Advertisement

ಎನ್‌ಆರ್‌ಬಿಸಿಗೆ ಶುಕ್ರದೆಸೆ; ಉಳಿದೆಲ್ಲದಕ್ಕೂ ನಿರಾಸೆ

05:36 PM Feb 17, 2018 | |

ರಾಯಚೂರು: ರಾಜ್ಯ ಸರ್ಕಾರದ ಕೊನೆ ಬಜೆಟ್‌ ಮೇಲೆ ಸಾಕಷ್ಟು ನಿರೀಕ್ಷೆ ಹೊಂದಿದ್ದ ಜಿಲ್ಲೆ ಜನರಿಗೆ ಎಂದಿನಂತೆ ನಿರಾಸೆ ತಂದಿದೆ. ನಾರಾಯಣಪುರ ಬಲದಂಡೆ ಕಾಲುವೆ (ಎನ್‌ಆರ್‌ಬಿಸಿ ) ಆಧುನೀಕರಣಕ್ಕೆ 750 ಕೋಟಿ ರೂ. ಬಿಟ್ಟರೆ ಹೇಳಿಕೊಳ್ಳುವಂಥ ಯೋಜನೆ ಘೋಷಣೆಯಾಗಿಲ್ಲ.

Advertisement

ಸಹಕಾರ ಬ್ಯಾಂಕ್‌ಗಳ ಸಂಪೂರ್ಣ ಸಾಲ ಮನ್ನಾ ಜತೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಅಲ್ಪ ಮಟ್ಟಿ ಸಾಲ ಮನ್ನಾ ನಿರೀಕ್ಷೆ ಹೊಂದಿದ್ದ ರೈತರಿಗೆ ನಿರಾಸೆಯಾಗಿದೆ. ಆದರೆ, ಹೆಕ್ಟೇರ್‌ಗೆ 5 ಸಾವಿರ ಪ್ರೋತ್ಸಾಹಧನ ನೀಡಿರುವುದು ರೈತರಿಗೆ ತುಸು ನೆಮ್ಮದಿ ಮೂಡಿಸಿದೆ. ಅಲ್ಲದೇ, ಕಳೆದ ವರ್ಷ ಜಾರಿಗೊಳಿಸಿದ್ದ ಪ್ರತ್ಯೇಕ ವಿವಿಗೆ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಸಾಕಷ್ಟು ಅನುದಾನ ನಿರೀಕ್ಷಿಸಲಾಗಿತ್ತು. ಆದರೆ, ಬಜೆಟ್‌ನಲ್ಲಿ ಮಾತ್ರ ಈ ಬಗ್ಗೆ ಎಲ್ಲೂ ಉಲ್ಲೇಖೀಸಿಲ್ಲ. ಇದರಿಂದ ಪ್ರತ್ಯೇಕ ವಿವಿ ಕಾರ್ಯಾರಂಭ ಮತ್ತಷ್ಟು ವಿಳಂಬವಾಗುವ ಆತಂಕ ಎದುರಾಗಿದೆ.

