Advertisement

ಕುಡಿಯುವ ನೀರಿನ ಕ್ರಿಯಾಯೋಜನೆಗೆ ಸೂಚನೆ

10:19 AM Oct 05, 2018 | |

ಕಲಬುರಗಿ: ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿರುವುದರಿಂದ ಅಧಿಕಾರಿಗಳು ಈಗಿಂದಲೇ ಸಮಸ್ಯಾತ್ಮಕ ಹಳ್ಳಿಗಳನ್ನು ಗುರುತಿಸಿ ಸಮರ್ಪಕ ಕ್ರಿಯಾ ಯೋಜನೆ ರೂಪಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖ ಆಗುವಂತೆ ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಗುರುವಾರ ತಾಪಂ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಕ್ಷೇತ್ರದಾದ್ಯಂತ ಶುದ್ಧೀಕರಣದ ಕುಡಿಯುವ ನೀರಿನ ಘಟಕಗಳು ಕಾರ್ಯ ನಿರ್ವಹಿಸದೇ ಬಂದ್‌ ಆಗಿವೆ. ಮೊದಲು ಇವುಗಳು ಸರಿಯಾಗಿ ಕಾರ್ಯ ನಿರ್ವಹಿಸಲು ಕ್ರಮಕ್ಕೆ ಮುಂದಾಗಿ. ಶುದ್ಧ ನೀರು ಜನರಿಗೆ ಬಹಳ ಅವಶ್ಯಕ ಎಂದು ಹೇಳಿದರು. 

ಗಮನಕ್ಕೆ ತನ್ನಿ: ಕಾಮಗಾರಿಗಳನ್ನು ಆರಂಭಿಸುವಾಗ ತಮ್ಮ ಗಮನಕ್ಕೆ ತನ್ನಿ. ಯಾಕೆಂದರೆ ಏನಾದರೂ ಸಮಸ್ಯೆ ಎದುರಾದಾಗ ಮಾತ್ರ ಗಮನಕ್ಕೆ ಬರುತ್ತಿದೆ. ಇನ್ಮುಂದೆ ಹೀಗಾಗಬಾರದು. ಯಾವುದಕ್ಕೂ ಅಧಿಕಾರಿಗಳು ಮುಕ್ತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಮನೋಭಾವನೆ ತಳೆಯಬೇಕು. ತಾವುಂತು ಯಾವುದರಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ ವಿನಾಕಾರಣ ನಿರ್ಲಕ್ಷ್ಯ ತೋರಿದಲ್ಲಿ ಸುಮ್ಮನಿರೋದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸಮಗ್ರ ಮಾಹಿತಿಯೊಂದಿಗೆ ಸಭೆಗೆ ಬನ್ನಿ ಎಂದು ಕಳೆದ ಸಭೆಯಲ್ಲಿ ಸೂಚನೆ ಕೊಟ್ಟಿದ್ದರೂ ಅರ್ಧಮರ್ಧ ಮಾಹಿತಿಯೊಂದಿಗೆ ಬಂದ ಕೆಲ ಅಧಿಕಾರಿಗಳನ್ನು ಸಚಿವರು ತರಾಟೆ ತೆಗೆದುಕೊಂಡರು. ಕಳೆದ ಸಲ ಗೈರು ಹಾಜರಾದ
ಅಧಿಕಾರಿಗಳಿಗೆ ನೀಡಲಾದ ನೋಟಿಸ್‌ಗೆ ಉತ್ತರ ನೀಡಿರುವುದನ್ನು ಶಾಸಕರು ಪರಿಶೀಲಿಸಿದರು.

ಶಹಾಬಾದ ಹಾಗೂ ಕಮಲಾಪುರ ಪಟ್ಟಣದಲ್ಲಿನ ಸಮಸ್ಯೆಗಳ ಕಡೆಗೂ ಅಧಿಕಾರಿಗಳು ನಿಗಾವಹಿಸುವುದರ ಜತೆಗೆ ಈ ಎರಡು ಪಟ್ಟಣಗಳಲ್ಲಿನ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ವೇಗ ಹೆಚ್ಚಿಸಬೇಕು. ನಮ್ಮ ಹೊಲ-ನಮ್ಮ ದಾರಿ ಕಾಮಗಾರಿಗಳು ಕೆಲವು ಕಡೆ ಅರ್ಧಮರ್ಧ ಮಾಡಿರುವ ಬಗ್ಗೆ ದೂರುಗಳು ಬಂದಿವೆ. ಅದನ್ನು ಸರಿಪಡಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಸೂಚಿಸಿದರು.

