ಎನ್.ಆರ್.ಪುರ: ತಾಲೂಕಿನ ಮೆಣಸೂರು ಬೈಪಾಸ್ ಇದೀಗ ಸಾವಿನ ತಾಣವಾಗಿ ಪರಿವರ್ತನೆಯಾಗುತ್ತಿದೆ. ಕಳೆದೆರಡು ತಿಂಗಳಿಂದ ಈ ಬೈಪಾಸ್ ಸರ್ಕಲ್ ಬಳಿ ಇಪ್ಪತ್ತಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿದ್ದು, ಅಪಘಾತದಲ್ಲಿ ಬದುಕುಳಿದವರ ಸಂಖ್ಯೆಯೇ ಕಡಿಮೆ.
ಇನ್ನು ಕೆಲವರು ಸ್ಥಳದಲ್ಲಿಯೇ ಸಾವನ್ನಪ್ಪುತ್ತಿದ್ದಾರೆ. ಮಲ್ಫೆ, ಮೊಳಕಾಲ್ಮೂರು ರಸ್ತೆಯಾಗಿ 2007ರಲ್ಲಿಯೇ ಮಂಜೂರಾಗಿದ್ದು, ಕಳೆದೆರಡು ವರ್ಷಗಳಿಂದ ರಾಜ್ಯ ಹೆದ್ದಾರಿ ರಸ್ತೆಗೆ ಮೇಲ್ದರ್ಜೆಗೇರಿಸಿದ ನಂತರ ರಸ್ತೆ ಕಾಮಗಾರಿ ಪ್ರಕ್ರಿಯೆ ಪ್ರಾರಂಭ ಮಾಡಿ ರಸ್ತೆ ಅಗಲೀಕರಣ, ಸೇತುವೆಗಳ ಅಗಲೀಕರಣ ಮಾಡಲಾಗಿದೆ.
ಉತ್ತಮ ರಸ್ತೆಯಾಗಿ ಮಾರ್ಪಟ್ಟಿದೆ. ರಸ್ತೆ ನಿರ್ಮಾಣವಾದಾಗಿನಿಂದಲೂ ಈ ಬೈಪಾಸ್ ನಲ್ಲಿ ಯಾವುದೇ ಎಚ್ಚರಿಕೆಯ ನಾಮಫಲಕ ಅಳವಡಿಸದ ಕಾರಣ ಹಾಗೂ ಬೈಪಾಸ್ ತಿರುವುಗಳಲ್ಲಿ ಭಾರೀ ವಾಹನಗಳನ್ನು ನಿಲ್ಲಿಸುವುದರಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಅಲ್ಲದೇ, ಈ ಸರ್ಕಲ್‌ನಲ್ಲಿ ಅಧಿಕ ಟೀ ಸ್ಟಾಲ್, ಹೋಟೆಲ್‌ಗಳು ಇರುವುದರಿಂದ ತಿರುವುಗಳಲ್ಲಿಯೇ ವಾಹನಗಳನ್ನು ನಿಲ್ಲಿಸಲಾಗುತ್ತದೆ. ಇದರಿಂದ ವಾಹನ ಸವಾರರಿಗೆ ಎದುರುಗಡೆಯಿಂದ ಬರುವ ವಾಹನಗಳು ಕಾಣದೆ ಅನೇಕ ಅಪಘಾತಗಳಾಗುತ್ತಿವೆ.
