Advertisement

ಅನಿವಾಸಿ ಕನಡಿಗರಿಗೆ ಎನ್‌ಆರ್‌ಕೆ ಕಾರ್ಡ್‌

09:55 AM Nov 10, 2017 | |

ಬೆಂಗಳೂರು: ವಿಶ್ವದಲ್ಲಿರುವ ಕನ್ನಡಿಗರಿಗೆ ತಾಯ್ನಾಡಿನ ಬಗ್ಗೆ ಹೆಮ್ಮೆ ಮೂಡಿಸಲು ಅನಿವಾಸಿ ಕನ್ನಡಿಗರಿಗೆ ವಿಶೇಷ ಗುರುತಿನ ಚೀಟಿ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 192 ರಾಷ್ಟ್ರಗಳಲ್ಲಿನ ಅನಿವಾಸಿ ಕನ್ನಡಿಗರನ್ನು ಗುರುತಿಸಿ ಡಿಸೆಂಬರ್‌ನಲ್ಲಿ ಅನಿವಾಸಿ ಭಾರತೀಯ ಸಮಿತಿ ಕರ್ನಾಟಕ ಘಟಕದ ಮೂಲಕ ಎನ್‌ಆರ್‌ಕೆ (ನಾನ್‌ ರೆಸಿಡೆಂಟ್‌ ಕನ್ನಡಿಗ) ಕಾರ್ಡ್‌ಗಳನ್ನು ನೀಡಲು ಸರ್ಕಾರ ತೀರ್ಮಾನಿಸಿದೆ.

Advertisement

ಸುಮಾರು 13 ಲಕ್ಷಕ್ಕೂ ಹೆಚ್ಚಿನ ಕನ್ನಡಿಗರು ವಿಶ್ವದೆಲ್ಲೆಡೆ ವಾಸವಾಗಿದ್ದು, ಎಲ್ಲರೂ ಕರ್ನಾಟಕ ಸರ್ಕಾರದೊಂದಿಗೆ ಸಂಪರ್ಕ ಹೊಂದಿಲ್ಲ. ಅಲ್ಲದೇ ಹೊರ ದೇಶಗಳಲ್ಲಿರುವ ಎಲ್ಲ ಕನ್ನಡಿಗರ ಬಗ್ಗೆ ರಾಜ್ಯ ಸರ್ಕಾರದ ಬಳಿಯೂ ಸೂಕ್ತ ದಾಖಲೆಗಳಿಲ್ಲ. ಅನಿವಾಸಿ ಕನ್ನಡಿಗರಿಗೆ ಅಪಘಾತ, ವಂಚನೆ, ಸಾವು ಸಂಭವಿಸಿದಾಗ ಮಾತ್ರ ಅನಿವಾಸಿ ಕನ್ನಡಿಗರು ರಾಜ್ಯ ಸರ್ಕಾರವನ್ನು ಸಂಪರ್ಕಿಸಿ ಸಹಾಯ ಕೇಳುವ ಪರಿಪಾಠವಿದೆ. ಅಲ್ಲದೇ ಕನ್ನಡಿಗರು ತಮ್ಮ ತಾಯಿ ನಾಡು ಬಿಟ್ಟು ಹೊರಗಡೆ ಹೋದಾಗ ನಾಡಿನ ಸಂಪರ್ಕ ಕಡಿದುಕೊಂಡು ಅನಾಥ ಭಾವ ಮೂಡುವ ಸಂದರ್ಭ ಹೆಚ್ಚಿರುತ್ತದೆ. ಅಂತಹ ಭಾವನೆಯನ್ನು ಹೋಗಲಾಡಿಸಲು ಅನಿವಾಸಿ ಕನ್ನಡಿಗರ ಘಟಕ ವಿದೇಶದಲ್ಲಿರುವ ಕನ್ನಡಿಗರಿಗೆ ಎನ್‌ಆರ್‌ಕೆ ಕಾರ್ಡ್‌ ನೀಡುವ ಮೂಲಕ ಹೆಮ್ಮೆ ಮೂಡುವುದರ ಜತೆಗೆ ರಾಜ್ಯ ಸರ್ಕಾರ ತಮ್ಮನ್ನು ಗುರುತಿಸಿದೆ ಎಂಬ ಅಭಿಮಾನ ಮೂಡಿಸಲು ಮುಂದಾಗಿದೆ.

