Advertisement

ಎಂ.ಸ್ಯಾಂಡ್‌ ಘಟಕ ಆರಂಭಿಸಲು ಸೂಚನೆ

09:47 AM Jul 03, 2019 | Team Udayavani |

ಬೆಳಗಾವಿ: ಅಕ್ರಮ ಮರಳು ಸಾಗಾಣಿಕೆ ತಡೆಗಟ್ಟಲು ಎಲ್ಲ ಮಾರ್ಗಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ಜತೆಗೆ ಜಿಲ್ಲೆಯಲ್ಲಿ ಈಗಾಗಲೇ ಅನುಮತಿ ನೀಡಲಾಗಿರುವ ಎಂ.ಸ್ಯಾಂಡ್‌ ಘಟಕಗಳನ್ನು ಆದಷ್ಟು ಬೇಗ ಆರಂಭಿಸಲು ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ವಿವಿಧ ಇಲಾಖೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಎಂ.ಸ್ಯಾಂಡ್‌ ಗುಣಮಟ್ಟದ ಬಗ್ಗೆ ನಿರಂತರ ಪರಿಶೀಲನೆ ಕೈಗೊಳ್ಳಬೇಕು. ಅದೇ ರೀತಿ ಘಟಕಗಳು ಪ್ರತಿ ತಿಂಗಳು ಸ್ವಯಂ ಪ್ರೇರಣೆಯಿಂದ ತಮ್ಮ ಉತ್ಪಾದನೆಯ ಗುಣಮಟ್ಟವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಘಟಕಗಳಿಗೆ ಸೂಚನೆ ನೀಡುವಂತೆ ತಿಳಿಸಿದರು.

67 ಕ್ರಷರ್‌ ನವೀಕರಣಕ್ಕೆ ಅರ್ಜಿ ಬಂದಿವೆ. 61 ಅರ್ಜಿ ವಿಲೇವಾರಿ ಬಾಕಿ ಉಳಿದಿವೆ. ಒಂದು ತಿರಸ್ಕೃತಗೊಂಡಿದ್ದು, ಒಂದು ಘಟಕಕ್ಕೆ ಅನುಮತಿ ನೀಡಲಾಗಿದೆ. ಎಂ.ಸ್ಯಾಂಡ್‌ ಘಟಕ 48 ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಕೇಬಲ್ ಎಂ.ಸ್ಯಾಂಡ್‌ ತಯಾರಿಗೆ ಮಾತ್ರ ಎಂಟು ಘಟಕ ಕೆಲಸ ಮಾಡುತ್ತಿವೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕರು ವಿವರಣೆ ನೀಡಿದರು.

ಜಿಲ್ಲಾಧಿಕಾರಿ ಡಾ| ಎಸ್‌.ಬಿ. ಬೊಮ್ಮನಹಳ್ಳಿ ಮಾತನಾಡಿ, 27 ಘಟಕಗಳ ಆರಂಭಕ್ಕೆ ಮರು ಟೆಂಡರ್‌ ಮಾಡುವ ಅಗತ್ಯವಿದೆ. ತಕ್ಷಣವೇ ಮರು ಟೆಂಡರ್‌ ಪ್ರಕ್ರಿಯೆ ಆರಂಭಿಸಬೇಕು. ಕ್ರಷರ್‌ ಮತ್ತು ಕ್ವಾರಿಗಳ ಸುತ್ತಮುತ್ತಲೂ ಸಸಿಗಳನ್ನು ನೆಡಲು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮುಂದಾಗಬೇಕು ಎಂದು ಸೂಚನೆ ನೀಡಿದರು

ಉತ್ಪಾದನೆ ಮೇಲೂ ನಿಗಾ ವಹಿಸಿ: ಅನುಮತಿ ಪಡೆದರೂ ಎಂ.ಸ್ಯಾಂಡ್‌ ಉತ್ಪಾದನೆ ಆರಂಭಿಸದ 9 ಘಟಕಗಳಿಗೆ ನೋಟಿಸ್‌ ನೀಡಬೇಕು. ಕ್ವಾರಿ ಮತ್ತು ಕ್ರಷರ್‌ ಸೇರಿದಂತೆ ವಿವಿಧ ಘಟಕಗಳಿಗೆ ನಿಗದಿಪಡಿಸಿದ ಪ್ರಮಾಣದಲ್ಲಿಯೇ ಉತ್ಪಾದನೆ ಮಾಡಲಾಗುತ್ತಿದೆಯೇ ಎಂಬುದರ ಮೇಲೆ ನಿರಂತರ ನಿಗಾ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ ತಿಳಿಸಿದರು.

Advertisement

ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ವತಿಯಿಂದ ಜಮೀನು ಪಡೆದುಕೊಂಡು ಇದುವರೆಗೂ ಕೈಗಾರಿಕೆ ಆರಂಭಿಸದವರಿಗೆ ನೋಟಿಸ್‌ ನೀಡಬೇಕು. ಕಿತ್ತೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲು ಸಚಿವರು ಸಲಹೆ ನೀಡಿದರು.

