Advertisement

ಯುದ್ಧ ಸಂದಿಗ್ಧತೆ ನಡುವೆ ಮೋದಿ ಐರೋಪ್ಯ ಪ್ರವಾಸ ಸಕಾಲಿಕ

12:36 AM May 05, 2022 | Team Udayavani |

ಉಕ್ರೇನ್‌ ಮೇಲಿನ ರಷ್ಯಾ ಆಕ್ರಮಣದ ನಡುವೆಯೇ ಪ್ರಧಾನಿ ನರೇಂದ್ರ ಮೋದಿಯವರ ಹಾಲಿ ಯೂರೋಪ್‌ ಪ್ರವಾಸ ರಾಜತಾಂತ್ರಿಕವಾಗಿ ವಿಶಿಷ್ಟ ನಡೆ. ಒಂದೆಡೆ ರಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳ ನಡುವಿನ ಸಂಬಂಧಗಳನ್ನು ಅತ್ಯಂತ ಸಮತೋಲನದಿಂದ ನಿಭಾಯಿಸುವಲ್ಲಿ ಮೋದಿ ಈ ಪ್ರವಾಸದ ಮೂಲಕ ಯಶ ಪಡೆದಿದ್ದಾರೆ. ಯುದ್ಧ ನಿಲ್ಲಿಸುವಂತೆ ರಷ್ಯಾ ಮೇಲೆ ಒತ್ತಡ ಹೇರಿ ಎಂದು ಭಾರತದ ಮೇಲೆ ಜಗತ್ತಿನ ದೊಡ್ಡ ದೊಡ್ಡ ದೇಶಗಳೆಲ್ಲವೂ ಆಗ್ರಹಿಸುತ್ತಿವೆ. ಇದಕ್ಕೆ ಪ್ರತಿಯಾಗಿ ಭಾರತವೂ ಕದನ ವಿರಾಮ ಘೋಷಿಸಿ, ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಉಭಯ ದೇಶಗಳಿಗೆ ಸಲಹೆ ನೀಡುತ್ತಲೇ ಬಂದಿದೆ. ಯೂರೋಪ್‌ ದೇಶಗಳ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರು, ಇದೇ ರೀತಿಯ ಮಾತುಗಳನ್ನಾಡಿದ್ದಾರೆ.

Advertisement

ಜರ್ಮನಿ, ಡೆನ್ಮಾರ್ಕ್‌ ಮತ್ತು ಫ್ರಾನ್ಸ್‌ ದೇಶಗಳಿಗೆ ಮೂರು ದಿನ, ಮೂರು ದೇಶ ಎಂಬ ಲೆಕ್ಕಾಚಾರದಲ್ಲಿ ಮೋದಿ ಪ್ರವಾಸ ಕೈಗೊಂಡಿದ್ದಾರೆ. ಮೊದಲ ಚರಣದಲ್ಲಿ ಜರ್ಮನಿ ಪ್ರವಾಸ ಮುಗಿಸಿ, ಡೆನ್ಮಾರ್ಕ್‌ಗೆ ಬಂದಿಳಿದಿದ್ದಾರೆ. ಜರ್ಮನಿಯಲ್ಲಿ ತಾಪಮಾನ ಏರಿಕೆ ಸಮಸ್ಯೆ ಸಂಬಂಧ, ಕಲ್ಲಿದ್ದಲು ಬಳಕೆ ಕಡಿಮೆ ಮಾಡುವ ಸಲುವಾಗಿ ನೈಸರ್ಗಿಕ ಇಂಧನಗಳ ಬಳಕೆ ಮಾಡಲು ಉಪಯೋಗವಾಗುವಂತೆ ಜರ್ಮನಿ, ಭಾರತಕ್ಕೆ 80,177 ಕೋಟಿ ರೂ.ಗಳ ಧನಸಹಾಯ ಮಾಡಲು ಒಪ್ಪಿಗೆ ನೀಡಿದೆ. ಅಲ್ಲದೆ ಹವಾಮಾನ ಬದಲಾವಣೆ ವಿಚಾರವಾಗಿ ಎರಡೂ ದೇಶಗಳು ಒಂದೇ ದಿಕ್ಕಿಗೆ ನಡೆಯಲು ನಿರ್ಧಾರ ತೆಗೆದುಕೊಂಡಿವೆ. ಜತೆಗೆ ಗ್ರೀನ್‌ ಹೈಡ್ರೋಜಿನ್‌ ಟಾಸ್ಕ್ಫೋರ್ಸ್‌ ರಚನೆ ಮಾಡಲೂ ಭಾರತ ಪ್ರಧಾನಿ ನರೇಂದ್ರ ಮೋದಿ ಮತ್ತು ಜರ್ಮನಿ ಚಾನ್ಸೆಲರ್‌ ಸ್ಕೋಜ್‌ ಒಪ್ಪಿಗೆ ನೀಡಿದ್ದಾರೆ. ಈ ಎಲ್ಲ ಬೆಳವಣಿಗೆಳು ಭಾರತವು ವಾತಾವರಣದಲ್ಲಿನ ಕಾರ್ಬನ್‌ ಅಂಶ ಕಡಿಮೆ ಮಾಡಿಕೊಳ್ಳಲು ಇಟ್ಟಿರುವ ಪ್ರಮುಖ ಹೆಜ್ಜೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಇದಾದ ಬಳಿಕ ಡೆನ್ಮಾರ್ಕ್‌ಗೆ ತೆರಳಿದ ಮೋದಿ ಅವರು ಅಲ್ಲಿನ ಪ್ರಧಾನಿ ಮೆಟ್ಟೆ ಫೆಡರ್ಕಿಸೆನ್‌ ಅವರನ್ನು ಭೇಟಿ ಮಾಡಿದ್ದಾರೆ. ಒಂದು ರೀತಿಯಲ್ಲಿ ಇದು ಮೋದಿ ಅವರ ಪಾಲಿಗೆ ವಿಶೇಷ ಪ್ರವಾಸ. ಪ್ರಧಾನಿಯಾಗಿ 7 ವರ್ಷವಾಗಿದ್ದು, ಇದೇ ಮೊದಲ ಬಾರಿಗೆ ಡೆನ್ಮಾರ್ಕ್‌ಗೆ ಪ್ರವಾಸ ಬೆಳೆಸಿದ್ದಾರೆ. ಈ ಭೇಟಿಯಲ್ಲೂ ಪ್ರಮುಖವಾಗಿ ಭಾರತ ಮತ್ತು ಡೆನ್ಮಾರ್ಕ್‌ ನಡುವೆ ಹಸಿರು ಒಪ್ಪಂದಗಳೇ ಆಗಿವೆ.

