Advertisement

ಈಗ ಸೋಲು, ಗೆಲುವಿನ ಲೆಕ್ಕಾಚಾರ

02:21 PM May 14, 2018 | |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಮೈಸೂರು ಜಿಲ್ಲೆಯಲ್ಲೀಗ ಚುನಾವಣೆ ಸೋಲು-ಗೆಲುವಿನ ಲೆಕ್ಕಾಚಾರದ್ದೇ ಮಾತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲುತ್ತಾರಾ? ಇಲ್ಲಾ ಜಿ.ಟಿ.ದೇವೇಗೌಡ ಗೆಲ್ಲುತ್ತಾರಾ? ಎಂಬ ಚರ್ಚೆಗಳೇ ಎಲ್ಲೆಲ್ಲೂ ಕೇಳಿಬರುತ್ತಿವೆ.

Advertisement

ಶನಿವಾರ ಸಂಜೆ ಮತದಾನ ಮುಗಿದ ಬೆನ್ನಲ್ಲೇ ನಾಲ್ಕು ಜನ ರಾಜಕೀಯ ಆಸಕ್ತರು ಸೇರಿದ್ದಲ್ಲೆಲ್ಲಾ ಅಂತೆ ಕಂತೆಗಳ ಲೆಕ್ಕಾಚಾರದ್ದೇ ಚರ್ಚೆಯಾಗುತ್ತಿದೆ. 2013ರ ಚುನಾವಣೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿತವಾಗಿದ್ದ ಸಿದ್ದರಾಮಯ್ಯ ಅವರನ್ನು ಜಿಲ್ಲೆಯ ಕುರುಬ ಸಮುದಾಯ ಸಂಪೂರ್ಣವಾಗಿ ಕೈ ಹಿಡಿದರೆ, ಅಹಿಂದ ವರ್ಗಗಳ ಸಣ್ಣಪುಟ್ಟ ಕೋಮಿನ ಜನರೂ ಸಿದ್ದರಾಮಯ್ಯ ಬೆನ್ನಿಗೆ ನಿಂತಿದ್ದರು.

ಹೀಗಾಗಿ ಸಿದ್ದರಾಮಯ್ಯ ಜಿಲ್ಲೆಯ 11 ಕ್ಷೇತ್ರಗಳ ಪೈಕಿ ವರುಣಾ ಕ್ಷೇತ್ರದಲ್ಲಿ ತಾವು ಗೆದ್ದು, ತಿ.ನರಸೀಪುರ, ಕೃಷ್ಣರಾಜ, ನರಸಿಂಹರಾಜ, ಚಾಮರಾಜ, ನಂಜನಗೂಡು, ಹುಣಸೂರು, ಪಿರಿಯಾಪಟ್ಟಣ ಕ್ಷೇತ್ರಗಳಲ್ಲಿ ತಮ್ಮ ಸಂಗಡಿಗರನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ಚಾಮುಂಡೇಶ್ವರಿ, ಎಚ್‌.ಡಿ.ಕೋಟೆ, ಕೆ.ಆರ್‌.ನಗರ ಕ್ಷೇತ್ರಗಳು ಜೆಡಿಎಸ್‌ ಪಾಲಾಗಿದ್ದರೆ, ಬಿಜೆಪಿಯದ್ದು ಶೂನ್ಯ ಸಂಪಾದನೆಯಾಗಿತ್ತು.

ಮಂತ್ರಿಮಂಡಲದಿಂದ ತಮ್ಮನ್ನು ಕೈಬಿಟ್ಟಿದ್ದಕ್ಕೆ ಸಿಡಿದೆದ್ದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿ ಸೇರಿ ನಂಜನಗೂಡು ಕ್ಷೇತ್ರದಲ್ಲಿ ಉಪ ಚುನಾವಣೆ ಎದುರಿಸಿದ ವಿ.ಶ್ರೀನಿವಾಸಪ್ರಸಾದ್‌ ಅವರನ್ನು ಮಣಿಸಿ, ಕಳಲೆ ಎನ್‌.ಕೇಶವಮೂರ್ತಿ ಅವರನ್ನು ಗೆಲ್ಲಿಸಿಕೊಂಡಿದ್ದರು.

