ಪಾಟ್ನಾ: ಎರಡನೇ ವಿವಾಹವಾಗಲು ಬಯಸುವ ಸರ್ಕಾರಿ ನೌಕರರು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದ ನಂತರವೇ ವಿವಾಹ ಪ್ರಕ್ರಿಯೆ ಮುಂದುವರಿಸಬೇಕು ಎಂದು ಬಿಹಾರ ಸರ್ಕಾರ ಆದೇಶ ಹೊರಡಿಸಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಕಂಚಿನ ಮೂರ್ತಿಗೆ ಜೀವ ತುಂಬವ ಹನಗಂಡಿಯ ಲಾಳಕೆ ಕುಟುಂಬ
ರಾಜ್ಯ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆ ಪ್ರಕಾರ, ಎಲ್ಲಾ ಸರ್ಕಾರಿ ನೌಕರರು ತಮ್ಮ ವೈವಾಹಿಕ ವಿವರವನ್ನು ನೀಡಬೇಕು ಮತ್ತು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆದ ನಂತರವೇ ಎರಡನೇ ವಿವಾಹವಾಗಲು ಅರ್ಹರಾಗಲಿದ್ದಾರೆ ಎಂದು ವಿವರಿಸಿದೆ.
ಬಿಹಾರ ಸರ್ಕಾರದ ಅಧಿಸೂಚನೆ ಪ್ರಕಾರ, ಯಾವುದೇ ಒಬ್ಬ ಸರ್ಕಾರಿ ನೌಕರ ಎರಡನೇ ವಿವಾಹವಾಗಲು ಸಿದ್ಧತೆ ನಡೆಸಿದ್ದರೆ, ಅವರು ತಮ್ಮ ಮೊದಲ ಪತ್ನಿಗೆ ಕಾನೂನು ಪ್ರಕಾರ ವಿಚ್ಛೇದನ ಪಡೆದಿರಬೇಕು. ನಂತರ ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ತಿಳಿಸಬೇಕು ಎಂದು ಹೇಳಿದೆ.
ಒಂದು ವೇಳೆ ಸರ್ಕಾರಿ ನೌಕರನ ಪತ್ನಿ ಅಥವಾ ಪತಿ ಎರಡನೇ ವಿವಾಹಕ್ಕೆ ಆಕ್ಷೇಪ ವ್ಯಕ್ತಪಡಿಸಿದರೆ, ಪತಿ ಅಥವಾ ಪತ್ನಿಗೆ ಸರ್ಕಾರಿ ಸೌಲಭ್ಯ ನಿರಾಕರಿಸಲಾಗುತ್ತದೆ. ಒಂದು ವೇಳೆ ಸರ್ಕಾರಿ ನೌಕರ ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆಯದೇ ಎರಡನೇ ವಿವಾಹವಾಗಿ, ಸೇವಾವಧಿಯಲ್ಲೇ ಮೃತಪಟ್ಟರೆ ನೌಕರನಿಗೆ ಅಥವಾ ಆಕೆಯ ಎರಡನೇ ಪತ್ನಿ/ಪತಿ ಮತ್ತು ಅವರ ಮಕ್ಕಳಿಗೆ ಪರಿಹಾರವಾಗಲಿ, ಸರ್ಕಾರಿ ಹುದ್ದೆ ಸೌಲಭ್ಯ ದೊರೆಯುವುದಿಲ್ಲ. ಈ ಸಂದರ್ಭದಲ್ಲಿ ರಾಜ್ಯ ಸರ್ಕಾರ ಮೊದಲ ಪತ್ನಿ ಮತ್ತು ಮಕ್ಕಳಿಗೆ ಆದ್ಯತೆ ನೀಡಲಿದೆ ಎಂದು ತಿಳಿಸಿದೆ.
ರಾಜ್ಯ ಸರ್ಕಾರಿ ಆಡಳಿತಕ್ಕೊಳಪಟ್ಟ ಎಲ್ಲಾ ವಿಭಾಗೀಯ ಆಯುಕ್ತರು, ಜಿಲ್ಲಾ ಮ್ಯಾಜಿಸ್ಟ್ರೇಟರ್, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ಸ್, ಪೊಲೀಸ್ ಮಹಾ ನಿರ್ದೇಶಕರು, ಹೋಮ್ ಗಾರ್ಡ್ ಡಿಜಿಪಿ, ಜೈಲಾಧಿಕಾರಿ ಸೇರಿದಂತೆ ತಮ್ಮ ಅಧಿಕಾರ ವ್ಯಾಪ್ತಿಯ ಎಲ್ಲಾ ಇಲಾಖೆಯಲ್ಲೂ ಈ ಅಧಿಸೂಚನೆಯನ್ನು ಜಾರಿಗೊಳಿಸುವಂತೆ ಸೂಚಿಸಿದೆ.