ಚಿಕ್ಕೋಡಿ: ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡುವ ನರೇಗಾ ಯೋಜನೆ ರಸ್ತೆ, ಚರಂಡಿ, ಮನೆ ನಿರ್ಮಾಣಕ್ಕೆ ಸಹಕಾರಿಯಾಗಿತ್ತು. ಆದರೆ ಇದೀಗ ಸರ್ಕಾರಿ ಶಾಲೆಗಳಿಗೂ ಹೈಟೆಕ್ ಟಚ್ ನೀಡುತ್ತಿರುವುದರಿಂದ ಮಕ್ಕಳು ಶಾಲೆಯತ್ತ ಆಕರ್ಷಿತರಾಗುತ್ತಿದ್ದಾರೆ.
ತಾಲೂಕಿನ ಬಹುತೇಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ(ನರೇಗಾ) ಯೋಜನೆಯಡಿ ಪ್ರಾಥಮಿಕ, ಪ್ರೌಢ ಶಾಲೆಗಳ ಆವರಣದಲ್ಲಿ ಹೈಟೆಕ್ ಮೈದಾನ, ಶೌಚಾಲಯ, ಕಾಂಪೌಂಡ್, ಅಡುಗೆ ಕೋಣೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಮೂಲಕ ಸರ್ಕಾರಿ ಶಾಲೆಗಳ ಸ್ವರೂಪವನ್ನು ನರೇಗಾ ಯೋಜನೆ ಬದಲಾಯಿಸಿದೆ.
ಚಿಕ್ಕೋಡಿ ತಾಲೂಕಿನ 36 ಗ್ರಾಮ ಪಂಚಾಯತಿ ವಾಪ್ತಿಯಲ್ಲಿ ಇಲ್ಲಿಯವರಿಗೆ ನರೇಗಾ ಯೋಜನೆ ಮೂಲಕ ರಸ್ತೆ, ಚರಂಡಿ, ಕೃಷಿ ಹೊಂಡ, ಬದು ನಿರ್ಮಾಣ ಮೊದಲಾದ ಕಾಮಗಾರಿ ಮಾಡಿಸಲಾಗುತ್ತಿತ್ತು. ಆದರೆ ಇದೀಗ ನರೇಗಾ ಯೋಜನೆ ಮೂಲಕ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಪಡಿಸುವತ್ತ ಸರ್ಕಾರ ಯೋಜನೆ ರೂಪಿಸಿದ್ದು, ಇದರಿಂದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳು ಸುಂದರ ಹಾಗೂ ಮಾದರಿ ಶಾಲೆಗಳಾಗಿ ರೂಪುಗೊಳ್ಳುತ್ತಿವೆ.
ಚಿಕ್ಕೋಡಿ ತಾಲೂಕಿನ ಜೋಡಕುರಳಿ, ಕರಗಾಂವ, ನಾಗರಳಾ, ನವಲಿಹಾಳ, ಪಟ್ಟಣಕುಡಿ, ಬಂಬಲವಾಡ, ಬೆಳಕೂಡ, ಚಿಕ್ಕಲವಾಳ, ಹತ್ತರವಾಟ, ಚಿಂಚಣಿ, ಹಿರೇಕೊಡಿ, ಜಾಗನೂರ, ಕರೋಶಿ, ಕೇರೂರ, ನಾಯಿಂಗ್ಲಜ್, ಶಿರಗಾಂವ, ಉಮರಾಣಿ, ವಡ್ರಾಳ, ಮುಗಳಿ, ಕೊಥಳಿ, ಖಡಕಲಾಟ ಹೀಗೆ ಮುಂತಾದ ಗ್ರಾಮ ಪಂಚಾಯತಿ ವ್ಯಾಪ್ತಿಯ ಸರ್ಕಾರಿ ಶಾಲೆಗಳು ಅಭಿವೃದ್ಧಿ ಹೊಂದುತ್ತಿವೆ.
ಮೊದಲ ಹಂತದಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಆರಂಭಿಸಿದ ಸರ್ಕಾರ ಗ್ರಾಮೀಣ ಪ್ರದೇಶದಲ್ಲಿ ಸುಮಾರು 1.5 ಲಕ್ಷ ಮಾನವ ದಿನಗಳ ಕೆಲಸ ಸೃಜಿಸಿವೆ. ಖಾಸಗಿ ಶಾಲೆಗಳ ಮುಂದೆ ಸರ್ಕಾರಿ ಶಾಲೆಗಳು ಅಭಿವೃದ್ಧಿ ಕಾಣುತ್ತಿಲ್ಲ ಎಂಬ ಕೂಗು ಇಂದು ಸುಳ್ಳಾಗಿದೆ. ನರೇಗಾ ಯೋಜನೆ ಮೂಲಕ ಅಭಿವೃದ್ಧಿ ಕಾಮಗಾರಿಯಿಂದ ಸರ್ಕಾರಿ ಶಾಲೆಗಳ ಸ್ವರೂಪ ತೀವ್ರವಾಗಿ ಬದಲಾವಣೆಗೊಳ್ಳುತ್ತಿವೆ.
