ಎನ್.ಆರ್.ಪುರ: ಉದ್ಯಮಿ ಸಿದ್ಧಾರ್ಥ ಹೆಗ್ಡೆ ಅವರ ಸಾವಿನ ಬಗ್ಗೆ ದೊರೆತಿರುವ ಮರಣ ಪತ್ರದ ಆಧಾರದ ಮೇಲೆ ಸೂಕ್ತ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಬೇಕೆಂದು ಕಮ್ಯುನಿಸ್ಟ್ ಪಕ್ಷದ ರಾಜ್ಯ ಕಾರ್ಯಕಾರಿಣಿ ಸಮಿತಿ ಸದಸ್ಯೆ ರಾಧಾ ಸುಂದರೇಶ್ ಆಗ್ರಹಿಸಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಮಟ್ಟದ ಅಂಗನವಾಡಿ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಮಾತನಾಡಿದರು.
ಸಿದ್ಧಾರ್ಥ ಅವರು ಬರೆದಿದ್ದಾರೆ ಎನ್ನಲಾದ ಮರಣ ಪತ್ರದಲ್ಲಿ ಕಿರುಕುಳ ನೀಡಿದವರ ವಿರುದ್ಧ ಪೊಲೀಸರು ಮೊಕದ್ದಮೆ ದಾಖಲಿಸಿ, ಬಂಧಿಸಿ ವಿಚಾರಣೆಗೊಳಪಡಿಸಬೇಕು. ಕೇಂದ್ರದ ಬಿಜೆಪಿ ಸರ್ಕಾರ ದೇಶದ ಎಲ್ಲಾ ಸಾಂವಿಧಾನಿಕ ಸಂಸ್ಥೆಗಳ ಮೇಲೆ ನಿಯಂತ್ರಣ ಸಾಸುತ್ತಿದೆ. ಆ ಮೂಲಕ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದಂತೆ ಮಾಡಿರುವುದು ಸತ್ಯದ ಸಂಗತಿಯಾಗಿದೆ. ಸಿದ್ಧಾರ್ಥ ಅವರು ಆದಾಯ ತೆರಿಗೆ ಅಧಿಕಾರಿಗಳ ಕಿರುಕುಳದ ಬಗ್ಗೆ ಪ್ರಸ್ತಾಪಿಸಿರುವುದರಿಂದ ಅವರನ್ನು ವಿಚಾರಣೆಗೊಳಪಡಿಸಬೇಕು ಎಂದರು.
ಸಿದ್ಧಾರ್ಥ ಅವರ ಸಾವಿನ ವಿಚಾರದಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುವುದು ಸರಿಯಲ್ಲ. ಕೇಂದ್ರ ಸರ್ಕಾರ ಅವರ ಸಾವಿನ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂಬ ಸಂಶಯ ಉಂಟಾಗಿದೆ. ಹಿಂಸೆ, ನಿರಂತರ ಕಿರುಕುಳ ಕೊಟ್ಟು ಸಾವಿಗೆ ಪ್ರಚೋದಿಸುವುದೂ ಕೂಡ ಕೊಲೆಗೆ ಸಮಾನವಾಗಿದೆ. ಆದ್ದರಿಂದ, ಈ ಬಗ್ಗೆ ಕೂಲಂಕಷವಾಗಿ ಹಾಗೂ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು. ಕೇವಲ ಅವರ ಆತ್ಮಕ್ಕೆ ಸಂತಾಪ ಸೂಚಿಸಿ, ಮೌನಾಚರಣೆ ಮಾಡುವುದರ ಮೂಲಕ ನ್ಯಾಯ ಸಿಗುವುದಿಲ್ಲ ಎಂದರು.
ಮುಂದಿನ ದಿನಗಳಲ್ಲಿ ಅಂಗನವಾಡಿಗಳನ್ನೂ ಕೂಡ ಖಾಸಗೀಕರಣ ಮಾಡುವ ಹುನ್ನಾರ ನಡೆಸುತ್ತಿರುವ ಸರ್ಕಾರದ ವಿರುದ್ಧ ಪ್ರಬಲ ಹೋರಾಟಕ್ಕೆ ಸಜ್ಜಾಗಬೇಕಾಗಿದೆ. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಸಂಘಟಿರಾಗಬೇಕೆಂದು ಕರೆ ನೀಡಿದರು.
ಇದೇ ಸಂದರ್ಭದಲ್ಲಿ ಸಂಘಟನೆಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಪದ್ಮಾ, ಅಧ್ಯಕ್ಷರಾಗಿ ಶೈಲಾ, ಉಪಾಧ್ಯಕ್ಷರಾಗಿ ಅನಿತಾ ಫೆರೇರಾ, ಅನಿತಾ, ಕಾರ್ಯದರ್ಶಿಯಾಗಿ ಸಿ.ಎಸ್.ಶಿವರತ್ನಾ, ಖಜಾಂಚಿಯಾಗಿ ಮಧುಮಾಲತಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ಶೃಂಗೇರಿ ಕ್ಷೇತ್ರ ಅಂಗನವಾಡಿ ಸಂಘಟನೆಗಳ ಕಾರ್ಯದರ್ಶಿ ಕೆಳವಳ್ಳಿ ಕಳಸಪ್ಪ, ಅಂಗನವಾಡಿ ಕಾರ್ಯಕರ್ತೆಯರಾದ ಶಿಲ್ಪಾ, ಶಿವರತ್ನಮ್ಮ, ಸುಶೀಲಾ, ಅನಿತಾ ಮತ್ತಿತರರು ಉಪಸ್ಥಿತರಿದ್ದರು.