ಮಣಿಪಾಲ: ರಾಷ್ಟ್ರೀಯ ಹೆದ್ದಾರಿ 169ಎ ಇಂದ್ರಾಳಿ ಮೇಲ್ಸೇತುವೆ ನಿರ್ಲಕ್ಷ್ಯ ವಹಿಸಿ ಕಾಮಗಾರಿ ನಡೆಸುತ್ತಿರುವ ಕಾರಣ ಅನೇಕ ಅಪಘಾತಗಳು ಸಂಭವಿಸು ತ್ತಿವೆ. ಈ ಸಂಬಂಧ ಅಪಘಾತಕ್ಕೆ ಕಾರಣಕರ್ತರಾದ ಗುತ್ತಿಗೆದಾ ರರು, ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯ ಮತ್ತಿತರ ಪ್ರಕರಣಗಳನ್ನು ದಾಖಲಿಸ ಬೇಕು. ನ.10ರೊಳಗೆ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಡಾ| ಕೆ. ವಿದ್ಯಾಕುಮಾರಿ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣ ದಲ್ಲಿ ಇಂದ್ರಾಳಿ ಮೇಲ್ಸೇತುವೆ ಕಾಮ ಗಾರಿ ಪ್ರಗತಿ ಪರಿಶೀಲನೆ ಕುರಿತು ಚರ್ಚಿಸುವ ಸಲುವಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದ್ರಾಳಿ ಮೇಲ್ಸೇತುವೆ ರಸ್ತೆ ಕಾಮಗಾರಿ ವಿಳಂಬದಿಂದ ಟ್ರಾಫಿಕ್ ಸಮಸ್ಯೆಯಾಗಿ ಎರಡು ವರ್ಷಗಳಿಂದ ಮಾರಣಾಂತಿಕ ರಸ್ತೆ ಅಪಘಾತಗಳು ಸಂಭವಿಸಿ, ಮರಣ ಹೊಂದಿರುತ್ತಾರೆ. ಇದಕ್ಕೆ ಅಧಿಕಾರಿಗಳು ಹಾಗೂ ಗುತ್ತಿಗೆ ದಾರರು ಕಾರಣವಾಗಿದ್ದು, ರಸ್ತೆ ಅಪಘಾತಗಳಿಗೆ ಕಾರಣರಾದ ರೈಲ್ವೆ ಅಧಿಕಾರಿಗಳು, ರಾ.ಹೆ. ಪ್ರಾಧಿಕಾರದ ಅಭಿಯಂತರು ಹಾಗೂ ಗುತ್ತಿಗೆದಾರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ನಿರ್ದೇಶಿಸಿದರು.
ಕಾಮಗಾರಿ ವಿಳಂಬದಿಂದ 2023ರ 8 ಅಪಘಾತ ಪ್ರಕರಣದಲ್ಲಿ ಒಬ್ಬ ಮೃತಪಟ್ಟರೆ, 7ರಲ್ಲಿ ತೀವ್ರ ತರಹದ ಗಾಯ ಹಾಗೂ ಸಾಧಾರಣ ಗಾಯವಾಗಿರುತ್ತದೆ. 2024ರಲ್ಲಿ ಸಂಭವಿಸಿದ 10 ಅಪಘಾತದಲ್ಲಿ ಇಬ್ಬರು ಮರಣ ಹೊಂದಿ, 10 ಮಂದಿ ಗಾಯಗೊಂಡಿದ್ದರು. ಗುತ್ತಿಗೆದಾರರು ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಬೇಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಿದ್ದರಿಂದ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸಚಿವಾಲಯದ ಕಾರ್ಯಾಲಯಕ್ಕೆ ಪತ್ರ ಬರೆಯುವುದಾಗಿ ತಿಳಿಸಿದರು.
ಇಂದ್ರಾಳಿ ಮೇಲ್ಸೇತುವೆ ಕಾಮಗಾರಿ 2018-19ರಲ್ಲಿ ಆರಂಭವಾಗಿದೆ. ಅಧಿ ಕಾರಿಗಳ ನಿರ್ಲಕ್ಷ್ಯ, ಸಮನ್ವಯದ ಕೊರತೆಯಿಂದ ಕಾಮಗಾರಿ ನಿಧಾನಗತಿಯಲ್ಲಿ ಸಾಗಿದೆ ಎಂದು ಹೆದ್ದಾರಿ ಪ್ರಾಧಿಕಾರ ಮತ್ತು ರೈಲ್ವೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ| ಅರುಣ್ ಕೆ. ಮಾತನಾಡಿ, ಕಾಮಗಾರಿಯ ವಿಳಂಬದ ಬಗ್ಗೆ ಅನೇಕ ಸಂಘ-ಸಂಸ್ಥೆಗಳು, ಸಾರ್ವನಿಕರು ಪ್ರತಿಭಟನೆ ಮಾಡುತ್ತಿದ್ದಾರೆ. ಅದಕ್ಕೆ ಜಿಲ್ಲಾಡಳಿತವೇ ಉತ್ತರ ನೀಡಬೇಕು. ಸಂಬಂಧಪಟ್ಟ ಅಧಿಕಾರಿಗಳು ನಿಗದಿತ ಕಾಲಾವಧಿಯಲ್ಲಿ ಕಾಮಗಾರಿಗಳನ್ನು ಕೈಗೊಳ್ಳದಿರುವುದು ಇದಕ್ಕೆ ಕಾರಣ. ರಸ್ತೆ ಅಪಘಾತದಿಂದ ಮರಣ ಹೊಂದಿದ, ಗಾಯಗೊಂಡಿರುವವರು ನಿಮ್ಮ ಕುಟುಂಬದವರಾಗಿದ್ದರೆ ನೀವು ಸಹಿಸುತ್ತಿದ್ದೀರಾ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ಇತ್ತೀಚೆಗಿನ ಅಪಘಾತಗಳಿಗೆ ಸಂಬಂಧಿಸಿ ಅಧಿಕಾರಿಗಳನ್ನು ಬಂಧಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕೊಂಕಣ ರೈಲ್ವೆ ಸೀ. ಎಂಜಿ ನಿಯರ್ ಗೋಕುಲ್‌ದಾಸ್, ಶೃಂಗೇರಿ- ಚಿಕ್ಕಮಗಳೂರು ರಾ.ಹೆ. ವಿಭಾಗದ ಸ. ಕಾರ್ಯಪಾಲಕ ಅಭಿಯಂತ ಮಂಜುನಾಥ್, ವಾರ್ತಾಧಿಕಾರಿ ಮಂಜುನಾಥ್ ಉಪಸ್ಥಿತರಿದ್ದರು.