Advertisement

ಹುಲಸೂರು ಇನ್ನು ನೂತನ ತಾಲೂಕು

04:12 PM Mar 15, 2018 | |

ಬಸವಕಲ್ಯಾಣ: ಕೇವಲ 18 ಗ್ರಾಮಗಳುಳ್ಳ ಮತ್ತು ರಾಜ್ಯದ ಅತಿ ಚಿಕ್ಕ ನೂತನ ಹುಲಸೂರು ತಾಲೂಕು ಮಾರ್ಚ್‌ 15ರಂದು ಉದ್ಘಾಟನೆಯಾಗಲಿದೆ. ತಾಲೂಕಿನ ಚಿತ್ರಣ: ಬಸವಕಲ್ಯಾಣ ತಾಲೂಕಿನಲಿದ್ದ ಹುಲಸೂರ ಇನ್ಮುಂದೆ ತಾಲೂಕು ಕೇಂದ್ರವಾಗಿ ಸ್ವತಂತ್ರವಾಗಿ ಕಾರ್ಯಭಾರ ನಡೆಸಲಿದೆ. ಆದರೆ ಬಸವಕಲ್ಯಾಣ ವಿಧಾನಸಭಾ ಕೇತ್ರದಲ್ಲಿಯೇ ಮುಂದುವರಿಯಲಿದೆ. 7 ಗ್ರಾಪಂ ಕೇಂದ್ರಗಳು, 5 ವಾಡಿ, 3 ತಾಂಡಾ ಸೇರಿ ಒಟ್ಟು 18 ಗ್ರಾಮಗಳು ವ್ಯಾಪ್ತಿಗೆ ನೂತನ ಹುಲಸೂರ ತಾಲೂಕಿನ ಒಳಪಡಲಿವೆ. 2011ರ ಜನಗಣತಿ ಪ್ರಕಾರ ಇಲ್ಲಿ ಒಟ್ಟು 47077 ಜನಸಂಖ್ಯೆ ಇದೆ. ಇದರಲ್ಲಿ 25425 ಜನ ಪುರುಷ, 21652 ಜನ ಮಹಿಳೆಯರಿದ್ದಾರೆ.

Advertisement

ಹೋರಾಟ: ತಾಲೂಕು ರಚನೆಗಾಗಿ 2000ನೇ ಡಿಸೆಂಬರನಲ್ಲಿ ಪ್ರಥಮಬಾರಿಗೆ ಗ್ರಾಮದ ಶ್ರೀ ಗುರುಬಸವೇಶ್ವರ ಸಂಸ್ಥಾನ ಮಠದಲ್ಲಿ ಶ್ರೀ ಶಿವಾನಂದ ಮಹಾಸ್ವಾಮೀಜಿ ನೇತೃತ್ವದಲ್ಲಿ ಸಭೆ ನಡೆಸಿದ ಗ್ರಾಮದ ಪ್ರಮುಖರು ಹೋರಾಟ ಆರಂಭಿಸಿದ್ದರು. ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸರ್ಕಾರಕ್ಕೆ ಸುಮಾರು 28 ಸಾವಿರಕ್ಕೂ ಅಧಿಕ ಮನವಿ ಪತ್ರ ಸಲ್ಲಿಸಲಾಗಿತ್ತು. ಇದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದಾಗ ಕಾನೂನು ಹೋರಾಟಕ್ಕಿಳಿದ ಹೋರಾಟಗಾರರು, ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಸರ್ಕಾರಕ್ಕೆ ನಿರ್ದೇಶನ ಕೊಡಿಸುವಲ್ಲಿ ಸಫಲರಾಗಿದ್ದರು.

