Advertisement
ಈಡೇರದ ರೈಲ್ವೆ ಬೇಡಿಕೆ: ಈ ಹಿಂದಿನ ಯುಪಿಎ ಸರ್ಕಾರದಲ್ಲಿ ಜಿಲ್ಲೆಗೆ ಘೋಷಿಸಿದ್ದ ರೈಲ್ವೆ ಕೋಚ್ ಕಾರ್ಖಾನೆ ಸೇರಿದಂತೆ ಇನ್ನಿತರ ರೈಲ್ವೆ ಯೋಜನೆಗಳ ಕುರಿತಂತೆ ಕಳೆದ 4 ವರ್ಷಗಳ ಕೇಂದ್ರ ಬಜೆಟ್‌ನಲ್ಲಿ ಮೋದಿ ಸರ್ಕಾರ ಯಾವುದೇ ಅನುದಾನ ಘೋಷಿ ಸಲಿಲ್ಲ. ಈಗ, ಅವಧಿಯ ಕೊನೆಯ 6ನೇ ಬಜೆಟ್ ಮಂಡಿಸುತ್ತಿದ್ದು ಜಿಲ್ಲೆಯ ಜನತೆ ನಿರೀಕ್ಷೆ ಹೆಚ್ಚಾಗಿದೆ.
Related Articles
Advertisement
ಬಾರದ ವೈದ್ಯಕೀಯ ಕಾಲೇಜು: ಪ್ರತಿ ಸಂಸದೀಯ ಕ್ಷೇತ್ರದಲ್ಲೂ ಒಂದು ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುವುದಾಗಿ ಹಿಂದಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಚಕಾರ ಎತ್ತಿಲ್ಲ. ಪ್ರಕ್ರಿಯೆ ಆರಂಭವಾಗಿಲ್ಲ. ಆಯುಷ್ಮಾನ್ ಭಾರತ ಯೋಜನೆ ಆರೋಗ್ಯ ಕರ್ನಾಟಕ ಯೋಜನೆಯಡಿ ಮಿಳಿತವಾಗಿ ಜಾರಿಗೆ ಬಂದಿದ್ದರೂ, ಇಂದಿಗೂ ಜಿಲ್ಲೆಯ ಎಲ್ಲಾ ಜನತೆಗೂ ಆರೋಗ್ಯ ಕಾರ್ಡ್ ಸಿಕ್ಕಿಲ್ಲ. ಕಾರ್ಡ್ ನೋಂದಣಿಗೆ ಈಗಲೂ ಜನತೆ ಕೋಲಾರದ ಎಸ್‌ಎನ್‌ಆರ್ ಆಸ್ಪತ್ರೆಗೆ ಬರಬೇಕಾಗಿದೆ.
ಉದ್ಯೋಗ ಸೃಷ್ಟಿ, ಸಾಲ ಮನ್ನಾ ಇಲ್ಲ: ಜಿಲ್ಲೆಯಡಿ ಹಲವೆಡೆ ಕೈಗಾರಿಕಾ ವಲಯ ಆರಂಭಿಸಲಾಗಿದೆ. ಆದರೆ, ಸ್ಥಳೀಯರಿಗೆ ಉದ್ಯೋಗಾವಕಾಶ ನಿರೀಕ್ಷಿಸಿದಂತೆ ಸಿಗಲಿಲ್ಲ. ನೋಟ್ ಬ್ಯಾನ್‌ನಿಂದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳು ಮುಚ್ಚಿದ್ದರಿಂದ ಉದ್ಯೋಗ ಕಡಿಮೆಯಾಗುವಂತಾಯಿತು. ಇನ್ನು ಕೇಂದ್ರ ಸರ್ಕಾರ ಸಾಲ ಮನ್ನಾ ಮಾಡುತ್ತದೆ ಎಂದು ನಿರೀಕ್ಷಿಸಿದ್ದರು. ಆದರೆ, ಸಾಲ ಮನ್ನಾ ಮಾಡದಿರುವುದಕ್ಕೆ ಅಸಮಾಧಾನವಿದೆ.
