Advertisement

ಕೋಳಿ ಫಾರಂ ತೆರವುಗೊಳಿಸಲು ಆಗ್ರಹ

01:01 PM Feb 07, 2020 | Naveen |

ಎನ್‌.ಆರ್‌.ಪುರ: ತಾಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬಿಗುಂಡಿಯಲ್ಲಿ ಅಕ್ರಮವಾಗಿ ವ್ಯಕ್ತಿಯೊಬ್ಬರು ಕೋಳಿ ಫಾರಂ ನಡೆಸುತ್ತಿರುವುದರಿಂದ ಇಡೀ ವಾತಾರವಣವೇ ಮಲಿನಗೊಂಡಿದೆ. ಹಾಗಾಗಿ, ಕೋಳಿ ಫಾರಂ ತೆರವುಗೊಳಿಸುವಂತೆ ಒತ್ತಾಯಿಸಿ ಅಬ್ಬಿಗುಂಡಿ, ಮುತ್ತಗದಾನಿ ನಿವಾಸಿಗಳು ಸೀತೂರು ಗ್ರಾಮ ಪಂಚಾಯ್ತಿ ಎದುರು ಗುರುವಾರ ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ತಾಲೂಕು ಪಂಚಾಯ್ತಿ ಇಒ ನಯನ ಅವರಿಗೆ ಸ್ಥಳೀಯ ನಿವಾಸಿಗಳು ಮನವಿ ಸಲ್ಲಿಸಿದರು. ಕಳೆದ 2 ವರ್ಷದ ಹಿಂದೆ ಅಬ್ಬಿಗುಂಡಿಯಲ್ಲಿ ಸತೀಶ್‌ ಎಂಬುವರು ಸ.ನಂ. 132 ರ ಸರ್ಕಾರಿ ಜಾಗದಲ್ಲಿ ಅಕ್ರಮವಾಗಿ ಕೋಳಿ ಫಾರಂ ನಿರ್ಮಿಸಿಕೊಂಡಿದ್ದಾರೆ.

ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲಿ ಕೋಳಿ ಫಾರಂ ಇದ್ದು, ಇದರಿಂದ ಇಡೀ ವಾತಾವರಣವೇ ಮಲಿನಗೊಂಡಿದೆ. ನಿವಾಸಿಗಳಿಗೆ ಆಗುತ್ತಿರುವ ತೊಂದರೆ ಬಗ್ಗೆ ಕಳೆದ ಜುಲೈ ತಿಂಗಳಲ್ಲಿ ಗ್ರಾಮ ಪಂಚಾಯ್ತಿಗೆ ಮನವಿ ನೀಡಲಾಗಿತ್ತು. ಆ ಸಂದರ್ಭದಲ್ಲಿ ಕೋಳಿ ಫಾರಂ ತೆರವುಗೊಳಿಸಲಾಗಿತ್ತು. ಆದರೆ, ಜನವರಿ 14 ರಿಂದ ಮತ್ತೆ ಅಕ್ರಮವಾಗಿ ಕೋಳಿ ಫಾರಂ ಪ್ರಾರಂಭ ಮಾಡಿದ್ದಾರೆ ಎಂದು ದೂರಿದರು.

ಜನವರಿ 16 ರಂದು ಮತ್ತೆ ಗ್ರಾಮ ಪಂಚಾಯ್ತಿಗೆ ದೂರು ನೀಡಿದ್ದೇವೆ. ಸೀತೂರು ಗ್ರಾಮದ ಅಬ್ಬಿಗುಂಡಿಯಲ್ಲಿ ಕೂಲಿ ಕಾರ್ಮಿಕರು, ಪ.ಜಾತಿ ಹಾಗೂ ಪಂಗಡಕ್ಕೆ ಸೇರಿದ ಕುಟುಂಬಗಳಿಗೆ ಹಾಗೂ ಇತರ ಗ್ರಾಮಸ್ಥರಿಗೆ ಕುಡಿಯುವ ನೀರು ಪೂರೈಸುವ ನೀರಿನ ಟ್ಯಾಂಕ್‌ ಇದೆ. ಆದ್ದರಿಂದ ತಕ್ಷಣ ಸ್ಥಳ ಪರಿಶೀಲನೆ ಮಾಡಿ ಕೋಳಿ ಫಾರಂ ತೆರವುಗೊಳಿಸಬೇಕು ಎಂದು ಸ್ಥಳೀಯ ನಿವಾಸಿಗಳು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಮುತ್ತಗದಾನಿ ಸತ್ಯ, ಅಬ್ಬಿಗುಂಡಿಯ ದಿವಾಕರ, ನಾಗೇಂದ್ರ, ಅಂಬರೀಶ್‌, ಯೋಗೀಶ್‌, ನಾಗರತ್ನಾ, ಕಮಲಾ, ರತ್ನಾ, ಪೂರ್ಣಿಮಾ, ಸರಸ್ವತಿ, ರತ್ನಾಕರ, ಚಂದ್ರು, ಸುರೇಶ, ಪ್ರಭಾಕರ ಸೇರಿದಂತೆ ನೂರಾರು ನಿವಾಸಿಗಳು ಭಾಗವಹಿಸಿದ್ದರು.

Advertisement

ಈ ಸಂದರ್ಭದಲ್ಲಿ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಎನ್‌.ಪಿ.ರಮೇಶ್‌, ಸದಸ್ಯರಾದ ಎಚ್‌.ಇ.ದಿವಾಕರ, ಎಚ್‌.ಇ.ಮಹೇಶ್‌ ಇತರರಿದ್ದರು. ತಾಪಂ ಅಧ್ಯಕ್ಷರ ಭೇಟಿ: ಈ ವೇಳೆ ಗ್ರಾಮ ಪಂಚಾಯ್ತಿಗೆ ಆಗಮಿಸಿದ ತಾಲೂಕು ಪಂಚಾಯ್ತಿ ಅಧ್ಯಕ್ಷೆ ಜಯಶ್ರೀ ಮೋಹನ್‌, ಕೋಳಿ ಫಾರಂ ಇರುವ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ, ಕಾನೂನಿನಂತೆ ಕ್ರಮ ಕೈಗೊಳ್ಳಬೇಕೆಂದು ತಾಲೂಕು ಪಂಚಾಯ್ತಿ ಇಒಗೆ ಸೂಚಿಸಿದರು.ಪೊಲೀಸರು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಭದ್ರತೆ ಕೈಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next