ಜಿಲ್ಲೆಯ ಎನ್‌ಆರ್‌ಬಿಸಿಯ 0-95 ಕಿಮೀ ಕಾಲುವೆಗಳ ಆಧುನೀಕರಣಕ್ಕೆ 750 ಕೋಟಿ ರೂ. ನೀಡಿರುವುದು ಜಿಲ್ಲೆಯ ಮಟ್ಟಿಗೆ ದೊಡ್ಡ ಕೊಡುಗೆ. ಕೊನೆ ಭಾಗದ ರೈತರಿಗೆ ನೀರು ತಲುಪದೆ ಸಾಕಷ್ಟು ಸಮಸ್ಯೆ ಎದುರಿಸಲಾಗುತ್ತಿತ್ತು. ಆದರೆ, ಈಗ ಆಧುನೀಕರಣ ಮಾಡುವುದರಿಂದ ಕೊನೆ ಭಾಗದ ರೈತರ ಸಮಸ್ಯೆ ನೀಗಬಹುದು. ಅದರ ಜತೆಗೆ ರಾಯಚೂರು ಸೇರಿ ನಾಲ್ಕು ಜಿಲ್ಲೆ ಪಶು ಆರೋಗ್ಯ ತಪಾಸಣಾ ಕೇಂದ್ರ ಸ್ಥಾಪನೆಗೆ 3 ಕೋಟಿ ರೂ. ನೀಡಲಾಗಿದೆ. ತುಂಗಭದ್ರಾ ಜಲಾಶಯದಲ್ಲಿ ಹೂಳಿನ ಪ್ರಮಾಣದಿಂದ ಆಗುತ್ತಿರುವ ಸಮಸ್ಯೆ ನಿವಾರಣೆಗೆ ನವಿಲು ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಅಧ್ಯಯನ ವರದಿ ತಯಾರಿಸಲು ತಿಳಿಸಿರುವುದು ನೀರಾವರಿ ಪ್ರದೇಶದ ರೈತರಿಗೆ ಸಮಾಧಾನ ತಂದಿದೆ. ಆದರೆ, ಈಗಾಗಲೇ ಯೋಜನೆ ಡಿಪಿಆರ್‌ ಕೂಡ ಸಿದ್ಧಗೊಂಡಿದೆ. ಈಗ ಪುನಃ ಅಧ್ಯಯನ ಮಾಡುವ ಅಗತ್ಯವೇನಿದೆ ಎಂಬ ಆಕ್ಷೇಪ ವ್ಯಕ್ತವಾಗಿದೆ.

ವಿಶೇಷ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ಎಚ್‌ ಕೆಆರ್‌ಡಿಬಿಗೆ ಈ ಬಾರಿಯೂ 1500 ಕೋಟಿ ರೂ. ನೀಡಲಾಗಿದೆ. ಈ ಅನುದಾನ ಹೆಚ್ಚಾಗಬಹುದು ಎಂದೇ ನಿರೀಕ್ಷಿಸಲಾಗಿತ್ತು. ಐಐಐಟಿಗೆ ಸ್ಥಳ ಸೇರಿ ಅನುದಾನ ನೀಡುವ ಬಗ್ಗೆಯೂ ಉಲ್ಲೇಖವಾಗಿಲ್ಲ. ಕೆರೆಗಳ ಪುನಶ್ಚೇತನಕ್ಕೆ ಅನುದಾನ ಮೀಸಲಿಡಬೇಕಿತ್ತು. ಸೋಲಾರ್‌ ಯೋಜನೆಗಳಿಗೆ ಒತ್ತು ನೀಡಬಹುದಿತ್ತು. ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡುವಲ್ಲೂ, ವಿಶೇಷ ಸಾರಿಗೆ ಸೌಲಭ್ಯ, ರಸ್ತೆ, ಸೌಲಭ್ಯಗಳಿಗೆ ಆದ್ಯತೆ ಸಿಕ್ಕಿಲ್ಲ. ಘೋಷಿಸಲ್ಪಟ್ಟ ಯೋಜನೆಗಳಾದರೂ ಕಾರ್ಯರೂಪಕ್ಕೆ ಬರಲಿ

ಜನರ ಮೂಗಿಗೆ ತುಪ್ಪ  
ಇದೊಂದು ತೋರಿಕೆ ಬಜೆಟ್‌. ಯಾವುದೇ ಹೊಸ ಯೋಜನೆ ಘೋಷಣೆ ಮಾಡದೆ ಇರುವುದನ್ನೇ ವಿವರವಾಗಿ ಓದುವ ಮೂಲಕ ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದ್ದಾರೆ. ಅದರಲ್ಲೂ ಹೈ.ಕ ಭಾಗವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಬಜೆಟ್‌ ಹೆಚ್ಚಳವಾದರೂ ಎಚ್‌ಕೆಆರ್‌ ಡಿಗೆ ನೀಡಿದ ಅನುದಾನ ಮಾತ್ರ ಹೆಚ್ಚಿಸಿಲ್ಲ. ಸತತ ನಾಲ್ಕು ವರ್ಷದಿಂದ ಬಳ್ಳಾರಿ ಜಿಲ್ಲೆಯವರು ಕೃಷಿ ವಿವಿಗಾಗಿ ಹೋರಾಟ ಮಾಡಿದರೂ ನೀಡದೆ ಚಾಮರಾಜ ನಗರಕ್ಕೆ ನೀಡಿದ್ದಾರೆ. ಇದು ಜನರನ್ನು ಮೆಚ್ಚಿಸಲು ಮಂಡಿಸಿದ ನಿರಾಸೆ ಬಜೆಟ್‌. 
ಡಾ| ರಜಾಕ್‌ ಉಸ್ತಾದ್‌, ಹೈ.ಕ ಹೋರಾಟ ಸಮಿತಿ ಮುಖಂಡ

