Advertisement
ಕಾಲ ಯಾವುದಾದರೇನು, ಒಲೆ ಉರಿಯಲೇಬೇಕು ತಾನೆ? ಮಳೆಗಾಲಕ್ಕೆಂದು ಸೌದೆ, ತೆಂಗಿನ ಗರಿಗಳನ್ನೆಲ್ಲಾ ಸಂಗ್ರಹಿಸಿ ಇಟ್ಟದ್ದು ಆಯ್ತು, ಅದು ಅದರಷ್ಟಕ್ಕೆ ಅತಿಯಾದ ಗಾಳಿ- ಮಳೆಗೆ ಥಂಡಿ ಹಿಡಿದದ್ದೂ ಆಯ್ತು. ಅದನ್ನು ಉರಿಸಿ ಅಡುಗೆ ಮಾಡುವ ಮಹಿಳೆಯರ ಪಾಡು, ಅವಳಿಗಷ್ಟೇ ತಿಳಿದ ಹಾಡು. ಮಳೆಗಾಲದ ಸುಂದರವಾದ ಹಿತವಾದ ಬೆಳಗನ್ನು ಆಸ್ವಾದಿಸುತ್ತಾ¤ ಒಂದು ನಿಮಿಷ ನಿಲ್ಲೋಣವೆಂದರೆ ಒಲೆಗೆ ಬೆಂಕಿ ಹಿಡಿಸುವ ಕಸುಬು ನಮ್ಮನ್ನು ಸೆಳೆದು ಬಿಡುತ್ತದೆ. ಹೌದು, ಬೆಂಕಿ ಮಾಡುವುದೂ ಒಂದು ರೀತಿಯ ತಲ್ಲೀನತೆ. ಅದೊಂದು ಕಲೆ. ತುಂಬಾ ನಿಧಾನ ವಿಧಾನದಲ್ಲಿ ಚಾಕಚಕ್ಯತೆಯಿಂದ ಒಲೆ ಉರಿಸಬೇಕು. ಇಲ್ಲವೆಂದರೆ, ಒಂದೇ ಸಮನೆ ಹೊಗೆ ಹೊರಗೆ ಬಂದು ಅವಾಂತರ ಆಗಿಬಿಡುತ್ತದೆ. ಮತ್ತೆ ತಿರುಗಿ ಉರುಗಿ ಹೊತ್ತಿಸುವ ಹೊತ್ತಿಗೆ ಸಾಕಾಗಿ ಹೋಗುತ್ತದೆ. ಒಬ್ಬೊಬ್ಬರು ಒಂದೊಂದು ತೆರನಾದ ವಿಧಾನದಲ್ಲಿ ಒಲೆ ಉರಿಸುವ ಕಲೆಯನ್ನು ತಿಳಿದಿರುತ್ತಾರೆ.
Related Articles
Advertisement
ಮಹಿಳೆಯರು ಬೆಂಕಿಯ ವಿಚಾರದಲ್ಲಿ ಇನ್ನು ತುಂಬಾ ಜಾಗರೂಕತೆ ಮಾಡುವ ಎರಡು ಅತಿ ಮುಖ್ಯ ವಿಚಾರಗಳಿವೆ. ಸೀರೆ ಅಥವಾ ತೊಟ್ಟ ಯಾವುದೇ ಬಟ್ಟೆಗಳ ವಿಚಾರದಲ್ಲಿ ಒಲೆ ಬುಡದಲ್ಲಿದ್ದಾಗ ಆದಷ್ಟು ಜಾಗ್ರತೆ ವಹಿಸಬೇಕು. ಕಾರಣ, ಬಟ್ಟೆಗೆ ಬೆಂಕಿ ತಗುಲಿಬಿಡುವ ಸಾಧ್ಯತೆ ತುಂಬಾ ಹೆಚ್ಚಿರುತ್ತದೆ. ಹೀಗೆ ಬೆಂಕಿ ತಗುಲಿ ಜೀವಕ್ಕೆ ಹಾನಿಯಾದ ಹಲವಾರು ಪ್ರಸಂಗಗಳು ನಮ್ಮ ಕಣ್ಮುಂದಿವೆ. ಚಿಕ್ಕಮಕ್ಕಳನ್ನು ಒಲೆ ಹತ್ತಿರ ಒಯ್ಯದೇ ಎಚ್ಚರವಹಿಸುವುದೂ ಒಂದು ಸವಾಲೇ.