ವಿಶೇಷ ತಿದ್ದುಪಡಿ: ರಾಜ್ಯದಲ್ಲಿ ಹಿಂದೆ ಬಿಜೆಪಿ ಸರ್ಕಾರದ ಕೊನೆ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ ಶಟ್ಟರ ಅವರು ರಾಜ್ಯದಲ್ಲಿ 43 ಹೊಸ ತಾಲೂಕು ಘೋಷಣೆ ಮಾಡಿದರು. ಆದರೆ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್‌ ಸರ್ಕಾರ ಹೊಸ ತಾಲೂಕು ರಚನೆ ವೇಳೆ ಕಡಿಮೆ ಹಳ್ಳಿಗಳು ಇವೆ ಎನ್ನುವ ಕಾರಣದಿಂದ ಹುಲಸೂರ ತಾಲೂಕು ರಚನೆ ಕೈಬಿಟ್ಟಿತ್ತು. ಇದರಿಂದ ಆಘಾತಕ್ಕೆ ಒಳಗಾದ ಹೋರಾಟ ಸಮಿತಿ ಪ್ರಮುಖರು ಮತ್ತು ಜನರ ಭಾವನೆ ಅರ್ಥ ಮಾಡಿಕೊಂಡ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಕಾಂಗ್ರೆಸ್‌ ಮುಖಂಡ ಬಿ.ನಾರಾಯಣರಾವ ಸೇರಿದಂತೆ ಕೆಲ ಮುಖಂಡರು ಮುಖ್ಯಮಂತ್ರಿ ಸಿದ್ರಾಮಯ್ಯ ಅವರ ಮನವೊಲಿಸಿ ನಿಯಮಕ್ಕೆ ವಿಶೇಷ ತಿದ್ದುಪಡಿಗೊಳಿಸುವ ಮೂಲಕ ಹುಲಸೂರಗೆ ತಾಲೂಕು ಪಟ್ಟ ಕಟ್ಟುವಲ್ಲಿ ಯಶಸ್ವಿಯಾದರು.

ವಿಧಾನಸಭಾ ಕ್ಷೇತ್ರ: ಸ್ವಾತಂತ್ರ್ಯ ನಂತರ·ಭಾಲ್ಕಿ-ಹುಲಸೂರ ಜಂಟಿ ವಿಧಾನ ಕ್ಷೇತ್ರವಾಗಿತ್ತು. 1956ರಲ್ಲಿ ಭಾಷಾವಾರು ಪ್ರಾಂತ ರಚನೆ ಆದ ಬಳಿಕ ಪ್ರಥಮ ಬಾರಿಗೆ ಹುಲಸೂರು ಪ್ರತ್ಯೇಕ ವಿಧಾನಸಭೆ ಕ್ಷೇತ್ರವಾಗಿ ರಚನೆಯಾಯಿತು. ಆದರೆ 2004ರಲ್ಲಿ ಕ್ಷೇತ್ರ ಮರು ವಿಂಗಡಣೆ ವೇಳೆ ಹುಲಸೂರ ವಿಧಾನಸಭೆ ಕ್ಷೇತ್ರ ರದ್ದುಗೊಳಿಸಿ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರದಲ್ಲಿ ವಿಲೀನಗೊಳಿಸಲಾಯಿತು. 

ಆರಂಭದ ಎರಡು ಅವಧಿಗೆ ಸಾಮಾನ್ಯವಾಗಿದ್ದ ಈ ವಿಧಾನಸಭೆ ಕ್ಷೇತ್ರ, 1967ರಲ್ಲಿ ಮೀಸಲು ಕ್ಷೇತ್ರವಾಗಿ ರಚನೆಯಾಯಿತು. ಮಾಧಾವರಾವ ಜವಳಗೇಕರ್‌ (1956), ಬಾಪುರಾವ ಪಾಟೀಲ ಹುಲಸೂರಕರ್‌ (1962), ಪ್ರಭುರಾವ ಜಗದಾಳೆ (1967), ಮಹೇಂದ್ರಕುಮಾರ (1972), ಮದನಲಾಲ್‌ (1978), ರಾಮಚಂದ್ರ ವೀರಪ್ಪ (1983), ಶಿವಕಾಂತಾ ಚತುರೆ(1985), ಮಹೇಂದ್ರಕುಮಾರ (1989), ಎಲ್‌.ಕೆ. ಚೌಹಾಣ(1994), ರಾಜೇಂದ್ರ ವರ್ಮಾ (1999) ಹಾಗೂ (2004)  ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಾಪುರಾವ ಪಾಟೀಲ ಹುಲಸೂರಕರ್‌ ಉಪಸಭಾಪತಿ ಹುದ್ದೆ ಅಲಂಕರಿಸಿದರೆ, ಶಿವಕಾಂತಾ ಚತುರೆ ಅವರು ಸಚಿವೆಯಾಗಿ ಅಧಿಕಾರಿ ನಡೆಸಿದ್ದಾರೆ. 