ನೋಟ್ ಬ್ಯಾನ್, ಜಿಎಸ್‌ಟಿ: ಕೇಂದ್ರ ಸರ್ಕಾರದ ನೋಟ್ ಬ್ಯಾನ್‌ನಿಂದಾಗಿ ಜಿಲ್ಲೆಯ ಸಾಮಾನ್ಯ ಜನತೆ ಇಂದಿಗೂ ಅನಾನುಕೂಲಪಡುತ್ತಿದ್ದಾರೆ. ಶಾಶ್ವತ ಬರ ಪೀಡಿತ ಹಾಗೂ ಹಿಂದುಳಿದ ಜಿಲ್ಲೆಗೆ ಜಿಎಸ್‌ಟಿ ತೆರಿಗೆ ಪದ್ಧತಿ ಫಲಗಳು ತಕ್ಷಣಕ್ಕೆ ದೊರೆತಿಲ್ಲ. ಇವೆಲ್ಲಾ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಚುನಾವಣಾ ವರ್ಷದ ಬಜೆಟ್ನಿಂದಾಗಿ ಜಿಲ್ಲೆ ಉದ್ಧಾರವಾಗಿ ಬಿಡು ತ್ತದೆಯೆಂಬ ಭ್ರಮೆ ಜಿಲ್ಲೆಯ ಜನರಲ್ಲಿ ಇಲ್ಲವಾಗಿದೆ.
ಪುನರಾರಂಭಗೊಳ್ಳದ ಕೆಜಿಎಫ್ ಚಿನ್ನದ ಗಣಿ: ಕೋಲಾರ ಜಿಲ್ಲೆಯಲ್ಲಿ19 ವರ್ಷಗಳ ಹಿಂದೆ ಮುಚ್ಚಲ್ಪಟ್ಟ ಚಿನ್ನದ ಗಣಿಯನ್ನು ಪುನಾರಂಭಿಸಲು ಸುಪ್ರಿಂ ಕೋರ್ಟ್ ಹಸಿರು ನಿಶಾನೆ ತೋರಿಸಿದರೂ, ಚಿನ್ನದ ಗಣಿ ಪುನಶ್ಚೇತನಗೊಳಿಸಲು ಕೇಂದ್ರ ಸರ್ಕಾರ ಯಾವುದೇ ವಿಧದಲ್ಲೂ ಪ್ರಯತ್ನಿಸಲಿಲ್ಲ. ಇಡೀ 4 ವರ್ಷ ರಾಜ್ಯ-ಕೇಂದ್ರ ಸರ್ಕಾರಗಳು ಬಿಜಿಎಂಎಲ್‌ನ ಆಸ್ತಿಯನ್ನು ಸರ್ವೇ ಮಾಡಿಸಿ ಪಟ್ಟಿ ಮಾಡಿಸಿದ್ದೇ ಸಾಧನೆ ಎನ್ನುವಂತಾಗಿದೆ. ಮೂರೂವರೆ ಸಾವಿರ ಕಾರ್ಮಿಕ ಕುಟುಂಬಗಳು ಇಂದಿಗೂ ಕೆಲಸಕ್ಕಾಗಿ ಬೆಂಗಳೂರಿಗೆ ನಿತ್ಯ ಪ್ರಯಾಣಿಸಬೇಕಾಗಿದೆ.
ಗಣಿ ಕಾರ್ಮಿಕರಿಗೆ ಪುನರ್ವಸತಿ ಯೋಜನೆ ಘೋಷಿಸಿ ಅನುಷ್ಠಾನಕ್ಕೆ ತರುವಲ್ಲಿ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯ ತೋರಿಸುತ್ತಿರುವುದು ಜಿಲ್ಲೆಯ ಜನರ ಆಕ್ರೋಶಕ್ಕೆ ಕಾರಣ. ಇನ್ನು ಕೆಜಿಎಫ್ನಲ್ಲಿರುವ ಬೆಮೆಲ್ ಕಾರ್ಖಾನೆಯನ್ನು ಖಾಸಗಿ ಸಂಸ್ಥೆಗೆ ಒಪ್ಪಿಸುವ ಕಾರ್ಯಕ್ಕೆ ಕೇಂದ್ರ ಸರ್ಕಾರ ಕೈಹಾಕುವ ಮೂಲಕ ಅಲ್ಲಿನ ಕಾರ್ಮಿಕ ವರ್ಗದ ಕೆಂಗಣ್ಣಿಗೆ ಗುರಿಯಾಗಿತ್ತು. ಈ ಕುರಿತು ಪ್ರತಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬೆಮೆಲ್ ಖಾಸಗೀಕರಣದ ಪ್ರಯತ್ನ ನಿಂತಿಲ್ಲವಾದರೂ ಕೊಂಚ ವಿಳಂಬವಾಗುವಂತಾಗಿದೆ.
* ಕೆ.ಎಸ್.ಗಣೇಶ್