ವರುಣಾ ಕ್ಷೇತ್ರವನ್ನು ತಮ್ಮ ಪುತ್ರ ಡಾ.ಯತೀಂದ್ರ ಅವರಿಗೆ ಬಿಟ್ಟುಕೊಟ್ಟು ತಾವು ರಾಜಕೀಯ ಆರಂಭಿಸಿದ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಿರುವ ಸಿದ್ದರಾಮಯ್ಯ, ಜಿಲ್ಲೆಯಲ್ಲಿ ಕಳೆದ ಬಾರಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಎಲ್ಲರಿಗೂ ಟಿಕೆಟ್‌ ಕೊಡಿಸುವಲ್ಲಿ ಸಫ‌ಲವಾಗಿದ್ದಾರೆ.

Advertisement

ಜತೆಗೆ ಎಚ್‌.ಡಿ.ಕೋಟೆ ಕ್ಷೇತ್ರದ ಜೆಡಿಎಸ್‌ ಶಾಸಕರಾಗಿದ್ದ ಎಸ್‌.ಚಿಕ್ಕಮಾದು ಅವರ ಅಕಾಲಿಕ ಮರಣದ ಹಿನ್ನೆಲೆಯಲ್ಲಿ ಅವರ ಪುತ್ರ ಅನಿಲ್‌ ಚಿಕ್ಕಮಾದು ಅವರನ್ನು ಕಾಂಗ್ರೆಸ್‌ಗೆ ಕರೆತಂದು ಟಿಕೆಟ್‌ ಕೊಡಿಸಿ, ಚಿಕ್ಕಮಾದು ಅವರ ಸಾವಿನ ಅನುಕಂಪದ ಮೇಲೆ ಬೆಳೆ ತೆಗೆಯುವ ಪ್ರಯತ್ನ ಮಾಡಿದ್ದಾರೆ.

ಇತ್ತ ಮಾಜಿ ಸಂಸದ ಎಚ್‌.ವಿಶ್ವನಾಥ್‌ ಕೂಡ ಸಿದ್ದರಾಮಯ್ಯ ಮೇಲಿನ ಮುನಿಸಿನಿಂದ ನಾಲ್ಕು ದಶಕಗಳ ಕಾಂಗ್ರೆಸ್‌ ನಂಟು ತೊರೆದು ಜೆಡಿಎಸ್‌ ಸೇರಿ, ತಮ್ಮ ಸ್ವಕ್ಷೇತ್ರ ಕೆ.ಆರ್‌.ನಗರದ ಬದಲಿಗೆ ಹುಣಸೂರು ಕ್ಷೇತ್ರದಿಂದ ಚುನಾವಣೆ ಎದುರಿಸಿದ್ದಾರೆ. ಪಿರಿಯಾಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಕೆ.ವೆಂಕಟೇಶ್‌ ಹಾಗೂ ಜೆಡಿಎಸ್‌ನ ಕೆ.ಮಹದೇವ್‌ ಕಳೆದ ಎರಡು ಚುನಾವಣೆಗಳಿಂದ ಎದುರಾಳಿಗಳಾಗಿದ್ದಾರೆ.

