ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ನಾಲ್ಕು ಮಂದಿ ಶಾಸಕರು ಗೈರಾಗುವ ಜತೆಗೆ ಶಾಸಕರು ರೆಸಾರ್ಟ್ ವಾಸ್ತವ್ಯಕ್ಕೆ ಮುಂದಾಗುತ್ತಿದ್ದಂತೆ ಚುರುಕುಗೊಂಡಿರುವ ಬಿಜೆಪಿಯು ಮೈತ್ರಿ ಸರಕಾರದ ಸಂಖ್ಯಾಬಲವನ್ನು ಇಳಿಕೆ ಮಾಡುವ ಪ್ರಯತ್ನವನ್ನು ಇನ್ನಷ್ಟು ತೀವ್ರಗೊಳಿಸಲು ಸಜ್ಜಾಗಿದೆ.
ಹರಿಯಾಣದ ಗುರುಗ್ರಾಮದಲ್ಲಿ ವಾಸ್ತವ್ಯ ಹೂಡಿರುವ ಬಹುತೇಕ ಬಿಜೆಪಿ ಶಾಸಕರು ಇನ್ನೂ ಎರಡು ದಿನ ವಾಸ್ತವ್ಯ ಮುಂದುವರಿಸುವ ಸಾಧ್ಯತೆ ಇದೆ. ತುರ್ತು, ಅನಿವಾರ್ಯ ಕೆಲಸ ಕಾರ್ಯವಿದ್ದವರು ತೆರಳಿ ಕಾರ್ಯ ಪೂರ್ಣಗೊಳಿಸಿದ ಬಳಿಕ ರೆಸಾರ್ಟ್‌ಗೆ ಮರಳು ತ್ತಿದ್ದಾರೆ. ಸುಮಾರು 65 ಶಾಸಕರು ವಾಸ್ತವ್ಯ ಮುಂದು ವರಿಸಿ ದ್ದಾರೆ.
ಕಾಂಗ್ರೆಸ್‌ನ ಬಂಡಾಯ ಶಾಸಕ ರೆನ್ನಲಾದ ಬಹು ತೇಕರು ಪ್ರತ್ಯಕ್ಷವಾಗುತ್ತಿದ್ದಂತೆ ಬಿಜೆಪಿ ನಾಯಕರಲ್ಲಿ ತುಸು ಹಿಂಜರಿಕೆಇತ್ತು. ಹಾಗಿದ್ದರೂ ಶುಕ್ರವಾರದ ಕಾಂಗ್ರೆಸ್ ಶಾಸಕಾಂಗ ಸಭೆಯತ್ತ ದೃಷ್ಟಿ ನೆಟ್ಟಿತ್ತು. ದಿಢೀರ್ ಬೆಳವಣಿಗೆ ಹಿನ್ನೆಲೆಯಲ್ಲಿ ಶುಕ್ರವಾರ ಬಿಎಸ್‌ವೈ ಬೆಂಗಳೂರಿನಲ್ಲೇ ಉಳಿದರು.
ಕಾಂಗ್ರೆಸ್, ಜೆಡಿಎಸ್ ಶಾಸಕರಲ್ಲಿ ಬಿಜೆಪಿ ಗೊಂದಲ ಸೃಷ್ಟಿಸುತ್ತಿದೆ ಎಂದು ಹೇಳಿಕೆ ನೀಡಿದ್ದರು. ಶುಕ್ರವಾರ ಸಂಜೆ 5ರ ಹೊತ್ತಿಗೆ ಪ್ರತಿಕ್ರಿಯಿಸಿದ ಯಡಿಯೂರಪ್ಪ, ಕಾಂಗ್ರೆಸ್ ಮಧ್ಯಾಹ್ನ 3.30ಕ್ಕೆ ಸಭೆ ಕರೆದಿದ್ದರೂ 5 ಗಂಟೆವರೆಗೂ ಶಾಸಕರು ತೆರಳುತ್ತಿದ್ದರು. ಇದು ಕಾಂಗ್ರೆಸ್ ದುಸ್ಥಿತಿಯನ್ನು ತೋರಿಸುತ್ತದೆ. ಜತೆಗೆ ಕಾಂಗ್ರೆಸ್ ಶಾಸಕರು, ಸಚಿವರಲ್ಲಿನ ಅಸಮಾಧಾನ, ಅತೃಪ್ತಿ ಎಷ್ಟಿದೆ ಎಂಬುದು ಸ್ಪಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬದಲಾದ ಕಾರ್ಯತಂತ್ರ: ಕಾಂಗ್ರೆಸ್ ಶಾಸಕರು ರೆಸಾಟ್ìನತ್ತ ತೆರಳುವ ನಿರ್ಧಾರ ಪ್ರಕಟಿಸುತ್ತಿದ್ದಂತೆ ಬಿಜೆಪಿ ರಾಜ್ಯ ನಾಯಕರು ಕ್ರಿಯಾಶೀಲರಾದರು. ಬದಲಾದ ಸನ್ನಿವೇಶಕ್ಕೆ ತಕ್ಕಂತೆ ಕಾರ್ಯತಂತ್ರ ಬದಲಾಯಿಸಿದ ಬಿಜೆಪಿ ನಾಯಕರು ಅತ್ತ ಗುರುಗ್ರಾಮದಲ್ಲಿ ಶಾಸಕರ ವಾಸ್ತವ್ಯವನ್ನು ಒಂದೆರಡು ದಿನ ವಿಸ್ತರಿಸಲು ನಿರ್ಧರಿಸಿದರು. ಮೈತ್ರಿ ಸರ್ಕಾರದ ಸಂಖ್ಯಾಬಲ ಇಳಿಕೆ ಮಾಡುವ ಪ್ರಯತ್ನದ ಬಗ್ಗೆ ಆಶಾಭಾವನೆಯನ್ನು ಇಟ್ಟುಕೊಂಡಿರುವ ಕಮಲ ಪಕ್ಷದ ನಾಯಕರು ರಾಜಕೀಯ ತಿರುವುಗಳಿಗೆ ಪೂರಕವಾಗಿ ಪ್ರತಿತಂತ್ರ ಹೆಣೆದು ಜಾರಿಗೊಳಿಸಲು ಮುಂದಾದಂತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.