ಕಲಬುರಗಿ: ಜಿಲ್ಲೆಯಲ್ಲಿರುವ ಎಲ್ಲ ಮತಗಟ್ಟೆಗಳಿಗೆ ನಿರ್ದಿಷ್ಟ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಲು ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ಮುಂದಿನ ಮೂರು ದಿನಗಳೊಳಗಾಗಿ ಅಧಿಕಾರಿಗಳು ಎಲ್ಲ ಮತಗಟ್ಟೆಗಳಿಗೆ ಸೌಲಭ್ಯಗಳನ್ನು ಕಲ್ಪಿಸಿ ಅವುಗಳ ಚಿತ್ರಸಹಿತ ವರದಿ ನೀಡಬೇಕೆಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಚುನಾವಣೆಗೆ ನೇಮಿಸಲಾದ ವಿವಿಧ ತಂಡಗಳ ನೋಡಲ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಎಲ್ಲ ಮತಗಟ್ಟೆ ಕೇಂದ್ರಗಳ ಕಟ್ಟಡ ದುರಸ್ತಿ, ಶೌಚಾಲಯ, ಶೌಚಾಲಯಕ್ಕೆ ನೀರಿನ ವ್ಯವಸ್ಥೆ, ಅಂಗವಿಕಲರು ಸರಾಗವಾಗಿ ಮತದಾನಕ್ಕೆ ಆಗಮಿಸುವ ಹಾಗೆ ರ್‍ಯಾಂಪ್ ವ್ಯವಸ್ಥೆ ಕಲ್ಪಿಸಬೇಕು. ತಹಶೀಲ್ದಾರ್‌ರು ಎಲ್ಲ ಮತಗಟ್ಟೆಗಳಿಗೆ ಖುದ್ದಾಗಿ ಭೇಟಿ ನೀಡಿ ದುರಸ್ತಿ ಕಾರ್ಯ ಪರಿಶೀಲಿಸಿ ವರದಿ ನೀಡಬೇಕು. ಹೊಸದಾಗಿ ನಿರ್ಮಿಸಬೇಕಾಗುವ ಶೌಚಾಲಯ, ಶೌಚಾಲಯ ದುರಸ್ತಿ, ರ್‍ಯಾಂಪ್ ನಿರ್ಮಾಣಗಳಿಗೆ ಬೇಕಾಗುವ ಅನುದಾನದ ವಿವರ ಸಹ ಸಲ್ಲಿಸಬೇಕು ಎಂದರು.
ಆಳಂದ ತಾಲೂಕಿನ ಮತಗಟ್ಟೆಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸಲು ಮರು ಸರ್ವೇ ಕೈಗೊಂಡು ತಹಶೀಲ್ದಾರರು ಹಾಗೂ ಜಿಪಂ ಕಾರ್ಯದರ್ಶಿಗಳು ಮುತುವರ್ಜಿ ವಹಿಸಿ ಮೂರು ದಿನಗಳೊಳಗಾಗಿ ಎಲ್ಲ ಕನಿಷ್ಠ ಸೌಲಭ್ಯಗಳು ಸ್ಥಾಪಿಸಿರುವ ಬಗ್ಗೆ ಖಚಿತಪಡಿಸಿಕೊಂಡು ವರದಿ ನೀಡಬೇಕು.
ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ವತಿಯಿಂದ ಅವಶ್ಯಕ ಶೌಚಾಲಯಗಳಿಗೆ ನೀರಿನ ಸಂಪರ್ಕ ಕಲ್ಪಿಸಬೇಕೆಂದು ಸೂಚಿಸಿದರು. ಮತದಾನ ದಿನದಂದು ಪ್ರತಿ ಮತಗಟ್ಟೆಗೆ ಕನಿಷ್ಠ ಸಾವಿರ ಜನರು ಮತ ಚಲಾಯಿಸಲು ಆಗಮಿಸಲಿದ್ದು, ಅವರಿಗೆ ಸೂಕ್ತ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು. ನೆರಳು ಇಲ್ಲದ ಕಡೆಗಳಲ್ಲಿ ಶಾಮಿಯಾನದ ವ್ಯವಸ್ಥೆ ಮಾಡಬೇಕು. ಈ ಬಾರಿ ಪ್ರತಿಯೊಂದು ಮತಗಟ್ಟೆಯಲ್ಲಿ ಕನಿಷ್ಠ ಹತ್ತರಿಂದ ಹದಿನೈದು ಜನ ಚುನಾವಣಾ ಸಿಬ್ಬಂದಿಗಳೇ ಇರುವರು. ಅವರಿಗೂ ಸಹಿತ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಮಾಡಬೇಕೆಂದು ಸೂಚಿಸಿದರು.
ಚುನಾವಣಾ ಕರ್ತವ್ಯಕ್ಕೆ ನೇಮಿಸಲಾಗಿರುವ ಎಲ್ಲ ಅಧಿಕಾರಿಗಳು ಚುನಾವಣಾ ಶಾಖೆಯೊಂದಿಗೆ ಒಳ್ಳೆಯ ಸಂಬಂಧ ಇಟ್ಟುಕೊಳ್ಳಬೇಕು. ಅಧಿಕಾರಿಗಳು ಚುನಾವಣಾ ಆಯೋಗದಿಂದ ಹೊರಡಿಸಲಾಗುವ ಎಲ್ಲಾ ಮಾರ್ಗಸೂಚಿಗಳನ್ನು ಹಾಗೂ ಸುತ್ತೋಲೆಗಳನ್ನು ಕಡ್ಡಾಯವಾಗಿ ಹಾಗೂ ಸಂಪೂರ್ಣವಾಗಿ ಓದಿಕೊಳ್ಳಬೇಕು. ಯಾವುದೇ ಗೊಂದಲ ಆಸ್ಪದ ನೀಡಬಾರದು. ಚುನಾವಣಾಧಿಕಾರಿಗಳು ಚುನಾವಣೆಯ ಕೈಪಿಡಿಯನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಬೇಕು. ಜಿಲ್ಲೆಯ ಯಾವುದೇ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯೊಳಗಡೆ ರಾಜಕೀಯ ಪಕ್ಷದ ಕಚೇರಿಗಳು ಇದ್ದಲ್ಲಿ, ಅಂತಹ ಪಕ್ಷಗಳಿಗೆ ನೋಟಿಸ್ ನೀಡಿ ತಾತ್ಕಾಲಿಕವಾಗಿ ಕಚೇರಿಯನ್ನು ಸ್ಥಳಾಂತರಿಸಲು ತಿಳಿಸಬೇಕು ಎಂದರು.
ಜಿಲ್ಲಾ ಮಾಸ್ಟರ್ ಟ್ರೇನರ್ ಶಶಿಶೇಖರ ರೆಡ್ಡಿ ಅವರು ಚುನಾವಣಾ ಕರ್ತವ್ಯಕ್ಕೆ ನೇಮಿಸಲಾದ ವಿವಿಧ ತಂಡಗಳ ಜವಾಬ್ದಾರಿಗಳನ್ನು ಪಿ.ಪಿ.ಟಿ. ಮೂಲಕ ವಿವರಿಸಿದರು. ಸಹಾಯಕ ಆಯುಕ್ತೆ ಡಾ| ಬಿ. ಸುಶೀಲ, ಪಾಲಿಕೆ ಆಯುಕ್ತ ರಘುನಂದನ್ ಮೂರ್ತಿ, ಜೇವರ್ಗಿ ತಹಶೀಲ್ದಾರ ಆಕೃತಿ ಸಾಗರ, ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ, ಚುನಾವಣಾ ತಹಶೀಲ್ದಾರ ಪ್ರಕಾಶ ಚಿಂಚೋಳಿಕರ ಮತ್ತಿತರ ಅಧಿಕಾರಿಗಳು ಹಾಜರಿದ್ದರು.