ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ(ಎನ್‌ಟಿಎ) ನಡೆಸುವ ಜೆಇಇ-ಮೇನ್ ಪರೀಕ್ಷೆಗೆ ಸಂಬಂಧಿಸಿದಂತೆ ಈ ಬಾರಿ ಮತ್ತಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷೆಗೆ ಹಾಜರಾಗಲಿರುವ ಅಭ್ಯರ್ಥಿಗಳ ತಪಾಸಣೆಯನ್ನು ಬಿಗಿಗೊಳಿಸಲು ತೀರ್ಮಾನಿಸಿರುವ ಎನ್‌ಟಿಎ, ಶೌಚಾಲಯಕ್ಕೆ ಹೋಗಿ ಬಂದ ಬಳಿಕ ಮತ್ತೂಮ್ಮೆ ಅಭ್ಯರ್ಥಿಗಳ ಬಯೋ ಮೆಟ್ರಿಕ್ ಹಾಜರಾತಿ ಪಡೆಯಲು ಮತ್ತು ಕಟ್ಟುನಿಟ್ಟಿನ ತಪಾಸಣೆಗೆ ಒಳಪಡಿಸಲು ನಿರ್ಧರಿಸಿದೆ.
ಪರೀಕ್ಷೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಎನ್‌ಟಿಎ ಈ ಕಠಿನ ನಿರ್ಧಾರ ಕೈಗೊಂಡಿದ್ದು ಅಕ್ರಮಗಳಿಗೆ ಕಡಿವಾಣ ಹಾಕುವ ದಿಸೆಯಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಿದೆ. ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳಿಗೆ ಒಂದಿಷ್ಟು ಕಿರಿಕಿರಿ ಮತ್ತು ಮುಜುಗರಕ್ಕೀಡು ಮಾಡುವ ನಿರ್ಧಾರದಂತೆ ಮೇಲ್ನೋ ಟಕ್ಕೆ ಕಂಡುಬಂದರೂ ಪರೀಕ್ಷೆಯನ್ನು ಅತ್ಯಂತ ಸುಸೂತ್ರವಾಗಿ ನಡೆಸಲು ಸಹಕಾರಿಯಾಗಿದೆ. ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಸಂದರ್ಭದಲ್ಲಿ ಅಭ್ಯರ್ಥಿಗಳನ್ನು ಕಟ್ಟುನಿಟ್ಟಿನ ತಪಾಸಣೆ ನಡೆಸಿಯೇ ಅವರಿಗೆ ಪರೀಕ್ಷಾ ಕೊಠಡಿ ಪ್ರವೇಶಿಸಲು ಅನುವು ಮಾಡಿ ಕೊಡಲಾಗುತ್ತದೆ. ಆದರೆ ಇಷ್ಟೆಲ್ಲ ಬಿಗಿ ಕ್ರಮಗಳ ಹೊರತಾಗಿಯೂ ಪರೀಕ್ಷೆ ನಡುವೆ ವಿರಾಮದ ವೇಳೆ ಅಭ್ಯರ್ಥಿಗಳು ಶೌಚಾಲ ಯಕ್ಕೆ ತೆರಳುವ ವೇಳೆ ಕೆಲವು ಅಕ್ರಮಗಳು ನಡೆಯುತ್ತಿರುವುದು ಕಂಡು ಬಂದ ಬಳಿಕ ಎನ್‌ಟಿಎ ಈ ಸಾಲಿನ ಜೆಇಇ-ಮೇನ್ ಪರೀಕ್ಷೆಯಲ್ಲಿ ಈ ಹೊಸ ನಿಯಮವನ್ನು ಜಾರಿಗೊಳಿಸಲು ನಿರ್ಧರಿಸಿದೆ. ಅಷ್ಟು ಮಾತ್ರವಲ್ಲದೆ ಪರೀಕ್ಷಾ ಪ್ರಕ್ರಿಯೆಯಲ್ಲಿ ತೊಡಗಿಕೊಂಡಿರುವ ಅಧಿಕಾರಿಗಳು ಮತ್ತು ಸಿಬಂದಿಗೂ ಈ ಬಿಗಿ ತಪಾಸಣೆಯನ್ನು ನಡೆಸಲು ತೀರ್ಮಾನಿಸಲಾಗಿದೆ. ಈ ಮೂಲಕ ನಕಲಿ ಅಭ್ಯರ್ಥಿಗಳ ಹಾವಳಿ ಸಹಿತ ಎಲ್ಲ ತೆರನಾದ ಪರೀಕ್ಷಾ ಅಕ್ರಮಗಳಿಗೆ ಸಂಪೂರ್ಣ ಕಡಿವಾಣ ಹಾಕುವುದು ಎನ್‌ಟಿಎ ಯ ಉದ್ದೇಶ.