ಬುಧವಾರ ಮೋದಿ ಅವರು ನಾರ್ಡಿಕ್‌ ದೇಶಗಳಾದ ಐಸ್‌ಲೆಂಡ್‌, ಪಿನ್ಲಂಡ್‌, ಸ್ವೀಡನ್‌ ಮತ್ತು ನಾರ್ವೆ ದೇಶಗಳ ಮುಖ್ಯಸ್ಥರ ಜತೆಗೆ ಮಾತುಕತೆ ನಡೆಸಿದ್ದಾರೆ. 2018ರ ಬಳಿಕ ಎರಡನೇ ಬಾರಿಗೆ ಇಂಡಿಯಾ-ನಾರ್ಡಿಕ್‌ ಶೃಂಗ ಸಭೆ ನಡೆಯುತ್ತಿದೆ. ಮೊದಲ ಶೃಂಗ ಸ್ಟಾಕ್‌ಹೋಮ್‌ನಲ್ಲಿ ನಡೆದಿತ್ತು. ಈ ಮಾತುಕತೆ ವೇಳೆ ಪ್ರತಿಯೊಂದು ದೇಶದ ಮುಖ್ಯಸ್ಥರ ಜತೆಗೂ ಮುಖಾಮುಖೀಯಾಗಿ ಮೋದಿ ಚರ್ಚಿಸಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ದ್ವೀಪಕ್ಷೀಯ ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಡಿಜಿಟಲ್‌ ಇನ್ನೋವೇಶನ್‌, ಡಿಜಿಟಲ್‌ ಗೂಡ್ಸ್‌ ಬಗ್ಗೆ ಫಿನ್ಲಂಡ್‌ ಪ್ರಧಾನಿ ಜತೆ ಚರ್ಚಿಸಿದ್ದಾರೆ.

ಐರೋಪ್ಯ ಒಕ್ಕೂಟದ ಪುಟ್ಟ ದೇಶಗಳು ಎನ್ನಿಸಿಕೊಂಡಿರುವ ನಾರ್ಡಿಕ್‌ ದೇಶಗಳ ಜತೆಗಿನ ಮಾತುಕತೆ ಭಾರತದ ಪಾಲಿಗೆ ಅನುಕೂಲಕರ ಎಂದೇ ಹೇಳಬಹುದು. ಇಡೀ ಯೂರೋಪ್‌ ದೇಶಗಳ ಪ್ರವಾಸವನ್ನು ನೋಡುವುದಾದರೆ, ಗ್ರೀನ್‌ ಎನರ್ಜಿ ಬಗ್ಗೆಯೇ ಮೋದಿ ಅವರು ಹೆಚ್ಚಿನ ಆಸ್ಥೆ ವಹಿಸಿ ಮಾತುಕತೆ ನಡೆಸಿದ್ದಾರೆ. ಇದು ಪರಿಸರ ಸಂರಕ್ಷಣೆ ವಿಚಾರದಲ್ಲಿ ಉತ್ತಮ ವಿಚಾರ ಎಂದು ಖಚಿತವಾಗಿ ಹೇಳಬಹುದು.

Advertisement
Advertisement

Udayavani is now on Telegram. Click here to join our channel and stay updated with the latest news.

Next