Advertisement

ಬಡಾವಣೆ ಹಸ್ತಾಂತರ ದಿನದಿಂದ ಕರ ಆಕರಣೆಗೆ ಸೂಚನೆ

03:52 PM Jun 09, 2017 | |

ಹುಬ್ಬಳ್ಳಿ: ಮಹಾನಗರ ಪಾಲಿಕೆಗೆ ಬಡಾವಣೆಗಳು ಹಸ್ತಾಂತರಗೊಂಡ ದಿನದಿಂದ ಜನರಿಂದ ಕರ ಆಕರಿಸಬೇಕು ಎಂದು ಮಹಾಪೌರ ಡಿ.ಕೆ.ಚವ್ಹಾಣ ಅಧಿಕಾರಿಗಳಿಗೆ ಆದೇಶಿಸಿದರು. ಗುರುವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಸಭಾನಾಯಕ ರಾಮಣ್ಣ ಬಡಿಗೇರ ಗಮನ ಸೆಳೆಯುವ ಸೂಚನೆ ಮಂಡಿಸಿ.

Advertisement

ಹುಡಾದಿಂದ ಪಾಲಿಕೆಗೆ ಹಸ್ತಾಂತರಗೊಂಡ ಬಡಾವಣೆಗಳಲ್ಲಿ ತಮ್ಮ ವಾರ್ಡ್‌ ವ್ಯಾಪ್ತಿಯ ಬಡಾವಣೆ ಜನ ಕರ ಪಾವತಿಗೆ ಸಿದ್ಧರಿದ್ದರೂ ಪಾಲಿಕೆಯವರು ಕರ ಪಡೆಯುತ್ತಿಲ್ಲ. ಹಿಂದಿನ ಬಾಕಿ  ಪಾವತಿ ದಾಖಲೆಗಳನ್ನು ನೀಡುವಂತೆ ತಿಳಿಸಿ ಜನರನ್ನು ಹಿಂದಕ್ಕೆ ಕಳುಹಿಸುತ್ತಿದ್ದಾರೆ ಎಂದು ಆರೋಪಿಸಿದರು. 

ಜಂಟಿ ಆಯುಕ್ತ ಅಜೀಜ್‌ ದೇಸಾಯಿ ಮಾತನಾಡಿ, ಹುಡಾಕ್ಕೆ ಕರ ಪಾವತಿಸಿದಲ್ಲಿ ಅದರ ಚಲನ್‌ಗಳನ್ನು ನೀಡಿದರೆ ಲೆಕ್ಕ ಪುಸ್ತಕದಲ್ಲಿ ಅದನ್ನು ಹೊಂದಾಣಿಕೆ ಮಾಡಲಾಗುವುದು. ಅನೇಕರು ಪಾವತಿ ಚಲನ್‌ ನೀಡುತ್ತಿಲ್ಲ. ಹುಡಾದವರಿಗೆ ಕರ ವಸೂಲಿಗೆ ಅಧಿಕಾರವಿಲ್ಲ ಕೇವಲ ಸರಕಾರದ ಸುತ್ತೋಲೆ ಮೇಲೆ ವಸೂಲಿ ಮಾಡುತ್ತಿದ್ದಾರೆ ಎಂದರು. 

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಜೆಪಿ ಸದಸ್ಯ ಡಾ| ಪಾಂಡುರಂಗ ಪಾಟೀಲ, ಕರ ವಸೂಲಾತಿ ಬಗ್ಗೆ ಕೆಎಂಸಿ ಕಾಯ್ದೆಗಳ ನಿಯಮ ಹಾಗೂ ಕಾನೂನು ಸ್ಪಷ್ಟವಾಗಿದೆ. ಪಾಲಿಕೆಗೆ ಹಸ್ತಾಂತರ ದಿನದಿಂದ ಕರ ಆಕರಿಸಬೇಕು. ಹಿಂದಿನ ಬಾಕಿ ಇದ್ದರೆ ಅದು ಆಯಾ ಏಜೆನ್ಸಿಗಳಿಗೆ ಸಂಬಂಧಿಸಿದ್ದು ನೀವೇಕೆ ಅದಕ್ಕಾಗಿ ಪಾಲಿಕೆಗೆ ಬರುವ ಕರ ಆದಾಯ ಕಳೆದುಕೊಳ್ಳುತ್ತೀರಿ. 