Advertisement

ಅತ್ಯುತ್ತಮ ಬಜೆಟ್‌
ಸರ್ವಜನರನ್ನು ಗಮನದಲ್ಲಿಟ್ಟುಕೊಂಡು ಸಿಎಂ ಸಿದ್ದರಾಮಯ್ಯ ಬಜೆಟ್‌ ಮಂಡಿಸಿದ್ದಾರೆ. ಚುನಾವಣೆ ಮುನ್ನೆಲೆಯಲ್ಲಿದ್ದರೂ ಯಾವುದೇ ಗಿಮಿಕ್‌ ಮಾಡದೆ ಎಲ್ಲ ರಂಗಗಳಿಗೂ ಸಮಾನ ಆದ್ಯತೆ ನೀಡಿದ್ದಾರೆ. ರೈತರಿಗೆ ಸಾಕಷ್ಟು ನೆರವು ನೀಡಿರುವುದು ವಿಶೇಷ. ಎನ್‌ ಆರ್‌ಬಿಸಿ ಅನುದಾನ ಮೀಸಲಿಟ್ಟಿರುವುದು ವಿಶೇಷವಾದದ್ದು. ಇದೊಂದು ಅತ್ಯುತ್ತಮ ಬಜೆಟ್‌ ಆಗಿದ್ದು, ಸಿಎಂ ಮತ್ತೂಮ್ಮೆ ಪ್ರಬುದ್ಧತೆ ಮೆರೆದಿದ್ದಾರೆ. 
ಬಿ.ವಿ.ನಾಯಕ, ಸಂಸದ, ರಾಯಚೂರು 

ಮಿಶ್ರಫಲ ನೀಡುವ ಬಜೆಟ್‌ 
ಬಜೆಟ್‌ ರೈತರ ಪಾಲಿಗೆ ಮಿಶ್ರಫಲ ನೀಡಿದೆ. ಎನ್‌ ಆರ್‌ಬಿಸಿ ಆಧುನೀಕರಣಕ್ಕೆ ಒತ್ತು ನೀಡಿರುವುದು ಖುಷಿಯ ವಿಚಾರ. ಆದರೆ, ಈಗಾಗಲೇ ನವಿಲು ಬಳಿ ಸಮನಾಂತರ ಜಲಾಶಯ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧಪಡಿಸಲಾಗಿತ್ತು. ಆದರೆ, ಮತ್ತೂಮ್ಮೆ ಅಧ್ಯಯನಕ್ಕೆ ಮುಂದಾಗಿರುವ ಕ್ರಮ ಸರಿಯಲ್ಲ. ವಿವಿಧ ಇಲಾಖೆಗಳಲ್ಲಿ ರೈತರಿಗೆ ಅನುದಾನ ಮೀಸಲಿಟ್ಟಿರುವುದು ಒಳ್ಳೆಯದು. ಇದು ಮಿಶ್ರಫಲ ನೀಡುವ ಬಜೆಟ್‌ ಆಗಿದೆ. 
ಚಾಮರಸ ಮಾಲಿಪಾಟೀಲ, ರೈತ ಸಂಘದ ರಾಜ್ಯ ಗೌರವಾಧ್ಯಕ್ಷ

