Advertisement

ಉಜಿರೆಯಿಂದ ಬಜಿರೆಗೆ ಎನ್‌ಎಸ್‌ಎಸ್‌ ಪಯಣ

06:00 AM Jan 19, 2018 | |

ವಾಟ್ಸಾಪ್‌ ಸ್ಟೇಟಸ್‌ ಬದಲಿಸುವ ಕಾತರ. ಒಂದು ವಾರ ವ್ಹಾ ! ಜಾಲಿ ಜಾಲಿ. ಉಜಿರೆಯಿಂದ ಬಜಿರೆಗೆ  ನಮ್ಮ ವಾರ್ಷಿಕ ಎನ್‌ಎಸ್‌ಎಸ್‌ ಪ್ರಯಾಣ. ಗೆಳತಿಯ ಸ್ಟೇಟಸ್‌ ನೋಡಿ ಬಹಳ ಉತ್ಸುಕಳಾಗಿ ಬಟ್ಟೆಬರೆಗಳ ಲಗೇಜ್‌ ತಯಾರಾಯಿತು. ಹೊಸ ಅನುಭವಗಳನ್ನು ಪಡೆಯುವ ಉತ್ಸಾಹದಲ್ಲಿದ್ದ ನೂರಮೂವತ್ತು ಸ್ವಯಂಸೇವಕರು. ಹೀಗೆ ಹಲವಾರು ಕನಸುಗಳ ಬುತ್ತಿಯನ್ನು ಹೊತ್ತು ನಮ್ಮ ಪ್ರಯಣ ಕಾಲೇಜು ಬಸ್ಸಿನಲ್ಲಿ ಬಜಿರೆಗೆ ಸಾಗಿತು.

Advertisement

ಶಿಬಿರ ಪ್ರಾರಂಭವಾಗುವ ಮುಂಚಿತವಾಗಿ ಶಿಬಿರಾರ್ಥಿಗಳು ಸೇರಿದ್ದರು. ಆದ್ದರಿಂದ ಮೊದಲ ದಿನ ಶಿಬಿರಾರ್ಥಿಗಳನ್ನು ಗುಂಪುಗಳನ್ನಾಗಿ ವಿಂಗಡಣೆ ಮಾಡಲಾಯಿತು. ಎಲ್ಲಾ ತಂಡಗಳಿಗೆ ಉತ್ತಮ ನಾಯಕರ ಆಯ್ಕೆ, ಆಯಾ ಗುಂಪುಗಳಿಗೆ ನಾಮಕರಣವನ್ನು ಮಾಡಲಾಯಿತು. ಚಿಂತನ, ಸೃಜನ, ಮಂಥನ, ಜ್ವಲನ ಈ ರೀತಿ. ರಾಷ್ಟ್ರೀಯ ಸೇವಾ ಯೋಜನೆಯ ನಿಯಮಗಳನ್ನು ಯೋಜನಾಧಿಕಾರಿಗಳು ಮಂಡಿಸಿದರು.

ಪ್ರತಿದಿನ ಪ್ರತಿ ತಂಡ ಶೈಕ್ಷಣಿಕ, ಸ್ವತ್ಛತೆ, ಆಹಾರ ತಯಾರಿ, ಶ್ರಮದಾನಗಳಲ್ಲಿ ತೊಡಗಿಸಿಕೊಳ್ಳುವಂತೆ ವೇಳಾಪಟ್ಟಿ ಬಿಡುಗಡೆ ಮಾಡಿದರು. ಅದರಲ್ಲಿ ಶ್ರಮದಾನವು ಶಿಬಿರದ ಮುಖ್ಯವಾದ ಭಾಗವಾಗಿತ್ತು. ಹೆಣ್ಣು ಮಕ್ಕಳಿಗೆ ಸ್ನಾನಕ್ಕೆಂದು ಹತ್ತಿರದ ಮನೆಯ ಅನುಮತಿಯನ್ನು ಗೊತ್ತುಪಡಿಸಿದರು. ಸಮಯ ಪಾಲನೆ, ಶಿಸ್ತು, ಊರವರೊಂದಿಗಿನ ಉತ್ತಮ ಭಾಂದವ್ಯ- ಹೀಗೆ ಮೊದಲ ದಿನ ಬೋಧನಾ ದಿನವಾಗಿ ಪರಿಣಮಿಸಿತು.

