್ಯದಲ್ಲಿ ಭವನ ನಿರ್ಮಿಸಲು ಜಮೀನು ನೀಡಲು ರಾಜ್ಯ ಸರ್ಕಾರ‌ಕ್ಕೆ ಶಿಫಾರಸು ಮಾಡುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಭರವಸೆ ನೀಡಿದರು.

Advertisement

ರವೀಂದ್ರ ಕಲಾಕ್ಷೇತ್ರದಲ್ಲಿ ಕರ್ನಾಟಕ ತೆಲುಗು ಅಕಾಡೆಮಿ ಶುಕ್ರವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಿನಿಮಾ ಮತ್ತು ರಂಗ ಸಾಧಕರಿಗೆ ಡಾ.ಎನ್‌ಟಿಆರ್‌ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಅವರು, ಬಣ್ಣದ ಲೋಕದಲ್ಲಿ ಛಾಪು ಮೂಡಿಸಿದ್ದ ಎನ್‌ಟಿಆರ್‌ 9 ತಿಂಗಳಲ್ಲಿ ರಾಜಕೀಯ ಪಕ್ಷ ಸ್ಥಾಪಿಸಿ, ಆಗಿನ ಘಟಾನುಘಟಿ ರಾಜಕೀಯ ಮುಖಂಡರಲ್ಲಿ ನಡುಕ ಹುಟ್ಟಿಸಿದ್ದರು. ಇವರ ಬದುಕು ನಮಗೆ ಮಾದರಿ. ಭಾರತ ರತ್ನ ಪ್ರಶಸ್ತಿಗೂ ಅರ್ಹ ವ್ಯಕ್ತಿಯಾಗಿದ್ದಾರೆ ಎಂದು ಬಣ್ಣಿಸಿದರು. 

ದೇಶ, ಭಾಷೆ, ಗಡಿ, ಜಾತಿಗಳ ನಡುವೆ ಇಂದು ಸಾಕಷ್ಟು ಕಂದಕ ಏರ್ಪಟ್ಟಿದ್ದು, ಅದನ್ನು ಹೋಗಲಾಡಿಸಬೇಕಾಗಿದೆ. ವಿವಿಧ ಸಂಸ್ಕೃತಿಯಲ್ಲಿ ಸಮ್ಮಿಲನಗೊಂಡಿರುವ ಭಾರತದಲ್ಲಿ ಇಲ್ಲಿರುವಷ್ಟು ಭಾಷೆ, ಸಂಸ್ಕೃತಿಗಳು ಬೇರ್ಯಾವ ದೇಶದಲ್ಲೂ ಇಲ್ಲ. ಇಂತಹ ದೇಶದಲ್ಲಿ ಹಲವು ವಿಚಾರಗಳಲ್ಲಿ ಕಂದಕಗಳು ಶುರುವಾಗಿವೆ ಎಂದು ವಿಷಾದಿಸಿದರು.

ಶಾಸಕ ಮುನಿರತ್ನ ಮಾತನಾಡಿ, ಎನ್‌ಟಿಆರ್‌ ಭವನ ನಿರ್ಮಾಣಕ್ಕೆ ರಾಜರಾಜೇಶ್ವರಿ ನಗರದಲ್ಲಿ ಭೂಮಿ ನೀಡಲು ಶಿಫಾರಸು ಮಾಡಲಾಗುವುದು. ಜತೆಗೆ ಅದಕ್ಕೆ ಬೇಕಿರುವ ಅಗತ್ಯ ಸೌಲಭ್ಯ ನೀಡಲಾಗುವುದು ಎಂದರು. ಎನ್‌ಟಿಆರ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಗೀತ ನಿರ್ದೇಶಕ ಡಾ.ಹಂಸಲೇಖ, ತೆಲುಗು ಚಿತ್ರರಂಗದ ಮೇರು ಕಲಾವಿದನ ಹೆಸರಿನಲ್ಲಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಖುಷಿ ನೀಡಿದೆ.

ಕರ್ನಾಟಕ-ತೆಲಗು ಅಕಾಡೆಮಿ, ಕನ್ನಡದ ವರ ನಟ ಡಾ.ರಾಜಕುಮಾರ್‌ ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಮುಂದಾಗಿರುವುದು ಮತ್ತಷ್ಟು ಸಂತಸ ನೀಡಿದೆ ಎಂದರು. ಲಹರಿ ಸಂಸ್ಥೆಯ ಲಹರಿ ವೇಲು, ಪಿಇಎಸ್‌ ವಿವಿ ಕುಲಪತಿ ಎಂ.ಆರ್‌.ದೊರೆಸ್ವಾಮಿ ನಾಯ್ಡು ಇತರರಿದ್ದರು.
  
ರಾಜ್‌ ಹೆಸರಿನಲ್ಲಿ ತೆಲುಗು ನಟರಿಗೆ ಪ್ರಶಸ್ತಿ: ಈಗಿರುವ ಕರ್ನಾಟಕ ತೆಲುಗು ಅಕಾಡೆಮಿ ಹೆಸರನ್ನು ಕರ್ನಾಟಕ-ಕನ್ನಡ-ತೆಲಗು ಅಕಾಡೆಮಿಯಾಗಿ ಬದಲಾವಣೆ ಮಾಡಲಾಗುವುದು. ಅಲ್ಲದೇ ಮುಂದಿನ ದಿನಗಳಲ್ಲಿ ತೆಲುಗಿನ ಸಿನಿಮಾ ಕಲಾವಿದರುಗಳಿಗೆ ಡಾ.ರಾಜ್‌ಕುಮಾರ್‌ ಹೆಸರಿನಲ್ಲಿ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಕರ್ನಾಟಕ ತೆಲುಗು ಅಕಾಡೆಮಿ ಅಧ್ಯಕ್ಷ ಆರ್‌.ವಿ.ಹರೀಶ್‌ ಹೇಳಿದರು.

Advertisement

ಪ್ರಶಸ್ತಿ ಸ್ವೀಕರಿಸದೆ ಹಿಂತಿರುಗಿದ ಅರುಂಧತಿ: ಎನ್‌ಟಿಆರ್‌ ಪ್ರಶಸ್ತಿಗೆ ಆಯ್ಕೆಯಾಗಿದ್ದ ಕಲಾವಿದೆ ಅರುಂಧತಿ ನಾಗ್‌ ಕಾರ್ಯಕ್ರಮಕ್ಕೆ ನಿಗದಿಗೊಳಿಸಿದ್ದ ಸಂಜೆ 5 ಗಂಟೆಗೆ ಆಗಮಿಸಿದ್ದರು. ಆದರೆ, ಕಾರ್ಯಕ್ರಮ 7 ಗಂಟೆವರೆಗೂ ಆರಂಭವಾಗಲಿಲ್ಲ. ಹೀಗಾಗಿ, ಅರುಂಧತಿ ಬೇಸರಗೊಂಡ ಕಾರ್ಯಕ್ರಮದಿಂದ ನಿರ್ಗಮಿಸಿದರು. ಸಂಘಟಕರು, ಅವರ ಮನೆಗೆ ಮೇಯರ್‌ ಆವರನ್ನು ಕರೆದುಕೊಂಡು ಹೋಗಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next