ನಿಗದಿತ ಪ್ರದೇಶದಲ್ಲಿ ಕೈಗಾರಿಕಾ ಸ್ಥಾಪನೆಗೆ ಯಾರಾದರೂ ಮುಂದೆ ಬಂದರೆ ಮಾತ್ರ ಜಮೀನು ಗುರುತಿಸಿ ಅವರಿಗೆ ಹಸ್ತಾಂತರಿಸಬೇಕು. ನಿರ್ದಿಷ್ಟ ಉದ್ದೇಶವಿಲ್ಲದೇ ಸಾವಿರಾರು ಎಕರೆ ಬ್ಲಾಕ್‌ ಮಾಡಬೇಕು. ಜಿಲ್ಲೆಯ ನೇಸರಗಿ ಭಾಗದಲ್ಲಿ ಕೈಗಾರಿಕಾ ಪ್ರದೇಶದ ಅಭಿವೃದ್ಧಿಗೆ ಅಧಿಕಾರಿಗಳು ಮುಂದಾಗಬೇಕು. 220 ಕೆ.ವಿ. ವಿದ್ಯುತ್‌ ಸ್ಟೇಷನ್‌ ಸ್ಥಾಪನೆಗೆ ಅಗತ್ಯವಿರುವ ಜಮೀನು ಗುರುತಿಸಿ ಅದನ್ನು ವಿದ್ಯುತ್‌ ಇಲಾಖೆಗೆ ಒದಗಿಸುವಂತೆ ಸಚಿವರು ತಿಳಿಸಿದರು. ವಿವಿಧ ಕಾರ್ಖಾನೆಗಳಿಂದ 6640 ಮಾದರಿಗಳನ್ನು ಹಾಗೂ ನದಿ ನೀರು ಸಂಗ್ರಹಿಸಿ ಪರೀಕ್ಷೆ ಮಾಡಲಾಗಿದೆ. ಪರಿಸರ ರಕ್ಷಣೆಗೆ ಸಂಬಂಧಿಸಿದಂತೆ ವಿವಿಧ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿ ಗೋಪಾಲಕೃಷ್ಣ ತಿಳಿಸಿದರು.

ಚಿಕ್ಕೋಡಿ ಪ್ರಾದೇಶಿಕ ಕಚೇರಿ ಅಧಿಕಾರಿ ಜಗದೀಶ ಮಾತನಾಡಿ, 325 ಉದ್ಯಮಗಳಿದ್ದು, ಸೂಕ್ತ ಕಾರ್ಯ ನಿರ್ವಹಣೆಗೆ ಸಿಬ್ಬಂದಿ ಕೊರತೆಯಿಂದ ಅನಾನುಕೂಲವಾಗುತ್ತಿದೆ ಎಂದರು.

ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸೂಕ್ತವಾಗಿ ವಿಲೇವಾರಿ ಮಾಡದಿರುವ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗೂ ಅಧಿಕಾರಿಗಳಿಗೆ ನೋಟಿಸ್‌ ನೀಡಬೇಕು. ನೋಟಿಸ್‌ಗೆ ಸರಿಯಾಗಿ ಸ್ಪಂದಿಸದಿದ್ದರೆ ಪ್ರಕರಣ ದಾಖಲಿಸುವಂತೆ ಪರಿಸರ ಇಲಾಖೆಯ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ನದಿ ನೀರು ಕಲುಷಿತಕ್ಕೆ ಕಾರಣವಾಗುತ್ತಿರುವ ಬಗ್ಗೆ ಸಮಗ್ರ ಸಮೀಕ್ಷೆ ಕೈಗೊಂಡರೆ ಅದರ ಆಧಾರದ ಮೇಲೆ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ| ಬೊಮ್ಮನಹಳ್ಳಿ ತಿಳಿಸಿದರು.

ಸಣ್ಣ ಕೈಗಾರಿಕೆ ಪ್ರದೇಶ ಅಭಿವೃದ್ಧಿಗೆ ಸೂಚನೆ: ಸ್ಥಳೀಯ ಜನರಿಗೆ ಉದ್ಯಮ ಸ್ಥಾಪನೆಗೆ ಅನುಕೂಲವಾಗುವಂತೆ ಜಿಲ್ಲೆಯ ಪ್ರತಿ ತಾಲೂಕಿನಲ್ಲಿ 20ರಿಂದ 30 ಎಕರೆ ಜಮೀನು ಅಭಿವೃದ್ಧಿಪಡಿಸಿ ಕೈಗಾರಿಕಾ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು.

