ಚಿಕ್ಕಮಗಳೂರು: ಮಳೆಯ ನಡುವೆಯೂ ರಾಜ್ಯದ ವಿವಿಧೆಡೆಗಳಿಂದ ಬಂದಿದ್ದ ಸಾವಿರಾರು ಭಕ್ತರು ದೇವಿರಮ್ಮ ಬೆಟ್ಟ ಹತ್ತಿ ದೇವಿ ರಮ್ಮನವರ ದರ್ಶನ ಪಡೆದು ಪುನೀತರಾದರು.
ದೇವಿರಮ್ಮನವರ ಜಾತ್ರಾ ಮಹೋತ್ಸವ ಅಂಗವಾಗಿ ನರಕಚತುದರ್ಶಿ ಹಿಂದಿನ ದಿನ ಬರಿಗಾಲಿನಲ್ಲಿ ದೇವಿರಮ್ಮ ಬೆಟ್ಟ ಹತ್ತಿ ದೇವಿರಮ್ಮನವರು ದರ್ಶನ ಪಡೆದು ಅಂದು ಸಂಜೆ ಬೆಟ್ಟದ ಮೇಲಿನ ದೀಪ ನೋಡಿ ದೀಪಾವಳಿ ಹಬ್ಬ ಆಚರಿಸುವುದು ಇಲ್ಲಿನ ವಾಡಿಕೆಯಾಗಿದ್ದು, ಅದರಂತೆ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸಿದ ಭಕ್ತರು ಸುರಿಯುತ್ತಿದ್ದ ಮಳೆಯ ನಡುವೆಯೂ ಐದು ಸಾವಿರ ಅಡಿ ಎತ್ತರದ ಬೆಟ್ಟವನ್ನು ಏರಿ ದೇವಿಯ ದರ್ಶನ ಪಡೆದುಕೊಂಡರು.
ಬುಧವಾರ ಸಂಜೆ ನಾಲ್ಕು ಗಂಟೆಯಿಂದ ದೇವಿರಮ್ಮನವರ ಬೆಟ್ಟ ಹತ್ತಲು ಜಿಲ್ಲಾಡಳಿತ ಮತ್ತು ದೇವಿರಮ್ಮ ದೇವಸ್ಥಾನದ ಆಡಳಿತ ಮಂಡಳಿ ಭಕ್ತರಿಗೆ ಅವಕಾಶ ಮಾಡಿಕೊಟ್ಟಿತ್ತು. ಅದರಂತೆ ಸಂಜೆ ನಾಲ್ಕು ಗಂಟೆಯಾಗುತ್ತಿದ್ದಂತೆ ಭಕ್ತರು ಬೆಟ್ಟ ಹತ್ತಲು ಆರಂಭಿಸಿ ದರು. ಪ್ರಾರಂಭದಲ್ಲಿ ಕಡಿಮೆ ಇದ್ದ ಭಕ್ತರ ಸಂಖ್ಯೆ ಕತ್ತಲಾಗುತ್ತಿದ್ದಂತೆ ಬಾರೀ ಪ್ರಮಾಣದ ಭಕ್ತರು ಬೆಟ್ಟ ಹತ್ತಲು ಆರಂಭಿಸಿದರು.
ಸಾಕಷ್ಟು ಭಕ್ತರು ರಾತ್ರಿ ವೇಳೆ ಬೆಟ್ಟ ಹತ್ತಲು ಆರಂಭಿಸಿದರು. ಬುಧವಾರ ರಾತ್ರಿ ಇಡೀ ಮಳೆಯಾಗಿದ್ದು, ಮಳೆಯ ನಡುವೆಯೂ ಕಡಿದಾದ ಬೆಟ್ಟವನ್ನು ಹತ್ತಿ ದೇವರ ದರ್ಶನ ಪಡೆದುಕೊಂಡರು.
ರಾಜ್ಯದ ಮೂಲೆ ಮೂಲೆಯಿಂದ ಬಂದ ಭಕ್ತರು ಮಲ್ಲೇನಹಳ್ಳಿಗೆ ತೆರಳಿ ಅಲ್ಲಿಂದ ಕಡಿದಾದ ಮಾರ್ಗದಲ್ಲಿ ಬರಿಗಾಲಿನಲ್ಲಿ ಮಳೆ ಯ ನಡುವೆಯೂ ಬೆಟ್ಟದ ಕಲ್ಲುಮುಳ್ಳಿನ ಹಾದಿ ಜಾರುತ್ತಿದ್ದರೂ ಯಾವುದನ್ನು ಲೆಕ್ಕಿಸದೆ. ಬೆಟ್ಟ ಹತ್ತುತ್ತಿದ್ದ ದೃಶ್ಯ ಸಾಮಾನ್ಯವಾ ಗಿತ್ತು. ಬೆಟ್ಟದ ಮೇಲೆ ಭಕ್ತರು ಕಿಕ್ಕಿರಿದು ಜಮಾಯಿಸಿದ್ದು, ಸ್ಥಳದಲ್ಲಿದ್ದ ಪೊಲೀಸರು ಭಕ್ತರನ್ನು ಸಾಲಿನಲ್ಲಿ ಕಳಿಸುತ್ತಿದ್ದ ದೃಶ್ಯಗಳು ಕಂಡು ಬಂದವೂ. ಬೆಟ್ಟದ ತುದಿಯಲ್ಲಿ ಜನದಟ್ಟಣೆಯಾಗದಂತೆ ಪೊಲೀಸ್ ಸಿಬ್ಬಂದಿ ಎಚ್ಚರ ವಹಿಸಿದ್ದರು.
ಬೆಟ್ಟಕ್ಕೆ ಹೋಗುವ ಕಾಲುದಾರಿಯುದ್ದಕ್ಕೂ ಮೊಬೈಲ್ ಟಾರ್ಚ್ಗಳ ಬೆಳಕು. ಇಡೀ ಬೆಟ್ಟದ ಮೇಲೆ ನಕ್ಷತ್ರಗಳು ಎಲ್ಲೆಂದರಲ್ಲಿ ಚೆಲ್ಲಿದಂತೆ ದೂರದಿಂದ ನೋಡುಗರಿಗೆ ಬಾಸವಾಗುತ್ತಿತ್ತು. ಮಳೆಯ ನಡುವೆಯೂ ಬೆಟ್ಟ ಏರಿದ ಭಕ್ತರು ಬೆಟ್ಟದ ತುದಿಯಲ್ಲಿದ್ದ ದೇವಿರಮ್ಮನವರ ದರ್ಶನ ಪಡೆದು ವಾಪಾಸಾದರು. ಅಲ್ಲಿಂದ ಮಲ್ಲೇನಹಳ್ಳಿ ಬಿಂಡಿಗದಲ್ಲಿರುವ ದೇವಿರಮ್ಮನವರ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.
ಇದನ್ನೂ ಓದಿ: Kotturu: ಹಸಿರು ಪಟಾಕಿ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ಮಾಮೂಲಿ ಪಟಾಕಿ ಮಾರಾಟ…