ತಮ್ಮ ನೂರಾರು ಕೆಲಸ- ಕಾರ್ಯಗಳಿಂದ ಕಲ್ಲಿನಂತಾದ ಕೈಗಳಿಂದ ಒಲೆ ಉರಿಸುವ ಕೃಷಿಮಹಿಳೆಯರ ನಿತ್ಯಗಾಥೆ ನಿಜಕ್ಕೂ ರೋಚಕ. ಈಗ ಕೃಷಿಯಲ್ಲೂ ಸಾಕಷ್ಟು ಸುಧಾರಣೆ ಕಂಡು, ನಾವು ಕೃಷಿ ಮಹಿಳೆಯರು ಮನೆಯೊಳಗಡೆ ಬಹಳಷ್ಟು ಸುಧಾರಿಸಿದ್ದೇವೆ ಎಂದರೂ ತಪ್ಪಲ್ಲ. ಕುಕ್ಕರಗಾಲಲ್ಲಿ ಕುಳಿತು ಒಲೆ ಉರಿಸುತ್ತಿದ್ದ ಕಾಲ ಬದಲಾಗಿ ತಮ್ಮ ಆಧುನಿಕ ಅಡುಗೆ ಮನೆಯ ಮೂಲೆಯಲ್ಲಿ ಅಸ್ತ್ರ ಒಲೆ ಅಥವಾ ಸಾಮಾನ್ಯ ಒಲೆಯಾದರೂ ಎಲ್ಲ ಅನುಕೂಲತೆಗಳನ್ನು ಮಾಡಿ ನಿಂತೇ ಅಡುಗೆ ಮಾಡಿ ಮುಗಿಸುತ್ತಾರೆ. ಪ್ರತಿ ಹಳ್ಳಿ ಮನೆಯಲ್ಲಿಯೂ ಗ್ಯಾಸ್ ಸೌಲಭ್ಯವಿದ್ದರೂ, ತೋಟದಲ್ಲಿ ಬೇಕಾದಷ್ಟು ಸೌದೆಗಳು ಸಿಗುವಾಗ ಇದೇ ಉತ್ತಮವೆಂಬ ಅನಿಸಿಕೆ ಹಳ್ಳಿಯ ಹೆಣ್ಣುಮಕ್ಕಳಲ್ಲಿ ಈಗಲೂ ಇದೆ. ಕೃಷಿಯಲ್ಲಿ ಸಿಗುವ ಅಲ್ಪ ಲಾಭವನ್ನು ದುಬಾರಿ ಒಲೆಗೆ ತೆತ್ತು ಬಿಡುವ ಜಾಯಮಾನ ನಮ್ಮ ಹಳ್ಳಿ ಹೆಣ್ಮಕ್ಕಳಲ್ಲಿ ಇಲ್ಲ. ಹಾಗಾಗಿ, ಸೌದೆ ಒಲೆ ಉರಿಸುವುದಕ್ಕೆ ಎಲ್ಲರೂ ಒಗ್ಗಿ ಹೋಗಿದ್ದಾರೆ.
ಪಟ್ಟಣದಿಂದ ವರುಷಕೊಮ್ಮೆ ಬರುವ ಅಕ್ಕನಿಗೂ, ತವರಲ್ಲಿ ಕೆಂಡದಲ್ಲಿ ಸುಟ್ಟ ಗೇರುಬೀಜ ತಿನ್ನಲೇಬೇಕು. ಧಾವಂತದ ಬದುಕಿನ ಸದ್ಯದ ಬದುಕಿನಲ್ಲಿ ಒಲೆಯಲ್ಲಿ ಅಡುಗೆ ಮಾಡುವುದನ್ನು ಮರೆತರೂ ಅದರಲ್ಲಿ ಮಾಡಿದ ತಿಂಡಿ ತಿನಿಸುಗಳ ರುಚಿಯನ್ನು ಮಾತ್ರ ಯಾರೂ ಮರೆತಿರಲಿಕ್ಕಿಲ್ಲ. ಮಣ್ಣಿನ ಪಾತ್ರೆಗಳಲ್ಲಿ, ಬಳಪದ ಕಾವಲಿಗಳಲ್ಲಿ ಮಾಡಿದ ತಿಂಡಿಯ ರುಚಿಯೇ ಹೆಚ್ಚು. ಇನ್ನು ಕೆಲವು ತಿಂಡಿ- ತಿನಿಸುಗಳು ಒಲೆಯಲ್ಲಿಯೇ ಕಡ್ಡಾಯವಾಗಿ ಮಾಡುವಂಥದ್ದು. ಏನೇ ಇರಲಿ, ಬದಲಾದ ಜಮಾನದಲ್ಲಿ ಇದನ್ನೆಲ್ಲ ಒಲೆಯಲ್ಲಿ ಮಾಡಿಕೊಟ್ಟರೆ ತಿಂದೇನು, ಮಾಡಿ ತಿನ್ನಲಾರೆನು ಎನ್ನುವವರೇ ಜಾಸ್ತಿ. ಹಳ್ಳಿಯ ಕೃಷಿಕ ಹುಡುಗನನ್ನು ಮದುವೆಯಾಗಲು ಈ ಕಾಲದಲ್ಲಿ ಯಾರೂ ತಯಾರಿಲ್ಲ. ಅಂಥದ್ದರಲ್ಲಿ ಒಲೆಯಲ್ಲಿ ಅಡುಗೆ ಮಾಡಲು ತಯಾರಿರುವರೇ?
