ಕಲಬುರಗಿ: ಈಶಾನ್ಯ ಪದವೀಧರ ಮತಕ್ಷೆತ್ರದ ಚುನಾವಣೆಗೆ ನೇಮಿಸಲಾಗಿರುವ ಚುಣಾವಣೆ ಸಿಬ್ಬಂದಿ ಮತದಾರರಾಗಿದ್ದರೆ ಜೂನ್ 4 ಮತ್ತು 5ರಂದು ಕಡ್ಡಾಯವಾಗಿ ಅಂಚೆ ಮತ ಚಲಾಯಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣೆ ಅಧಿಕಾರಿ ಆರ್.ವೆಂಕಟೇಶಕುಮಾರ ತಿಳಿಸಿದರು.
ಬುಧವಾರ ನಗರದ ಡಾ| ಎಸ್.ಎಂ.ಪಂಡಿತ ರಂಗಮಂದಿರದಲ್ಲಿ ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳಿಗಾಗಿ ಏರ್ಪಡಿಸಲಾದ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಕಲಬುರಗಿ ಮಹಾನಗರ ಪಾಲಿಕೆ ವ್ಯಾಪ್ತಿಯ ಮತದಾರರು ಮಹಾನಗರ ಪಾಲಿಕೆ ಹೊಸ ಕಟ್ಟಡ ಹಾಗೂ ತಾಲೂಕು ಮಟ್ಟದ ಮತದಾರರು ಆಯಾ ತಾಲೂಕಿನ ತಹಶೀಲ್ದಾರ್‌ರ ಚುನಾವಣೆ ಶಾಖೆಯನ್ನು ಸಂಪರ್ಕಿಸಿ ಅಂಚೆ ಮತ ಪತ್ರಗಳನ್ನು ಪಡೆಯಬಹುದಾಗಿದೆ ಎಂದರು.
ಚುನಾವಣೆ ಕರ್ತವ್ಯಕ್ಕೆ ನೇಮಿಸಲಾಗಿರುವ ಮತದಾರರು ಚುನಾವಣಾ ಕರ್ತವ್ಯದ ಆದೇಶ ಪ್ರತಿ ಹಾಗೂ ಗುರುತಿನ ಚೀಟಿ ನೀಡಿ ಫಾರ್ಮ್ ನಂ. 13ನ್ನು ಪಡೆದು ಭರ್ತಿ ಮಾಡಿ ಸಲ್ಲಿಸಿದಾಗ ಅಂಚೆ ಮತಪತ್ರ ನೀಡಲಾಗುವುದು. ಆದ್ಯತಾನುಸಾರ ಮತ ಚಲಾಯಿಸಿ ಮತಪತ್ರವನ್ನು ಭದ್ರಗೊಳಿಸಿ ಹಿಂದಿರುಗಿಸಬೇಕು. ಜೂನ್ 8 ರಂದು ನಡೆಯುವ ಮತದಾನದಂದು ಮತದಾರರು ಮತಗಟ್ಟೆಗಳಲ್ಲಿ ನೀಡುವ ನೇರಳೆ ಬಣ್ಣದ ಸ್ಕೆಚ್ ಪೆನ್ನಿನಿಂದ ಮಾತ್ರ ಮತ ಚಲಾಯಿಸಬೇಕು. ಬೇರಾವುದೇ ಪೆನ್ನನ್ನು ಬಳಸಿದಲ್ಲಿ ಮತ ತಿರಸ್ಕೃತಗೊಳ್ಳುವುದು ಎಂದು ತಿಳಿಸಿದರು.