Advertisement

ಹಬ್ಬದ ವಾತಾವರಣ: ತಾಲೂಕು ಕೇಂದ್ರವಾಗಿ ಕಾರ್ಯರಂಭ ಮಾಡಲಿರುವ ಹುಲಸೂರ ಜನರಲ್ಲಿ ಹರ್ಷ ಮನೆ ಮಾಡಿದೆ. ಗ್ರಾಮದಾದ್ಯಂತ ಹಬ್ಬದ ವಾತಾವರಣ ನಿರ್ಮಾಣಗೊಂಡಿದೆ. ನೂತನ ತಾಲೂಕು ರಚನೆಗೆ ಸ್ವಾಗತ ಕೋರುವ ಕಟೌಟ್‌ಗಳು ಗ್ರಾಮದೆಲ್ಲೆಡೆ ರಾರಾಜಿಸುತ್ತಿವೆ. ಅಂಗಡಿ ಮುಂಗಟ್ಟು, ಗುಡಿ-ಗುಂಡಾರ, ಶಾಲಾ ಕಾಲೇಜು ಮತ್ತು ಮನೆಗಳ ಮೇಲೆ ವಿದ್ಯುತ್‌ ದೀಪಾಲಂಕಾರ ಮಾಡಲಾಗಿದೆ.
 
ಮಾ. 15ರಂದು ಮಧ್ಯಾಹ್ನ 3:00ಕ್ಕೆ ಗ್ರಾಮದ ಗಾಂಧಿ  ವೃತ್ತದಲ್ಲಿರುವ ನೂತನ ತಹಶೀಲ್ದಾರ್‌ ಕಚೇರಿ ಆವರಣದಲ್ಲಿ ನೂತನ ತಾಲೂಕು ಕಾರ್ಯರಂಭಕ್ಕೆ ಚಾಲನೆ ನೀಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಉದ್ಘಾಟಿಸಲಿದ್ದಾರೆ. ಶಾಸಕ ಮಲ್ಲಿಕಾರ್ಜುನ ಖೂಬಾ ಅಧ್ಯಕ್ಷೆ ವಹಿಸಲಿದ್ದು, ಸಂಸದ ಭಗವಂತ ಖೂಬಾ, ಶಾಸಕರಾದ
ರಾಜಶೇಖರ ಪಾಟೀಲ ಹುಮನಾಬಾದ, ರಹೀಮ್‌ ಖಾನ್‌, ಪ್ರಭು ಚೌಹಾಣ, ಅಶೋಕ ಖೇಣಿ, ವಿಧಾನ ಪರಿಷತ್‌ ಸದಸ್ಯ ವಿಜಯ ಸಿಂಗ್‌, ಅಮರನಾಥ ಪಾಟೀಲ, ರಘುನಾಥ ಮಲ್ಕಾಪೂರೆ, ಶರಣಪ್ಪ ಮಟ್ಟೂರ, ಜಿಲ್ಲಾ ಧಿಕಾರಿ ಡಾ| ಮಹಾದೇವ ಪ್ರಸಾದ, ಸಹಾಯಕ ಆಯುಕ್ತ ಶರಣಬಸಪ್ಪ ಕೊಟ್ಟಪ್ಪಗೋಳ, ಜಿಪಂ ಅಧ್ಯಕ್ಷೆ ಭಾರತಬಾಯಿ ಶೇರಿಕಾರ, ಉಪಾಧ್ಯಕ್ಷ ಡಾ| ಪ್ರಕಾಶ ಪಾಟೀಲ, ಜಿಪಂ ಸದಸ್ಯ ಸುಧಿಧೀರ ಕಾಡಾದಿ, ತಾಪಂ ಅಧ್ಯಕ್ಷೆ ಯಶೋಧಾ ನೀಲಕಂಠ ರಾಠೊಡ, ತಾಪಂ ಸದಸ್ಯ ಗೋವಿಂದರಾವ ಸೋಮೊಂಶಿ, ಗ್ರಾಪಂ ಅಧ್ಯಕ್ಷೆ ಮಂಗಲಾಬಾಯಿ ಡೋಣಗಾವಕರ್‌ ಸೇರಿದಂತೆ ಜನಪ್ರತಿನಿಧಿಗಳು, ಗಣ್ಯರು, ಅಧಿಕಾರಿಗಳು ಭಾಗವಹಿಸುವರು

