Advertisement
ಚುನಾವಣಾ ಆಯೋಗ ಹಾಗೂ ರಾಜ್ಯ ಸರ್ಕಾರದ ಉನ್ನತ ಮೂಲಗಳ ಪ್ರಕಾರ, ಚುನಾವಣಾ ಅಧಿಸೂಚನೆ ಪ್ರಕಟಿಸುವುದಕ್ಕೆ ಅಗತ್ಯವಾದ ಎಲ್ಲ ಸಿದ್ಧತೆಗಳನ್ನು ಕೇಂದ್ರ ಆಯೋಗ ಪೂರ್ಣಗೊಳಿಸಿದೆ. ಬುಧವಾರ ಮಧ್ಯಾಹ್ನ 3 ಗಂಟೆಯ ಬಳಿಕ ಕೇಂದ್ರ ಚುನಾವಣಾ ಆಯುಕ್ತರು ಪತ್ರಿಕಾಗೋಷ್ಠಿ ನಡೆಸುವ ಮೂಲಕ ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ. ದಾವಣಗೆರೆಯಲ್ಲಿ ನಡೆಯುವ ಮಹಾಸಂಗಮ ಕಾರ್ಯಕ್ರಮದ ಬಳಿಕ ಯಾವುದೇ ಕ್ಷಣದಲ್ಲಿ ಅಧಿಸೂಚನೆ ಪ್ರಕಟವಾಗಬಹುದೆಂದು ರಾಜಕೀಯ ಪಕ್ಷಗಳು ನಿರೀಕ್ಷಿಸಿದ್ದವು. ಮಾ.27ರಂದೇ ಘೋಷಣೆಯಾಗಬಹುದೆಂಬುದು ಬಹುತೇಕರ ನಿರೀಕ್ಷೆಯಾಗಿತ್ತು. ಬುಧವಾರವೇ ವೇಳಾಪಟ್ಟಿ ಘೋಷಣೆಯಾದರೆ, ತಕ್ಷಣವೇ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ.
ಬೆಂಗಳೂರು: 2018ರ ವಿಧಾನಸಭೆ ಚುನಾವಣೆ ಒಂದೇ ಹಂತದಲ್ಲಿ ನಡೆದಿತ್ತು. ಈ ಬಾರಿಯೂ ಒಂದೇ ಹಂತದಲ್ಲಿ ನಡೆಯುವ ಸಾಧ್ಯತೆಗಳೇ ಹೆಚ್ಚಾಗಿವೆ. ಕೇಂದ್ರ ಚುನಾವಣಾ ಆಯೋಗ ಮಾ.9ರಂದು ನಡೆಸಿದ್ದ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ಎಲ್ಲಾ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಸಬೇಕು ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಆಗ್ರಹಿಸಿದ್ದರೆ, ಒಂದಕ್ಕಿಂತ ಹೆಚ್ಚು ಹಂತಗಳಲ್ಲಿ ಚುನಾವಣೆ ನಡೆಸುವಂತೆ ಬಿಜೆಪಿ ಬೇಡಿಕೆ ಇಟ್ಟಿತ್ತು ಎಂದು ಹೇಳಲಾಗಿತ್ತು. ಆದರೆ, ಒಂದೇ ಹಂತದ ಚುನಾವಣೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ರಾಜಕೀಯ ಪಕ್ಷಗಳ ಅಭಿಪ್ರಾಯ ಕೇಳುವುದು ಸಾಮಾನ್ಯ ಪ್ರಕ್ರಿಯೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಬೇಕು ಎಂದೂ ಅಭಿಪ್ರಾಯಗಳು ಬಂದಿವೆ. ಈ ಎಲ್ಲಾ ಅಂಶಗಳನ್ನು ಗಮನಿಸಿ ಆಯೋಗ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅಂದು ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ರಾಜೀವ್ ಕುಮಾರ್ ಹೇಳಿದ್ದರು.
Related Articles
ರಾಜ್ಯ ಸರ್ಕಾರ ತನ್ನ ಬಹುತೇಕ ಕಾರ್ಯಕ್ರಮಗಳನ್ನು ಪೂರ್ಣಗೊಳಿಸಿದೆ. ಒಂದರ ಮೇಲೊಂದರಂತೆ ಪ್ರವಾಸ ನಡೆಸುವ ಮೂಲಕ ಸರ್ಕಾರಿ ಯೋಜನೆಗಳ ಶಿಲಾನ್ಯಾಸ ಹಾಗೂ ಉದ್ಘಾಟನೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಅವರ ಮಂತ್ರಿಮಂಡಲದ ಸದಸ್ಯರು ಮಗ್ನರಾಗಿದ್ದಾರೆ. ತುರ್ತಾಗಿ ಮಾಡಬೇಕಿದ್ದ ಸರ್ಕಾರಿ ಆದೇಶಗಳಿಗೆ ಮಂಗಳವಾರ ಬಹುತೇಕ ಆದೇಶ ನೀಡಲಾಗಿದೆ. ವರ್ಗಾವಣೆ ಪ್ರಕ್ರಿಯೆಗಳನ್ನೂ ಪೂರ್ಣಗೊಳಿಸಲಾಗಿದೆ. ಯಾವುದೇ ಕ್ಷಣಕ್ಕೆ ನೀತಿ ಸಂಹಿತೆ ಜಾರಿಗೆ ಬರಬಹುದೆಂಬ ನಿರೀಕ್ಷೆಯಲ್ಲೇ ರಾಜ್ಯ ಸರ್ಕಾರ ಅಗತ್ಯವಾದ ಎಲ್ಲ ಕ್ರಮಗಳನ್ನು ತೆಗೆದುಕೊಂಡಿದೆ.