Advertisement

ಸಮರ್ಪಕ ಸಮೀಕ್ಷೆ: ಗ್ರಾಮೀಣ ಕ್ಷೇತ್ರದಲ್ಲೂ ಸಮರ್ಪಕ ಮಳೆ ಬಾರದೇ ಇರುವುದರಿಂದ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ. ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ. ಆದ್ದರಿಂದ ಈಗ ನಡೆಸಲಾಗುತ್ತಿರುವ ಬೆಳೆ ಹಾನಿ ಜಂಟಿ
ಸಮೀಕ್ಷೆಯನ್ನು ಪರಿಣಾಮಕಾರಿಯಾಗಿ ಮಾಡಬೇಕು. ಹಾನಿಗೊಳಗಾದ ಯಾವೊಬ್ಬ ರೈತನಿಗೂ ಅನ್ಯಾಯವಾಗಬಾರದು ಎಂದು ಹೇಳಿದರು.

ಈ ಹಿಂದೆ ಕೈಗೊಂಡಿರುವ ಕಾಮಗಾರಿಗಳು ಯಾವ ಹಂತದಲ್ಲಿವೆ ಎಂದು ಹಾಗೂ ಹೊಸದಾಗಿ ಕೈಗೊಳ್ಳಬೇಕಿರುವ ಕಾಮಗಾರಿಗಳ ಸಮಗ್ರ ಪಟ್ಟಿ ತಮಗೆ ಸಲ್ಲಿಸಬೇಕು. ಜತೆಗೆ ಸರ್ಕಾರಿ ಯೋಜನೆಗಳು ಸಮರ್ಪಕ ಜಾರಿಯಾಗಬೇಕು. ಕಾಮಗಾರಿಗಳು ನಿಗದಿತ ಅವಧಿಯೊಳಗೆ ಮುಗಿಯಬೇಕು ಎಂದರು. ಆಳಂದ ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಅನೀತಾ, ಕಲಬುರಗಿ ತಾಪಂ ಇಒ ಲಕ್ಷ್ಮಣ ಶೃಂಗೇರಿ ಹಾಜರಿದ್ದರು.

ರಸ್ತೆ ಇನ್ನೊಮ್ಮೆ ಮಾಡಿ
ಆಳಂದ ಮತಕ್ಷೇತ್ರ ವ್ಯಾಪ್ತಿಯ ಬೆಟ್ಟಜೇವರ್ಗಿ ಗ್ರಾಮದ ದೇವಾಲಯಕ್ಕೆ ಹೋಗುವ ರಸ್ತೆ ಆರು ತಿಂಗಳಲ್ಲಿಯೇ ಕಿತ್ತು ಹೋಗಿದೆ. ಕಳಪೆಯಾಗಿ ನಿರ್ಮಾಣ ಮಾಡಿದ್ದರಿಂದ ಗುತ್ತಿಗೆದಾರರಿಂದ ಮತ್ತೂಮ್ಮೆ ರಸ್ತೆ ಅಭಿವೃದ್ಧಿಪಡಿಸಿ ಎಂದು ಶಾಸಕ ಮತ್ತಿಮಡು ಅಧಿಕಾರಿಗಳಿಗೆ ಸೂಚಿಸಿದರಲ್ಲದೇ, ಕಾಮಗಾರಿ ಕಳಪೆಯಾದರೆ ಇನ್ಮುಂದೆ ಅಧಿಕಾರಿಗಳನ್ನೇ ಸಂಪೂರ್ಣ ಹೊಣೆಯನ್ನಾಗಿ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಕುಡಿಯುವ ನೀರು ಪೂರೈಕೆಯ ಕಾಮಗಾರಿಗೆ ಸಂಬಂಧಪಟ್ಟಂತೆ ಟೆಂಡರ್‌ ಆಗಿದ್ದರೂ ಕಾಮಗಾರಿ ಆರಂಭ ವಾಗದಿದ್ದಲ್ಲಿ ಹಾಗೂ ಕಳಪೆಯಾಗಿದ್ದಲ್ಲಿ ನಿರ್ದಾಕ್ಷಿಣ್ಯವಾಗಿ ಗುತ್ತಿಗೆದಾರರಿಗೆ ನೋಟಿಸ್‌ ನೀಡಿ. ಜನರಿಗೆ ನೀರು ಪೂರೈಕೆ ಆಗುವಂತಾಗಬೇಕು. ಕೆಲವು ಕಡೆ ನೀರಿನ ಸಮಸ್ಯೆ ಅರಿತು ಕಾಮಗಾರಿ ಬದಲಾವಣೆ ಪರಿಸ್ಥಿತಿ ಎದುರಾದರೆ ಗಮನಕ್ಕೆ
ತಂದು ಹೆಜ್ಜೆ ಇಡಿ.
  ಬಸವರಾಜ ಮತ್ತಿಮಡು, ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next