ಮಾರನೆಯ ದಿನ ರಾಷ್ಟ್ರೀಯ ಸೇವಾ ಯೋಜನೆ ಶಿಬಿರ ಪ್ರಾರಂಭ. ಮುಂಜಾನೆ ಐದು ಮೂವತ್ತರ ವೇಳೆ ಸನತ್ತಣ್ಣಾನ ಸೈರನ್‌ ಕೂಗು ಕಿವಿಗೆ ಅಪ್ಪಳಿಸಿತು. ಒಲ್ಲದ ಮನಸ್ಸಿನಿಂದಲೇ ಎದ್ದೆವು. ಭೂಮಂಡಲವೇ ಮಂಜಿನಿಂದ ಆವರಿಸಿತ್ತು. ಚಳಿಯನ್ನು ಸಹಿಸುತ್ತಲೇ ನಿತ್ಯ ಕರ್ಮವನ್ನು ಮುಗಿಸಿದೆವು. ನಂತರ ಸಮಯಕ್ಕೆ ಸರಿಯಾಗಿ ಪ್ರಾರ್ಥಾನಾಲಯದಲ್ಲಿ ಹಾಜರು, ಯೋಗಾಸನ, ಓಂಕಾರ, ಯೋಜನಾಗೀತೆ, ಧ್ವಜಾರೋಹಣ ನೆರವೇರುತ್ತಿತ್ತು. ಎಂಟು ಗಂಟೆಯ ಒಳಗಾಗಿ ಲಘು ಶ್ರಮದಾನ ಮುಗಿಸಿ, ಎಂಟು ಮೂವತ್ತರ ಒಳಗಾಗಿ ಉಪಾಹಾರ. ಇದು ಶಿಬಿರದ ದಿನನಿತ್ಯದ ಮುಂಜಾನೆಯ ಕಿರುನೋಟ.

ಎನ್‌.ಎಸ್‌.ಎಸ್‌. ಉದ್ಘಾಟನಾ ಕಾರ್ಯಕ್ರಮ, ಹಾರೆ, ಕತ್ತಿ, ಪಿಕ್ಕಾಸು ಆಯುಧಗಳಿಗೆ ಪೂಜೆ, ಗ್ರಾಮ ಸವಿೂಕ್ಷೆ. ಗ್ರಾಮದ ಜನರಿಗೆ ಸ್ವತ್ಛತಾ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿದೆವು. ಫ‌ಲಕಗಳನ್ನು ಕೈಯಲ್ಲಿ ಹಿಡಿದು, ಘೋಷಣೆ ಕೂಗುತ್ತ ಸಾಗಿದೆವು. ಆ ಸಮಯದಲ್ಲಿದ್ದ ಬಿಸಿಲಿನ ಬೇಗೆ ಪ್ರತಿ ಹನಿನೀರಿನ ಮಹತ್ವವನ್ನು ಮನದಟ್ಟು ಮಾಡಿಸಿತು.

Advertisement

ಇತ್ತೀಚೆಗೆ ಮಕ್ಕಳು ಗದ್ದೆ ನೋಡಿರುವುದಿಲ್ಲ ಎಂಬ ವಿಶೇಷ ಒಲವಿನಿಂದ ಶಿಬಿರಾರ್ಥಿಗಳನ್ನು ಗದ್ದೆ ವೀಕ್ಷಣೆಗೆ  ಕರೆದೊಯ್ದರು. ವೀಕ್ಷಿಸಲು ಹೋದ ನಾವೆಲ್ಲರೂ ಗದ್ದೆಗೆ ಇಳಿದು ಮಣ್ಣನ್ನು ಎರಚಿಕೊಳ್ಳುತ್ತಾ ಸಸಿಗಳನ್ನು ನೆಟ್ಟು ಸಂತಸ ಪಟ್ಟೆವು. ಕೆಸರು ಮಣ್ಣಿನಲ್ಲಿ ವೇಗವಾಗಿ ನಡೆದು ನನ್ನ ಗೆಳತಿ ಕೆಸರು ಗದ್ದೆಗೆ ಬಿದ್ದು ಎಲ್ಲರ ನಗೆಗೆ ಪಾತ್ರಳಾದಳು. ಚಪ್ಪಲಿ ಹಾಕಿಕೊಂಡು ಕೆಸರು ಗದ್ದೆಗೆ ಇಳಿದವರು ಚಪ್ಪಲಿ ಹುಡುಕುವಲ್ಲಿ ಪಟ್ಟ ಸಾಹಸ ಅಷ್ಟಿಷ್ಟಲ್ಲ. ಎದೊ°à ಬಿದೊ° ಎಂದು ಬಿರುಸಾಗಿ ಗದ್ದೆ ಅಂಚಿಗೆ ಬಂದೆವು. ಇತ್ತ ಮೈಗೆ, ಬಟ್ಟೆಗೆ ಆದ ಮಣ್ಣನ್ನು ತೆಗೆಯಲು ಪಟ್ಟಪಾಡು ಮರೆಯಲಾಗದ ಸವಿನೆನಪಾಗಿ ಮನದಲ್ಲಿ ಉಳಿದಿದೆ.

