Advertisement

ಕೈಕೊಟ್ಟ ಸರ್ವರ್‌: ಹೈರಾಣಾದ ಪಡಿತರ ಗ್ರಾಹಕರು

01:27 PM Jan 08, 2020 | Team Udayavani |

ಎನ್‌.ಆರ್‌.ಪುರ: ಪಡಿತರ ಚೀಟಿದಾರರು ಇ ಕೆವೈಸಿ ಮಾಡುವ ಪ್ರಕ್ರಿಯೆ ಕಳೆದ ಒಂದರಿಂದ ಪ್ರಾರಂಭವಾಗಿದ್ದು, ಇದರ ಸರ್ವರ್‌ ಪದೇ ಪದೆ ಕೈಕೊಡುತ್ತಿರುವುದರಿಂದ ಫಲಾನುಭವಿಗಳು ಕಾದು ಕಾದು ಹೈರಾಣಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಫಲಾನುಭವಿಗಳು ದೂರಿದ್ದಾರೆ.

Advertisement

ಪಡಿತರ ಚೀಟಿಯನ್ನು ಪರಿಷ್ಕರಿಸುವ ನಿಟ್ಟಿನಲ್ಲಿ ಸರ್ಕಾರ ಜ.1ರಿಂದ 10ರೊಳಗೆ ಪಡಿತರ ಚೀಟಿಯಲ್ಲಿರುವ ಎಲ್ಲರೂ ಬೆರಳಚ್ಚು ನೀಡಬೇಕೆಂದು ಆದೇಶಿಸಿತ್ತು. ಅದರನ್ವಯ ಎಲ್ಲಾ ನ್ಯಾಯಾಬೆಲೆ ಅಂಗಡಿಗಳಲ್ಲೂ ಬೆರಳಚ್ಚು ಪಡೆಯುವ ಕಾರ್ಯ ಆರಂಭಿಸಲಾಗಿತ್ತು. ಆದರೆ, ಸರ್ವರ್‌ ಪದೇ ಪದೆ ಕೈಕೊಡುತ್ತಿರುವುದು ಪಡಿತರ ಚೀಟಿದಾರರಿಗೆ ಹಾಗೂ ನ್ಯಾಯ ಬೆಲೆ ಅಂಗಡಿಯವರಿಗೂ ಕಿರಿಕಿರಿಯಾಗಿದೆ.

ಸರ್ವರ್‌ ಮೇಲೆ ಹೆಚ್ಚಿನ ಒತ್ತಡ ಇರುವುದರಿಂದ ಜನವರಿ 4 ಮತ್ತು 5ರಂದು ಸರ್ವರ್‌ ನಿಧಾನಗತಿಯಲ್ಲಿ ಕಾರ್ಯನಿರ್ವಹಿಸಿದೆ. ಎನ್‌
ಐಸಿಯವರಿಗೆ ಬದಲಿ ಸರ್ವರ್‌ ಒದಗಿಸಲು ತಿಳಿಸಲಾಗಿದೆ. ಹಾಗಾಗಿ, ಹೆಚ್ಚು ಜನರನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಕಾಯಿಸದೆ 10ರಿಂದ 20 ಜನರಿಗೆ ಮಾತ್ರ ಇಕೆವೈಸಿ ಮಾಡಲು ಪ್ರಯತ್ನಿಸಬೇಕು. ಅಲ್ಲದೇ, ಇಕೆವೈಸಿ ಮಾಡಿಸಲು ಜನವರಿ 31ರವರೆಗೆ ಸಮಯಾವಕಾಶವಿದೆ ಎಂದು ಪಡಿತರ ಚೀಟಿದಾರರಿಗೆ ಮನವರಿಕೆ ಮಾಡಬೇಕು ಎಂದು ಆಯುಕ್ತರು ಸಂದೇಶ ರವಾನಿಸಿದ್ದರು.

