ಬೆಲ್ಗೆಡ್: ಕೊರೊನಾ ಲಸಿಕೆ ತೆಗೆದುಕೊಳ್ಳುವುದೇ ಇಲ್ಲ ಎಂದು ಶಪಥ ಮಾಡಿದಂತಿರುವ ನೊವಾಕ್ ಜೊಕೋವಿಕ್, ಮುಂಬರುವ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್‌ನಲ್ಲಿ ಆಡುವ ಅವಕಾಶ ತಪ್ಪಿದರೂ ಚಿಂತೆಯಿಲ್ಲ ಎಂದು ಹೇಳಿದ್ದಾರೆ.
ಸದ್ಯ ಗ್ರ್ಯಾನ್‌ಸ್ಲಾಮ್‌ನಲ್ಲಿ 22 ಸಿಂಗಲ್ಸ್ ಪ್ರಶಸ್ತಿ ಗೆದ್ದು, ನಡಾಲ್ ಜತೆಗೆ ಸಮಬಲ ಸಾಧಿಸಿರುವ ಅವರು ತಮ್ಮ ನಿಲುವಿನಲ್ಲಿ ಬದಲಾವಣೆಯಿಲ್ಲ ಎಂದು ತಿಳಿಸಿದ್ದಾರೆ.
“ಇದರಿಂದ ನಾನೆಂತಹ ದುಬಾರಿ ಬೆಲೆ ತೆರಬೇಕಾಗುತ್ತದೆ ಎಂದು ಗೊತ್ತಿದೆ. ನಾನು ಲಸಿಕೆ ವಿರೋಧಿಯಲ್ಲ, ನನ್ನ ದೇಹಕ್ಕೆ ಈ ಲಸಿಕೆ ಏನು ಪರಿಣಾಮ ಬೀರುತ್ತದೆ ಎನ್ನುವುದು ಗೊತ್ತಿಲ್ಲ. ಅದರಿಂದ ನನ್ನ ದೇಹದ ಮೇಲೆ ಕೆಟ್ಟ ಪರಿಣಾಮ ಉಂಟಾಗುವುದಾದರೆ, ಅದಕ್ಕೆ ನಾನು ಸಿದ್ಧನಿಲ್ಲ’ ಎಂದು ಜೊಕೋವಿಕ್ ಹೇಳಿದ್ದಾರೆ.
2022ರ ಆಸ್ಟ್ರೇಲಿಯನ್ ಓಪನ್‌ನಿಂದ ಹೊರದಬ್ಬಲ್ಪಟ್ಟ ಅನಂತರ ಜೊಕೋವಿಕ್ ನೀಡಿರುವ ಮೊದಲ ಸಂದರ್ಶನವಿದು. ಆಗ ಅವರು ಕೊರೊನಾ ಲಸಿಕೆ ಹಾಕಿಸದೇ ಕೂಟಕ್ಕೆ ತೆರಳಿದ್ದರು. ಹೀಗಾಗಿ ಅವರನ್ನು ಸರ್ಬಿಯಕ್ಕೆ ಮರಳಿಸಲಾಯಿತು. 2023ರಲ್ಲಿ ಅವರಿಗೆ ಆಸ್ಟ್ರೇಲಿಯನ್ ಓಪನ್‌ನಲ್ಲಿ ಆಡುವ ಅವಕಾಶ ಲಭಿಸಿತು. ಇದೀಗ ಫ್ರೆಂಚ್ ಓಪನ್, ವಿಂಬಲ್ಡನ್‌ನಲ್ಲಿ ಲಸಿಕೆ ಹಾಕಿಸಿಕೊಳ್ಳದಿದ್ದರೂ ಆಡಬಹುದು ಎಂಬ ನಿಯಮ ಜಾರಿ ಮಾಡಲಾಗಿದೆ. ಹಾಗಾಗಿ ಅವರು ಬಚಾವ್. ಒಂದು ವೇಳೆ ನಿಯಮ ಉಲ್ಟಾ ಆದರೆ ತಾನು ಕೂಟದಿಂದ ಹೊರಗುಳಿಯುವೆನೇ ಹೊರತು ಲಸಿಕೆಯನ್ನಂತೂ ಹಾಕಿಸಿಕೊಳ್ಳುವುದಿಲ್ಲ ಎಂದಿದ್ದಾರೆ.