ನ್ಯೂಯಾರ್ಕ್: ವಿಶ್ವದ ನಂ.1 ಟೆನಿಸಿಗ ನೊವಾಕ್ ಜೊಕೋವಿಕ್ ಅಮೆರಿಕದ ಕೂಟಗಳಿಂದ ಹಿಂದೆ ಸರಿದಿದ್ದಾರೆ. ಕಾರಣ, ಕೋವಿಡ್-19 ವ್ಯಾಕ್ಸಿನ್ ಹಾಕಿಸಿಕೊಳ್ಳದಿರುವುದು. ಈ ಕಾರಣಕ್ಕಾಗಿ ಅವರಿಗೆ ಅಮೆರಿಕ ವೀಸಾವನ್ನು ನಿರಾಕರಿಸಲಾಗಿದೆ. ಹೀಗಾಗಿ ಇಂಡಿಯನ್ ವೆಲ್ಸ್ ಮತ್ತು ಮಯಾಮಿ ಟೆನಿಸ್ ಕೂಟಗಳಿಂದ ಅವರು ಸತತ 2ನೇ ವರ್ಷವೂ ದೂರ ಸರಿಯುವುದು ಅನಿವಾರ್ಯವಾಗಿದೆ.
ನೊವಾಕ್ ಜೊಕೋವಿಕ್ ಬದಲು ನಿಕೋಲಸ್ ಬಾಸಿಲಶ್ವಿಲಿ ಅವರಿಗೆ ಈ ಕೂಟಗಳಲ್ಲಿ ಪಾಲ್ಗೊಳ್ಳುವ ಅವಕಾಶ ಲಭಿಸಿದೆ.
ಅಮೆರಿಕ ಪ್ರವೇಶಕ್ಕೆ ವಿಶೇಷ ವೀಸಾ ನೀಡಬೇಕೆಂದು ಜೊಕೋವಿಕ್ ಕಳೆದ ತಿಂಗಳು ಅರ್ಜಿ ಸಲ್ಲಿಸಿದ್ದರು. ಕಳೆದ ಶುಕ್ರವಾರವಷ್ಟೇ ಫ್ಲೋರಿಡಾ ಸೆನೆಟರ್‌ಗಳಾದ ರಿಕ್ ಸ್ಕಾಟ್ ಮತ್ತು ಮಾರ್ಕೊ ರೂಬಿಯೊ ಅವರು ಜೊಕೋವಿಕ್ ಪರವಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅವರಿಗೆ ವಿಶೇಷ ಪತ್ರವೊಂದನ್ನು ಬರೆದಿದ್ದರು. ಇದು ಯಾವುದೇ ಪರಿಣಾಮ ಬೀರಲಿಲ್ಲ.
ವ್ಯಾಕ್ಸಿನ್ ವಿಷಯದಲ್ಲಿ ಅಮೆರಿಕ ಈಗಲೂ ಕಟ್ಟುನಿಟ್ಟಾದ ನಿಯಮವನ್ನು ಹೊಂದಿದೆ. ಕೋವಿಡ್ ಲಸಿಕೆ ಹಾಕಿಸಿಕೊಳ್ಳದ ವಿದೇಶಿಯರಿಗೆ ಪ್ರವೇಶ ನೀಡುತ್ತಿಲ್ಲ. ಈ “ಕೋವಿಡ್-19 ಎಮರ್ಜೆನ್ಸಿ” ಮೇ 11ರ ತನಕ ಜಾರಿಯಲ್ಲಿರಲಿದೆ.