Advertisement
ನೊವಾಕ್ ಜೊಕೋವಿಕ್ ಈವರೆಗೆ ಕೊರೊನಾ ಲಸಿಕೆ ಪಡೆದಿಲ್ಲ. ಆಸ್ಟ್ರೇಲಿಯದ ಕಾನೂನಿನಲ್ಲಿ ಲಸಿಕೆ ಹಾಕಿಸಿಕೊಂಡ ವಿದೇಶಿಯರಿಗೆ ಮಾತ್ರ ದೇಶ ಪ್ರವೇಶಿಸಲು ಅವಕಾಶವಿದೆ. ಈ ವರ್ಷಾರಂಭದ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡಲೆಂದು ಜೊಕೋವಿಕ್ ಆಸ್ಟ್ರೇಲಿಯ ಪ್ರವೇಶಿಸಿದ್ದರು. ಕಾನೂನು ಹೋರಾಟದಲ್ಲೂ ಅವರು ಗೆದ್ದಿದ್ದರು. ಆದರೆ ಆಸ್ಟ್ರೇಲಿಯ ಸರಕಾರ ಕಠಿನ ನಿರ್ಧಾರ ತೆಗೆದುಕೊಂಡು ಕೂಟದ ಆರಂಭದ ಹಿಂದಿನ ದಿನ ಅವರನ್ನು ದೇಶದಿಂದ ಹೊರಕಳುಹಿಸಿತ್ತು!
ಇಷ್ಟಾದರೂ ಜೊಕೋವಿಕ್ ತಮ್ಮ ನಿಲುವನ್ನು ಬದಲಿಸಿಲ್ಲ. ಆದರೆ ಆಸ್ಟ್ರೇಲಿಯದಲ್ಲಿ ಸರಕಾರ ಬದಲಾಗಿದೆ. ಆ್ಯಂಟನಿ ಅಲ್ಬನೀಸ್ ಹೊಸ ಪ್ರಧಾನಿಯಾಗಿದ್ದಾರೆ. ಅವರು ತಮ್ಮ ವಿವೇಚನೆ ಬಳಸಿ ಜೊಕೋವಿಕ್ ಮೇಲೆ ಹೇರಲಾಗಿರುವ 3 ವರ್ಷಗಳ ವೀಸಾ ನಿಷೇಧ ತೆರವು ಮಾಡುವ ಸಾಧ್ಯತೆಯಿದೆ. ಈ ಬಗ್ಗೆ ಆಸ್ಟ್ರೇಲಿಯ ಸರಕಾರದ ಕಡೆಯಿಂದ ಯಾವುದೇ ಅಧಿಕೃತ ನಿರ್ಧಾರ ಹೊರಬಿದ್ದಿಲ್ಲ. ಆದರೆ ಜೊಕೋವಿಕ್ ಪ್ರತಿಕ್ರಿಯೆ ನೀಡಿದ್ದು, “ನನ್ನ ವ್ಯವಸ್ಥಾಪಕರು ಆಸ್ಟ್ರೇಲಿಯ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದಾರೆ. ಯಾವುದೂ ಅಧಿಕೃತಗೊಂಡಿಲ್ಲ’ ಎಂದು ಹೇಳಿದ್ದಾರೆ. ಅವರು ಟ್ಯುರಿನ್‌ನಲ್ಲಿ ಎಟಿಪಿ ಫೈನಲ್ಸ್ ಕೂಟದ ಮೊದಲ ಪಂದ್ಯದಲ್ಲಿ ಗೆದ್ದ ಬಳಿಕ ವರದಿಗಾರರಿಗೆ ಈ ಹೇಳಿಕೆ ನೀಡಿದರು.