Advertisement

ನ. 1ರಿಂದ ಬೆಳಗಾವಿ-ಬೆಂಗಳೂರು ನಿತ್ಯ ರೈಲು ಸಂಚಾರ

12:55 AM Aug 18, 2019 | Sriram |

ಹುಬ್ಬಳ್ಳಿ: ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ನಿರ್ದೇಶನದಂತೆ ನ.1ರಿಂದ ಬೆಳಗಾವಿ-ಬೆಂಗಳೂರು (06526/06525) ಸೂಪರ್‌ಫಾಸ್ಟ್‌ ತತ್ಕಾಲ್ ಸ್ಪೇಷಲ್ ರೈಲನ್ನು ಪ್ರತಿದಿನ ಓಡಿಸಲು ನಿರ್ಧರಿಸಲಾಗಿದೆ.

Advertisement

ಬೆಳಗಾವಿ ಜನರಿಗೆ ಇದು ನೈಋತ್ಯ ರೈಲ್ವೆ ನೀಡುವ ಕರ್ನಾಟಕ ರಾಜ್ಯೋತ್ಸವದ ಕೊಡುಗೆಯಾಗಿದೆ. ಈ ರೈಲಿಗೆ ಜೂ.29ರಂದು ಚಾಲನೆ ನೀಡಲಾಗಿತ್ತಲ್ಲದೇ ಅ.31ರವರೆಗೆ ಪ್ರಯಾಣಿಕರ ದಟ್ಟಣೆ ಪರಿಶೀಲಿಸಲು ಓಡಿಸಲು ನಿರ್ಧರಿಸಲಾಗಿತ್ತು. ಸ್ಲೀಪರ್‌ ಕ್ಲಾಸ್‌ನಲ್ಲಿ ಶೇ.100, 2ಎಸಿ ಹಾಗೂ 3ಎಸಿಯಲ್ಲಿ ಶೇ.92 ಪ್ರಯಾಣಿಕರು ಸಂಚರಿಸುತ್ತಿರುವುದರಿಂದ ರೈಲನ್ನು ಪ್ರತಿದಿನ ಓಡಿಸಲು ನಿರ್ಧರಿಸಲಾಗಿದೆ. ನ.1ರಿಂದ ರೈಲು ಬೆಳಗಾವಿ-ಬೆಂಗಳೂರು (20654/20653) ಸೂಪರ್‌ ಫಾಸ್ಟ್‌ ರೈಲಾಗಿ ಸಂಚರಿಸಲಿದೆ. ಬೆಳಗಾವಿಯಿಂದ ಪ್ರತಿದಿನ ರಾತ್ರಿ 9 ಗಂಟೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಂಗಳೂರು ನಗರಕ್ಕೆ ಆಗಮಿಸಲಿದೆ. ಅದೇ ರೀತಿ, ಬೆಂಗಳೂರು ನಗರದಿಂದ ರಾತ್ರಿ 9 ಗಂಟೆಗೆ ಪ್ರಯಾಣ ಬೆಳೆಸುವ ರೈಲು ಮರುದಿನ ಬೆಳಗ್ಗೆ 7 ಗಂಟೆಗೆ ಬೆಳಗಾವಿ ತಲುಪಲಿದೆ.

85 ಉಪನಗರ ರೈಲ್ವೆ ನಿಲ್ದಾಣಗಳಿಗೆ ವೈಫೈ
ಹುಬ್ಬಳ್ಳಿ:
ನೈಋತ್ಯ ರೈಲ್ವೆ ವಲಯದ ಮೈಸೂರು ಡಿವಿಜನ್‌, ಕೇವಲ 75 ದಿನಗಳಲ್ಲಿ ಹಾಲ್r ನಿಲ್ದಾಣಗಳನ್ನು ಹೊರತುಪಡಿಸಿ ಎಲ್ಲ 85 ಉಪನಗರ ರೈಲು ನಿಲ್ದಾಣಗಳಲ್ಲಿ ವೈಫೈ ಬ್ರಾಡ್‌ಬ್ಯಾಂಡ್‌ ಸೌಲಭ್ಯ ಕಲ್ಪಿಸಿದೆ.

