Advertisement
ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣದಲ್ಲಿ ಸಂತೋಷ್ ಅವರು ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸೋಮವಾರ ಡಿಸ್ಚಾರ್ಜ್ ಆಗಿದ್ದಾರೆ. ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, “ಮೂರು ದಿನಗಳ ಹಿಂದೆ ಮದುವೆಯಲ್ಲಿ ಊಟದ ವ್ಯತ್ಯಾಸವಾಗಿ ಅಜೀರ್ಣ ಉಂಟಾಗಿತ್ತು. ಹೀಗಾಗಿ ನಾನು ತೆಗೆದುಕೊಳ್ಳಬೇಕಾದ ಮಾತ್ರೆ ಬಿಟ್ಟು ಬೇರೆ ಮಾತ್ರೆ ಸೇವಿಸಿದರಿಂದ ಇಷ್ಟೆಲ್ಲ ಆಯಿತು. ಇದೊಂದು ಅಚಾತುರ್ಯ ಘಟನೆ. ಅದರಿಂದ ಗಾಬರಿಗೊಂಡು ಪತ್ನಿ ಆಸ್ಪತ್ರೆಗೆ ಸೇರಿಸಿದ್ದಾರೆ. ಉದ್ದೇಶಪೂರ್ವಕವಾಗಿ ಆಗಿಲ್ಲ’ ಎಂದು ಸ್ಪಷ್ಟಪಡಿಸಿದರು.
Related Articles
“ವಿವಾದಿತ ವಿಡಿಯೋ’ ಕುರಿತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆಗೆ ತಿರುಗೇಟು ನೀಡಿದ ಸಂತೋಷ್, “ಡಿ.ಕೆ.ಶಿವಕುಮಾರ್ ಅವರ ಆರೋಪ ಇದೇ ಮೊದಲಲ್ಲ. ಈ ಹಿಂದೆಯೂ ಹಲವು ಬಾರಿ ಆರೋಪಗಳನ್ನು ಮಾಡಿದ್ದಾರೆ. ಅವರ ಮನೆ ಮೇಲೆ ಸಿಬಿಐ ಮತ್ತು ಆದಾಯ ತೆರಿಗೆ ಇಲಾಖೆ ದಾಳಿ ನಡೆದಾಗಲೂ ನನ್ನ ಮೇಲೆ ಆರೋಪ ಮಾಡಿದ್ದರು. ಸಂತೋಷ್ ಬಳಿ ಡೈರಿ ಇದೆ. ಅದರ ಬಗ್ಗೆ ಏಕೆ ತನಿಖೆ ನಡೆಸುವುದಿಲ್ಲ ಎಂದು ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದರು’ ಎಂದರು.
Advertisement
“ಬಹುಶಃ ಈ ರೀತಿ ಮಾತನಾಡುವುದು ಶಿವಕುಮಾರ್ ಅವರಿಗೆ ಅಭ್ಯಾಸವಾಗಿದೆ. ಇತ್ತೀಚೆಗೆ ನಡೆದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಸೋತು ಹತಾಶೆಯಿಂದ ಹೇಳಿಕೆ ನೀಡಿದ್ದಾರೆ. ಈ ಸೋಲಿನಿಂದ ಅವರು ಮತಿಗೆಟ್ಟಿರಬಹುದು. ಶಿವಕುಮಾರ್ ಅವರ ಬಳಿ ಮನವಿ ಮಾಡುತ್ತೇನೆ. 1989ರಿಂದ ಶಾಸಕರಾಗಿ ಆಯ್ಕೆಯಾಗಿ ಬರುತ್ತಿದ್ದು, ಹಲವು ಬಾರಿ ಸಚಿವರಾಗಿದ್ದೀರಾ. ಕೆಪಿಸಿಸಿ ಅಧ್ಯಕ್ಷರಾಗಿದ್ದಿರಾ. ಆ ಹಿಂದೆ ರಾಜಕೀಯದಲ್ಲಿದ್ದಾಗ ಮಾತನಾಡಿದಂತೆ ಮಾತನಾಡಬಾರದು. ರಾಜಕೀಯ ಹೇಳಿಕೆಗಳನ್ನು ಕೊಡುವ ಮೊದಲು ನಿಮ್ಮ ಪಕ್ಷದ ಹಿರಿಯ ನಾಯಕರಾದ ಸಿದ್ದರಾಮಯ್ಯ ಅವರನ್ನು ನೋಡಿ ಕಲಿಯಿರಿ,’ ಎಂದು ತಿರುಗೇಟು ನೀಡಿದರು.
ಬಿಎಸ್‌ವೈ ಬಗ್ಗೆ ಮಾತನಾಡಬೇಡಿ“ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ ಹಗುರವಾಗಿ ಮಾತನಾಡಬೇಡಿ. ಈ ರೀತಿ ಪದೇಪದೆ ಹೇಳಿಕೆ ನೀಡಿ ತಿರುಚುವ ಕೆಲಸ ಮಾಡಬೇಡಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವ ಮುನ್ನ ಆಲೋಚನೆ ಮಾಡಿ ನಾಲಿಗೆ ಹೊರಳಿಸಿ. ಯಡಿಯೂರಪ್ಪ ಅವರ ಬಗ್ಗೆ ಮಾತನಾಡುವುದು 200-300 ಮಂದಿಯನ್ನು ಮನೆ ಮುಂದೆ ನಿಲ್ಲಿಸಿಕೊಂಡು ದೊಂಬಾರಾಟ ಮಾಡಿದಂತೆ ಅಲ್ಲ. ಯಡಿಯೂರಪ್ಪ ಅವರ ಹೆಸರು ತೆಗೆದು ಮಾತನಾಡಿದರೆ ನಾಯಕರಾಗುತ್ತೇನೆ ಅಂದುಕೊಂಡಿದ್ದಾರೆ. ಅದು ಮುಟ್ಟಾಳುತನ. ರಾಜ್ಯದಲ್ಲಿ ನಾನು ಕರೆ ಕೊಟ್ಟರೂ ಲಕ್ಷಾಂತರ ರೂ. ಜನ ನಮ್ಮ ನಾಯಕರಾದ ಯಡಿಯೂರಪ್ಪ ಅವರ ಪರವಾಗಿ ನಿಂತುಕೊಳ್ಳುತ್ತಾರೆ’ ಎಂದು ಎಚ್ಚರಿಕೆ ನೀಡಿದರು. “ನನಗೆ ಶಿವಕುಮಾರ್ ಅವರ ಬಗ್ಗೆ ಸಂತಾಪವಿದೆ. ನಾವು ರೋಗಿ ವಿರುದ್ಧ ಹೋರಾಟ ಮಾಡಲ್ಲ, ರೋಗದ ವಿರುದ್ಧ ಹೋರಾಟ ಮಾಡುತ್ತೇವೆ. ಕಾಂಗ್ರೆಸ್‌ನ ಹಿರಿಯ ನಾಯಕರಲ್ಲಿ ಮನವಿ ಮಾಡುತ್ತೇನೆ. ಕೆಪಿಸಿಸಿ ಅಧ್ಯಕ್ಷರಿಗೆ ಒಂದು ತಿಂಗಳು ರಜೆ ಕೊಟ್ಟು ಉತ್ತಮ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲಿ’ ಎಂದು ಟೀಕಿಸಿದರು.