Advertisement

ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶ ಸಮಾರೋಪ

05:12 PM Feb 13, 2018 | |

ಮುಂಬಯಿ: ಮುಂಬಯಿಯಲ್ಲಿ ಇಂತಹ ಸಮಾವೇಶ ಅರ್ಥಪೂರ್ಣವಾದದ್ದು. ಮುಂಬಯಿ ಅಪಾರ ಗೌರವ ಕೊಡುವ ಒಂದು ಮಹಾನಗರ. ಇಲ್ಲಿನ ಜನತೆ ಶ್ರದ್ಧಾಳುಗಳು  ಮತ್ತು ನಿಸ್ವಾರ್ಥಿಗಳಾಗಿದ್ದು ಎಲ್ಲಕ್ಕೂ ಸಹಕರಿಸುವವರು. ಕನ್ನಡ ಭಾಷೆಗೆ ಭಾರತದಲ್ಲಿ 4ನೇ ಸ್ಥಾನ ಅಶಾದಾಯಕ ವಿಚಾರವಾಗಿದೆ. ಕನ್ನಡ ಸುಮಾರು 5.5ಲಕ್ಷ ಜನತೆಯ ಮಾತೃಭಾಷೆಯಾಗಿದ್ದು ಕನ್ನಡ ಸಂಜೀವಿನಿ ಭಾಷೆಯಾಗಿದೆ. ಆದುದರಿಂದ ಕನ್ನಡ ಭಾಷೆಗೆ ಗಡಿಯ ಮಿತಿಯಿಲ್ಲ.  ಕನ್ನಡದ ಕೆಲಸಗಳೇ ಇದಕ್ಕೆ ಸಾಕ್ಷಿಯಾಗಿದೆ ಎಂದು ಸಂಸ್ಕೃತಿ ಚಿಂತಕ, ಮೂಡಬಿದ್ರೆಯ ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ  ಅಧ್ಯಕ್ಷ ಡಾ| ಎಂ. ಮೋಹನ ಆಳ್ವ ಅವರು ತಿಳಿಸಿದರು.

Advertisement

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಮತ್ತು ಮುಂಬಯಿ ಹಾಗೂ ಉಪನಗರಗಳಲ್ಲಿನ ವಿವಿಧ ಕನ್ನಡ ಸಂಸ್ಥೆಗಳ ಒಗ್ಗೂಡುವಿಕೆಯಲ್ಲಿ ಅಂಧೇರಿ ಪಶ್ಚಿಮದಲ್ಲಿನ ಮೊಗವೀರ ಭವನದಲ್ಲಿ  ಆಯೋಜಿಸಲಾಗಿರುವ ಎರಡು ದಿನಗಳ ಹೊರನಾಡ ಕನ್ನಡಿಗರ ದ್ವಿತೀಯ ರಾಷ್ಟ್ರೀಯ ಸಮಾವೇಶದ ಸಮಾರೋಪ ಸಮಾರಂಭವು ಫೆ. 11 ರಂದು ಸಂಜೆ ನಡೆದಿದ್ದು, ಈ ಸಂದರ್ಭದಲ್ಲಿ  ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಡಾ| ಮೋಹನ ಆಳ್ವ ಅವರು, ಇಂದೂ ಕೂಡಾ ವೇಗದಾಯಕವಾಗಿ ಪರಂಪರಿಕ, ಮೌಕಿಕ, ಲಿಖೀತ ಭಾಷೆಯಾಗಿ ಕನ್ನಡ ಬೆಳೆಯುತ್ತಿದೆ. ಕನ್ನಡ ಭಾಷೆ ಬರೇ  ಸಾಹಿತಿಗಳ ಭಾಷೆ ಆಗಬಾರದು. ಇದು ಸಮಗ್ರವಾಗಿ ಸರ್ವರ ಭಾಷೆ ಆಗಬೇಕು. ಇದೇ ನಮ್ಮೆಲ್ಲರ ಆಶಯವಾಗಬೇಕು. ಭಾಷೆ ವ್ಯಾಪರೀಕರಣವಾಗಬಾರದು. ಭಾಷೆಗಳ ಏಕೀಕರಣಕ್ಕೆ ಇಂತಹ ಸಮಾವೇಶವು ಎಂದೂ ಜಾತ್ರೆಯಾಗದೆ ಹಬ್ಬವಾಗಿ ಸಂಭ್ರಮಿಸಬೇಕು. ಈ ಭಾಷೆಯ ಪೋಷಣೆ ಸರಕಾರ ಅಥವಾ ಪರಿಷತ್ತುವಿನ ಕರ್ತವ್ಯವಾಗದೆ ಸಮಗ್ರ ಕನ್ನಡಿಗರ ಆಸ್ತಿಯಾಗಬೇಕು. ವಿದ್ಯಾಭ್ಯಾಸದ ಜೊತೆ ಜಾನಪದ ಕಲೆ ಜೋಡಣೆ ಆದಾಗ, ಕನ್ನಡ ಎಂದೂ ಮರೆಯಾಗದು. ಕನ್ನಡ ಮಾಧ್ಯಮ ಶಾಲೆಗಳಲ್ಲಿ ಭಾಷೆ ಸೋಲು ಕಂಡರೆ ಶ್ರೀ  ಸಾಮಾನ್ಯರ ಸೋಲಾಗಿ ನಮ್ಮ ನಾಡಿನ ಮಣ್ಣಿನ ಸೋಲಾಗಬಹುದು ಎಂದು ನುಡಿದರು.

ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಡಾ| ಮನು ಬಳಿಗಾರ್‌ ಅವರು  ಅಧ್ಯಕ್ಷತೆ ವಹಿಸಿ ಮಾತನಾಡಿ, ಹೊರನಾಡ ಕನ್ನಡಿಗರ ಸಮಾವೇಶದಲ್ಲಿ ನಡೆದ ಚರ್ಚೆಗಳನ್ನು ಮತ್ತು ವಿಚಾರಗಳನ್ನು ನಿರ್ಣಯರೂಪದಲ್ಲಿ ಸ್ವೀಕರಿಸಿ ಕಾರ್ಯ ರೂಪದಲ್ಲಿ ತರಲು ಎಲ್ಲರಿಗೂ ಪ್ರಯತ್ನ ಮಾಡಲಾಗುವುದು. ಈ ಸಮ್ಮೇಳನ ಯಶಸ್ವಿಯಾಗಲು ಎಲ್ಲ ಕನ್ನಡಿಗರು ಸಹಕರಿಸಿದ್ದು, ಕನ್ನಡಿಗರಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.

ಸಮಾರಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು  ಮಹಾರಾಷ್ಟ್ರ ಗಡಿನಾಡ ಘಟಕದ ಅಧ್ಯಕ್ಷ ಬಸವರಾಜ ಸಿದ್ರಾಮಪ್ಪ ಮಸೂತಿ, ಮೊಗವೀರ ವ್ಯವಸ್ಥಾಪಕ ಮಂಡಳಿ ಮುಂಬಯಿ ಇದರ ಪ್ರಧಾನ ಕಾರ್ಯದರ್ಶಿ ಸಂಜೀವ ಕೆ. ಸಾಲ್ಯಾನ್‌, ಕರ್ನಾಟಕ ಸಂಘ ಮುಂಬಯಿ ಅಧ್ಯಕ್ಷ ಮನೋಹರಿ ಎಂ. ಕೋರಿ, ಕಸಾಪ ಗೌರವ ಕಾರ್ಯದರ್ಶಿ ವ. ಚ. ಚನ್ನೇಗೌಡ, ಗೌರವ ಕೋಶಾಧಿಕಾರಿ ಪಿ. ಮಲ್ಲಿ ಕಾರ್ಜುನಪ್ಪ, ಕಾರ್ಯಕಾರಿ ಸಮಿತಿಯ ಸದಸ್ಯರು, ದಕ್ಷಿಣ ಕನ್ನಡ ಜಿಲ್ಲಾಧಕ್ಷ ಪ್ರದೀಪ್‌ಕುಮಾರ್‌ ಕಲ್ಕೂರ, ಉಡುಪಿ ಜಿಲ್ಲಾಧಕ್ಷ ನೀಲಾವರ ಸುರೇಂದ್ರ† ಅಡಿಗ ಸೇರಿದಂತೆ ವಿವಿಧ ಜಿಲ್ಲಾಧ್ಯಕ್ಷರು ವಿಶೇಷ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಗರದ ಹಿರಿಯ ಸಾಹಿತಿಗಳೂ, ಕನ್ನಡಿಗ ಸಾಧಕರಾದ ಎಚ್‌. ಬಿ. ಎಲ್‌. ರಾವ್‌, ಡಾ| ಜಿ. ಡಿ ಜೋಶಿ, ಡಾ| ಸುನೀತಾ ಎಂ. ಶೆಟ್ಟಿ, ಡಾ| ಜೀವಿ ಕುಲಕರ್ಣಿ  ಇವರನ್ನು ಅತಿಥಿಗಳು ಸಮ್ಮಾನಿಸಿ ಗೌರ ವಿಸಿದರು.ಇದೇ ಸಂದರ್ಭದಲ್ಲಿ ಸಮಾವೇಶಕ್ಕೆ ಅಹರ್ನಿಶಿ ಶ್ರಮಿಸಿದ ಮಹಾನೀಯರನ್ನು, ವಿವಿಧ ಸಂಘ-ಸಂಸ್ಥೆಗ‌ಳ ಮುಖ್ಯಸ್ಥರನ್ನು ಗೌರವಿ ಸಲಾಯಿತು. ವಿದುಷಿ ಶ್ಯಾಮಲ ರಾಧೇಶ್‌ ಪ್ರಾರ್ಥನೆಗೈದರು. ಟಿ. ಆರ್‌. ಮಧುಸೂದನ್‌ ಸ್ವಾಗತಿಸಿದರು. ಕರ್ನಾಟಕ ಸಂಘ ಮುಂಬಯಿ ಇದರ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಭರತ್‌ಕುಮಾರ್‌ ಪೊಲಿಪು ಕಾರ್ಯಕ್ರಮ ನಿರೂಪಿಸಿದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ನಿತ್ಯಾನಂದ ಡಿ. ಕೋಟ್ಯಾನ್‌ ವಂದಿಸಿದರು.  ನಾಮಾಂಕಿತ ಜನಪದ ಗಾಯಕ ಡಾ| ಅಪ್ಪಗೆರೆ ತಿಮ್ಮರಾಜು ತಂಡದ ಜನಪದ ಗಾಯನ ಕಚೇರಿಯೊಂದಿಗೆ ಸಮಾವೇಶ ಸಮಾಪನಗೊಂಡಿತು. 

