Advertisement

ಯಕ್ಷಲೋಕದಲ್ಲಿ  ಈಗ ಚುಂಬನ ವಿವಾದ!

10:09 AM Sep 22, 2017 | |

ಮಂಗಳೂರು : ಯಕ್ಷಗಾನದ ಮೂಲ ಸ್ವರೂಪಕ್ಕೆ ಧಕ್ಕೆ ಆಗುತ್ತಲೇ ಇದೆ ಎಂಬ ಕೆಲವು ಪ್ರಾಜ್ಞರ ಆತಂಕದ ನಡುವೆಯೇ ವಗೆನಾಡುವಿನಲ್ಲಿ ನಡೆದ “ಯಕ್ಷ- ಗಾನ-ನಾಟ್ಯ ವೈಭವ’ ದಲ್ಲಿ ಕಲಾವಿದರಿಬ್ಬರ ಅಭಿನಯವು ಯಕ್ಷಗಾನದ ಮೂಲ ಸ್ವರೂಪಕ್ಕೆ ಚ್ಯುತಿ ತಂದಿದೆ ಎಂಬ ಕಳವಳವನ್ನು ಮತ್ತೆ ಹುಟ್ಟಿಸಿದೆ. ವಿಟ್ಲ ಸಮೀಪದ ಕನ್ಯಾನದ ವಗೆನಾಡು ಶ್ರೀ ಸುಬ್ರಾಯ ದೇವಾಲಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ವರ್ಷಂಪ್ರತಿಯಂತೆ ಸೆ. 16ರಂದು ಆಯೋಜಿಸಲಾಗಿದ್ದ “ಯಕ್ಷ- ಗಾನ-  ನಾಟ್ಯ ವೈಭವ’ದಲ್ಲಿ ಜಯಂತನ ಪಾತ್ರದಲ್ಲಿ ರಾಕೇಶ್‌ ರೈ ಅಡ್ಕ ಹಾಗೂ ಸುಷಮೆಯ ಪಾತ್ರದಲ್ಲಿ ಪ್ರಶಾಂತ್‌ ಶೆಟ್ಟಿ ನೆಲ್ಯಾಡಿ ಬಣ್ಣ ಹಚ್ಚಿದ್ದರು. ನಾಟ್ಯ ವೈಭವದ ಕೊನೆಯ ಹಂತದಲ್ಲಿ ಶೃಂಗಾರ ಪದ್ಯವೊಂದಕ್ಕೆ ಅಭಿನಯಿಸುತ್ತಿದ್ದಾಗ, ಪ್ರಶಾಂತ್‌ ಶೆಟ್ಟಿ ಅವರಿಗೆ ರಾಕೇಶ್‌ ರೈ ತುಟಿಗೆ ಚಂಬಿಸಿದಂತೆ ಭಾಸವಾಗುವ ದೃಶ್ಯ ಈಗ ಯಕ್ಷಗಾನ ವಲಯದಲ್ಲಿ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಆದರೆ “ಮುತ್ತಿಕ್ಕಿದ್ದಲ್ಲ, ಬದಲಾಗಿ ಕಿವಿಯಲ್ಲಿ ಸೂಚನೆ ನೀಡಿದ್ದು’ ಎಂದು ರಾಕೇಶ್‌ ಅವರು ಈ ಸನ್ನಿವೇಶದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. 

Advertisement

ಈ ಸನ್ನಿವೇಶದಲ್ಲಿ ಭಾಗವತ ಪಟ್ಲ ಸತೀಶ್‌ ಶೆಟ್ಟಿ ಹಾಗೂ ಸತ್ಯ ನಾರಾಯಣ ಪುಣಿಂಚಿತ್ತಾಯ ದ್ವಂದ್ವ ಹಾಡುಗಾರಿಕೆಯಲ್ಲಿದ್ದರು. ಈ ದೃಶ್ಯವು ವಿಡಿಯೋ ದಾಖಲೀ ಕರಣಗೊಂಡು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ಬಹಳಷ್ಟು ಚರ್ಚೆಗೆ ವೇದಿಕೆ ಒದಗಿಸಿದೆ. ಚುಂಬಿಸಿದ್ದು ಹೌದಾದರೆ ತಪ್ಪು; ಅಲ್ಲವಾದರೆ, ಇಂತಹ ವಿಚಾರಗಳಲ್ಲಿ ಕಲಾವಿದರನ್ನು ಗುರಿ ಮಾಡುವುದು ತಪ್ಪು ಎಂಬ ಪರ-ವಿರೋಧದ ಚರ್ಚೆಗೆ ವೇದಿಕೆ ಒದಗಿಸಿದೆ. 