ಪಡಿತರ ಚೀಟಿದಾರರು ಇಕೆವೈಸಿ ಮಾಡಿಸದಿದ್ದರೆ ಪಡಿತರ ನಿಂತು ಹೋಗುತ್ತದೆ ಎಂಬ ವಂದತಿಗಳಿಗೆ ಹೆದರಿದ ಫಲಾನುಭವಿಗಳು ಸರ್ವರ್‌ ಕೈಕೊಟ್ಟರು ಸಹ ಸರ್ವರ್‌ ಸರಿಯಾಗಬಹುದೆಂದು ಕಾದು ಕುಳಿತಿರುವುದು ಹಲವು ನ್ಯಾಯಬೆಲೆ ಅಂಗಡಿಗಳ ಮುಂದೆ ಕಂಡು ಬಂತು. ಈ ಬಗ್ಗೆ ಆಹಾರ ಇಲಾಖೆ ಉಪನಿರ್ದೇಶಕ ಚಂದ್ರಶೇಖರ್‌ ಅವರನ್ನು ಸಂಪರ್ಕಿಸಿದಾಗ, ಸರ್ವರ್‌ ಸಮಸ್ಯೆಯಿಂದಾಗಿ ಇಕೆವೈಸಿ ಮಾಡಲು ಸಮಸ್ಯೆಯಾಗುತ್ತಿದೆ. ಸಹಾಯಕ ಆಹಾರ ನಿರೀಕ್ಷರು ಶನಿವಾರ ಕಡೂರು, ತರೀಕೆರೆ ಭಾಗಕ್ಕೆ ಭೇಟಿ ನೀಡಿ ಸಮಸ್ಯೆಯನ್ನು ಪರಿಶೀಲಿಸಿದ್ದಾರೆ.

ಮಂಗಳವಾರ ಮಲೆನಾಡಿನ ಭಾಗಗಳಿಗೆ ಭೇಟಿ ನೀಡಲಿದ್ದಾರೆ. ಇಕೆವೈಸಿ ಸಂಪೂರ್ಣ ಪ್ರಕ್ರಿಯೆ ಮುಗಿಯುವರೆಗೆ ನಡೆಯಲಿದೆ. ಯಾವುದೇ ಕಾರಣಕ್ಕೂ ಪಡಿತರ ನಿಲ್ಲಿಸುವುದಿಲ್ಲ. ಪಡಿತರ ಚೀಟಿದಾರರು ಆತಂಕಪಡುವ ಅಗತ್ಯವಿಲ್ಲ. ಸಮಸ್ಯೆಯನ್ನು ಆಯುಕ್ತರ ಗಮನಕ್ಕೆ ತರಲಾಗಿದ್ದು, ಪ್ರತಿ ಜಿಲ್ಲೆಗೆ ಪ್ರತ್ಯೇಕ ಸರ್ವರ್‌ ಮಾಡಿಕೊಡುವುದಾಗಿ ತಿಳಿಸಿದ್ದಾರೆ ಎಂದರು.

Advertisement

ತಪ್ಪು ಮಾಹಿತಿ ನೀಡಿ ಬಿಪಿಎಲ್‌ ಪಡಿತರ ಚೀಟಿ ಪಡೆದವರು ಸ್ವಯಂ ಪ್ರೇರಿತವಾಗಿ ಇಲಾಖೆಗೆ ಪಡಿತರ ಚೀಟಿ ಒಪ್ಪಿಸಬೇಕು. ಇಲ್ಲವಾದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಇ ಕೆವೈಸಿಗೆ ಮಾರ್ಚ್‌ 31ರ ವರೆಗೆ ಅವಕಾಶ ಸರ್ವರ್‌ನಲ್ಲಾಗುತ್ತಿರುವ ಸಮಸ್ಯೆಯನ್ನು ಅರಿತ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತರು ಶನಿವಾರ ಸಂಜೆ ವೇಳೆಗೆ ಹೊಸ ಆದೇಶ ಹೊರಡಿಸಿದ್ದು, ಇಕೆವೈಸಿ ಮಾಡಿಸಲು ಮಾರ್ಚ್‌ 31ರವರೆಗೆ ಅವಕಾಶ ಕಲ್ಪಿಸಿದ್ದಾರೆ. ಆದೇಶದಲ್ಲಿ ಹೆಚ್ಚುವರಿ ಸರ್ವರ್‌ ಅಳವಡಿಸಲು ಜ.5ರಿಂದ 7ರವರೆಗೆ ಇಕೆವೈಸಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಜ.8ರಿಂದ ಇಕೆವೈಸಿ ಪುನಃ ಚಾಲನೆಗೊಳಿಸಲಾಗುವುದು ಎಂದು ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next