ಎನ್‌ಆರ್‌ಕೆ ಕಾರ್ಡ್‌ ವಿಶೇಷವೇನು?:
ಉದ್ಯೋಗ ಅರಸಿ ಹೊರ ದೇಶಗಳಿಗೆ ಹೋಗಿರುವ ಕನ್ನಡಿಗರು ತಾವು ದುಡಿದ ದುಡ್ಡನ್ನು ಊರಿಗೆ ಕೊಡುವಾಗ ಫ‌ಂಡ್‌ ಟ್ರಾನ್ಸ್‌ಫ‌ರ್‌ ಮಾಡಲು ಅವರು ವಿದೇಶಿ ಕರೆನ್ಸಿಯನ್ನು ಭಾರತೀಯ ರೂಪಾಯಿಗೆ ವಿನಿಮಯ ಮಾಡಿಕೊಳ್ಳಬೇಕು. ಅದಕ್ಕೆ ಬ್ಯಾಂಕ್‌ಗಳು ಹಣ ವಿನಿಮಯಕ್ಕೆ ಚಾರ್ಜ್‌ ಮಾಡುತ್ತವೆ. ಅಂತಹ ಹೆಚ್ಚಿನ ಸರ್ವಿಸ್‌ ಚಾರ್ಜ್‌ಗಳನ್ನು ಕಡಿಮೆ ಮಾಡಲು ಎನ್‌ಆರ್‌ಐ ಕರ್ನಾಟಕ
ಘಟಕ ಖಾಸಗಿ ಬ್ಯಾಂಕ್‌ ಜತೆ ಒಪ್ಪಂದ ಮಾಡಿಕೊಂಡು ಎನ್‌ಆರ್‌ಕೆ ಕಾರ್ಡ್‌ ಹೊಂದುವ ಕನ್ನಡಿಗರಿಗೆ ರಿಯಾಯ್ತಿ ನೀಡಲು ಅವಕಾಶ ಕಲ್ಪಿಸಿ ಕೊಡಲು ತೀರ್ಮಾನಿಸಿದೆ. ಅಲ್ಲದೇ ಅನಿವಾಸಿ ಕನ್ನಡಿಗರು ರಾಜ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ರಾಜ್ಯದಲ್ಲಿ ಪ್ರವಾಸ ಕೈಗೊಂಡರೆ, ಟ್ರಾವೆಲ್‌, ಹೋಟೆಲ್‌ ಹಾಗೂ ಆಸ್ಪತ್ರೆಗಳಲ್ಲಿಯೂ ಎನ್‌ಆರ್‌ಕೆ ಕಾರ್ಡ್‌ ಹೊಂದಿದವರಿಗೆ ಡಿಸ್ಕೌಂಟ್‌ ದರದಲ್ಲಿ ಸೌಲಭ್ಯ ದೊರೆಯು ವಂತೆ ನೋಡಿಕೊಳ್ಳಲು ಈ ಕಾರ್ಡ್‌ನಲ್ಲಿ ಅವಕಾಶ ದೊರೆಯುವಂತೆ ಮಾಡಲಾಗಿದೆ.

ವಿಶೇಷವಾಗಿ ಅನೇಕ ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಉದ್ದಿಮೆ ಸ್ಥಾಪನೆ ಮಾಡುವುದು. ತಾವು ಹುಟ್ಟಿ ಬೆಳೆದ ಊರು, ಜಿಲ್ಲೆಗಳಲ್ಲಿ ಸಾಮಾಜಿಕ ಸೇವೆ ಮಾಡಲು ಮುಂದೆ ಬರುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ಹಣ ವರ್ಗಾವಣೆ ಮಾಡುವಾಗ ಸಾಕಷ್ಟು ತೆರಿಗೆ ವಿಧಿಸಲಾಗುತ್ತದೆ. ಎನ್‌ಆರ್‌ಕೆ ಕಾರ್ಡ್‌ ಹೊಂದಿದ ಅನಿವಾಸಿ ಕನ್ನಡಿಗರು ರಾಜ್ಯದಲ್ಲಿ ಸಮಾಜ ಸೇವೆ ಮಾಡಲು ಮುಂದಾದರೆ, ಅವರಿಗೆ ತೆರಿಗೆ ರಿಯಾಯ್ತಿಯನ್ನೂ ನೀಡಲು ಸರ್ಕಾರ ನಿರ್ಧರಿಸಿದೆ.