ಸಣ್ಣ ಕೈಗಾರಿಕೆ ಅಭಿವೃದ್ಧಿಗೆ ಉದ್ಯಮಬಾಗದಿಂದ ಐದು ಕಿ.ಮೀ. ದೂರದ ಬಸ್ತವಾಡ ಬಳಿ ನೂರು ಎಕರೆ ಗುರುತಿಸಲಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದೊಡ್ಡ ಬಸವರಾಜ ವಿವರಿಸಿದರು.

ಐಪಂ ಸಿಇಒ ಡಾ| ರಾಜೇಂದ್ರ ಕೆ.ವಿ. ಮಾತನಾಡಿ, ನರೇಗಾ ಯೋಜನೆಯಡಿ ಪ್ರತಿದಿನ 45 ಸಾವಿರ ಜನರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದು ವಿವರಿಸಿದರು.

ಮಹಾನಗರ ಪೊಲೀಸ್‌ ಆಯುಕ್ತ ಬಿ.ಎಸ್‌. ಲೋಕೇಶ ಕುಮಾರ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ಅಪರ ಜಿಲ್ಲಾಧಿಕಾರಿ ಡಾ| ಬೂದೆಪ್ಪ ಎಚ್.ಬಿ., ಗಣಿ ಮತ್ತು ಭೂವಿಜ್ಞಾನ, ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾ ಕೈಗಾರಿಕಾ ಕೇಂದ್ರ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಕುಡಿಯುವ ನೀರು ಮತ್ತು ಒಳಚರಂಡಿ, ಪ್ರವಾಸೋದ್ಯಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

 

ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಪ್ರಸ್ತಾವ ತಯಾರಿಸಿ:

ಬೆಳಗಾವಿ ನಗರ ಬೆಳೆಯುತ್ತಿರುವುದರಿಂದ ಮತ್ತೂಂದು ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆಯ ಅಗತ್ಯವಿದ್ದು, ಈ ಬಗ್ಗೆ ಪ್ರಸ್ತಾವ ತಯಾರಿಸಬೇಕು. ತ್ಯಾಜ್ಯ ನಿರ್ವಹಣಾ ಘಟಕಗಳನ್ನು ಬೆಳಗಾವಿ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ಸ್ಥಾಪನೆ ಮಾಡುವುದರಿಂದ ತ್ಯಾಜ್ಯ ಸಾಗಾಣಿಕೆಗೆ ಅನುಕೂಲವಾಗಲಿದೆ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಅವರು, ಸವದತ್ತಿ ಮತ್ತು ಬೆಳಗಾವಿಯಲ್ಲಿರುವ ವೈದ್ಯಕೀಯ ತ್ಯಾಜ್ಯ ನಿರ್ವಹಣಾ ಘಟಕಗಳ ಸಮರ್ಪಕ ನಿರ್ವಣೆಗಾಗಿ ಏರಿಯಾ ಹಂಚಿಕೆ ಮಾಡಬೇಕು. ಈ ರೀತಿಯ ಇನ್ನೊಂದು ಘಟಕ ಸ್ಥಾಪಿಸುವ ಬಗ್ಗೆ ಪರಿಶೀಲಿಸುವಂತೆ ನಿರ್ದೇಶನ ನೀಡಿದರು. ಜಿಲ್ಲೆಯ ಕೈಗಾರಿಕಾ ಕೇಂದ್ರಗಳಿಂದ ಹೊರಹೋಗುವ ಮಲಿನ ನೀರು ನೇರವಾಗಿ ನದಿ ಸೇರಿದಂತೆ ಕ್ರಮ ಕೈಗೊಳ್ಳಬೇಕು ಎಂದರು.
ಪ್ರವಾಸೋದ್ಯಮ- ಮಾಸ್ಟರ್‌ ಪ್ಲ್ಯಾನ್‌ ರೂಪಿಸಿ:

ಕೇವಲ ದೇವಸ್ಥಾನಗಳ ಆವರಣದಲ್ಲಿ ಯಾತ್ರಿ ನಿವಾಸಗಳನ್ನು ಸ್ಥಾಪಿಸುವ ಬದಲು ಗೋಕಾಕ, ಗೊಡಚಿನಮಲ್ಕಿ, ಸೊಗಲ ಮತ್ತಿತರ ಪ್ರವಾಸೋದ್ಯಮ ಸ್ಥಳಗಳ ಅಭಿವೃದ್ಧಿಗೆ ಮಾಸ್ಟರ್‌ ಪ್ಲ್ಯಾನ್‌ ರೂಪಿಸಬೇಕು. ಜತೆಗೆ ಖಾಲಿ ಇರುವ ಸಮುದಾಯ ಭವನಗಳಲ್ಲಿ ಅಂಗನವಾಡಿ ಕೇಂದ್ರಗಳನ್ನು ನಡೆಸುವಂತೆ ಸಚಿವ ಸತೀಶ ಜಾರಕಿಹೊಳಿ ತಿಳಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next