ನಿರಾಶಾದಾಯಕ ಬಜೆಟ್‌
ಬಜೆಟ್‌ ಸಂಪೂರ್ಣ ನಿರಾಶಾದಾಯಕವಾಗಿದೆ. ಯಾವುದೇ ಒಂದೇ ಒಂದು ಹೊಸ ಯೋಜನೆ ಘೋಷಣೆ ಮಾಡದೆ ಮೂಗಿಗೆ ತುಪ್ಪ ಸವರಲಾಗಿದೆ. ಜಿಲ್ಲೆಯಲ್ಲಿ ನೀರಿಗೆ ಸಮಸ್ಯೆಯಿದ್ದು, ತುಂಗಭದ್ರಾ ಜಲಾಶಯ ಹಾಗೂ ನಾರಾಯಣಪುರ ಜಲಾಶಯದಿಂದ ಏತ ನೀರಾವರಿಗೆ ಒಪ್ಪಿಗೆ ನೀಡಿರುವುದು ಎಷ್ಟು ಸರಿ. ಬಜೆಟ್‌ನಿಂದ ಈ ಭಾಗದ ಜನರಿಗೆ ಅನ್ಯಾಯವಾಗಿದೆ. 
ಕೆ. ಶಿವನಗೌಡ ನಾಯಕ, ಬಿಜೆಪಿ ಶಾಸಕ, ದೇವದುರ್ಗ

 ಎಲ್ಲರ ಹಿತ ಕಾಪಾಡಲಾಗಿದೆ
ದೇವದುರ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ದಲಿತರು ಶೋಷಿತ ಸಮುದಾಯಗಳ ಅಭಿವೃದ್ಧಿಗೆ ಮತ್ತು ನೀರಾವರಿ ಸೌಲಭ್ಯಕ್ಕೆ ರೈತರಿಗೆ ಅಗತ್ಯ ಅನುಕೂಲ ಶಿಕ್ಷಣ, ಆರೋಗ್ಯ ಕ್ಷೇತ್ರಗಳ ಬಲವರ್ಧನೆಗೆ ಈ ಭಾರಿ ಉತ್ತಮ ಬಜೆಟ್‌ ಮಂಡಿಸಿದ್ದಾರೆ. ಅದರಲ್ಲೂ ಹೈದ್ರಾಬಾದ್‌ ಕರ್ನಾಟಕ ಪ್ರದೇಶದ ಭಾಗಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿದ್ದಾರೆ. ಬಡವಿದ್ಯಾರ್ಥಿಗಳಿಗೆ ಅನುಕೂಲಕ್ಕಾಗಿ ಅನೇಕ ವಸತಿ ನಿಲಯ ಸ್ಥಾಪಿಸಲು ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ ಎಂದು ಅರಕೇರಾ ಬ್ಲಾಕ್‌ ಕಾಂಗ್ರೆಸ್‌ ವಿಭಾಗ ಎಸ್‌.ಸಿ. ಘಟಕ ಅಧ್ಯಕ್ಷ ಬೂತಪ್ಪ ಹೇರುಂಡಿ ತಿಳಿಸಿದ್ದಾರೆ.

ಚುನಾವಣಾ ದೃಷ್ಟಿಕೋನದ ಬಜೆಟ್‌ 
ದೇವದುರ್ಗ: ರಾಜ್ಯ ಸರಕಾರ ಮುಂಬರುವ ಚುನಾವಣೆ ದೃಷ್ಟಿ ಇಟ್ಟುಕೊಂಡು ತಯಾರಿಸಿದ ಬಜೆಟ್‌ ಇದಾಗಿದೆ. ಶೇ.30ರಷ್ಟು ಹಣವನ್ನು ಶಿಕ್ಷಣಕ್ಕಾಗಿ ಬಜೆಟ್‌ನಲ್ಲಿ ಮೀಸಲಿಡಬೇಕು. ವಿದ್ಯಾರ್ಥಿಗಳನ್ನು ಉಚಿತ ಪ್ರಯಾಣದ ಹೆಸರಲ್ಲಿ ಮೂಲಶಿಕ್ಷಣಕ್ಕೆ ಒತ್ತು ಕೊಡುವುದರಲ್ಲಿ ರಾಜ್ಯ ಸರ್ಕಾರ ಎಡವಿದೆ. ಶಿಕ್ಷಣ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಅನ್ಯಾಯ ಮಾಡಲಾಗಿದೆ ಎಂದು ಎಸ್‌ಎಫ್‌ಐ ಸಂಘಟನೆ ರಾಜ್ಯ ಉಪಾಧ್ಯಕ್ಷ ಶಬ್ಬೀರ ಜಾಲಹಳ್ಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next