ಬೆಂಗಳೂರು: ರಾಜ್ಯದ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಮುಂದಾಗಿದೆ.
ಈ ಸಂಬಂಧ ರಾಜ್ಯದ ಎಲ್ಲ ಜಿ.ಪಂ. ಸಿಇಒ ಗಳಿಗೆ ಸೂಚಿಸಿರುವ ಇಲಾಖೆ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಉದ್ಯೋಗ ಖಾತರಿ ಯೋಜನೆಯಡಿ ಪರಿಹಾರ ಕಾಮಗಾರಿಗಳು ಮತ್ತು ಮೂಲಸೌಕರ್ಯಗಳ ದುರಸ್ತಿಗೆ ಆದ್ಯತೆ ನೀಡಬೇಕು. ಈ ಸಂಬಂಧ ವಿಶೇಷ ಕ್ರಿಯಾ ಯೋಜನೆಗಳನ್ನು ಸೆ.30ರೊಳಗೆ ಅನುಮೋದಿಸಬೇಕೆಂದು ಹೇಳಿದೆ.
ನೆರೆಯಿಂದ ಹಾನಿ ಯಾದ ಮೂಲ ಸೌಕರ್ಯಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳನ್ನು ಗುರುತಿಸಿ ಅಂಥ ಗ್ರಾಮ ಗಳಲ್ಲಿ ಅಗತ್ಯವಿರುವ ಪ್ರವಾಹ ಪರಿಹಾರ ಕಾಮಗಾರಿ ಗಳ ಪಟ್ಟಿ ತಯಾರಿಸಿ ವಿಶೇಷ ಗ್ರಾಮಸಭೆ ಕರೆದು ಒಪ್ಪಿಗೆ ಪಡೆದು ವಿಶೇಷ ಕ್ರಿಯಾ ಯೋಜನೆ ತಯಾರಿಸಿ ಜಿಲ್ಲಾ ಪಂಚಾಯತ್‌ನಿಂದ ಅನು ಮೋದನೆ ಪಡೆದು ಕೊಳ್ಳಬೇಕು. ಪ್ರವಾಹ ಪೀಡಿತ ತಾಲೂಕುಗಳಲ್ಲಿ ನರೇಗಾ ಯೋಜನೆಯಡಿ ಅನುಷ್ಠಾನಗೊಳಿಸಬಹುದಾದ ದುರಸ್ತಿ ಹಾಗೂ ನಿರ್ವಹಣೆಯ ಕಾಮಗಾರಿಗಳ ಪಟ್ಟಿ ನೀಡಲಾಗಿದ್ದು, ನರೇಗಾ ಯೋಜನೆಯಡಿ ಸೃಜಿಸಲಾದ ಕಾಮಗಾರಿ ಗಳನ್ನು ಮಾತ್ರ ದುರಸ್ತಿ ಹಾಗೂ ನಿರ್ವಹಣೆ ಮಾಡಬೇಕು. ಮುಖ್ಯವಾಗಿ ಜನರ ಜೀವನಾಧಾರಕ್ಕಾಗಿ ಸಮುದಾಯ/ ವೈಯಕ್ತಿಕ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ, ಆ ಮೂಲಕ ಮಾನವ ದಿನಗಳನ್ನು ಸೃಜಿಸಿ ಗ್ರಾಮೀಣ ಜನರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸಬೇಕು. ಪ್ರವಾಹ ಪೀಡಿತ ಜಿಲ್ಲೆಗಳಲ್ಲಿ ಅನುಷ್ಠಾನಗೊಳಿಸಿದ ಕಾಮ ಗಾರಿಗಳ ಪ್ರಗತಿಯನ್ನು ಪ್ರತಿನಿತ್ಯ ಮೇಲ್ವಿಚಾರಣೆ ನಡೆಸಿ ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕೆಂದು ಇಲಾಖೆ ತಿಳಿಸಿದೆ.
39 ಕಾಮಗಾರಿಗಳಿಗೆ ಅವಕಾಶ
ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯಗಳು ಹೆಚ್ಚು ಹಾನಿಗೊಳಗಾಗಿದ್ದು, ನರೇಗಾ ಯೋಜನೆಯಡಿ ಅವುಗಳ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ರಸ್ತೆಗಳ ನಿರ್ಮಾಣ ಮತ್ತು ದುರಸ್ತಿ, ವಿಪತ್ತು ನಿರ್ವಹಣೆಯ ಕಾಮಗಾರಿಗಳು, ಪ್ರವಾಹ ನಿಯಂತ್ರಣ ಸಂರಕ್ಷಣ ಕಾಮಗಾರಿಗಳು, ಜವಳು ಪ್ರದೇಶದಲ್ಲಿ ಚರಂಡಿ ನಿರ್ಮಾಣ ಮತ್ತು ಅವುಗಳನ್ನು ಆಳಗೊಳಿಸುವುದು, ಕಾಲುವೆಗಳನ್ನು ದುರಸ್ತಿ ಮಾಡುವುದು, ತೋಡುಗಳ ಜೀರ್ಣೋದ್ಧಾರ, ಕರಾವಳಿ ಪ್ರದೇಶಗಳ ಸಂರಕ್ಷಣೆಗೆ ನೀರು ರಭಸದಲ್ಲಿ ಹರಿಯುವ ಚರಂಡಿ ನಿರ್ಮಾಣ, ಅಂಗನವಾಡಿ ಕೇಂದ್ರ, ಗ್ರಾ.ಪಂ. ಕಚೇರಿ ಕಟ್ಟಡ, ಪಂಚಾಯತ್ ಭವನಗಳ ದುರಸ್ತಿ ಮತ್ತು ನಿರ್ವಹಣೆ, ಸರಕಾರಿ ಶಾಲೆಗಳ ಕಾಂಪೌಂಡ್ ಗೋಡೆಗಳ ದುರಸ್ತಿ ಮತ್ತು ನಿರ್ವಹಣೆ, ಆಟದ ಮೈದಾನಗಳ ದುರಸ್ತಿ ಹಾಗೂ ನಿರ್ವಹಣೆ ಸಹಿತ ಒಟ್ಟು 39 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬಹುದೆಂದು ಸಿಇಒಗಳಿಗೆ ನಿರ್ದೇಶಿಸಲಾಗಿದೆ.
ಮಳೆಯಿಂದ ಅನೇಕ ಗ್ರಾಮೀಣ ಪ್ರದೇಶಗಳು ಜಲಾವೃತಗೊಂಡಿದ್ದು, ಮೂಲಸೌಕರ್ಯಗಳಿಗೆ ಹೆಚ್ಚು ಹಾನಿಯಾಗಿದೆ. ವಾರ್ಷಿಕ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ ಯೋಜನೆಯಡಿ ಹಾನಿ ತಡೆಗಟ್ಟುವ ಮತ್ತು ತಗ್ಗಿಸುವ ಭಾಗವಾಗಿ ಗ್ರಾ.ಪಂ.ಗಳು ನರೇಗಾ ಹಣವನ್ನು ಬಳಸಬಹುದು. ಅನುಮತಿಸಲಾದ ಕಾಮಗಾರಿಗಳ ಸಂಬಂಧ ಸುತ್ತೋಲೆ ಹೊರಡಿಸಲಾಗಿದೆ.
-ಶಿಲ್ಪಾ ನಾಗ್, ಆಯುಕ್ತರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ
-ರಫೀಕ್ ಅಹ್ಮದ್