ನಿಮಗೇನಾದರೂ ಅನುಮಾನಗಳಿದ್ದರೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಪರಿಹರಿಸಿಕೊಳ್ಳಿ ಎಂದರು. ಕಾಂಗ್ರೆಸ್‌ನ ಗಣೇಶ ಟಗರಗುಂಟಿ ಮಾತನಾಡಿ, ಕರ ಸಂಗ್ರಹ ನಿರೀಕ್ಷಿತವಾಗಿ ಆಗುತ್ತಿಲ್ಲ. ಈ ವಿಚಾರದಲ್ಲಿ ಕಂದಾಯ ಅಧಿಕಾರಿ ವಿಫ‌ಲರಾಗಿದ್ದಾರೆ. ಜನ ಕರ ನೀಡಲು ಬಂದರೂ ಅದನ್ನು ಸ್ವೀಕರಿಸುತ್ತಿಲ್ಲ ಎಂದರೆ ಏನರ್ಥ ಎಂದು ಪ್ರಶ್ನಿಸಿದರು. 

Advertisement

ಬಿಜೆಪಿಯ ವೀರಣ್ಣ ಸವಡಿ ಮಾತನಾಡಿ, ಕೈಗಾರಿಕಾ ವಲಯಗಳು ಪಾಲಿಕೆಗೆ ಹಸ್ತಾಂತರಗೊಳ್ಳಬೇಕಿದೆ. ಕರ ಗೊಂದಲದಿಂದ ಕೋಟ್ಯಂತರ ರೂ. ಬಾಕಿ ನಿಲ್ಲುವಂತಾಗಿದೆ ಎಂದರು. ವಿಪಕ್ಷ ನಾಯಕ ಸುಭಾಸ ಶಿಂಧೆ, ಸದಸ್ಯರಾದ ಸುಧೀರ ಸರಾಫ್, ಮೋಹನ ಹಿರೇಮನಿ ಇನ್ನಿತರರು ಮಾತನಾಡಿದರು. ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಮಾತನಾಡಿ, ಪಾಲಿಕೆಗೆ 8 ಬಡಾವಣೆಗಳು ಹಸ್ತಾಂತರಗೊಂಡಿವೆ.

ಕರ ಆಕರಣೆ ಗೊಂದಲ ನಿವಾರಣೆಗೆ ಸರಕಾರದಿಂದ ಸ್ಪಷ್ಟೀಕರಣ ಪಡೆಯಲಾಗುವುದು. ಅದುವರೆಗೆ ಹಸ್ತಾಂತರ ದಿನದಿಂದ ಕರ  ಆಕರಿಸಲಾಗುವುದು ಎಂದರು. ಸದಸ್ಯರು ಹಾಗೂ ಅಧಿಕಾರಿಗಳ ಅನಿಸಿಕೆ ಆಲಿಸಿದ ಮಹಾಪೌರ ಡಿ.ಕೆ. ಚವ್ಹಾಣ ಹಸ್ತಾಂತರ ದಿನದಿಂದಲೇ ಕರ ಆಕರಿಸಿ ಜನರಿಂದ ಪಡೆಯಬೇಕು ಎಂದು ಆದೇಶಿಸಿದರು.

ವಿಶೇಷ ತಂಡಕ್ಕೆ ಸೂಚನೆ: ಅವಳಿನಗರದಲ್ಲಿ ನಾಲಾಗಳ ಸ್ವತ್ಛತೆಗೆ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಪಾಲಿಕೆ ವಿಪಕ್ಷ ನಾಯಕ ಸುಭಾಸ ಶಿಂಧೆ ಆರೋಪಿಸಿದರು. ಈ ಕುರಿತು ಗಮನ ಸೆಳೆಯುವ ಸೂಚನೆ ಮಂಡಿಸಿ ಮಾತನಾಡಿದ ಅವರು, ಮಳೆಗಾಲ ಆರಂಭವಾಗುತ್ತಿದ್ದರೂ ನಾಲಾಗಳ ಸ್ವತ್ಛತೆ ಸಮರ್ಪಕವಾಗಿಲ್ಲ ಎಂದರು.

ಸದಸ್ಯರಾದ ಸುಧಾ ಮಣಿಕುಂಟ್ಲ, ಸುವರ್ಣಾ ಕಲ್ಲಕುಂಟ್ಲ, ಇನ್ನಿತರ ಸದಸ್ಯರು ನಾಲಾಗಳ ದುಸ್ಥಿತಿ ಕುರಿತು ವಿವರಿಸಿದರು. ನಾಲಾಗಳ ಸ್ವತ್ಛತೆಗೆ ವಿಶೇಷ ತಂಡಗಳನ್ನು ರಚಿಸುವ ಮೂಲಕ ಯದೊಪಾದಿಯಲ್ಲಿ ಸ್ವತ್ಛತಾ ಕಾರ್ಯ ಕೈಗೊಳ್ಳಬೇಕೆಂದು ಆಯುಕ್ತರಿಗೆ ಸೂಚಿದರು.  

Advertisement

Udayavani is now on Telegram. Click here to join our channel and stay updated with the latest news.

Next