ಈ ಬಗ್ಗೆ ಕಲಾವಿದ ರಾಕೇಶ್‌ ರೈ ಅಡ್ಕ ಸಾಮಾಜಿಕ ಜಾಲ ತಾಣಗಳ ಮೂಲಕವೇ ಸ್ಪಷ್ಟನೆ ಕೊಟ್ಟಿ ದ್ದಾರೆ. ಎಷ್ಟೋ ಸಲ ಸಹ ಕಲಾವಿದರಲ್ಲಿ ಕಣ್ಸನ್ನೆಯ ಮೂಲಕವೋ ಆಂಗಿಕ ಸನ್ನೆಯ ಮೂಲಕವೋ ರಂಗದಲ್ಲಿಯೇ ಮುಂದಿನ ನಡೆ ಹೇಗೆ ಎನ್ನುವ ಸುಳಿವನ್ನು ನೀಡ ಬೇಕಾಗುತ್ತದೆ. ಆದರೆ ಈ ರೀತಿಯ ಸುಳಿವನ್ನು ನೀಡುವಾಗ ಕಲಾವಿದನಾದವನು ಪಾತ್ರದ ಔಚಿತ್ಯ ವನ್ನು ಮೀರಿ ಹೋಗುವ ಹಾಗಿಲ್ಲ. ಪ್ರೇಕ್ಷಕರ ಅರಿವಿಗೆ ಬಾರದಂತೆ ಸಹಕಲಾವಿದರಿಗೆ ಸೂಚನೆಗಳನ್ನು ಕೊಡಬೇಕಾದುದು ಅನಿವಾರ್ಯವಾಗುತ್ತದೆ. ಭಾಗವತರಾದ ಪಟ್ಲ ಸತೀಶ್‌ ಶೆಟ್ಟಿಯವರಿಂದ ಕಾರ್ಯಕ್ರಮವನ್ನು ಬೇಗ ಮುಗಿಸಬೇಕೆಂಬ ಸೂಚನೆ ತನಗೆ ಸಿಕ್ಕಿದ್ದರಿಂದ ಆ ಸೂಚನೆಯನ್ನು ಸಹ ಕಲಾವಿದ ಪ್ರಶಾಂತ್‌ ಅವರ ಗಮನಕ್ಕೆ ತರಲು ಅವರ ಕಿವಿಯಲ್ಲಿ ಭಾಗವತರ ಸೂಚನೆ ಯನ್ನು ಉಸುರಿದ್ದೇ ಹೊರತು ಮುತ್ತಿಕ್ಕಿದ್ದಲ್ಲ. 10-15 ನಿಮಿಷದ ವೀಡಿಯೋವನ್ನು ಇಡಿಯಾಗಿ ನೋಡುವಾಗ ಕ್ಷಣಾರ್ಧದಲ್ಲಿ ನಡೆದ ಈ ಘಟನೆ ವಿಶೇಷಾರ್ಥ ವನ್ನೋ ಅಪಾರ್ಥವನ್ನೋ ಸೂಸದೇ ಹೋದರೂ, ತಂತ್ರಜ್ಞಾನ ಬಹಳವಾಗಿ ಮುಂದುವರಿದಿರುವ ಈ ಕಾಲ ಘಟ್ಟ ದಲ್ಲಿ ದೂರದಿಂದ ತೆಗೆದ ವೀಡಿಯೊ ವನ್ನೂ ಜೂಮ್‌ ಮಾಡಿ ಹತ್ತಿರದಿಂದ ಕಾಣುವಂತೆ ಮಾಡು ವುದರಿಂದ ಆಭಾಸವಾಗುತ್ತದೆ. ಮುತ್ತಿಕ್ಕುವಂತೆ ಭಾಸವಾಗುವುದಕ್ಕೆ ಕೆಮರಾ ಆ್ಯಂಗಲ್‌ ಕೂಡ ಕಾರಣವಿರಬಹುದು. ಎಡಿಟ್‌ ಮಾಡಿದ ಕೇವಲ ಇಪ್ಪತ್ತು ಸೆಕೆಂಡುಗಳ ಸಣ್ಣ ತುಣುಕನ್ನು ಜಾಲತಾಣಗಳಲ್ಲಿ ಹರಿಯ ಬಿಟ್ಟಿರುವುದರಿಂದ ಅಪಾರ್ಥಕ್ಕೆ ಎಡೆ ಮಾಡಿ ಕೊಟ್ಟಿದೆ ಎನ್ನುತ್ತಾರೆ ರಾಕೇಶ್‌ ಅಡ್ಕ.