ಪೋಲಿಂಗ್ ಪಾರ್ಟಿಗಳಿಗೆ ಮಸ್ಟರಿಂಗ್ ದಿನದಂದು ಪ್ರತಿ ಮತಗಟ್ಟೆಗೆ ಎರಡು ಮತ ಪೆಟ್ಟಿಗೆ, ನೇರಳೆ ಬಣ್ಣದ ಸ್ಕೆಚ್ ಪೆನ್ನುಗಳು, ಮತಪತ್ರ, ಮತದಾರರ ಯಾದಿ, ಚುನಾವಣೆ ಸಲಕರಣೆಗಳನ್ನು ನೀಡಲಾಗುವುದು. ಮತ ಪೆಟ್ಟಿಗೆ ಪರಿಶೀಲಿಸಿ ಸರಿಯಾಗಿರುವುದನ್ನು ತಗೆದುಕೊಂಡು ಹೋಗಬೇಕು. ಮತದಾನದ ದಿನದಂದು ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತದಾನ ಪ್ರಾರಂಭವಾಗುವ ಹಾಗೆ ಸಿದ್ಧತೆ ಮಾಡಿಕೊಳ್ಳಬೇಕು. ಮತದಾರರಿಗೆ ಎಡಗೈ ಮಧ್ಯದ ಬೆರಳಿಗೆ ಅಳಿಸಲಾಗದ ಶಾಹಿ ಗುರುತು ಹಾಕಬೇಕು. ಅಂದು ಸಂಜೆ 4 ಗಂಟೆ ವರೆಗೆ ಮತಗಟ್ಟೆಯ ಸಾಲಿನಲ್ಲಿ ಹಾಜರಿರುವ ಮತದಾರರು ಮತದಾನ ಮಾಡಿದ ನಂತರ ಮತ ಪೆಟ್ಟಿಗೆಯನ್ನು ಸರಿಯಾಗಿ ಭದ್ರಗೊಳಿಸಬೇಕು. ಮತದಾನ ಮಾಡಿದ ಮತದಾರರ ಸಂಖ್ಯೆಗೆ ಮತದಾರರ ರಜಿಸ್ಟರ್ ಸಂಖ್ಯೆ ಹೊಂದಾಣಿಕೆಯಾಗಬೇಕು ಎಂದರು.
ಈ ಬಾರಿಯ ಈಶಾನ್ಯ ಪದವೀಧರ ಮತಕ್ಷೇತ್ರದ ಚುನಾವಣೆಯ ಮತ ಪತ್ರದಲ್ಲಿ ಕಣದಲ್ಲಿರುವ 10 ಅಭ್ಯರ್ಥಿಗಳ
ಭಾವಚಿತ್ರ ಮುದ್ರಿಸಲಾಗುವುದು. ಜೊತೆಗೆ ನೋಟಾ ಮತವನ್ನು ಸೇರಿಸಲಾಗುವುದು.
ಈಗಾಗಲೇ ಕರ್ನಾಟಕ ಚುನಾವಣಾ ಆಯೋಗದ ವೆಬ್ ಸೈಟ್‌ನಲ್ಲಿ ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾರರ ಯಾದಿಯನ್ನು ಪ್ರಕಟಿಸಲಾಗಿದೆ. ಮತದಾರರ ಯಾದಿಯಲ್ಲಿ ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದರು.
ಮಾಸ್ಟರ್ ಟ್ರೇನರ್ ಕಾಲೇಜು ಶಿಕ್ಷಣ ಇಲಾಖೆ ಸಹ ಪ್ರಾಧ್ಯಾಪಕ ಡಾ| ಶಶಿಶೇಖರ ರೆಡ್ಡಿ ತರಬೇತಿ ನೀಡಿದರು. ಕಾರ್ಯಾಗಾರದಲ್ಲಿ ಮಹಾನಗರ ಪಾಲಿಕೆ ಆಯುಕ್ತ ರಘುನಂದನ ಮೂರ್ತಿ, ಸೇಡಂ ಸಹಾಯಕ ಆಯುಕ್ತೆ ಡಾ| ಬಿ. ಸುಶೀಲಾ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಕಲಬುರಗಿ ಸಹಾಯಕ ಆಯುಕ್ತ ಉಮೇಶ್ಚಂದ್ರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಚಪ್ಪ, ಎಲ್ಲ ತಾಲೂಕಿನ ತಹಶೀಲ್ದಾರ್‌ರು, ಪ್ರಿಸೈಡಿಂಗ್ ಮತ್ತು ಪೋಲಿಂಗ್ ಅಧಿಕಾರಿಗಳು ಪಾಲ್ಗೊಂಡಿದ್ದರು.