ಹುಲಸೂರ ತಾಲೂಕು ರಚನೆ ಆಗಿರುವುದು ಸಂತಸ ತಂದಿದೆ. ಆದರೆ ನೂತನ ತಾಲೂಕಿಗೆ ಕೇವಲ 18 ಗ್ರಾಮಗಳು ಸೇರ್ಪಡೆ ಮಾಡಿರುವುದು ಬೇಸರ ತರಿಸಿದೆ. ಕನಿಷ್ಠ 50 ಹಳ್ಳಿಗಳನ್ನಾದರೂ ಸೇರಿಸಲು ಕ್ರಮ ಕೈಗೊಳ್ಳಬೇಕು.  ಶ್ರೀ ಶಿವಾನಂದ ಸ್ವಾಮೀಜಿ, ಹೋರಾಟ ಸಮಿತಿ ಅಧ್ಯಕ್ಷರು ನೂತನ ತಾಲೂಕು ರಚನೆಗೆ ಕನಿಷ್ಠ 50 ಹಳ್ಳಿ ಹಾಗೂ 1 ಲಕ್ಷ ಜನಸಂಖ್ಯೆ ಹೊಂದಿರಬೇಕು ಎನ್ನುವ ಸರ್ಕಾರದ ನಿಯಮಕ್ಕೆ ತಿದ್ದುಪಡಿ ಮಾಡಿ ಕೇವಲ 18 ಹಳ್ಳಿ ಹೊಂದಿರುವ ಹುಲಸೂರು ನೂತನ ತಾಲೂಕು ರಚನೆ ಮಾಡಿರುವುದು ಸ್ವಾಗತಾರ್ಹ. ಅದೇ ರೀತಿ ಇಲ್ಲಿ ಪಟ್ಟಣ ಪಂಚಾಯಿತಿ ಸ್ಥಾಪಿಸುವ ಬದಲು ಅಭಿವೃದ್ಧಿ ದೃಷ್ಟಿಯಿಂದ ಪುರಸಭೆ ಕಚೇರಿ ಸ್ಥಾಪಿಸಬೇಕು.
 ಮಲ್ಲಪ್ಪ ಧಬಾಲೆ, ಜಿಪಂ ಮಾಜಿ ಸದಸ್ಯರು

ನೂತನ ಹುಲಸೂರ ತಾಲೂಕಿಗೆ ಹತ್ತಿರ ವಿರುವ ಭಾಲ್ಕಿ ಹಾಗೂ ಹುಮನಾಬಾದ ತಾಲೂಕಿನ ಗ್ರಾಮಗಳನ್ನು
ಸೇರಿಸುವ ಮೂಲಕ ಸರ್ಕಾರ ಜನರಿಗೆ ಅನುಕೂಲ ಮಾಡಿಕೊಡಬೇಕು.  
ಸುಧೀರ ಕಾಡಾದಿ, ಜಿಪಂ ಸದಸ್ಯರು ಹುಲಸೂರ

ಸುಮಾರು 18 ವರ್ಷಗಳಿಂದ ಹೋರಾಟ ನಡೆದ ಹಿನ್ನೆಲೆಯಲ್ಲಿ ಹುಲಸೂರು ತಾಲೂಕು ಘೋಷಣೆ ಮಾಡಲಾಗಿದೆ. ಹುಲಸೂರ ತಾಲೂಕಿಗೆ ಹೆಚ್ಚಿನ ಹಳ್ಳಿ ಸೇರಿಸುವಂತೆ ಒತ್ತಾಯಿಸಿ ಹೋರಾಟ ಮುಂದುವರಿಯಲಿದೆ.
 ಎಂ.ಜಿ. ರಾಜೋಳೆ, ಹೋರಾಟ ಸಮಿತಿ ಸಂಚಾಲಕ

ಉದಯಕುಮಾರ ಮುಳೆ

Advertisement

Udayavani is now on Telegram. Click here to join our channel and stay updated with the latest news.

Next