Advertisement

ಪ್ರಜಾತಂತ್ರ ಹಬ್ಬದಲ್ಲಿ ಪಾಲ್ಗೊಂಡು ದೇಶ ಪ್ರೇಮ ಮೆರೆದ ಎನ್‌ಆರ್‌ಐಗಳು

04:51 PM Apr 27, 2019 | |

ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮುನ್ನಡೆಸಲು ಸಮರ್ಥರನ್ನು ಆರಿಸಬೇಕಾದುದು ಪ್ರಜೆಗಳ ಹಕ್ಕು. ಕೆಲವೆಡೆ ಮತದಾನದ ಅರಿವಿಲ್ಲದೆ ಮತದಾನ ಮಾಡದೆ ಇರುವವರೂ ಅದೆಷ್ಟೋ ಮಂದಿ ಇದ್ದಾರೆ. ಹಿಂದೆ ಹಣದ ಆಮಿಷವೊಡ್ಡಿ ಮತದಾನಕ್ಕೆ ಪ್ರೇರೇಪಿಸಲಾಗುತ್ತಿತ್ತು. ಇಂತಹ ಸನ್ನಿವೇಶಕ್ಕೆ ತದ್ವಿರುದ್ಧವೋ ಎಂಬಂತೆ ಸಾವಿರಾರು ರೂ. ಖರ್ಚು ಮಾಡಿ ಮತದಾನದಲ್ಲಿ ಪಾಲ್ಗೊಳ್ಳಬೇಕೆಂಬ ಉದ್ದೇಶದಿಂದ ವಿದೇಶದಿಂದ ಅನೇಕ ಅನಿವಾಸಿ ಭಾರತೀಯರು ಜಿಲ್ಲೆಗೆ ಆಗಮಿಸಿ ಮತದಾನ ಸಂಭ್ರಮದಲ್ಲಿ ಭಾಗವಹಿಸಿದರು.
ವಿದೇಶದಲ್ಲಿ ನೆಲೆಸಿರುವವರಲ್ಲಿ ಶೇ. 20ರಷ್ಟು ಜನರು ಕರಾವಳಿ ಜಿಲ್ಲೆಯವರು.

Advertisement

ದೇಶದ ಮೇಲಿನ ಅಭಿಮಾನ, ಗೌರವದಿಂದ ಈ ಬಾರಿ ಪ್ರಜಾತಂತ್ರ ಹಬ್ಬದಲ್ಲಿ ಭಾಗವಹಿಸಬೇಕೆಂಬ ಅದಮ್ಯ ಉತ್ಸಾಹದಿಂದ ಮತದಾನ ಮಾಡಿ ಪ್ರಜಾತಂತ್ರ ವ್ಯವಸ್ಥೆಯಡಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ವಿವಿಧ ರಾಜ್ಯದಲ್ಲಿ ನೆಲೆ ನಿಂತಿರುವವರು ಹಾಗೂ ಜಿಲ್ಲೆಯಲ್ಲೇ ಇದ್ದುಕೊಂಡು ಮತದಾನದಲ್ಲಿ ಪಾಲ್ಗೊಳ್ಳದೆ ಇರಲು ನಾನಾ ನೆಪಗಳನ್ನು ನೀಡುವವರೂ ಇದ್ದಾರೆ. ಆದರೆ ಜಿಲ್ಲೆಯ ಆನೇಕ ಮಂದಿ ಅನಿವಾಸಿ ಭಾರತೀಯರು ಕೇವಲ ಚುನಾವಣೆಯಲ್ಲಿ ಭಾಗವಹಿಸಬೇಕೆನ್ನುವ ನಿಟ್ಟಿನಲ್ಲಿ ದುಬೈ, ಸಿಂಗಾಪುರದಿಂದ ಕೇವಲ ಮೂರು ದಿನದ ರಜೆ ತೆಗೆದುಕೊಂಡು ಭಾರತಕ್ಕೆ ಆಗಮಿಸಿದ್ದಾರೆ.