ರೈಲ್ವೆ ಸಚಿವಾಲಯ 100 ದಿನಗಳಲ್ಲಿ 4,791 ನಿಲ್ದಾಣಗಳಲ್ಲಿ ವೈಫೈ ಅಳವಡಿಸುವ ಕ್ರಿಯಾಯೋಜನೆ ಮಾಡಿತ್ತು. ಆದರೆ, ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಮಾರ್ಗದರ್ಶನದಲ್ಲಿ ಮೈಸೂರು ಡಿವಿಜನ್‌ ಕೇವಲ 75 ದಿನಗಳಲ್ಲಿ ಈ ಸಾಧನೆ ಮಾಡಿದೆ. ಇದರೊಂದಿಗೆ ಮೈಸೂರು ಡಿವಿಜನ್‌ ಬಳಕೆದಾರರಿಗೆ ವೈಫೈ ನೀಡಿದ ಭಾರತೀಯ ರೈಲ್ವೆಯ ಅಗ್ರ ಡಿವಿಜನ್‌ ಎಂಬ ಶ್ರೇಯಸ್ಸಿಗೆ ಪಾತ್ರವಾಗಿದೆ. ಪ್ರಯಾಣಿಕರು ನಿಲ್ದಾಣಗಳಲ್ಲಿ ಉಚಿತವಾಗಿ ಅರ್ಧ ಗಂಟೆ ಹೈಸ್ಪೀಡ್‌ ಇಂಟರ್‌ನೆಟ್ ಪಡೆಯ ಬಹುದಾಗಿದೆ.

ರೈಲ್ಟೆಲ್ ಬ್ರಾಡ್‌ಬ್ಯಾಂಡ್‌ ರೈಲ್ವೈರ್‌ ಮೂಲಕ ಪ್ರಯಾಣಿಕರು ವೈಫೈ ಪಡೆಯಬಹುದು. ನಿಲ್ದಾಣಗಳಲ್ಲಿ ರೈಲಿಗೆ ಕಾಯುವ ಸ್ಮಾರ್ಟ್‌ಫೋನ್‌ ಬಳಕೆದಾರರು ಸೌಲಭ್ಯ ಬಳಸಿಕೊಳ್ಳಬಹುದಾಗಿದೆ. ಇದರಿಂದ ಹೈ ರೆಸಲ್ಯೂಷನ್‌ ವಿಡಿಯೋ ವೀಕ್ಷಿಸಬಹುದು. ಅಲ್ಲದೆ, ಕಚೇರಿಯ ಆನ್‌ಲೈನ್‌ ಕಾರ್ಯಗಳನ್ನು ಮಾಡಿಕೊಳ್ಳಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Advertisement

ಜನಶತಾಬ್ದಿ ಸಮಯ ಪರಿಷ್ಕರಣೆ
ಹುಬ್ಬಳ್ಳಿ:
ಬೆಂಗಳೂರು-ಹುಬ್ಬಳ್ಳಿ (12079/12080) ಜನಶತಾಬ್ದಿ ಎಕ್ಸ್‌ಪ್ರೆಸ್‌ ರೈಲಿನ ಸಮಯವನ್ನು ಆ.18ರಿಂದ ಪರಿಷ್ಕರಣೆ ಮಾಡಲಾಗಿದೆ. ಹುಬ್ಬಳ್ಳಿಯಿಂದ ಮಧ್ಯಾಹ್ನ 2 ಗಂಟೆ ಬದಲಾಗಿ ಮಧ್ಯಾಹ್ನ 2:20ಕ್ಕೆ ಪ್ರಯಾಣ ಬೆಳೆಸಲಿದ್ದು, ಬೆಂಗಳೂರಿಗೆ ರಾತ್ರಿ 9:25ರ ಬದಲಿಗೆ ರಾತ್ರಿ 9:50ಕ್ಕೆ ತಲುಪಲಿದೆ. ಅದೇ ರೀತಿ, ಬೆಂಗಳೂರಿನಿಂದ ಬೆಳಗ್ಗೆ 6 ಗಂಟೆಗೆ ಪ್ರಯಾಣ ಆರಂಭಿಸಿ, ಮಧ್ಯಾಹ್ನ 1:25ರ ಬದಲಿಗೆ ಮಧ್ಯಾಹ್ನ 1:45ಕ್ಕೆ ಹುಬ್ಬಳ್ಳಿಗೆ ಬಂದು ಸೇರಲಿದೆ. ಆ.18ರಿಂದ ಆ.22ರವರೆಗೆ ಹಾಸನ-ಸಕಲೇಶಪುರ (06211/06212) ವಿಶೇಷ ರೈಲು ಓಡಿಸಲು ನಿರ್ಧರಿಸಲಾಗಿದ್ದು, ರೈಲು ಹಾಸನದಿಂದ ಬೆಳಗ್ಗೆ 11:45ಕ್ಕೆ ಹೊರಟು, ಮಧ್ಯಾಹ್ನ 12:50ಕ್ಕೆ ಸಕಲೇಶಪುರಕ್ಕೆ ಬಂದು ಸೇರಲಿದೆ. ಅದೇ ರೀತಿ, ಸಕಲೇಶಪುರದಿಂದ ಮಧ್ಯಾಹ್ನ 1:10ಕ್ಕೆ ಪ್ರಯಾಣ ಬೆಳೆಸಿ ಹಾಸನಕ್ಕೆ ಮಧ್ಯಾಹ್ನ 2:15ಕ್ಕೆ ಆಗಮಿಸಲಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next