ಕೊಪ್ಪಳ: ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸರ ಕಣ್ತಪ್ಪಿಸಿ ಸುತ್ತಾಡುವ ವಾಹನ ಸವಾರರಿಗೆ ಬಿಸಿ ಮುಟ್ಟಿಸಲು ಕೊಪ್ಪಳ ಪೊಲೀಸ್ ಇಲಾಖೆಯು ವಿಶಿಷ್ಟವಾದ ಪ್ರಯತ್ನಕ್ಕೆ ಮುಂದಾಗಿದೆ. ನಿಯಮ ಉಲ್ಲಂಘಿಸುವ ವಾಹನದ ಫೋಟೋ ಸಮೇತ ವಾಹನದ ಮಾಲೀಕನ ಮನೆಗೆ ನೋಟಿಸ್ ಜಾರಿಗೊಳಿಸುವ ಯೋಜನೆಯನ್ನು ಕೊಪ್ಪಳ, ಗಂಗಾವತಿ ಟ್ರಾಫಿಕ್ ವಿಭಾಗದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.
ಪೊಲೀಸ್ ಇಲಾಖೆಯಿಂದ ಮನೆಗೆ ನೋಟಿಸ್ ಕಳಿಸುವ ಯೋಜನೆಯು ಬೆಂಗಳೂರು ಸೇರಿ ದೊಡ್ಡ ದೊಡ್ಡ ನಗರಗಳಲ್ಲಿ ಜಾರಿಯಲ್ಲಿದೆ. ಆದರೆ ಕೊಪ್ಪಳದಲ್ಲಿ ಈ ಪ್ರಯತ್ನ ನಡೆದಿರಲಿಲ್ಲ. ಈಗ ಜನದಟ್ಟಣೆ ಹಾಗೂ ವಾಹನ ಸಂಚಾರದ ಸಂಖ್ಯೆ ಹೆಚ್ಚುತ್ತಿರುವ ಪ್ರಯುಕ್ತ ಪ್ರತಿಯೊಂದು ವಾಹನಗಳ ಮೇಲೆ ನಿಗಾ ಇರಿಸಲು, ನಿಯಮ ಪಾಲಿಸಲು ಪೊಲೀಸ್ ಪಡೆ ತಂತ್ರಜ್ಞಾನದ ಮೊರೆ ಹೋಗಿದೆ.
ನಗರ ಪ್ರದೇಶದಲ್ಲಿ ಟ್ರಾಫಿಕ್ ಪೊಲೀಸ್ ಪಡೆಯಲ್ಲಿ ಎರಡು ತಂಡ ರಚನೆ ಮಾಡಲಾಗಿದೆ. ಇದಕ್ಕೆ ಪಿಎಸ್‌ಐ ನೇತೃತ್ವ ವಹಿಸಿರುತ್ತಾರೆ. ಅಲ್ಲದೇ, ವಿವಿಧ ಪ್ರದೇಶಗಳಿಗೆ ಕರ್ತವ್ಯಕ್ಕೆ ತೆರಳುವ ಪೊಲೀಸರು ನಗರ ಪ್ರದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ್ದರೆ, ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ವಾಹನ ನಿಲ್ಲಿಸಿದ್ದರೆ, ತ್ರಿಬಲ್ ರೈಡಿಂಗ್ ಮಾಡಿದ್ದರೆ ಅಥವಾ ಇನ್ನಿತರ ನಿಯಮ ಉಲ್ಲಂಘಿಸಿದರೆ ಅಂತಹ ವಾಹನಗಳ ಫೋಟೋ ತೆಗೆದು ಪೊಲೀಸ್ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಶೇರ್ ಮಾಡಲಾಗುತ್ತದೆ. ಗ್ರೂಪ್‌ನಲ್ಲಿನ ಪೊಲೀಸ್ ತಂಡವು ಆ ವಾಹನದ ಮಾಲೀಕ ಯಾರು? ಎನ್ನುವ ಮಾಹಿತಿಯನ್ನು ತಂತ್ರಜ್ಞಾನದ ಮೂಲಕ ಪಡೆದು, ಆ ಪೋಟೋ ಸಮೇತ ಎಲ್ಲಿ ನಿಯಮ ಉಲ್ಲಂಘನೆ ಮಾಡಲಾಗಿದೆ? ಯಾವ ಸಮಯಕ್ಕೆ? ಹಾಗೂ ಹೇಗೆ ಉಲ್ಲಂಘಿಸಲಾಗಿದೆ? ಎನ್ನುವ ವಿವರವನ್ನು ನೋಟಿಸ್‌ನಲ್ಲಿ ನಮೂದಿಸಿ, ಉಲ್ಲಂಘಿಸಿದ ವಾಹನದ ಪೋಟೋ ಸಮೇತ ವಾಹನದ ಮಾಲೀಕನ ಮನೆಗೆ ಪೊಲೀಸ್ ಇಲಾಖೆಯಿಂದಲೇ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳಿಸಲಾಗುತ್ತದೆ.