ಒಂದೇ ಕುಟುಂಬದ ಮೂವರು
ಒಂದೇ ಕುಟುಂಬದ ಮೂರು ಜನ ಎನ್‌ಆರ್‌ಐ ಪ್ರಜಾತಂತ್ರ ಹಬ್ಬದಲ್ಲಿ ಭಾಗವಹಿಸಿದರು. ದೊಡ್ಡಣಗುಡ್ಡೆ ನಿವಾಸಿ ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ| ಎ.ಪಿ. ಭಟ್‌ ಅವರ ಪತ್ನಿ ಸುಧಾ ಅವರ ಅಕ್ಕನ ಮಗ ಪ್ರಶಾಂತ ಅವರು ದುಬೈಯಿಂದ, ಪುತ್ರಿ ಸಂಹಿತಾ ಹಾಗೂ ಆಕೆಯ ಪತಿ ಹರೀಶ್‌ ಅವರು ಸಿಂಗಾಪುರದಿಂದ ಎ. 17ರ ರಾತ್ರಿಯೇ ಭಾರತಕ್ಕೆ ಆಗಮಿಸಿದರು. ಸಂಹಿತಾ ಹಾಗೂ ಪ್ರಶಾಂತ್‌ ಅವರು ನಿಟ್ಟೂರು ಶಾಲೆಯಲ್ಲಿ, ಹರೀಶ್‌ ಅವರು ಬೆಂಗಳೂರಿನಲ್ಲಿ ಮತದಾನ ಮಾಡಿದರು.

ಮೂವರು ಐಟಿ ಉದ್ಯೋಗಿಗಳಾಗಿ ವಿದೇಶದಲ್ಲಿ ನೆಲೆ ನಿಂತಿದ್ದಾರೆ. ಲೋಕಸಭಾ ಚುನಾವಣೆ ದಿನ ಪ್ರಕಟವಾಗುತ್ತಿದಂತೆ ದೇಶದ ಅಭಿವೃದ್ಧಿಗೆ ಬಲಿಷ್ಠ ನಾಯಕರನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ತಾವೂ ಕೂಡ ಭಾಗಿಯಾಗಿದ್ದಾರೆ.

Advertisement

ಪ್ರತಿ ಪ್ರಜಾತಂತ್ರ ಹಬ್ಬದಲ್ಲಿಯೂ ಭಾಗಿ
ಬಾರಕೂರು ಕೂರಾಡಿ ನಿವಾಸಿ ಶ್ರೀಧರ್‌ ಪೂಜಾರಿ ಅವರು ಅನೇಕ ವರ್ಷದಿಂದ ದುಬೈ ಖಾಸಗಿ ಕಂಪೆನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಇಲ್ಲಿಯವರೆಗೆ ನಡೆದ ಎಲ್ಲ ಪ್ರಜಾತಂತ್ರ ಹಬ್ಬದಲ್ಲಿ ಅವರು ಭಾಗವಹಿಸಿದ್ದಾರೆ.

ಬಲಿಷ್ಠ ನಾಯಕನಿಗೆ ಮತ
ಸಿಂಗಾಪುರದಿಂದ ಮತದಾನದ ಸಂಭ್ರಮದಲ್ಲಿ ಭಾಗವಹಿಸಬೇಕೆನ್ನುವ ಉದ್ದೇಶದಿಂದ ಭಾರತಕ್ಕೆ ಬಂದಿದ್ದೇನೆ. ದೇಶಕ್ಕೆ ಓರ್ವ ಬಲಿಷ್ಠ ನಾಯಕನ ಅವಶ್ಯಕತೆ ಇದೆ. ಅಭಿವೃದ್ಧಿಯಲ್ಲಿ ಇಡೀ ವಿಶ್ವವೇ ನಮ್ಮನ್ನು ತಿರುಗಿ ನೋಡುವಂತಾಗಬೇಕೆನ್ನುವ ಮಹದಾಸೆಯಿಂದ ಮತದಾನಕ್ಕೆ ಬಂದಿದ್ದೇನೆ.
– ಸಂಹಿತಾ, ಐಟಿ ಉದ್ಯೋಗಿ ಸಿಂಗಾಪುರ.

ಜವಾಬ್ದಾರಿ ಮೆರೆದ ಎನ್‌ಆರ್‌ಐಗಳು
ಚುನಾವಣೆ ಯಶಸ್ವಿಯಾಗಬೇಕಾದರೆ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಬೇಕು. ಈ ಬಾರಿ ಚುನಾವಣೆಯಲ್ಲಿ ಅನಿವಾಸಿ ಭಾರತೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಪ್ರಜಾತಂತ್ರ ಹಬ್ಬದಲ್ಲಿ ಅವರ ಜವಾಬ್ದಾರಿಯನ್ನು ಮೆರೆದಿದ್ದಾರೆ.
– ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾಧಿಕಾರಿ, ಉಡುಪಿ.

Advertisement

Udayavani is now on Telegram. Click here to join our channel and stay updated with the latest news.

Next