Advertisement

ಕೆಸಿಆರ್ ವಿರುದ್ಧ ಪ್ರತಿಭಟನೆ; ಕತ್ತೆ ಕದ್ದ ಆರೋಪದಡಿ NSUI ಅಧ್ಯಕ್ಷನ ಬಂಧನ, “ಕೈ”ಆಕ್ರೋಶ

03:53 PM Feb 19, 2022 | Team Udayavani |

ಕರೀಂನಗರ್(ತೆಲಂಗಾಣ): ಕತ್ತೆಯನ್ನು ಕದ್ದ ಆರೋಪದ ಮೇಲೆ ಎನ್ ಎಸ್ ಯುಐ(ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ)ನ ಅಧ್ಯಕ್ಷ ಬಲಮುರಿ ವೆಂಕಟ್ ನರಸಿಂಗ ರಾವ್ ಎಂಬಾತನನ್ನು ತೆಲಂಗಾಣದ ಜಮ್ಮೈಕುಂಟಾ ಪೊಲೀಸರು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ಬೆಂಗಳೂರಿನಲ್ಲಿರುವ ಉತ್ತರ ಕರ್ನಾಟಕ ಜನರಿಗಾಗಿ 3 ಎಕರೆ ಜಾಗ: ಸಿಎಂ ಭರವಸೆ

ಶುಕ್ರವಾರ (ಫೆ.18) ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಹುಟ್ಟುಹಬ್ಬವಾಗಿದ್ದು, ಈ ಸಂದರ್ಭದಲ್ಲಿ ಪ್ರತಿಭಟನೆ ನಡೆಸುವಂತೆ ಕಾಂಗ್ರೆಸ್ ಕರೆ ನೀಡಿತ್ತು. ಈ ಹಿನ್ನೆಲೆಯಲ್ಲಿ ವೆಂಕಟ್ ಮತ್ತು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಸಿಎಂ ಕೆಸಿಆರ್ ಅವರ ಫೋಟೊವನ್ನು ಕತ್ತೆಯ ಕೊರಳಿಗೆ ಕಟ್ಟಿ, ಕೇಕ್ ಪೀಸ್ ಅನ್ನು ತಿನ್ನುವಂತೆ ಮಾಡಿದ್ದರು.

ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಂತರ ಟಿಆರ್ ಎಸ್ ವಿದ್ಯಾರ್ಥಿ ಸಂಘಟನೆ ಪ್ರತಿಭಟನೆ ನಡೆಸಿತ್ತು. ಈ ಕುರಿತು ಕೆಲವರು ಜಮೈಕುಂಟಾ ಪೊಲೀಸರಿಗೆ ದೂರು ನೀಡಿರುವುದಾಗಿ ವರದಿ ವಿವರಿಸಿದೆ.

ಜಮೈಕುಂಟಾ ಪೊಲೀಸರು, ಕತ್ತೆಯನ್ನು ಕದ್ದ ಆರೋಪದಡಿ ವೆಂಕಟ್ ವಿರುದ್ಧ ಪ್ರಕರಣ ದಾಖಲಿಸಿದ್ದು, ಪ್ರಾಣಿಯ ಜತೆ ಅಮಾನವೀಯ ರೀತಿಯಲ್ಲಿ ನಡೆದುಕೊಂಡಿರುವುದಾಗಿ ಮೂಲಗಳು ತಿಳಿಸಿವೆ.

Advertisement

ಗುರುವಾರ ರಾತ್ರಿ ವೆಂಕಟ್ ಸಮ್ಮಕ್ಕಾ ಸರಳಮ್ಮ ಜಾತ್ರೆಗೆ ಹೋಗಿ ಮನೆಗೆ ಬಂದಾಗ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ವಿಚಾರಣೆ ಸಂದರ್ಭದಲ್ಲಿ, ಕತ್ತೆಯನ್ನು ಎಲ್ಲಿಂದ ತರಲಾಗಿದೆ ಎಂಬುದನ್ನು ವೆಂಕಟ್ ಬಹಿರಂಗಪಡಿಸಿಲ್ಲ ಎಂದು ತಿಳಿಸಿರುವುದಾಗಿ ವರದಿ ಹೇಳಿದೆ.

ಕಾಂಗ್ರೆಸ್ ಆಕ್ರೋಶ: ಕೆಸಿಆರ್ ಆಡಳಿತದಲ್ಲಿ ತೆಲಂಗಾಣ ಪೊಲೀಸರಿಂದ ಬೇರೆ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ವೆಂಕಟ್ ಬಂಧನದ ಬಳಿಕ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿ ಟ್ವೀಟ್ ಮಾಡಿ, ಆಕ್ರೋಶ ವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

ಆಲ್ ಇಂಡಿಯಾ ಕಾಂಗ್ರೆಸ್ ಕಮಿಟಿಯ ತೆಲಂಗಾಣ ಪ್ರಭಾರಿ ಮಾಣಿಕಂ ಠಾಗೋರ್ ಕೂಡಾ ಟ್ವೀಟ್ ಮಾಡಿದ್ದು, ತೆಲಂಗಾಣ ಸಿಎಂ ಕೆಸಿಆರ್ ಗಾರು ಇದನ್ನು ನಂಬಲು ಸಾಧ್ಯವಿಲ್ಲ. ಅಧಿಕಾರ ನಿಮ್ಮ ಕೈಯಲ್ಲಿ ಹೇಗೆ ಉಪಯೋಗವಾಗುತ್ತಿದೆ, ವಿದ್ಯಾರ್ಥಿ ಮುಖಂಡನ ಮೇಲೆ ಸುಳ್ಳು ಕೇಸ್ ದಾಖಲಿಸುತ್ತೀರಾ? ಹಿಟ್ಲರ್ ರೀತಿ ವರ್ತಿಸುವ ನಿಮ್ಮನ್ನು ಖಂಡಿಸಲು ಪದಗಳೇ ಇಲ್ಲ ಎಂದು ಕಿಡಿಕಾರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next