ಅದರಲ್ಲೂ 2013ರಲ್ಲಿ ಚುನಾವಣೆ ಇನ್ನೊಂದು ವಾರ ಇದ್ದಾಗ ಬಿಜೆಪಿ ಅಭ್ಯರ್ಥಿ ನಿಧನರಾದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ರಚನೆಯಾದ ನಂತರ ಇಲ್ಲಿ ಚುನಾವಣೆ ನಡೆದು 2 ಸಾವಿರ ಮತಗಳ ಅಂತರದಲ್ಲಿ ಕೆ.ವೆಂಕಟೇಶ್‌ ಗೆಲುವು ಸಾಧಿಸಿದ್ದರು. ಕೃಷ್ಣರಾಜ ಕ್ಷೇತ್ರದಲ್ಲೂ ಕಾಂಗ್ರೆಸ್‌ನ ಎಂ.ಕೆ.ಸೋಮಶೇಖರ್‌, ಬಿಜೆಪಿಯ ಎಸ್‌.ಎ.ರಾಮದಾಸ್‌ ಎದುರಾಳಿಗಳಾಗಿದ್ದರು.

ನರಸಿಂಹರಾಜದಲ್ಲಿ ಕಾಂಗ್ರೆಸ್‌ನ ತನ್ವೀರ್‌ ಸೇs…ಗೆ ಎಸ್‌ಡಿಪಿಐನ ಅಬ್ದುಲ್‌ ಮಜೀದ್‌ ಈ ಚುನಾವಣೆಯಲ್ಲೂ ಎದುರಾಳಿ, ಕಳೆದ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿದ್ದ ಸಂದೇಶ್‌ ಸ್ವಾಮಿ, ಈಗ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದರು. ಇನ್ನು ಕೆ.ಆರ್‌.ನಗರ ಕ್ಷೇತ್ರದಲ್ಲಿ ಹ್ಯಾಟ್ರಿಕ್‌ ಕನಸು ಕಂಡಿರುವ ಜೆಡಿಎಸ್‌ನ ಸಾ.ರಾ.ಮಹೇಶ್‌ಗೆ ಕಳೆದ ಬಾರಿ ದೊಡ್ಡಸ್ವಾಮಿಗೌಡ ಎದುರಾಳಿಯಾಗಿದ್ದರೆ, ಈ ಬಾರಿ ಅವರ ಪುತ್ರ ಜಿಪಂ ಸದಸ್ಯ ಡಿ.ರವಿಶಂಕರ್‌ ಎದುರಾಳಿ.

ನಂಜನಗೂಡಿನಲ್ಲಿ ಕಾಂಗ್ರೆಸ್‌ನ ಕಳಲೆ ಕೇಶವಮೂರ್ತಿ ವಿರುದ್ಧ ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿರುವ ವಿ.ಶ್ರೀನಿವಾಸಪ್ರಸಾದ್‌, ತಮ್ಮ ಅಳಿಯ ಹರ್ಷವರ್ಧನ್‌ರನ್ನು ಕಣಕ್ಕಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೀಲಿಗಣ್ಣಿನ ಹುಡುಗ ಎಂದೇ ಬಿಂಬಿತರಾದ ಎಚ್‌.ಪಿ.ಮಂಜುನಾಥ್‌ಗೆ ಎಚ್‌.ವಿಶ್ವನಾಥ್‌ ಎದುರಾಳಿಯಾಗಿದ್ದರು.

ಬೆಟ್ಟಿಂಗ್‌ ಭರಾಟೆ: ಮತದಾನ ಮುಗಿದ ಬೆನ್ನಲ್ಲೇ ಯಾವ ಕ್ಷೇತ್ರದಲ್ಲಿ ಯಾರು ಗೆಲ್ಲುತ್ತಾರೆ? ಎಷ್ಟು ಮತಗಳ ಅಂತರದಿಂದ ಗೆಲ್ಲುತ್ತಾರೆ? ಎಂಬ ಬಗ್ಗೆ ಬೆಟ್ಟಿಂಗ್‌ ಜೋರಾಗಿ ನಡೆಯುತ್ತಿದೆ. ಜಿಲ್ಲೆಯ ಉಳಿದ ಕ್ಷೇತ್ರಗಳಿಗಿಂತ ಚಾಮುಂಡೇಶ್ವರಿಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವೆ ಬೆಟ್ಟಿಂಗ್‌ ಭರಾಟೆ ಜೋರಾಗಿದೆ.