ಜಗತ್ತನ್ನು ಒಂದೆಡೆ ಬಣ್ಣ ಮತ್ತು ಭಾಷೆ ಆಳುತ್ತಿದೆಯಾದರೆ, ಭಾಷೆ ಮನು ಕುಲವನ್ನು ಒಗ್ಗೂಡಿಸಿದರೆ ಜಾತಿ ಇಡೀ ಸಮಾಜವನ್ನು ಒಡೆಯುತ್ತಿರುವುದು ದುರಂತ. ದೂರದೃಷ್ಟಿತ್ವವುಳ್ಳ ನಮ್ಮಂತವರು ಸಮಾವೇಶಗಳ ಮೂಲಕ ಒಂದಾಗಲು ಭಾವನಾತ್ಮಕವಾಗಿ ಒಗ್ಗೂಡುತ್ತೇವೆ. ಇದಕ್ಕೆಲ್ಲಾ ಚರಿತ್ರೆ ಓದುವ, ನಿರ್ಮಾಣದ ಅರಿವು ಅವಶ್ಯಕವಾಗಿರುತ್ತದೆ. ಇದನ್ನು ನಾವೆಲ್ಲರೂ ಗಂಭೀರವಾಗಿ ತಿಳಿಯಬೇಕಾಗಿದೆ. ನಮ್ಮಲ್ಲಿನ ಮುಖ್ಯವಾಗಿ ಮಾರ್ಕೆಟ್‌ ಸಂಸ್ಕೃತಿ ಮಾಯ ವಾಗಿಸಬೇಕು. ಸಮಾವೇಶಗಳ ಮೂಲಕ ಸಾಹಿತ್ಯ, ರಾಜಕೀಯ ಚರಿತ್ರೆಗಳನ್ನು ಪುನ: ಶೋಧಿಸಬೇಕಾಗಿದ್ದು, ವಾಸ್ತವದ ಬಿಕ್ಕಟ್ಟು ಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವ ಅಲೋಚನೆಗಳು ಒಂದಾಗಬೇಕು  
ಡಾ| ಮಲ್ಲಿಕಾ ಘಂಟಿ (ಕುಲಪತಿಗಳು : ಕನ್ನಡ ವಿಶ್ವವಿದ್ಯಾಲಯ ಹಂಪಿ).

Advertisement

ನಾನು ಸಾಹಿತ್ಯ ಪರಿಷದ್‌ ಕಛೇರಿಗೆ ಹೋದವನೇ ಅಲ್ಲ. ಆದರೂ ಈ ಹುದ್ದೆ ನನ್ನ ಪಾಲಾಗಿದೆ.  ಇಂದು ಸಾಮಾಜಿಕ ನ್ಯಾಯಕ್ಕಾಗಿ ಪರಿವರ್ತನೆ, ತಿದ್ದುಪಡಿಗಳ ಅವಶ್ಯಕತೆಯಿದೆ. ಮುಂಬಯಿಯ  ಸುಮಾರು 33 ಸಂಸ್ಥೆಗಳು ಅದ್ದೂರಿಯಾಗಿ ಈ ಸಮಾವೇಶ ಆಯೋ ಜಿಸಿದ್ದಾರೆ ನಿಜ. ಆದ್ರೆ  ಕರ್ನಾಟಕದಲ್ಲಿ ಒಂದು ಸಂಘ ಎಂದರೆ ಎಲ್ಲವೂ ಅವರೇ ಆಗಿ ಅವರ ಜಾತಿಗಾಗಿಯೇ ಎಲ್ಲವನ್ನೂ ನಡೆಸುತ್ತಾರೆ. ಆದರೆ ಏಕತೆ ಎನ್ನುವುದು ಮುಂಬಯಿ ಕನ್ನಡಿಗರ ದೊಡ್ಡತನವಾಗಿದೆ – 
ಎನ್‌. ಕೆ. ನಾರಾಯಣ ( ರಾಜ್ಯ ಸಂಚಾಲಕರು : ಕಸಾಪ ಚುನಾವಣಾ ಸಮಿತಿ).

ಚಿತ್ರ-ವರದಿ:ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next