ಈ ಕಟ್ಟುನಿಟ್ಟಿನ ತಪಾಸಣೆ, ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆಯನ್ನು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ನಡೆಸಲಾಗುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅನ್ವಯಿಸಲು ಸರಕಾರ ಹಾಗೂ ಸಂಬಂಧಪಟ್ಟ ಸಂಸ್ಥೆಗಳು ಮುಂದಾಗಬೇಕು. ರಾಜ್ಯದಲ್ಲಿ ವಿವಿಧ ಹಂತಗಳಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಇಂತಹ ಕಟ್ಟುನಿಟ್ಟಿನ ತಪಾಸಣೆಯನ್ನು ಕೈಗೊಂಡದ್ದೇ ಆದಲ್ಲಿ ಕಳೆದ ಹಲವಾರು ವರ್ಷಗಳಿಂದ ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ಪರೀಕ್ಷಾ ಅಕ್ರಮಗಳನ್ನು ನಿಯಂತ್ರಿಸಲು ಸಾಧ್ಯ. ಕರ್ನಾಟಕ ರಾಜ್ಯ ಲೋಕಸೇವಾ ಆಯೋಗ ವಿವಿಧ ಸರಕಾರಿ ಇಲಾ ಖೆ ಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡುವ ಸಲು ವಾಗಿ ನಡೆಸುವ ಎಲ್ಲ ತೆರನಾದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲೂ ಇದೇ ಮಾದ ರಿಯನ್ನು ಕಡ್ಡಾಯ ಗೊಳಿಸಿದಲ್ಲಿ ಅಕ್ರಮಗಳನ್ನು ತಡೆಗಟ್ಟಿ ಇಡೀ ನೇಮಕಾತಿ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಲು ಸಾಧ್ಯವಾಗಲಿದೆ.
ರಾಜ್ಯದಲ್ಲಿ ನಡೆಯುವ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳು ಸುಸೂತ್ರವಾಗಿ ನಡೆಯುವಂತಾಗಲು ಸಂಬಂಧಪಟ್ಟ ಇಲಾಖೆ ಮತ್ತು ಸಂಸ್ಥೆಗಳು ಅಗತ್ಯವಿರುವ ಸಾಧನ, ಸಲಕರಣೆಗಳನ್ನು ಖರೀದಿಸಲು ರಾಜ್ಯ ಸರಕಾರ ಹಣಕಾಸು ನೆರವನ್ನು ಒದಗಿಸಬೇಕು. ಸರಕಾರ ಇಂತಹ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ಅಧಿಕಾರಿ, ಸಿಬಂದಿ ನಿಯೋಜನೆ, ಭತ್ತೆ ನಿಗದಿಪಡಿಸುವುದಕ್ಕಷ್ಟೇ ತನ್ನ ಹೊಣೆ ಗಾರಿಕೆಯನ್ನು ಸೀಮಿತಗೊಳಿಸಿಕೊಳ್ಳದೆ ಇಡೀ ಪರೀಕ್ಷಾ ವ್ಯವಸ್ಥೆಯಲ್ಲಿ ಆಮೂ ಲಾಗ್ರ ಸುಧಾರಣೆ ತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು. ಸ್ಪರ್ಧಾತ್ಮಕ ಪರೀಕ್ಷೆಗಳ ಸಂದರ್ಭದಲ್ಲಿ ತಂತ್ರಜ್ಞಾನವನ್ನು ಬಳಸಿಕೊಂಡು ಅಕ್ರಮಗಳಿಗೆ ಕಡಿವಾಣ ಹಾಕುವುದರ ಜತೆಯಲ್ಲಿ ಅರ್ಹ, ಪ್ರತಿಭಾವಂತ ಅಭ್ಯರ್ಥಿಗಳಿಗೆ ಯಾವುದೇ ರೀತಿಯಲ್ಲೂ ಅನ್ಯಾಯವಾಗದಂತೆ ನೋಡಿಕೊಳ್ಳುವ ಗುರುತರ ಜವಾಬ್ದಾರಿ ಸರಕಾರದ್ದಾಗಿದೆ. ಹೀಗಾದಲ್ಲಿ ಮಾತ್ರವೇ ಸ್ಪರ್ಧಾತ್ಮಕ ಪರೀಕ್ಷೆಯ ಗೌರವ, ಮೌಲ್ಯ ಉಳಿಯಲು ಸಾಧ್ಯ.