Advertisement
ತಾಲೂಕಿನ ಹೊಸಳ್ಳಿ (ಇಜೆ) ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಇದೀಗ ವಿದ್ಯಾರ್ಥಿಗಳು ಹಾಗೂ ನೋಡುಗರನ್ನು ಆಕರ್ಷಿಸುತ್ತಿದೆ. ಎನ್ನೆಸ್ಸೆಸ್ ಯೋಜನೆಯಡಿ ಪ್ರತಿ ಕಾಲೇಜಿನಿಂದಲೂ ಗ್ರಾಮೀಣ ಭಾಗದಲ್ಲಿ ಸ್ವತ್ಛತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ದುದ್ದುಪುಡಿ ಮಹಿಳಾ ವಿದ್ಯಾಲಯ ಆ ನಿಟ್ಟಿನಲ್ಲಿ ಹೊಸ ಗುರಿ ಹಾಕಿಕೊಂಡು ಸರ್ಕಾರಿ ಶಾಲೆ ದತ್ತು ಪಡೆದು, ಅದನ್ನು ಸುಸಜ್ಜಿತಗೊಳಿಸಿ ಮಕ್ಕಳ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡಿದೆ.
Related Articles
Advertisement
ಆರಂಭದಲ್ಲಿ ಬಣ್ಣ ಮಾಸಿದ ಕೊಠಡಿಗಳೇ ಕಾಣುತ್ತಿದ್ದವು. ಈಗ ರೈಲು ಬೋಗಿ ಮಾದರಿ, ಆರಂಭದ ಕೊಠಡಿಗೆ ಎಂಜಿನ್ ಮಾದರಿ ಬಣ್ಣ ಬಳಿಯಲಾಗಿದೆ. ವಿದ್ಯಾರ್ಥಿಗಳು ಕೊಠಡಿ ಹೊರಗಿನ ದ್ವಾರದಲ್ಲಿ ನಿಂತಾಗ ರೈಲು ಏರುತ್ತಿರುವಂತೆ ಭಾಸವಾಗುತ್ತದೆ. ಶಾಲೆ ಕಾಂಪೌಂಡ್ ಹಾಗೂ ಗೇಟ್, ಕೊಠಡಿ ಒಳಭಾಗದಲ್ಲೂ ಬಣ್ಣದ ಚಿತ್ರ ಬಿಡಿಸಲಾಗಿದೆ. ಇದಕ್ಕೆಲ್ಲ ತಗುಲಿದ ವೆಚ್ಚವನ್ನು ಪಾಟೀಲ್ ಅಕಾಡೆಮಿ ವತಿಯಿಂದ ಭರಿಸಲಾಗಿದ್ದು, ಶಾಲೆ ನೋಡಲು ಇತರ ಶಾಲೆಗಳ ನಿಯೋಗ ಬರಲಾರಂಭಿಸಿವೆ.
ಚಿತ್ರಕಲಾ ಶಿಕ್ಷಕರ ಪ್ರಯತ್ನಕ್ಕೆ ಸಾಥ್
ಸರ್ಕಾರಿ ಶಾಲೆಯ ಚಿತ್ರಕಲಾ ಶಿಕ್ಷಕರು ಈ ಹಿಂದೆ ತಂಡಗಳನ್ನು ಕಟ್ಟಿಕೊಂಡು ಆಯಾ ಶಾಲೆಯ ದಾನಿಗಳು ಬಣ್ಣಗಳನ್ನು ಕೊಡಿಸಿದಾಗ, ಶಿಕ್ಷಣ ಇಲಾಖೆಯಿಂದ ನಿಯೋಜಿತವಾಗಿ ಶಾಲೆ ಅಂದ ಹೆಚ್ಚಿಸಲು ಶ್ರಮಿಸಿದ್ದರು. ಇದರಿಂದ 25ಕ್ಕೂ ಹೆಚ್ಚು ಶಾಲೆ ಹೊಸ ಕಳೆ ಪಡೆದುಕೊಂಡಿದ್ದವು. ಇದೀಗ ಖಾಸಗಿ ಕಾಲೇಜು ಕೂಡ ಅದೇ ನಿಟ್ಟಿನಲ್ಲಿ ಪ್ರಯತ್ನಿಸಿದ್ದರಿಂದ ಸರ್ಕಾರಿ ಶಾಲೆಯೊಂದು ಮಾದರಿಯಾಗಿ ಎಲ್ಲರ ಗಮನ ಸೆಳೆಯುತ್ತಿದೆ.
ಶಾಲೆ ಸಂಪೂರ್ಣ ಬದಲಾವಣೆ ಮಾಡಿದ್ದು, ರೈಲು ಬೋಗಿ ಮಾದರಿಯ ಕೊಠಡಿಗಳನ್ನು ನೋಡಿ ವಿದ್ಯಾರ್ಥಿಗಳು ಸಂತಸಗೊಂಡಿದ್ದಾರೆ. ಸಮುದಾಯ ಸಹಭಾಗಿತ್ವ ದೊರಕಿದಾಗ ಹೆಚ್ಚಿನ ಸುಧಾರಣೆ ಸಾಧ್ಯ ಎನ್ನುವುದಕ್ಕೆ ನಮ್ಮ ಶಾಲೆ ನಿದರ್ಶನ. ಆರ್.ಸಿ.ಪಾಟೀಲ್ ತಂಡದ ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಬೇಕು. -ವೀಣಾಬಾಯಿ, ಮುಖ್ಯಗುರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಹೊಸಳ್ಳಿ(ಇಜೆ)
ಏನಾದರೊಂದು ಹೊಸ ಕೆಲಸ ಮಾಡ ಬೇಕೆಂಬ ಉದ್ದೇಶ ಇತ್ತು. ಎನ್ನೆಸ್ಸೆಸ್ ಉದ್ದೇಶವೂ ಕೂಡ. ಆ ನಿಟ್ಟಿನಲ್ಲಿ ವಿದ್ಯಾರ್ಥಿನಿಯರ ತಂಡ ಸಾಥ್ ನೀಡಿದ್ದರಿಂದ ಹೊಸಳ್ಳಿ ಶಾಲೆ ಮಾದರಿಯಾಗಿಸಲು ಸಾಧ್ಯವಾಗಿದೆ. -ಆರ್.ಸಿ. ಪಾಟೀಲ್, ಕಾರ್ಯದರ್ಶಿ, ದುದ್ದುಪುಡಿ ಮಹಿಳಾ ಮಹಾವಿದ್ಯಾಲಯ
-ಯಮನಪ್ಪ ಪವಾರ