ನಮ್ಮ ಮಹಿಳೆಯರ ಸ್ಥಿತಿ ಹೇಗಿದೆಯೆಂದರೆ, ಒಲೆ ಹತ್ತಿರ ಕೂತು ಮನೆಮಂದಿಗೆಲ್ಲ ರೊಟ್ಟಿ ತಟ್ಟುವುದರಲ್ಲೇ ಮಗ್ನವಾಗಿದೆ. ಇಡೀ ಜಗತ್ತಿಗೆ ಅನ್ನ ನೀಡುವ ಕೃಷಿಕ ಕುಟುಂಬ ಒಂದು ತಕ್ಕಡಿಯಲ್ಲಾದರೆ ಇನ್ನೊಂದು ಕಡೆಯಲ್ಲಿ ಫ್ಲಾಟ್‌ನಲ್ಲಿ ರೆಡಿಮೇಡ್ ರೊಟ್ಟಿ ತಂದು ತಿನ್ನುವ ಕುಟುಂಬ. ಇವೆಲ್ಲ ಯಾವಾಗ ಸಮತೋಲನ ಕಾಯ್ದುಕೊಳ್ಳುತ್ತದೋ? ಬೆಳೆದ ಭತ್ತ ಅಕ್ಕಿಯಾಗಿ, ಅಕ್ಕಿ ಅನ್ನವಾಗುವ ಅಮೃತ ಘಳಿಗೆಯ ಮಧ್ಯದಲ್ಲಿ ಎಷ್ಟೊಂದು ವಿಚಾರಗಳಿವೆ. ಇದನ್ನೆಲ್ಲ ತಿಳಿದವರಾರೂ ಒಲೆಯೂದುವ ಬಗ್ಗೆ ಖಂಡಿತಾ ಚಕಾರವೆತ್ತಲಾರರು. ಮಹಿಳೆಯರು ಮಾಡಬೇಕಾದದ್ದೇನೆಂದರೆ, ತಮ್ಮ ಕನಸು- ಕನವರಿಕೆಗಳನ್ನು ನಾವು ಮಾಡುವ ಬೆಂಕಿಯೊಂದಿಗೆ ಉರಿದು ಬೂದಿಯಾಗಲು ಬಿಡದೇ ತಮ್ಮ ಅಸ್ಮಿತೆಯನ್ನು ಉಳಿಸಿಕೊಳ್ಳುವ ಸಲುವಾಗಿಯೂ ಯೋಚಿಸಬೇಕು. ಉರಿಸಿದ ಬೆಂಕಿ ಜ್ಯೋತಿಯಾಗಿ ಜೀವನವನ್ನು ಬೆಳಗುವ ದಾರಿದೀಪವಾಬೇಕು.
ಒಲೆ ಅಡುಗೆಗಳೆಲ್ಲ ಅತ್ತೆಯ ಪಾಲಿಗೆ..!ಒಮ್ಮೆ ಹೀಗಾಯಿತು. “ನಾನು ರೈತಾಪಿ ಕುಟುಂಬಕ್ಕೆ ಸೊಸೆಯಾಗಿ ಹೋಗುವೆನು. ಆದರೆ, ಒಲೆಯಲ್ಲಿ ಅಡುಗೆ ಮಾಡಲು ನನ್ನಿಂದಾಗಲ್ಲಪ್ಪಾ…’ ಎಂದು ಪಟ್ಟು ಹಿಡಿದು ಕುಳಿತಿದ್ದಳು ಒಬ್ಬ ಹುಡುಗಿ. ಕೊನೆಗೂ ಪಟ್ಟಣದ ಪುಟ್ಟ ಸಿಗಲಿಲ್ಲ. ಹಳ್ಳಿ ಹೈದನನ್ನೇ ಕೈ ಹಿಡಿದು ಹೋದಾಗ ಅಲ್ಲಿ ಒಲೆ ಉರಿಸಲು ಇತ್ತೆನ್ನಿ. ಏನೇ ಆದರೂ ಹಠ ಬಿಡಲೊಲ್ಲದ ನೈಲ್ ಪಾಲೀಶ್ ಹುಡುಗಿ ಗ್ಯಾಸ್ ಮತ್ತು ಮೈಕ್ರೋ ಓವನ್‌ನಲ್ಲೇ ಮಶ್ರೂಮ್ ಮಂಚೂರಿ ಮಾಡುತ್ತಾಳಂತೆ. ಒಲೆಯ ಅಡುಗೆಗಳೆಲ್ಲ ಅತ್ತೆಯ ಪಾಲಿಗೆ ಎಂದು ಗತ್ತಿನಿಂದ ಹೇಳುತ್ತಾಳೆ. ಆಧುನೀಕತೆ ಬಂದರೂ ಕೆಲವು ವಿಚಾರಗಳಿಗೆ ಮತ್ತು ಪರಿಸ್ಥಿತಿಗಳಿಗೆ ನಾವು ರಾಜಿಯಾಗಲೇಬೇಕಾಗುತ್ತದೆ. ಇಲ್ಲದಿದ್ದರೆ ಇತರರ ಬಾಯಿಮಾತಿಗೂ ಗುರಿಯಾಗಬೇಕಾಗುತ್ತದೆ. ಸಂಗೀತಾ ರವಿರಾಜ್