ಉಪಾಹಾರದ ಬಳಿಕ ಶೈಕ್ಷಣಿಕ, ಸಾಂಸ್ಕೃತಿಕ, ಶ್ರಮದಾನ, ಸ್ವತ್ಛತೆ, ಆಹಾರ ಕಮಿಟಿಗಳ ಗುಂಪುಗಳು ಹನ್ನೆರಡು ಮೂವತ್ತರ ವೇಳೆಯವರೆಗೆ ತೊಡಗಿಕೊಳ್ಳುತ್ತಿದ್ದೆವು. ಇಂಗುಗುಂಡಿ ನಿರ್ಮಾಣ, ರಸ್ತೆ ಬದಿಯ ಸೊಪ್ಪುಗಳನ್ನು ಕೀಳುವುದು, ಶೌಚಾಲಯದ ಫೌಂಡೇಶನ್‌ ನಿರ್ಮಾಣ- ಹೀಗೆ ಶ್ರಮದಾನದಲ್ಲಿ ಎಲ್ಲಾ ಸ್ವಯಂಸೇವಕರು ತೊಡಗಿಕೊಂಡು ಸ್ನೇಹದ ಅಡಿಪಾಯವನ್ನು ಇನ್ನಷ್ಟು ಗಟ್ಟಿಗೊಳಿಸಿದೆವು. ನಂತರ ಸ್ನಾನಕ್ಕೆಂದು ಹತ್ತಿರದ ಮನೆಗೆ ಹೋಗುತ್ತಿದ್ದೆವು. ಸ್ನಾನ ಮುಗಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನಿಸಿ, ಒಂದೂ ಮೂವತ್ತರ ವೇಳೆಗೆ ಶಾಲೆಯಲ್ಲಿ ಹಾಜರಾಗಬೇಕಿತ್ತು. ಒಂದು ವೇಳೆ ಸಮಯಪಾಲನೆ, ನಿಯಮಗಳನ್ನು ಉಲ್ಲಂ ಸಿದರೆ ಮೈದಾನಕ್ಕೆ ನಾಲ್ಕು ರೌಂಡು ಓಟ ನಮ್ಮ ಪಾಲಿಗಿರುತ್ತಿತ್ತು. ಮಧ್ಯಾಹ್ನ ಶಾಂತಿಮಂತ್ರದೊಂದಿಗೆ ಭೋಜನ, ಬಳಿಕ ಅತಿಥಿಗಳಿಂದ ಉಪನ್ಯಾಸ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮಗಳ ತಯಾರಿ ಮತ್ತು ಆರು ಮೂವತ್ತರಿಂದ ಎಂಟು ಮುೂವತ್ತರವರೆಗೆ  ಪ್ರದರ್ಶನ, ಪ್ರಾರ್ಥನಾಲಯಕ್ಕೆ ತೆರಳಿ ದಿನದ ರಿಪೋರ್ಟ್‌ಗಳನ್ನು ವಿವಿಧ ಕೌಶಲ್ಯದೊಂದಿಗೆ ಮಂಡನೆ. ಬಳಿಕ ಉತ್ತಮ ನಡತೆಗಳಿಗೆ ಕೈ ಚಪ್ಪಾಳೆ, ಬುದ್ಧಿಮಾತುಗಳು. ಹೀಗೆ ಪ್ರತಿದಿನವೂ ಸಾಗುತ್ತ ಆ ದಿನಗಳಿಗೆ ಪೂರ್ಣ ವಿರಾಮ ನೀಡುತ್ತಿದ್ದೆವು.