ಅಭ್ಯರ್ಥಿಗಳ ಲೆಕ್ಕಾಚಾರ ಏನು?: ಕಳೆದ ಒಂದೂವರೆ ತಿಂಗಳಿನಿಂದ ಬೇಸಿಗೆಯ ಉರಿ ಬಿಸಿಲನ್ನೂ ಲೆಕ್ಕಿಸದೆ ತಂತಮ್ಮ ಕ್ಷೇತ್ರಗಳ ಹಳ್ಳಿಗಳನ್ನು ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೂರ್‍ನಾಲ್ಕು ಬಾರಿ ಸುತ್ತಿದ್ದ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮತದಾನ ಮುಗಿದ ಹಿನ್ನೆಲೆಯಲ್ಲಿ ವಿಶ್ರಾಂತಿಯ ಮೊರೆ ಹೋಗಿದ್ದಾರೆ.

ವಿಶ್ರಾಂತಿಯ ನಡುವೆಯೂ ತಮ್ಮ ಆಪ್ತರೊಂದಿಗೆ ಕ್ಷೇತ್ರದ ಶೇಕಡಾವಾರು ಮತದಾನದ ಮೇಲೆ ಯಾವ ಬೂತ್‌ನಲ್ಲಿ ನಮಗೆಷ್ಟು ಮತ ಬಂದಿರಬಹುದು? ಎದುರಾಳಿಗೆ ಎಷ್ಟು ಮತ ಹೋಗಿರಬಹುದು? ಯಾವ ಗ್ರಾಮದಲ್ಲಿ ಯಾವ ಮುಖಂಡರು ಕೈ ಕೊಟ್ಟರು? ಯಾವ ಸಮುದಾಯ ಕೈ ಹಿಡಿಯಿತು?

ಯಾವ ಸಮುದಾಯದವರು ಕೈ ಕೊಟ್ಟರು? ಯಾವ್ಯಾವ ವಿಚಾರಗಳು ನಮ್ಮ ಕೈ ಹಿಡಿಯಿತು ಎಂಬ ಲೆಕ್ಕಾಚಾರದಲ್ಲಿ ಮುಳುಗಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿದ್ರೆ ಮಾಡಿ ರಿಲ್ಯಾಕ್ಸ್‌ ಮಾಡುವುದಾಗಿ ಹೇಳಿದರೆ, ಅವರ ಎದುರಾಳಿ ಜಿ.ಟಿ.ದೇವೇಗೌಡ ಅವರು ವಿಶ್ರಾಂತಿಗಾಗಿ ಕೊಡಗಿಗೆ ತೆರಳಿದ್ದಾರೆ. ಇನ್ನು ಬಹುತೇಕ ಅಭ್ಯರ್ಥಿಗಳು ಕುಟುಂಬದವರೊಂದಿಗೆ ರಿಲ್ಯಾಕ್ಸ್‌ ಮೂಡ್‌ನ‌ಲ್ಲಿದ್ದಾರೆ.

ಚುನಾವಣೆ ಮುಗೀತು ನನಗ್ಯಾವ ಟೆನ್ಷನ್‌ ಇಲ್ಲ. ಆರಾಮಾಗಿ ನಿದ್ರೆ ಮಾಡುತ್ತೇನೆ. ಸಿನಿಮಾ ಅಂತೆಲ್ಲಾ ಹೋಗುವುದಿಲ್ಲ. ನಿದ್ರೆ ಮಾಡಿ ರಿಲ್ಯಾಕ್ಸ್‌ ಮಾಡ್ತೇನೆ. ಸೋಮವಾರ ಸಂಜೆ ಮತ್ತೆ ಮೈಸೂರಿಗೆ ಬರ್ತೇನೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

* ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next