ಯಕ್ಷಗಾನದ ನಿಯಮಗಳಿಗೆ ಧಕ್ಕೆ ಆಗಕೂಡದು 
ಯಕ್ಷಗಾನ ಕೇವಲ ಮನೋರಂಜನಾ ಕಲೆ ಮಾತ್ರವಲ್ಲ. ಅದೊಂದು ಆರಾಧನಾ ಕಲೆ ಕೂಡ ಆಗಿದೆ. ಹೀಗಾಗಿ ಇಲ್ಲಿ ನಿಯಮಗಳಿಗೆ ಧಕ್ಕೆ ಆಗಲೇಬಾರದು. ಅದಕ್ಕೆ ನಾನು ತೀವ್ರ ಖಂಡನೆ ವ್ಯಕ್ತಪಡಿಸುತ್ತೇನೆ. ಇಬ್ಬರು ಕಲಾವಿದರು ಮೊನ್ನೆ ರಂಗದ ನಿಯಮಗಳಿಗೆ ಧಕ್ಕೆ ಆಗುವ ರೀತಿಯಲ್ಲಿ ನಡೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂದಿನ ನಾಟ್ಯ ವೈಭವದ ಕೊನೆಯ ದೃಶ್ಯ ಅದಾಗಿದ್ದರಿಂದ, ಆ ಸನ್ನಿವೇಶ ವನ್ನು ಸ್ವಲ್ಪ ಬೇಗನೆ ಮುಗಿಸುವಂತೆ ನಾನು ರಾಕೇಶ್‌ ಅವರಿಗೆ ರಂಗಸ್ಥಳ ಪ್ರವೇಶದ ವೇಳೆ ತಿಳಿಸಿದ್ದೆ. ಅದನ್ನು ಆ ಬಳಿಕ ಪ್ರಶಾಂತ್‌ ಅವರ ಕಿವಿಯಲ್ಲಿ ಹೇಳಿದ್ದೇನೆ ಎಂದು ಅವರು ತಿಳಿಸಿದ್ದಾರೆ. ಈ ಕ್ಷಣವು ವೇದಿಕೆಯ ಮುಂಭಾಗದಲ್ಲಿರುವವರಿಗೆ ಬೇರೆ ರೀತಿಯಲ್ಲಿ ಕಂಡಿರಲೂಬಹುದು ಮತ್ತು ಈ ಯಾವುದೇ ಕ್ಷಣವನ್ನು ನಾನು ಗಮನಿಸಿರಲಿಲ್ಲ. ಹೀಗಾಗಿ ರಂಗಸ್ಥಳದಲ್ಲಿ ಅವರು ಏನು ಮಾಡಿದ್ದಾರೆ ಎಂದು ನನಗೆ ಗೊತ್ತಿಲ್ಲ.  
 ಪಟ್ಲ  ಸತೀಶ್‌ ಶೆಟ್ಟಿ , ಭಾಗವತರು

ಯಕ್ಷಗಾನದಲ್ಲಿ  ಚುಂಬನಕ್ಕೆ ಅವಕಾಶವೇ ಇಲ್ಲ 
ಯಕ್ಷಗಾನದ ಸಂಪ್ರದಾಯದಲ್ಲಿ ಚುಂಬನಕ್ಕೆ ಅವಕಾಶ ಇಲ್ಲ. ನಾಟ್ಯಶಾಸ್ತ್ರ ದಲ್ಲೂ ಅವಕಾಶ ಇಲ್ಲ. ಹಾಗಾಗಿ ಇಂತಹುದು ನಡೆಯಕೂಡದು. ಹಣೆಗೆ ಚುಂಬನ ನೀಡಿರುವುದು ಕೂಡ ತಪ್ಪು.     
ಶಾಂತಾರಾಮ ಕುಡ್ವ , ಯಕ್ಷಗಾನ ವಿಮರ್ಶಕ

Advertisement

ಅಪಸವ್ಯಗಳಿಗೆ ತಡೆ ಅಗತ್ಯ
ಯಕ್ಷಗಾನ ಕುಣಿತ, ಭಾಗವತಿಕೆ, ವೇಷ ಸಹಿತ ಎಲ್ಲ ಹಂತಗಳಲ್ಲೂ ಹಲವು ರೀತಿಯ ಅಪಸವ್ಯಗಳು ನಡೆಯುತ್ತಿವೆ. ಪ್ರೇಕ್ಷಕರಿಗೆ ಮುಜುಗರ ಆಗುವ ರೀತಿಯಲ್ಲಿ ರಂಗಸ್ಥಳದಲ್ಲಿ ವರ್ತಿಸುವುದು ಸರಿಯಲ್ಲ. ವಗೆನಾಡುವಿನಲ್ಲಿ ನಡೆದ ಘಟನೆಯ ಬಗ್ಗೆ ಕಲಾವಿದರು ಸ್ಪಷ್ಟನೆಯನ್ನು ನೀಡಿದ್ದಾರೆ. ಹೀಗಾಗಿ ಇದನ್ನು ದೊಡ್ಡ ಮಟ್ಟಿನ ಅಪರಾಧ ಎಂದು ಬಿಂಬಿಸುವುದು ಬೇಡ. ಆದರೆ, ಯಕ್ಷಗಾನದೊಳಗೆ ಕೆಲವೊಂದು ಅನಪೇಕ್ಷಿತ ಬೆಳವಣಿಗೆಗಳು ಮುಂದೆ ನಡೆಯಬಾರದು.
ಸುರೇಂದ್ರ ಪಣಿಯೂರು, ಯಕ್ಷಗಾನ ಭಾಗವತರು, ವಿಮರ್ಶಕರು

ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next