ಈ ರಸ್ತೆಯಲ್ಲಿ ಅಧಿಕವಾಗಿ ಟಿಪ್ಪರ್ ಗಳು, ಗ್ಯಾಸ್ ಲಾರಿಯಂತಹ ಭಾರೀ ಗಾತ್ರದ ವಾಹನಗಳು ಅತೀ ವೇಗವಾಗಿ ಸಂಚರಿಸುತ್ತವೆ. ಈ ಬೈಪಾಸ್ ರಸ್ತೆಗೆ ಬರುವ ಮುನ್ನವೇ ಎಚ್ಚರಿಕೆಯ ನಾಮಫಲಕಗಳು ಹಾಗೂ ಹಂಪ್‌ಗ್ಳನ್ನು ಹಾಕಿದ್ದರೆ ಅನಾಹುತಗಳ ಸಂಖ್ಯೆ ಕಡಿಮೆಯಾಗುತ್ತವೆ. ದಿನಂಪ್ರತಿ ಅನಾಹುತಗಳನ್ನು ನೋಡಿ, ನೋಡಿ ಸಾಕಾಗಿದೆ ಎನ್ನುತ್ತಾರೆ ಸ್ಥಳೀಯರು. ಈ ಬೈಪಾಸ್ ರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿರುವುದರಿಂದ ಬೈಪಾಸ್ ತಿರುವುಗಳ ನಡುವೆ ಸರ್ಕಲ್ ನಿರ್ಮಿಸಿದಲ್ಲಿ ರಸ್ತೆ ನಿಯಮಗಳ ಪಾಲನೆಯಾಗುವುದರ ಜೊತೆಗೆ ಅಪಘಾತಗಳಿಗೆ ಕಡಿವಾಣ ಹಾಕಬಹುದಾಗಿದೆ. ಲೋಕೋಪಯೋಗಿ ಇಲಾಖೆ ಅಪಘಾತಗಳು ಹೆಚ್ಚಾಗುತ್ತಿರುವ ಪ್ರಕರಣಗಳನ್ನು ಕೇಳಿಯೂ ಕೇಳದಂತೆ ಮುನ್ನೆಚ್ಚರಿಕೆ ವಹಿಸದೇ ಇರುವುದು ಬೈಪಾಸ್ ರಸ್ತೆಯ ಸ್ಥಳೀಯರ ಆಕ್ರೋಷಕ್ಕೆ ಕಾರಣವಾಗಿದೆ. ಅಲ್ಲದೇ, ಕಣ್ಣೆದುರೇ ಸ್ಥಳದಲ್ಲಿಯೇ ಅನೇಕ ಸಾವಾಗುತ್ತಿರುವುದನ್ನು ಕಂಡು ಸ್ಥಳೀಯರು ಸಂಬಂಧಪಟ್ಟ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.
ತಿರುವುಗಳಲ್ಲಿರುವ ಕ್ಯಾಂಟೀನ್, ಹೋಟೆಲ್‌ಗಳ ಮುಂಭಾಗದಲ್ಲಿ ಗ್ರಾಹಕರು ವಾಹನಗಳನ್ನು ನಿಲ್ಲಿಸದಂತೆ ಪೊಲೀಸರು ಕ್ರಮ ವಹಿಸಬೇಕಾಗಿದೆ. ಅಪಘಾತಗಳ ಸಂಖ್ಯೆ ಇದೇ ಸ್ಥಳದಲ್ಲಿಯೇ ಹೆಚ್ಚಾಗುತ್ತಿದ್ದರೂ, ಈ ಬಗ್ಗೆ ಪೊಲೀಸ್ ಇಲಾಖೆ ಕೂಡ ಮೌನ ವಹಿಸಿದೆ. ಬೈಪಾಸ್ ರಸ್ತೆಯಲ್ಲಿ ಭಾರೀ ವಾಹನಗಳ ಅತೀ ವೇಗಕ್ಕೆ ಕಡಿವಾಣ ಹಾಕಬೇಕಾಗಿದೆ. ಅಧಿಕ ಅಪಘಾತಗಳು ಇದೇ ಬೈಪಾಸ್‌ನಲ್ಲಿ ನಡೆಯುತ್ತಿರುವುದರಿಂದ ಸಂಬಂಧಪಟ್ಟ ಇಲಾಖೆಗೆ ಅಪಘಾತಗಳ ಪ್ರಕರಣ ಹೆಚ್ಚಾಗುತ್ತಿವೆ. ಇದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿದೆ. ಕೇವಲ ಪಟ್ಟಣದಲ್ಲಿ ಹೆಲ್ಮೇಟ್, ಸಣ್ಣಪುಟ್ಟ ವಾಹನಗಳ ತಪಾಸಣೆ ಮಾಡುತ್ತಿದ್ದಾರೆ. ಇತ್ತ ಅಧಿಕ ಅಪಘಾತವಾಗುತ್ತಿರುವ ಸ್ಥಳದ ಬಗ್ಗೆಯೂ ಪೊಲೀಸ್ ಇಲಾಖೆ ನಿಗಾ ವಹಿಸಬೇಕಾಗಿದೆ.