ಟ್ರೆಡೀಷನಲ್‌ ಡೇ ಎಂಬ ವಿಶೇಷ ದಿನವನ್ನು ಆಚರಿಸಿದೆವು. ಬಣ್ಣದ ತಾರೆಗಳಂತೆ ಉಡುಪನ್ನು ಧರಿಸಿ, ತುಳುನಾಡಿನ ಸಾಂಪ್ರದಾಯಿಕ ಬಾಳೆಎಲೆಯಲ್ಲಿ ಊಟವನ್ನು ಮಾಡಿ ಸಂಭ್ರಮಿಸಿದೆವು. ಬೆಳದಿಂಗಳ ಊಟವನ್ನು ಚಂದಮಾಮನ ಜೊತೆಗೂಡಿ ಸವಿದೆವು. ಭಾರತಾಂಬೆಗೆ ಶಿಬಿರ ಜ್ಯೋತಿಯನ್ನು ಊರಿನ ಜನರು ಮತ್ತು ಶಿಬಿರಾರ್ಥಿಗಳು ಬೆಳಗಿಸಿ ಹೊಸ ಚೈತನ್ಯವನ್ನು ನೀಡಿದೆವು. ಹೀಗೆ ನಮಗೆ ಅರಿವಿಲ್ಲದೆ ಏಳು ದಿನಗಳ ಎನ್‌ಎಸ್‌ಎಸ್‌ ಶಿಬಿರದ ಮುಕ್ತಾಯದ ಹಂತಕ್ಕೆ ಬಂದೆವು. ಮನದಲ್ಲಿ ಬೇಸರ ಮನೆಮಾಡಿತ್ತು. ಊರಜನರ ಪ್ರೋತ್ಸಾಹ, ಬಜಿರೆ ಶಾಲೆ ಮಕ್ಕಳ ಪ್ರೀತಿ, ನಮ್ಮನ್ನು ಬೀಳ್ಕೊಡುವಾಗ ಕಣ್ಣಂಚಿನಲ್ಲಿ ಕಣ್ಣೀರಾಗಿ ಪರಿಣಮಿಸಿತು. ಆದರೂ ಇಂತಹ ಸುಂದರ ಅನುಭವಗಳನ್ನು ಗಳಿಸಿದ ಖುಷಿ ನಮ್ಮಲ್ಲಿದೆ.

ಇಷ್ಟರವರೆಗೆ ಕತ್ತಿ, ಹಾರೆ ಹಿಡಿಯದ ಮಕ್ಕಳನ್ನು ಕೆಲಸಕ್ಕೆ ಪ್ರಚೋದಿಸಿ ನಾವು ಯಾರಿಗೇನೂ ಕಮ್ಮಿ ಇಲ್ಲ ಎಂದು  ಎಲ್ಲರೂ ತಮ್ಮನ್ನು ತಾವು  ಸಾಬೀತುಪಡಿಸಿದರು. ಪ್ರತಿನಿತ್ಯ ಬೇಗನೆ ಏಳುವುದು, ಶಿಸ್ತು, ಸ್ವತ್ಛತೆ, ನಿತ್ಯ ಡೈರಿ ಬರೆಯುವುದನ್ನು ಮುಂದೆಯೂ ಅನುಸರಿಸುತ್ತೇವೆ ಮತ್ತು  ಇದು ನಮ್ಮ ಕರ್ತವ್ಯವು ಹೌದು. ವಿದ್ಯಾರ್ಥಿಗಳ ಬದುಕಿನಲ್ಲಿ ಸಮಾಜಮುಖೀ ಕೆಲಸಗಳ ಮೂಲಕ ಒಲವು ಮೂಡಿಸಿ, ಸೇವೆಯ ಮೂಲಕ ಅನುಭವವನ್ನು ನೀಡುವುದು. ಎನ್‌ಎಸ್‌ಎಸ್‌ ಸೇವಾ ಮನೋಭಾವ, ಶಿಸ್ತು, ಸಂಯಮ, ನಾಯಕತ್ವ ಇಂತಹ ಉತ್ತಮ ಗುಣಗಳನ್ನು ರೂಪಿಸುವಂತಹ ರಾಷ್ಟ್ರೀಯ ಸೇವಾ ಯೋಜನೆಗೆ ಒಂದು ಸಲಾಂ.

ವಿಜೇತಾ ಎ. ಕೊಕ್ಕಡ
ದ್ವಿತೀಯ ಪತ್ರಿಕೋದ್ಯಮ 
ಎಸ್‌.ಡಿ.ಎಂ. ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next