ಆ ನೋಟಿಸ್ ತಲುಪಿದ ಏಳು ದಿನಗಳೊಳಗಾಗಿ ವಾಹನದ ಮಾಲೀಕನು ಸಂಬಂಧಿಸಿದ ಟ್ರಾಫಿಕ್ ಪೊಲೀಸ್ ಠಾಣೆಗೆ ಆಗಮಿಸಿ ದಾಖಲೆಗಳನ್ನು ಹಾಜರು ಮಾಡಿ ಅದಕ್ಕೆ ವಿವರಣೆ ನೀಡಬೇಕು. ನಿಯಮ ಉಲ್ಲಂಘಿಸಿದ ಪ್ರಕರಣದ ಅನ್ವಯ ವಾಹನದ ಮೇಲೆ ಕೇಸ್ ದಾಖಲಾಗುತ್ತದೆ. ಅಲ್ಲದೇ, ಅಗತ್ಯ ದಂಡ ವಿಧಿಸುವ ಕಾರ್ಯವೂ ನಡೆಯಲಿದೆ.
ಪ್ರಾಯೋಗಿಕವಾಗಿ ಕೊಪ್ಪಳ ಹಾಗೂ ಗಂಗಾವತಿ ಪೊಲೀಸ್ ಠಾಣೆಯಲ್ಲಿ ಇದನ್ನು ಜಾರಿ ಮಾಡಲಾಗಿದೆ. ಈ ಪ್ರಯತ್ನ ಯಾವ ರೀತಿ ಕಾರ್ಯನಿರ್ವಹಿಲಿದೆ ಎನ್ನುವುದನ್ನು ನೋಡಿಕೊಂಡು ಉಳಿದ ತಾಲೂಕಿಗೂ ಇದನ್ನು ವಿಸ್ತರಿಸಲು ಪೊಲೀಸ್ ಇಲಾಖೆ ಯೋಜಿಸಿದೆ.
ಎಚ್ಚರ ತಪ್ಪಿದರೆ ದಂಡ: ಯಾರೋ ವಾಹನದ ಮಾಲೀಕರು ಇನ್ಯಾರಿಗೋ ಗೋ ವಾಹನ ಕೊಟ್ಟು ಸುಮ್ಮನೆ ಕುಳಿತುಕೊಳ್ಳುವಂತಿಲ್ಲ. ನಿಮ್ಮ ವಾಹನವನ್ನು ಯಾರೋ ಬಳಕೆ ಮಾಡಿಕೊಂಡು ಟ್ರಾಫಿಕ್ ನಿಯಮ ಉಲ್ಲಂಘನೆ ಮಾಡಿದರೆ ನಿಮ್ಮ ಮನೆಗೆ ಇನ್ಮುಂದೆ ನೋಟಿಸ್ ಜಾರಿಯಾಗಲಿದೆ. ಅದಕ್ಕೆ ಉತ್ತರ ನೀವೇ ಕೊಡಬೇಕಾಗುತ್ತದೆ. ದಂಡ ತೆರುವ ಪರಿಸ್ಥಿತಿ ಎದುರಾದರೂ ಅಚ್ಚರಿ ಪಡಬೇಕಿಲ್ಲ. ಹಾಗಾಗಿ ಪೊಲೀಸ್ ಇಲಾಖೆಯ ಟ್ರಾಫಿಕ್ ನಿಯಮದ ಬಗ್ಗೆ ನೀವು ಮೊದಲೇ ಎಚ್ಚೆತ್ತು ವಾಹನ ಚಲಾವಣೆ ಮಾಡುವ ಅಗತ್ಯವಿದೆ. ನಿಯಮ ಉಲ್ಲಂಘಿಸಿದರೆ ಕೇಸ್, ಕೋರ್ಟ್‌ಗೆ ಅಲೆದಾಡಬೇಕಾಗುತ್ತದೆ.
ಜಿಲ್ಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನಲ್ಲಿ ವಾಹನ ಸವಾರರು ಟ್ರಾಫಿಕ್ ನಿಯಮ ಉಲ್ಲಂಘಿಸಿದರೆ ಅಂತಹ ವಾಹನಗಳ ಪೋಟೋ ತೆಗೆದು ಆ ವಾಹನದ ಮಾಲೀಕರ ಮನೆಗೆ ನೋಟಿಸ್ ಕಳುಹಿಸಲಾಗುತ್ತದೆ. ನಿಯಮ ಉಲ್ಲಂಘಿಸಿದ ಅನ್ವಯ ಕೇಸ್ ದಾಖಲಿಸಲಾಗುತ್ತೆ. ಆ ವಾಹನದ ಮಾಲೀಕರು ಏಳು ದಿನದ ಒಳಗಾಗಿ ಠಾಣೆಗೆ ಹಾಜರಾಗಿ ಉತ್ತರ ಕೊಡಬೇಕು. ಇಲ್ಲದಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಮೊದಲು ಎರಡು ತಾಲೂಕಿನಲ್ಲಿ ಈ ಪ್ರಯತ್ನ ನಡೆದಿದೆ. ಮುಂದೆ ಎಲ್ಲ ತಾಲೂಕಿಗೂ ಇದನ್ನು ವಿಸ್ತರಿಸಲಾಗುವುದು. –
ಅರುಣಾಂಗ್ಷು ಗಿರಿ, ಕೊಪ್ಪಳ ಎಸ್‌ಪಿ
-ದತ್ತು ಕಮ್ಮಾರ