ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಪ್ರತಿ ಬೂತ್‌ನಲ್ಲಿ ನೂರು ಮನೆಗಳಿಗೆ ಮಾಹಿತಿ ತಿಳಿಸುವ ಮೂಲಕ ಜನ ಜಾಗೃತಿ ಕಾರ್ಯ ಜ.1ರಿಂದ ಆರಂಭಿಸಲಿದ್ದೇವೆ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಹೇಳಿದರು.
ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಬಿಜೆಪಿ ಕಚೇರಿಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾ ಕೇಂದ್ರದಲ್ಲಿ 10 ಸಾವಿರ ಜನರ ರ್ಯಾಲಿ, ತಾಲೂಕು, ಹೋಬಳಿ, ವಾರ್ಡ್ ಮತ್ತು ಬೂತ್ ಮಟ್ಟದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಕುರಿತು ಜನಜಾಗೃತಿ ಅಭಿಯಾನ ನಡೆಸಲಿದ್ದೇವೆ. ಒಂದು ಕೋಟಿ ಸಹಿ ಸಂಗ್ರಹ ಪತ್ರವನ್ನು ಪ್ರಧಾನಿಯವರಿಗೆ ಕಳುಹಿಸಲಿದ್ದೇವೆ. ಪ್ರತಿ ಬೂತ್‌ನ 100 ಮನೆಗಳಿಗೆ ಸಂಪರ್ಕ ಮಾಡಲಿದ್ದೇವೆ ಎಂದು ಹೇಳಿದರು.
ತಿದ್ದುಪಡಿ ಕಾಯ್ದೆ ಬಂದ ಮೇಲೆ ಜನರಲ್ಲಿ ಗೊಂದಲ ನಿರ್ಮಾಣ ಮಾಡುವ, ಅಲ್ಪಸಂಖ್ಯಾಕರನ್ನು ಬಡಿದೆಬ್ಬಿಸುವ ಮತ್ತು ಅವರಲ್ಲಿ ತಪ್ಪು ಭಾವನೆ ಮೂಡಿಸುವ ಕಾರ್ಯ ಕಾಂಗ್ರೆಸ್, ಕಮ್ಯೂನಿಸ್ಟ್ ಹಾಗೂ ಕೆಲವು ಪ್ರಾದೇಶಿಕ ಪಕ್ಷಗಳು ಮಾಡುತ್ತಿವೆ ಎಂದು ದೂರಿದರು.
ಹಿಂಸಾತ್ಮಕ ಕೃತ್ಯಕ್ಕೆ ಒಂದು ಸಮುದಾಯವನ್ನು ಪ್ರಚೋದಿಸುವ ಕೆಲಸವನ್ನು ಕೆಲವು ಪಕ್ಷಗಳು ಮಾಡುತ್ತಿವೆ. ಕಾಯ್ದೆಯಿಂದ ದೇಶದ ಮುಸ್ಲಿಮರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಬಾಂಗ್ಲಾ, ಪಾಕಿಸ್ಥಾನ ಹಾಗೂ ಅಘಾ^ನಿಸ್ಥಾನದಿಂದ ಬರುವ ಧಾರ್ಮಿಕ ಅಲ್ಪಸಂಖ್ಯಾಕರಿಗೆ ಪೌರತ್ವ ನೀಡುವುದಾಗಿದೆ. ಈ ಕಾಯ್ದೆ ಬೇಕು ಎಂದು ದೇಶದ ಶೇ.90ರಷ್ಟು ಜನ ಬಯಸುತ್ತಿದ್ದಾರೆ. ಶೇ.10ರಷ್ಟು ಜನ ಮಾತ್ರ ವಿರೋಧಿಸುತ್ತಿದ್ದಾರೆ ಎಂದರು.
ಸಂಸದರ, ಶಾಸಕರು ದೇಶದ ನಾಗರಿಕರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯ ಸತ್ಯಾಂಸ ತಿಳಿಸುವ ಕೆಲಸ ಮಾಡಬೇಕು. ಈ ಹಿನ್ನೆಲೆಯಲ್ಲಿ ಬಿಜೆಪಿ ಪ್ರಚಾರ ಅಭಿಯಾನ ಹಮ್ಮಿಕೊಂಡಿದೆ. ಇದೇ ವಿಚಾರವಾಗಿ ಜ.2ರಂದು ಪ್ರಧಾನಿ ನರೇಂದ್ರ ಮೋದಿಯವರು ತುಮಕೂರಿಗೆ ಬರಲಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು, ಕಲಬುರಗಿ, ಹುಬ್ಬಳ್ಳಿ ಮೊದಲಾದ ಕಡೆಗಳಲ್ಲಿ ಜನ ಜಾಗೃತಿ ಬೃಹತ್ ಸಮಾವೇಶ ನಡೆಯಲಿದೆ ಎಂದರು.