Advertisement
ರಾಜ್ಯ ಮುಖ್ಯ ಚುನಾವಣಾಧಿಕಾರಿ ಕಚೇರಿಯಿಂದಲೂ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಈ ಸಂಬಂಧ ಸೂಚನೆ ಕಳುಹಿಸಲಾಗಿದ್ದು, ಮಾಸಾಂತ್ಯದೊಳಗೆ ದಿನಾಂಕ ಘೋಷಣೆಯಾಗುತ್ತದೆ ಎಂಬ ಸಂದೇಶ ರವಾನೆ ಮಾಡಲಾಗಿದೆ. ಹೀಗಾಗಿ ಎಲ್ಲ ಜಿಲ್ಲೆಗಳು ಹಾಗೂ ಅಂತಾರಾಜ್ಯ ಗಡಿಗಳಲ್ಲಿ ಈಗಿನಿಂದಲೇ ತಪಾಸಣಾ ಕಾರ್ಯ ಬಿಗಿಗೊಳಿಸಲಾಗಿದೆ. ರಾಜ್ಯದ ಹಲವೆಡೆ ಅಘೋಷಿತ ನೀತಿ ಸಂಹಿತೆ ಈಗಾಗಲೆ ಜಾರಿಯಲ್ಲಿದೆ.
ಅಲ್ಲಲ್ಲಿ ದಾಳಿ:ಇದೆಲ್ಲದರ ಜತೆಗೆ ಚುನಾವಣಾ ಆಯೋಗ, ಪೊಲೀಸ್ ಸೇರಿದಂತೆ ವಿವಿಧ ವಿಚಕ್ಷಣಾ ದಳಗಳು ರಾಜ್ಯಾದ್ಯಂತ ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ್ದು, ಮತದಾರರಿಗೆ ಹಂಚಲು ಸಂಗ್ರಹಸಿಟ್ಟಿರುವ ಕುಕ್ಕರ್, ಸೀರೆ, ಗೃಹೋಪಯೋಗಿ ವಸ್ತುಗಳ ಮೇಲೆ ನಿಗಾ ಇಟ್ಟಿದೆ. ಹುಬ್ಬಳ್ಳಿ, ಉತ್ತರ ಕನ್ನಡ, ಶೃಂಗೇರಿ ಸೇರಿದಂತೆ ಹಲವೆಡೆ ದಾಳಿಗಳು ನಡೆದಿವೆ. ರಾಜಕೀಯ ಪಕ್ಷ ಹಾಗೂ ನಾಯಕರ ಸ್ಟಿಕರ್ ಇಲ್ಲದೇ ಇದ್ದರೂ ಅನುಮಾನಾಸ್ಪದವಾಗಿ ಸಂಗ್ರಹಿಸಿಟ್ಟ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು, ಕಾರಣ ಹಾಗೂ ಸೂಕ್ತ ದಾಖಲೆ ನೀಡುವಂತೆ ತನಿಖಾ ಸಂಸ್ಥೆಗಳು ಸೂಚನೆ ನೀಡುತ್ತಿವೆ. ಹೀಗಾಗಿ ಅಧಿಕೃತ ಘೋಷಣೆಗೆ ಮುನ್ನವೇ ರಾಜ್ಯದಲ್ಲಿ ನೀತಿ ಸಂಹಿತೆಯ ವಾತಾವರಣ ಈಗಾಗಲೇ ಪ್ರರಂಭಗೊಂಡದೆ. ತಟಸ್ಥ ಧೋರಣೆ :
ಇದರ ಜತೆಗೆ ಸಚಿವರು, ಶಾಸಕರ ಆಜ್ಞಾ ಪಾಲನೆ ವಿಚಾರದಲ್ಲಿ ಅಧಿಕಾರಿ ವರ್ಗ ಸೋಮವಾರದಿಂದಲೇ ನಿರಾಕರಣೆ ಮನೋಭಾವ ಪ್ರಾರಂಭಿಸಿವೆ. ಹೀಗಾಗಿ ಅಘೋಷಿತ ನೀತಿ ಸಂಹಿತೆ ಜಾರಿ ಪರಿಸ್ಥಿತಿ ಈಗಾಗಲೇ ಪ್ರಾರಂಭವಾಗಿದ್ದು, ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.