Advertisement

ಹಕ್ಕಿಜ್ವರ ಕುರಿತು ಕಟ್ಟೆಚ್ಚರ ವಹಿಸಲು ಸೂಚನೆ

11:30 AM Jan 05, 2018 | |

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಹಕ್ಕಿಜ್ವರ ಹರಡಿರುವುದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಲಾಗಿದ್ದು, ಈ ಸಂಬಂಧ ಅಗತ್ಯ ಮುಂಜಾಗ್ರತೆ ಕ್ರಮಗಳನ್ನು ಕೈಗೊಳ್ಳುವಂತೆ ಪಶುಸಂಗೋಪನಾ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದೆ.

Advertisement

ಈ ಮಧ್ಯೆ, ಕೇಂದ್ರದಿಂದ ಮೂರು ಮಂದಿ ತಜ್ಞ ವೈದ್ಯರ ತಂಡ ಗುರುವಾರ ಬೆಂಗಳೂರಿಗೆ ಆಗಮಿಸಿದ್ದು, ಪಶುಸಂಗೋಪನಾ ಇಲಾಖೆ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾಹಿತಿ ಪಡೆದಿದೆ. ಈ ತಂಡ ಶುಕ್ರವಾರ ಹಕ್ಕಿಜ್ವರ ಸೋಂಕು ಪತ್ತೆಯಾದ ದಾಸರಹಳ್ಳಿ ವ್ಯಾಪ್ತಿಯ ಪ್ರದೇಶಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ ಎನ್ನಲಾಗಿದೆ.

ಜೊತೆಗೆ ಪಶುಸಂಗೋಪನೆ, ಆರೋಗ್ಯ, ಗ್ರಾಮೀಣಾಭಿವೃದ್ದಿ ಹಾಗೂ ಪೊಲೀಸ್‌ ಇಲಾಖೆ ಅಧಿಕಾರಿಗಳನ್ನೊಳಗೊಂಡ ಜಿಲ್ಲಾಧಿಕಾರಿಗಳ ನೇತೃತ್ವದ ವಿಶೇಷ ತಂಡಗಳ ಮುಖಸ್ಥರೊಂದಿಗೂ ಕೇಂದ್ರದ ತಂಡ ಮಾತುಕತೆ ನಡೆಸುವ ಸಾಧ್ಯತೆಯಿದೆ. 

ಸೋಂಕು ಪತ್ತೆಯಾದ ದಾಸರಹಳ್ಳಿಯಲ್ಲಿ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಮುಂದುವರೆಸಿದ್ದು, ಈಗಾಗಲೇ ಸುತ್ತಮುತ್ತಲಿನ 10 ಕಿ.ಮೀ. ವ್ಯಾಪ್ತಿಯಲ್ಲಿ ಕೋಳಿ ಮಾರಾಟ ನಿಷೇಧಿಸಲಾಗಿದೆ. ಅಲ್ಲದೆ, ಸುತ್ತಮುತ್ತಲಿನ ಪ್ರದೇಶದ ಪ್ರತಿ ಮನೆಗೂ ಭೇಟಿ ನೀಡಿ ಹಕ್ಕಿ ಜ್ವರ, ಲಕ್ಷಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ಮಾಹಿತಿ ನೀಡಿದೆ.

ಜತೆಗೆ ನಿಷೇಧಿತ ವಲಯದ ವ್ಯಾಪ್ತಿಯಲ್ಲಿ 865 ಕೋಳಿಗಳನ್ನು ನಾಶಪಡಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ. ಗುರುವಾರ 650 ಮನೆಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ವೇಳೆ ಜ್ವರ, ಕೆಮ್ಮಿನಿಂದ ಬಳಲುತ್ತಿದ್ದ 28 ಮಂದಿ ಮಾಹಿತಿ ಪಡೆಯಲಾಗಿದ್ದು ಅವರ ಮೇಲೆ ನಿಗಾ ಇಡಲಾಗಿದೆ.

Advertisement

ಅಲ್ಲದೇ, ಕೋಳಿ ನಾಶಪಡಿಸಲು ಕೆಲಸ ಮಾಡಿದ ಹತ್ತು ಮಂದಿ ಸಿಬ್ಬಂದಿಯನ್ನು ಸಾರ್ವಜನಿಕರೊಂದಿಗೆ ಬೆರೆಯಲು ಅವಕಾಶ ನೀಡದೆ ಅವರನ್ನು ನಿಗಾಕೇಂದ್ರದಲ್ಲಿ ಇಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಂಡದಿಂದ ಸ್ಥಳ ಪರಿಶೀಲನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ರಚಿಸಲಾಗಿರುವ ಶುಕ್ರವಾರ 40 ತಂಡಗಳು ಮನೆ ಮನೆಗೆ ತೆರಳಿ ಪರಿಶೀಲನೆ ನಡೆಸಲಿವೆ. ಇದೇ ವೇಳೆ ಕೇಂದ್ರದಿಂದ ಆಗಮಿಸಿರುವ ಪರಿಶೀಲನಾ ತಂಡವು ಶುಕ್ರವಾರ ದಾಸರಹಳ್ಳಿಯಲ್ಲಿ ಪರಿಶೀಲನೆ ನಡೆಸಲಿದೆ.

