ಲಕ್ನೋ: 68ಕ್ಕೂ ಅಧಿಕ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದ ಉತ್ತರಪ್ರದೇಶದ 5 ಬಾರಿಯ ಶಾಸಕ, ಗ್ಯಾಂಗ್ಸ್ಟರ್ ಮುಖ್ತಾರ್ ಅನ್ಸಾರಿ (60) ಗುರುವಾರ ಮೃತಪಟ್ಟಿದ್ದಾರೆ.
8 ಪ್ರಕರಣಗಳಲ್ಲಿ ದೋಷಿ ಎಂದು ಸಾಬೀತಾಗಿ 2005 ರಿಂದಲೂ ಜೈಲಲ್ಲಿದ್ದ ಅನ್ಸಾರಿ, ಗುರುವಾರ ಸಂಜೆ ರಂಜಾನ್ ಉಪವಾಸ ಮುರಿಯುತ್ತಿದ್ದಂತೆ ತೀವ್ರ ಅಸ್ವಸ್ಥರಾಗಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಹೃದಯಾಘಾತದಿಂದ ಕೊನೆಯುಸಿರೆಳೆದರು. ಮಂಗಳವಾರವಷ್ಟೇ ಕಿಬ್ಬೊಟ್ಟೆ ನೋವಿನ ಕಾರಣ 14 ಗಂಟೆ ಕಾಲ ಆಸ್ಪ ತ್ರೆಯಲ್ಲಿ ಚಿಕಿತ್ಸೆ ಪಡೆದು ಮರಳಿದ್ದರು.
ಅಲರ್ಟ್ ಘೋಷಣೆ: ಅನ್ಸಾರಿ ಸಾವಿನ ಹಿನ್ನೆಲೆ ಉ.ಪ್ರದೇಶದಾದ್ಯಂತ ನಿಷೇಧಾಜ್ಞೆ ಹೊರಡಿಸಲಾಗಿದ್ದು, ಅಲರ್ಟ್ ಘೋಷಿಸಿ, ಭದ್ರತೆ ಬಿಗಿಗೊಳಿಸಲಾಗಿದೆ.
ವಿಷವುಣಿಸಿ ಹತ್ಯೆ: ಸೋದರ ಆರೋಪ
ಮುಖ್ತಾರ್ ಅನ್ಸಾರಿ ಸಾವಿನ ಹಿಂದೆ ಸಂಚು ಅಡಗಿದೆ. ಜೈಲಲ್ಲಿ ಯಾರೋ ವಿಷವುಣಿಸಿ ಕೊಂದಿದ್ದಾರೆ ಎಂದು ಅವರ ಸಹೋದರ, ಘಾಜಿಪುರ ಸಂಸದ ಅಫ್ಜಲ್ ಅನ್ಸಾರಿ ಆರೋಪಿಸಿದ್ದಾರೆ. ಅನ್ಸಾರಿಯನ್ನು ಎನ್ ಕೌಂಟರ್ ಮಾಡಲು ಸಂಚು ನಡೆದಿದೆ ಎಂದು ಈ ಹಿಂದೆಯೇ ಅವರ ಕುಟುಂಬಸ್ಥರು ಆರೋಪಿಸಿದ್ದರು.