ಸಿನ್ಸಿನಾಟಿ: ಖ್ಯಾತ ಟೆನಿಸಿಗ ನೊವಾಕ್ ಜೊಕೋವಿಕ್ ಅವರ ಲಸಿಕೆ ವಿವಾದ ಮುಗಿಯುವ ಲಕ್ಷಣ ಸದ್ಯಕ್ಕೆ ಗೋಚರಿಸುತ್ತಿಲ್ಲ. ಇನ್ನೂ ಕೊರೊನಾ ಸೋಂಕಿಗೆ ಯಾವುದೇ ಲಸಿಕೆ ಹಾಕಿಸಿಕೊಳ್ಳದ ಕಾರಣಕ್ಕಾಗಿ ಅವರಿಗೆ ಅಮೆರಿಕಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿಲ್ಲ.
ಹೀಗಾಗಿ ಸಿನ್ಸಿನಾಟಿಯಲ್ಲಿ ಆರಂಭವಾಗುವ ಹಾರ್ಡ್‌ಕೋರ್ಟ್ ಕೂಟದಿಂದ ಅವರು ಹಿಂದೆ ಸರಿದಿದ್ದಾರೆ.
ಇದೇ ಕಾರಣಕ್ಕಾಗಿ ಆ. 29ರಿಂದ ನ್ಯೂಯಾರ್ಕ್ ನಲ್ಲಿ ಪ್ರಾರಂಭವಾಗುವ ವರ್ಷದ ಕೊನೆಯ ಗ್ರ್ಯಾನ್ ಸ್ಲಾಮ್ ಕೂಟವಾದ ಯುಎಸ್ ಓಪನ್‌ನಲ್ಲೂ ಜೊಕೋ ಆಡುವುದು ಅನುಮಾನ ಎನ್ನಲಾಗಿದೆ.
“ಕೊರೊನಾ ಸೋಂಕು ಬಾರದಿರಲು ಲಸಿಕೆ ಹಾಕಿಸಿಕೊಳ್ಳಲು ನನಗೆ ಇಷ್ಟವಿಲ್ಲ. ಲಸಿಕೆ ಹಾಕದಿದ್ದರೆ ಕೆಲವು ಕೂಟಗಳಲ್ಲಿ ಆಡಲು ಬಿಡದಿದ್ದರೂ ನನಗೇನೂ ಚಿಂತೆಯಲ್ಲ’ ಎಂಬುದು ಜೊಕೋವಿಕ್ ಪ್ರತಿಕ್ರಿಯೆ.
ಈ ಕಾರಣಕ್ಕಾಗಿ ಈ ವರ್ಷದ ಆಸ್ಟ್ರೇಲಿಯನ್ ಓಪನ್‌ನಲ್ಲೂ ಅವರು ಆಡಿರಲಿಲ್ಲ. ಮಾತ್ರವಲ್ಲದೇ ಈ ವಾರ ಮಾಂಟ್ರಿಯಲ್‌ನಲ್ಲಿ ನಡೆದ ಕೂಟ ಸಹಿತ ಅಮೆರಿಕದಲ್ಲಿ ಈ ಹಿಂದೆ ನಡೆದ ಎರಡು ಟೂರ್ನಿಗಳಲ್ಲೂ ಪಾಲ್ಗೊಂಡಿರಲಿಲ್ಲ.