ಉಡುಪಿ: ನರೇಗಾ ಯೋಜನೆಯಡಿ ವೈಯಕ್ತಿಕ ಕಾಮಗಾರಿಗೆ (ಪ್ರತೀ ಅರ್ಹ ಕುಟುಂಬಕ್ಕೆ) ಗರಿಷ್ಠ ಮೊತ್ತವನ್ನು 2.50 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗಳಿಗೆ ಹೆಚ್ಚಿಸಿ ಸರಕಾರ ನಿರ್ಧಾರ ತೆಗೆದುಕೊಂಡಿದೆ.
ನರೇಗಾ ಯೋಜನೆಯಡಿ ಕೂಲಿಕಾ ರರಿಗೆ ಉದ್ಯೋಗ ಒದಗಿಸುವುದರ ಜತೆಗೆ ಅರ್ಹ ಫಲಾನುಭವಿಗಳ ಜೀವನಾಧಾರಕ್ಕೆ ನೆರವಾಗಲು ವೈಯಕ್ತಿಕ ಆಸ್ತಿಗಳನ್ನು ಸೃಜನೆ ಮಾಡುವ ಮೂಲಕ ಅವರ ಆರ್ಥಿಕ ಪರಿಸ್ಥಿತಿ ಯನ್ನು ಉತ್ತಮ ಪಡಿಸುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಂಡಿದೆ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲೆಮಾರಿ ಬುಡಕಟ್ಟುಗಳು, ಅಧಿ ಸೂಚನೆಯಿಂದ ಕೈಬಿಟ್ಟ ಬುಡಕಟ್ಟು ಗಳು, ಬಡತನ ರೇಖೆಗಳಿಂತ ಕೆಳಗಿರುವ ಕುಟುಂಬಗಳು, ಮಹಿಳಾ ಪ್ರಧಾನ ಕುಟುಂಬಗಳು, ಭೂ-ಸುಧಾರಣ ಫಲಾನುಭವಿಗಳು, ವಸತಿ ಯೋಜನೆಗಳ ಫಲಾನು ಭವಿಗಳು, ಅರಣ್ಯ ಹಕ್ಕು ಕಾಯ್ದೆ 2006ರ ಫಲಾನುಭವಿಗಳು, ಸಣ್ಣ ಮತ್ತು ಅತಿ ಸಣ್ಣ ರೈತರು ನರೇಗಾ ಯೋಜನೆಯಡಿ ಸೌಲಭ್ಯ ಪಡೆಯಲು ಅರ್ಹರಿರುತ್ತಾರೆ.
ಫಲಾನುಭವಿ ಕಡ್ಡಾಯವಾಗಿ ನರೇಗಾ ಜಾಬ್‌ಕಾರ್ಡ್ (ಉದ್ಯೋಗಚೀಟಿ) ಹೊಂದಿರ ಬೇಕು. ಫಲಾನುಭವಿಗೆ ನೀಡಲಾದ ವೈಯಕ್ತಿಕ ಕಾಮಗಾರಿಯಲ್ಲಿ ಆತನ ಕುಟುಂಬದ ಕನಿಷ್ಠ ಒಬ್ಬ ಸದಸ್ಯನಾದರೂ ಕೆಲಸ ನಿರ್ವಹಿಸಬೇಕು. ಸ್ವಂತ ಭೂಮಿ ಯಲ್ಲೂ ವಿವಿಧ ಕಾಮಗಾರಿ, ತೋಟ ಮಾಡಿಕೊಳ್ಳಲು ಮುಕ್ತ ಅವಕಾಶವಿದೆ.
ಈ ಯೋಜನೆಯಡಿಯಲ್ಲಿ ನೋಂದಾಯಿತ ಅರ್ಹ ಕುಟುಂಬವು ತನ್ನ ಜೀವಿತಾವಧಿಯಲ್ಲಿ ಗರಿಷ್ಠ 5 ಲಕ್ಷ ರೂ.ಗಳ ವರೆಗೂ ಕಾಮಗಾರಿಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಹಿಂದೆ2.50 ಲಕ್ಷಗಳ ವರೆಗೆ ಮಾತ್ರ ಕಾಮ ಗಾರಿ ಪಡೆಯಲು ಅವಕಾಶ ಇತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಡಿಕೆ, ತೆಂಗು, ಮಾವು, ಚಿಕ್ಕು, ರಂಬುಟಾನ್, ನೆಲ್ಲಿ, ನುಗ್ಗೆ, ಬಾಳೆ, ಹಲಸು, ಕೋಕೋ, ಅಂಜೂರ, ಸೀತಾಫಲ, ನೇರಳೆ, ಹುಣಸೆ ಸಹಿತ ವಿವಿಧ ಬೆಳೆಗಳು, ಇಂಗುಗುಂಡಿ ನಿರ್ಮಾಣ, ಕಂದಕ, ಬದು ನಿರ್ಮಾಣ, ದೀನಬಂಧು ಜೈವಿಕ ಅನಿಲ ಘಟಕ, ದನದ ಕೊಟ್ಟಿಗೆ, ತೆರೆದ ಬಾವಿ, ಎರೆಹುಳ ಘಟಕ ಸಹಿತವಾಗಿ ಸುಮಾರು 45 ವಿಧದ ಕಾಮಗಾರಿಗಳನ್ನು ವೈಯಕ್ತಿಕ ನೆಲೆಯಲ್ಲಿ ನಡೆಸಿ ಯೋಜನೆಯ ಲಾಭ ಪಡೆಯಬಹುದಾಗಿದೆ.