ಸಾಮಾಜಿಕ ಮೂಲ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಚಿಕ್ಕೋಡಿ ತಾಲೂಕಾ ಪಂಚಾಯತಿ ಅಧಿಕಾರಿಗಳ ಪರಿಶ್ರಮ ಹಾಗೂ ಆಯಾ ಗ್ರಾಮ ಪಂಚಾಯತಿ ಅಧಿಕಾರಿಗಳ ಮೇಲೆ ನಿಗಾ ವಹಿಸಿ ಮೊದಲ ಹಂತದಲ್ಲಿ ಅಂದಾಜು ಶೇ 90 ರಷ್ಟ್ರು ಕಾಮಗಾರಿ ಮುಕ್ತಾಯಗೊಂಡಿದೆ. ಕಳೆದ 2021 ಮತ್ತು 2022 ನೇ ಸಾಲಿನಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿ ಕಾಮಗಾರಿ ಮಾಡುವ ದಿಸೆಯಲ್ಲಿ 248 ಶಾಲೆಗಳಲ್ಲಿ 15.63 ಕೋಟಿ ರೂ ಕ್ರಿಯಾ ಯೋಜನೆ ಸರ್ಕಾರಕ್ಕೆ ಸಲ್ಲಿಸಲಾಗಿತ್ತು.
ಉತ್ತಮ ಆಟದ ಮೈದಾನ: ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಹೈಟೆಕ್ ಮೈದಾನಗಳು ನರೇಗಾ ಮೂಲಕ ಗ್ರಾಮೀಣ ಪ್ರದೇಶದಲ್ಲಿ ನಿರ್ಮಾಣಗೊಂಡಿವೆ. 25 ಶಾಲೆಗಳಲ್ಲಿ ಬಾಸ್ಕೆಟ್ ಬಾಲ್ ಅಂಕಣ, ಮಕ್ಕಳು ಪ್ರಾರ್ಥನೆ ಮಾಡಲು 45 ಪೇವರ್ ಬ್ಲಾಕ್ ಅಂಕಣಗಳು ರೂಪುಗೊಂಡಿವೆ.
ಮೊದಲ ಹಂತದಲ್ಲಿ ಶಾಲಾ ಮೈದಾನ-25, ಶಾಲಾ ಶೌಚಾಲಯ-57, ಕಾಂಪೌಂಡ್ -25, ಅಡುಗೆ ಕೋಣೆ-30, ಪೇವರ ಬ್ಲಾಕ್ ಅಂಕಣ-45, ಶಾಲೆಗಳ ಗೋಡೆಗಳಿಗೆ ಬಣ್ಣ ಬಳಿಯುವಿಕೆ-18 ಹೀಗೆ ಸದ್ಯ 5.41 ಕೋಟಿ ರೂ ಖರ್ಚಾಗಿದೆ. ಎರಡನೆ ಹಂತದ ಶಾಲೆಗಳ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ ಎಂದು ನರೇಗಾ ಯೋಜನೆ ಚಿಕ್ಕೋಡಿ ಸಹಾಯಕ ನಿರ್ದೇಶಕ ಶಿವಾನಂದ ಶಿರಗಾಂವೆ ಪತ್ರಿಕೆಗೆ ಮಾಹಿತಿ ನೀಡಿದರು.
ನರೇಗಾ ಯೋಜನೆ ಮೂಲಕ ಶಿಕ್ಷಣ ಇಲಾಖೆಗೆ ದೊಡ್ಡ ಮಟ್ಟದಲ್ಲಿ ಅನುದಾನ ಖರ್ಚು ಮಾಡಲಾಗುತ್ತಿದೆ. ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಎಂದಿಗೂ ಅಭಿವೃದ್ಧಿ ಕಂಡಿರಲ್ಲಿಲ್ಲ, ಆದರೆ ಸದ್ಯ ತಾಲೂಕಿನಲ್ಲಿ ನರೇಗಾ ಯೋಜನೆ ಮೂಲಕ ಶಾಲೆಗಳ ಸ್ಥಿತಿ ಭಾರಿ ಬದಲಾವಣೆಗೊಂಡಿವೆ. ಆಟದ ಮೈದಾನ, ಶೌಚಾಲಯ, ಅಡುಗೆ ಕೋಣೆ ಹೀಗೆ ಸರ್ಕಾರಿ ಶಾಲೆಗಳು ಹೈಟೆಕ್ ಮಾದರಿಯಲ್ಲಿ ರೂಪೂಗೊಂಡಿವೆ. –
ಬಿ.ಎ.ಮೇಕನಮರಡಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಚಿಕ್ಕೋಡಿ
ಸರ್ಕಾರದ ಆದೇಶ ಹಾಗೂ ಬೆಳಗಾವಿ ಜಿಲ್ಲಾ ಪಂಚಾಯತಿ ಸಿಇಒ ಸಾಹೇಬರ ಮಾರ್ಗದರ್ಶನದಿಂದ ಚಿಕ್ಕೋಡಿ ತಾಲೂಕಿನ ಸರ್ಕಾರಿ ಶಾಲೆಗಳನ್ನು ಅಭಿವೃದ್ಧಿ ಮಾಡಲಾಗುತ್ತಿದೆ. ನರೇಗಾ ಯೋಜನೆ ಶಾಲೆಗಳ ಸರ್ವತೋಮುಖ ಅಭಿವೃದ್ಧಿಗೆ ಅನುಕೂಲವಾಗಿದೆ. –
ನಿಂಗಪ್ಪ ಮಸಳಿ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ, ಚಿಕ್ಕೋಡಿ
-ಮಹಾದೇವ ಪೂಜೇರಿ