ಕಾರ್ಡ್‌ ಪಡೆಯಲು ಅರ್ಹತೆ: ಭಾರತೀಯ ಪಾರ್ಸ್‌ ಪೋರ್ಟ್‌ ಹೊಂದಿರುವ ಹಾಗೂ ಕನಿಷ್ಠ 6 ತಿಂಗಳಿಂದ ವಿದೇಶಗಳಲ್ಲಿ ವಾಸವಾಗಿರುವ ಕನ್ನಡಿಗರು ಎನ್‌ಆರ್‌ಕೆ ಕಾರ್ಡ್‌ ಪಡೆಯಲು ಅರ್ಹರಾಗಿರುತ್ತಾರೆ. ಎನ್‌ಆರ್‌ಕೆ ಕಾರ್ಡ್‌ ಪಡೆಯಲು ಅನಿವಾಸಿ ಕನ್ನಡಿಗರು ಯಾವುದೇ ವೆಚ್ಚ ಭರಿಸಿದೇ, ಎನ್‌ ಆರ್‌ಐ ಫೋರಂ ಕರ್ನಾಟಕ ಡಾಟ್‌ ಆರ್ಗ್‌ನಲ್ಲಿ ತಮ್ಮ ಸಂಪೂರ್ಣ ವಿವರ ನೀಡಿ ನೋಂದಣಿ ಮಾಡಿಕೊಳ್ಳಬೇಕು. ನೋಂದಣಿ ಮಾಡಿಕೊಂಡ ಮಾಹಿತಿ ಆಧಾರದಲ್ಲಿ ಎನ್‌ಆರ್‌ಐ ಕರ್ನಾಟಕ ಘಟಕದಿಂದ ಎನ್‌ಆರ್‌ಕೆ ಕಾರ್ಡ್‌ ಉಚಿತವಾಗಿ ನೀಡಲಾಗುತ್ತದೆ.

Advertisement

ಓಸಿಐ, ಪಿಐಒಗಳಿಗೆ ಅವಕಾಶವಿಲ್ಲ: ಕರ್ನಾಟಕ ಮೂಲದವರಾಗಿದ್ದರೂ ವಿದೇಶಗಳಲ್ಲಿಯೇ ನೆಲೆಸಿ ಆ ದೇಶದ ಪಾರ್ಸ್‌ ಪೊರ್ಟ್‌ ಹೊಂದಿರುವ ಓಸಿಐ (ಓವರ್‌ ಸೀ ಸಿಟಿಜನ್‌) ಹಾಗೂ ರಾಜ್ಯದ ಮೂಲದವರಾಗಿದ್ದು ವಿದೇಶಗಳಲ್ಲಿಯೇ ತಲೆಮಾರುಗಳಿಂದ ನೆಲೆಸಿ ಪಿಐಒ (ಪರಸನ್ಸ್‌ ಆಫ್ ಇಂಡಿಯನ್‌ ಓರಿಜನ್‌) ಗಳಾಗಿ ಅಲ್ಲಿನ ಪ್ರಜೆಗಳಾಗಿದ್ದರೆ ಅಂತವರಿಗೆ ಎನ್‌ಆರ್‌ಕೆ ಕಾರ್ಡ್‌ ಪಡೆಯಲು ಅವಕಾಶವಿಲ್ಲ. 

ಎನ್‌ಆರ್‌ಕೆಗಳಿಗೆ ರಾಜ್ಯ ಸರ್ಕಾರ ಅಧಿಕೃತ ಗುರುತಿನ ಚೀಟಿ ನೀಡುವುದರಿಂದ ಸರ್ಕಾರ ತಮ್ಮನ್ನು ಗುರುತಿಸಿದೆ ಎಂಬ ಅಭಿಮಾನ ಅವರಲ್ಲಿ ಮೂಡುತ್ತದೆ. ಅಲ್ಲದೇ ಅವರು ರಾಜ್ಯದೊಂದಿಗೆ ಸಂಪರ್ಕ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ. ಇದರಿಂದ ವಿದೇಶಗಳಲ್ಲಿರುವ ಕನ್ನಡಿಗರ ಬಗ್ಗೆ ನಮಗೂ ಸ್ಪಷ್ಟ ಮಾಹಿತಿ ದೊರೆತಂತಾಗುತ್ತದೆ. 
 ●ಡಾ. ಆರತಿ ಕೃಷ್ಣ, ಅನಿವಾಸಿ ಭಾರತೀಯಕ್ಷೆ ಫೋರಂನ ಕರ್ನಾಟಕ ಉಪಾಧ್ಯಕ್ಷೆ

ರಾಜ್ಯ ಸರ್ಕಾರ ನಮಗೆ ಅಧಿಕೃತ ಗುರುತಿನ ಚೀಟಿ ನೀಡಲು ಮುಂದಾಗಿರುವುದು ಒಳ್ಳೆಯ ಬೆಳವಣಿಗೆ. ಇದರಿಂದ ನಮಗೂ ನಮ್ಮ ನಾಡಿನ ಬಗ್ಗೆ ಹೆಮ್ಮೆ ಬೆಳೆಯುವುದರ ಜತೆಗೆ ರಾಜ್ಯದೊಂದಿಗೆ ನಿರಂತರ ಸಂಪರ್ಕ ಇಟ್ಟುಕೊಳ್ಳಲು ಅನುಕೂಲವಾಗುತ್ತದೆ.
 ●ಈಶ್ವರ್‌ ಕೇದಾರಿ, ಅಮೆರಿಕದಲ್ಲಿರುವ ಅನಿವಾಸಿ ಕನ್ನಡಿಗ

 ●ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next