ನಮ್ಮ ಜೇಸಿ ಸಂಸ್ಥೆಯಿಂದ ಈ ಬೈಪಾಸ್ ನಲ್ಲಿ ಜೇಸೀ ವೃತ್ತ ನಿರ್ಮಿಸಿಕೊಡುತ್ತೇವೆ. ಅದಕ್ಕೆ ಅನುಮತಿ ನೀಡಿ ಎಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದು ಎರಡು ಮೂರು ತಿಂಗಳಾದರೂ ಯಾವುದೇ ಅನುಮತಿ ದೊರೆತಿಲ್ಲ. ನಮ್ಮ ಸಂಸ್ಥೆಯಿಂದಲೇ ಉಚಿತವಾಗಿ ಸರ್ಕಲ್ ನಿರ್ಮಿಸಿಕೊಡುತ್ತೇವೆ ಎಂದರೂ ಇಲಾಖೆಯವರು ಆಸಕ್ತಿ ತೋರದೇ ಇರುವುದು ಶೋಚನೀಯ.
ಅನಿಲ್, ಅಧ್ಯಕ್ಷರು, ಜೇಸಿ ಸಂಸ್ಥೆ
ಮೆಣಸೂರು ಬೈಪಾಸ್ ರಸ್ತೆಯಲ್ಲಿ ಅಪಘಾತಗಳ ಪ್ರಕರಣ ಹೆಚ್ಚಾಗುತ್ತಿದೆ. ಇಂದೇ ಬೈಪಾಸ್ ಸರ್ಕಲ್‌ನಲ್ಲಿ ಬ್ಯಾರಿಕೇಡ್‌ಗಳನ್ನು ಹಾಕಿ ವಾಹನಗಳ ಅತೀ ವೇಗಕ್ಕೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುತ್ತೇನೆ.
ದಿಲೀಪ್‌ಕುಮಾರ್,
ಪ್ರೊಬೇಷನರಿ ಪಿಎಸ್‌ಐ
ಒಂದೇ ಜಾಗ, ರಸ್ತೆ ಅಥವಾ ಸರ್ಕಲ್‌ಗಳಲ್ಲಿ ಮೂರಕ್ಕೂ ಅಧಿಕ ಸ್ಥಳದಲ್ಲಿಯೇ ಸಾವನ್ನಪ್ಪಿದ ಪ್ರಕರಣಗಳು ನಡೆದರೆ ಅಂತಹ ಸ್ಥಳಗಳನ್ನು ಬ್ಲ್ಯಾಕ್ ಸ್ಪಾಟ್ ಎಂದು ಗುರುತಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತೇವೆ. ಅಧಿಕ ಅನಾಹುತ ಸಂಭವಿಸುತ್ತಿದ್ದು, ಮುನ್ನೆಚ್ಚರಿಕೆ ಕ್ರಮಕ್ಕೆ ಪೊಲೀಸ್ ಇಲಾಖೆಗೆ ಪತ್ರ ಬರೆಯಲಾಗುವುದು. ರಸ್ತೆ ಅಗಲೀಕರಣ ಹಾಗೂ ಸರ್ಕಲ್ ನಿರ್ಮಾಣ ಕಾರ್ಯ ಅತೀ ಶೀಘ್ರ ಮಾಡುತ್ತೇವೆ. ಜೇಸಿ ಸಂಸ್ಥೆಯವರು ಸರ್ಕಲ್ ನಿರ್ಮಾಣದ ಅನುಮತಿಗಾಗಿ ನೀಡಿರುವ ಪತ್ರವನ್ನು ಮೇಲಧಿಕಾರಿಗಳ ಅನುಮತಿಗಾಗಿ ಕಳುಹಿಸಿದ್ದೇವೆ.
ರವಿಚಂದ್ರ, ಲೋಕೋಪಯೋಗಿ
ಇಲಾಖೆ ಇಂಜಿನಿಯರ್
ಪ್ರಶಾಂತ್ ಶೆಟ್ಟಿ