ಶಿವಮೊಗ್ಗ: ಸರ್ಕಾರದ ವತಿಯಿಂದ ಕೈಗೊಳ್ಳಲಾಗಿರುವ ರಾಷ್ಟ್ರೀಯ ಹೆದ್ದಾರಿ, ಸಣ್ಣ ಮತ್ತು ಭಾರೀ ನೀರಾವರಿ ಇಲಾಖೆಯ ವಿವಿಧ ಯೋಜನೆಗಳಿಗೆ ಅಗತ್ಯವಾಗಿರುವ ಮರಳು ಸರಬರಾಜು ಮಾಡಲು ನಿಯಮಾನುಸಾರ ಹಾಗೂ ಅವರು ಬಯಸಿದಲ್ಲಿ ಪ್ರತ್ಯೇಕ ಮರಳು ಕ್ವಾರಿಗಳನ್ನು ಒದಗಿಸುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ಶ್ರೀಮತಿ ರಷ್ಮಿ ಅವರಿಗೆ ಸೂಚಿಸಿದರು.
ಮರಳು ಮತ್ತು ಗಣಿಗಾರಿಕೆ ಕುರಿತ ಮಾಸಿಕ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಕಾಮಗಾರಿಗಳ ಉಪಯೋಗಕ್ಕೆ ತೀರ್ಥಹಳ್ಳಿ ತಾಲೂಕಿನ ಬುಕ್ಲಾಪುರ ಮತ್ತು ಶಿವಮೊಗ್ಗ ತಾಲೂಕಿನ ಹೊಳಲೂರು ಭಾಗಗಳಲ್ಲಿ ಮರಳು ಪರವಾನಗಿ ನೀಡಬೇಕೆಂದು ತುಂಗಾ ಮೇಲ್ದಂಡೆ ಯೋಜನೆ ಅಭಿಯಂತರರು ಕೋರಿದ್ದು, ಅವರ ಕೋರಿಕೆಯಂತೆ ಮರಳು ಕ್ವಾರಿ ಒದಗಿಸುವಂತೆಯೂ ಸೂಚಿಸಿದರು.
ಕ್ವಾರಿಗಳಿಂದ ಮರಳನ್ನು ತೆಗೆದು ಸಾರ್ವಜನಿಕರಿಗೆ ಅನುಕೂಲವಾಗುವಂತೆ ತಾಲೂಕು ಮಟ್ಟದಲ್ಲಿ ಮರಳು ದಾಸ್ತಾನು ಮಾಡಲು ಸ್ಟಾಕ್ ಯಾರ್ಡ್ ಮಾಡುವುದಕ್ಕೆ ಅನುಮತಿ ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಅಲ್ಲದೇ ಕೋವಿಡ್ ಹಾವಳಿಯಿಂದಾಗಿ ಬಗ್ಗೊಡಿಗೆ ಗ್ರಾಮದಲ್ಲಿ ಮರಳು ಕ್ವಾರೆಯನ್ನು ನಿಲ್ಲಿಸುವಂತೆ ನಾಲೂರು ಗ್ರಾಪಂಯಿಂದ ನೀಡಿರುವ ಮನವಿಯು ಸರ್ಕಾರದ ಆದೇಶದಕ್ಕೆ ವಿರುದ್ಧವಾಗಿದ್ದು, ಕೋರಿಕೆಯು ಪುರಸ್ಕೃತವಲ್ಲ ಎಂದರು. ಮುಂಡುವಳ್ಳಿ, ಮಳಲೂರು ಮತ್ತು ಅರೇಹಳ್ಳಿ ಗ್ರಾಮ ಮರಳು ಬ್ಲಾಕ್ ಗಳಿಂದ ಚಿಕ್ಕಮಗಳೂರು ಜಿಲ್ಲೆಗೆ ಸೇರಿದ ಗಡಿ ಗ್ರಾಮ ಬಳಸಿಕೊಂಡು ಶಿವಮೊಗ್ಗ ಜಿಲ್ಲೆಗೆ ಮರಳು ಸಾಕಾಣಿಕೆ ವಾಹನಗಳು ಪ್ರವೇಶಿಸಬೇಕಾಗಿದ್ದು, ಪರವಾನಗಿಯಲ್ಲಿ ಸದರಿ ಗ್ರಾಮಗಳ ಹೆಸರುಗಳು ಬಾರದಿರುವುದರಿಂದ ಚಿಕ್ಕಮಗಳೂರು ಪೊಲೀಸರು ಪರವಾನಗಿ ಇದ್ದರೂ ವಾಹನಗಳನ್ನು ಜಪ್ತಿ ಮಾಡುತ್ತಿರುವ ಬಗ್ಗೆ ದೂರು ಕೇಳಿ ಬರುತ್ತಿವೆ. ಈ ಬಗ್ಗೆ ಚಿಕ್ಕಮಗಳೂರು ಡಿಸಿ ಜತೆ ಸಮಾಲೋಚನೆ ನಡೆಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಉಪ ವಿಭಾಗಾಧಿಕಾರಿ ಕೃಷ್ಣಮೂರ್ತಿ ಇದ್ದರು.