ದಾಸರಹಳ್ಳಿಯ ಭುವನೇಶ್ವರಿನಗರ ಕೋಳಿ ಮಾಂಸ ಮಾರಾಟ ಅಂಗಡಿಯಲ್ಲಿನ ಕೋಳಿಗಳಿಗೆ ಕಾಣಿಸಿಕೊಂಡ ಹಕ್ಕಿ ಜ್ವರ ಬೇರೆ ಫಾರಂ ಮತ್ತು ಅಂಗಡಿಗಳಿಗೆ ಹರಡದಂತೆ ಕ್ರಮ ಕೈಗೊಳ್ಳಲಾಗುತ್ತಿದೆ. ಜತೆಗೆ ಹಕ್ಕಿ ಜ್ವರ ಎಲ್ಲಿಂದ ಬಂತು ಎಂಬುದನ್ನು ಪತ್ತೆ ಮಾಡಲು ಕುಣಿಗಲ್‌, ಬನ್ನೇರಘಟ್ಟ ಸೇರಿ ಇನ್ನಿತರ ಕಡೆಗಳಿಗೆ ತೆರಳಿ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗಿದೆ.

ಸಹಾಯವಾಣಿ ಆರಂಭ: ಹಕ್ಕಿ ಜ್ವರ ಬೇರೆಡೆ ಹರಡದಂತೆ ತಡೆಯಲು ಎಲ್ಲ ಗ್ರಾಮ ಪಂಚಾಯತಿಗಳಿಗೂ ಪಶುಸಂಗೋಪನಾ ಇಲಾಖೆಯಿಂದ ಎಚ್ಚರಿಕೆ ನೀಡಲಾಗಿದೆ. ಅದರ ಜತೆಗೆ 2017ರ ಡಿ. 15ರಿಂದೀಚೆಗೆ ಕೋಳಿ ಸೇರಿ ಇನ್ನಿತರ ಕಾಡು ಪಕ್ಷಿಗಳು, ವಲಸೆ ಹಕ್ಕಿಗಳು ಅಸಹಜವಾಗಿ ಸಾವನ್ನಪ್ಪಿರುವುದು ಕಂಡು ಬಂದಿದ್ದರೆ ಅಂತಹವುಗಳ

ಬಗ್ಗೆ ಮಾಹಿತಿ ನೀಡಲು ಹಾಗೂ ಜ್ವರಕ್ಕೆ ಸಂಬಂಧಿಸಿದ ಅನುಮಾನಗಳನ್ನು ನಿವಾರಿಸಿಕೊಳ್ಳಲು ಸಹಾಯವಾಣಿ ಸ್ಥಾಪಿಸಲಾಗಿದೆ. ಟೋಲ್‌ ಫ್ರೀ ಸಂಖ್ಯೆ 1800 425 0012, ದೂ.ಸಂ. 080 23414100ಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಜೊತೆಗೆ ahvshelplinecenter@gmail.com ಗೆ ಮೇಲ್‌ ಕಳುಹಿಸಲು ಅವಕಾಶ ಕಲ್ಪಿಸಲಾಗಿದೆ.

ರಫ್ತು ನಿಷೇಧಕ್ಕೆ ಮನವಿ?: ಹಕ್ಕಿ ಜ್ವರ ಹರಡದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನೂ ಕೈಗೊಂಡಿದ್ದೇವೆ. ಸದ್ಯ ಯಾವುದೇ ಆತಂಕದ ಪರಿಸ್ಥಿತಿ ಇಲ್ಲ. ನಿಷೇಧಿತ ವ್ಯಾಪ್ತಿಯಲ್ಲಿನ ಕೋಳಿಗಳನ್ನು ಕ್ರಮಬದ್ಧವಾಗಿ ನಾಶಪಡಿಸಲಾಗಿದೆ. ರಾಜ್ಯಾದ್ಯಂತ ನಿಗಾ ಮುಂದುವರೆಸಿದ್ದೇವೆ.

ಕೇಂದ್ರದ ತಂಡವು ಶುಕ್ರವಾರ ಸ್ಥಳ ಪರಿಶೀಲನೆ ನಡೆಸಲಿದ್ದು, ಬಳಿಕ ದೇಶದಿಂದ ಕೋಳಿ ರಫ್ತು ನಿಷೇಧ ಮಾಡಬೇಕೆ ಅಥವಾ ಬೇಡವೇ  ಎಂಬುದನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದು ಪಶುಸಂಗೋಪನಾ ಇಲಾಖೆಯ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next