ಮಂಗಳೂರು: ಶ್ರೀರಾಮ ಸೇನಾ-ಕರ್ನಾಟಕ ವತಿಯಿಂದ ದತ್ತ ಪೀಠ ಸಂಪೂರ್ಣ ಮುಕ್ತಿಗಾಗಿ 21ನೇ ವರ್ಷದ ದತ್ತಮಾಲಾ ಅಭಿಯಾನ ಕಾರ್ಯಕ್ರಮ ನ.4ರಿಂದ ನ.10ರ ವರೆಗೆ ನಡೆಯಲಿದೆ ಎಂದು ಶ್ರೀರಾಮ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಆನಂದ್ ಶೆಟ್ಟಿ ಅಡ್ಯಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ನ.4ರಂದು ರಾಜ್ಯಾದ್ಯಂತ ಮಾಲಾಧಾರಣೆ, ನ. 7 ದತ್ತ ದೀಪೋತ್ಸವ, ನ. 9 ದತ್ತ ಪಡಿ ಸಂಗ್ರಹ, ನ.10 ಬೃಹತ್ ಶೋಭಾಯಾತ್ರೆ, ಧಾರ್ಮಿಕ ಸಭೆ, ದತ್ತಪೀಠದಲ್ಲಿ ಶ್ರೀ ಸತ್ಯ ದತ್ತ ವ್ರತ ಮತ್ತು ಶ್ರೀ ದತ್ತ ಹೋಮ ನಡೆಯಲಿದೆ.
ಕರುಣೇಶ್ವರ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ಗಾಣಗಾಪುರ ಕಂಬಳಗಿರಿ ಮಹಾರಾಜ ವಿವೇಕ ಚಿಂತಾಮಣಿ ಮಹಾರಾಜ, ಶ್ರೀರಾಮ ಸೇನಾ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಪಾಲ್ಗೊಳ್ಳಲಿದ್ದಾರೆ. ನ. 9ರಂದು ರಾತ್ರಿ 10ಕ್ಕೆ ದ.ಕ. ಜಿಲ್ಲೆಯಿಂದ 1,300 ಮಂದಿ ಮಾಲಾಧಾರಿಗಳು ಕದ್ರಿ ಮೈದಾನದಿಂದ ಹೊರಡಲಿದ್ದಾರೆ.
ಮಂಗಳೂರಿನಲ್ಲಿ ದತ್ತ ದೀಪೋತ್ಸವ ನ. 7ರಂದು ಪಿವಿಎಸ್‌ನ ಲಕ್ಷ್ಮೀನಾರಾಯಣ ದೇವಸ್ಥಾನದಲ್ಲಿ ಜರಗಲಿದೆ. ರಾಜ್ಯದ ವಿವಿಧ ಕಡೆಯಿಂದ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಬೇಡಿಕೆಗಳು: ದತ್ತಪೀಠದಲ್ಲಿರುವ ಅನಧಿಕೃತ ಇಸ್ಲಾಮಿಕ್ ಕುರುಹುಗಳನ್ನು ಮೂಲ ದರ್ಗಾಕ್ಕೆ ಸ್ಥಳಾಂತರಿಸಬೇಕು, ಹಿಂದೂ ಅರ್ಚಕರನ್ನು ಮಾತ್ರ ನೇಮಿಸಬೇಕು ಎಂದು ಆನಂದ್ ಶೆಟ್ಟಿ ಅಡ್ಯಾರ್ ಒತ್ತಾಯಿಸಿದರು. ಶ್ರೀರಾಮ ಸೇನಾ ವಿಭಾಗಾಧ್ಯಕ್ಷ ಮಧುಸೂದನ ಉರ್ವಸ್ಟೋರ್, ಜಿಲ್ಲಾಧ್ಯಕ್ಷ ಅರುಣ್ ಕದ್ರಿ ಮತ್ತಿರರು ಉಪಸ್ಥಿತರಿದ್ದರು.
ಉಡುಪಿ: 500ಕ್ಕೂ ಹೆಚ್ಚು ಕಾರ್ಯಕರ್ತರು
ಉಡುಪಿ: ದತ್ತ ಪೀಠದಲ್ಲಿ ದತ್ತಮಾಲಾ ಅಭಿಯಾನದಲ್ಲಿ ಉಡುಪಿಯಿಂದ 500ಕ್ಕಿಂತಲೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಸುದರ್ಶನ ಪೂಜಾರಿ ತಿಳಿಸಿದರು. ದತ್ತಪೀಠದಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಪ್ರಯತ್ನದ ವಿರುದ್ಧ ಹೋರಾಡುತ್ತಿದ್ದೇವೆ ಎಂದರು. ವಿಭಾಗೀಯ ಅಧ್ಯಕ್ಷ ಜಯರಾಮ ಅಂಬೆಕಲ್ಲು ಮತ್ತಿತರರು ಇದ್ದರು.