Advertisement

ಅಸ್ಸಾಂ ರಾಜ್ಯಕ್ಕಷ್ಟೇ ಎನ್‌ಆರ್‌ಸಿ: ರಾಮದಾಸ್‌

09:43 AM Dec 24, 2019 | Sriram |

ಬೆಂಗಳೂರು: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಅಸ್ಸಾಂ ರಾಜ್ಯದಲ್ಲಷ್ಟೇ ಅನ್ವಯವಾಗಲಿದ್ದು, ಉಳಿದೆಡೆ ಇಲ್ಲ ಎಂದು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ರಾಮದಾಸ್‌ ಅಠಾವಳೆ ಹೇಳಿದರು.

Advertisement

ನಗರದ ಕುಮಾರ ಕೃಪಾದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಆರ್‌ಸಿ ಕಾಯ್ದೆಯು ಅಸ್ಸಾಂ ರಾಜ್ಯದಲ್ಲೇ ಜಾರಿಯಾಗಿದ್ದು, ಬೇರೆಲ್ಲೂ ಜಾರಿಯಾಗುವುದಿಲ್ಲ. ಎನ್‌ಆರ್‌ಸಿ ಹಾಗೂ ಸಿಎಎ ಕಾಯ್ದೆಗಳನ್ನು ಆರ್‌ಪಿಐ ಪಕ್ಷವು ಬೆಂಬಲಿಸಿದ್ದು, ಕಾಯ್ದೆಯಲ್ಲಿ ಯಾವುದಾದರೂ ಸಮಸ್ಯೆಗಳಿದ್ದರೆ ಸರಿಪಡಿಸಲು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಯಾವುದೇ ರೀತಿಯ ಸಲಹೆ, ಪ್ರಸ್ತಾವಗಳಿದ್ದರೆ ಸಲ್ಲಿಸಬಹುದು. ಈ ಬಗ್ಗೆ ಮುಂದಿನ ಸಂಸತ್‌ ಅಧಿವೇಶನದಲ್ಲಿ ಪರಿಶೀಲಿಸಲಾಗುವುದು. ಹಾಗಾಗಿ ಅಲ್ಪಸಂಖ್ಯಾತ ಮುಸ್ಲಿಂ ಬಾಂಧವರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಸಿಎಎ ಕಾಯ್ದೆಯನ್ನು ತರಾತುರಿಯಲ್ಲಿ ಜಾರಿಗೊಳಿಸಿಲ್ಲ. ಲೋಕಸಭೆ, ರಾಜ್ಯಸಭೆಯಲ್ಲಿ ಸುದೀರ್ಘ‌ ಚರ್ಚೆ ಬಳಿಕವೇ ವಿಧೇಯಕಕ್ಕೆ ಅನುಮೋದನೆ ದೊರಕಿದೆ ಎಂದು ಹೇಳಿದರು.

ದೇಶಕ್ಕೆ ಸ್ವಾತಂತ್ರ್ಯ ಬರುವ ಮೊದಲಿನಿಂದಲೂ ಮುಸ್ಲಿಮರು ದೇಶದಲ್ಲಿದ್ದು, ಅವರೂ ಮೂಲತಃ ಭಾರತೀಯರೇ ಆಗಿದ್ದಾರೆ. ಕಾಯ್ದೆಯಿಂದ ಅವರಿಗಿರುವ ಸೌಲಭ್ಯ ಸೇರಿದಂತೆ ಇತರೆ ಸ್ಥಾನಮಾನಗಳಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗದು. ದೇಶದ ಮುಸ್ಲಿಮರ ಬಗ್ಗೆ ಹೆಮ್ಮೆ ಇದೆ. ಆರ್‌ಪಿಐ ಪಕ್ಷ ಕೂಡ ದಲಿತರು, ಅಲ್ಪಸಂಖ್ಯಾತರ ಪರವಾಗಿದ್ದು, ಅವರ ಹಿತಕ್ಕೆ ಶ್ರಮಿಸಲಿದೆ. ಮುಸ್ಲಿಮರಿಗೆ ಯಾವುದೇ ರೀತಿಯ ತೊಂದರೆಯಾಗದು ಎಂದು ತಿಳಿಸಿದರು.

ಕಾಂಗ್ರೆಸ್‌, ಎಸ್‌.ಪಿ., ಟಿಎಂಸಿ ಇತರೆ ಪಕ್ಷಗಳು ಅಲ್ಪಸಂಖ್ಯಾತರ ದಾರಿ ತಪ್ಪಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿರುವುದನ್ನು ಸಹಿಸದ ಪ್ರತಿಪಕ್ಷಗಳು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿವೆ. ಯಾರೊಬ್ಬರೂ ಹಿಂಸಾಚಾರಕ್ಕೆ ಪ್ರಚೋದನೆ ನೀಡಬಾರದು ಎಂದು ಹೇಳಿದರು.

Advertisement

ಮೈಸೂರು ಜಿಲ್ಲೆ ಕೆ.ಆರ್‌.ನಗರ ತಾಲ್ಲೂಕಿನ ಸಾಲಿಗ್ರಾಮದಲ್ಲಿ ಸವರ್ಣೀಯರಿಂದ ದಲಿತರ ಮೇಲೆ ದೌರ್ಜನ್ಯ ನಡೆದಿರುವುದು ಖಂಡನೀಯ. ಕೂಡಲೇ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ದೌರ್ಜನ್ಯಕ್ಕೆ ಒಳಗಾದ ದಲಿತರಿಗೆ ಸೂಕ್ತ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

ಮಂಗಳೂರಿನಲ್ಲಿ ನಡೆದ ಗೋಲಿಬಾರ್‌ ಘಟನೆಗೆ ಸಂಬಂಧಪಟ್ಟಂತೆ ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಆದೇಶಿಸಿದೆ. ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ನಾನಾ ಪ್ರಯತ್ನ ನಡೆಸುತ್ತಾರೆ. ನಿಯಂತ್ರಣಕ್ಕೆ ಬಾರದಿದ್ದಾಗ ಅವರದೇ ಆದ ರೀತಿಯಲ್ಲಿ ಕ್ರಮ ಜರುಗಿಸುತ್ತಾರೆ ಎಂದು ಹೇಳಿದರು.

ಇದಕ್ಕೂ ಮೊದಲು ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಖಾಲಿಯಿರುವ ಬ್ಯಾಕ್‌ಲಾಗ್‌ ಉದ್ಯೋಗಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ರಾಮದಾಸ ಅಠಾವಳೆ, ರಾಜ್ಯದಲ್ಲಿ 2001ರಲ್ಲಿ 19,150 ಬ್ಯಾಕ್‌ಲಾಗ್‌ ಹುದ್ದೆ ಖಾಲಿ ಇತ್ತು. ಆ ಪೈಕಿ 16,927 ಹುದ್ದೆ ಭರ್ತಿಯಾಗಿದ್ದು, 2475 ಬ್ಯಾಕ್‌ಲಾಗ್‌ ಹುದ್ದೆಗಳಷ್ಟೇ ಬಾಕಿ ಇವೆ. ಈ ಹುದ್ದೆಗಳನ್ನು ಮೂರ್‍ನಾಲ್ಕು ತಿಂಗಳಲ್ಲಿ ಭರ್ತಿ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು. ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಎಂ.ವೆಂಕಟಸ್ವಾಮಿ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next