ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ 35 ವಾರ್ಡ್‌ಗಳಲ್ಲಿ ಹಾಪ್‌ಕಾಮ್ಸ್ ವತಿಯಿಂದ ತರಕಾರಿ ಹಾಗೂ ಹಣ್ಣು ಮಾರಾಟ ಮಳಿಗೆ ಆರಂಭಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದ ಬಾಲರಾಜ್ ಅರಸ್ ರಸ್ತೆಯಲ್ಲಿನ ಹಾಪ್ ಕಾಮ್ಸ್ ಕಚೇರಿಯಲ್ಲಿ ಶನಿವಾರ ಹಾಪ್‌ಕಾಮ್ಸ್ ಮತ್ತುಎಪಿಎಂಸಿ ಸದಸ್ಯರು ಮತ್ತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈಗ ನಗರದ ವಿವಿಧ ಬಡಾವಣೆಗಳಲ್ಲಿ 15 ಹಾಪ್ ಕಾಮ್ಸ್ ಮಳಿಗೆಗಳು ಕಾರ್ಯ ನಿರ್ವಹಿಸುತ್ತಿವೆ. ಇನ್ನು 20 ವಾರ್ಡುಗಳಲ್ಲಿ ಹಾಪ್‌ಕಾಮ್ಸ್ ಮಳಿಗೆ ತೆರೆಯಲು ಚಿಂತನೆ ನಡೆಸಲಾಗಿದೆ. ಹಾಪ್‌ಕಾಮ್ಸ್ ಮಳಿಗೆ ತೆರೆಯಲು ಸಾಕಷ್ಟು ಜನ ಮುಂದೆ ಬಂದಿದ್ದಾರೆ. ಆದರೆ ಅವರಿಗೆ ಸ್ಥಳದ ಅವಶ್ಯಕತೆ ಇದೆ. ಹೀಗಾಗಿ ಸೂಕ್ತ ಸ್ಥಳ ನೀಡುವಂತೆ ನಗರ ಪಾಲಿಕೆಗೆ ತಿಳಿಸಲಾಗಿದೆ ಎಂದರು.
ನಗರ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲಾ ವಾರ್ಡ್‌ಗಳಲ್ಲಿ ಹಾಪ್‌ಕಾಮ್ಸ್ ತರಕಾರಿ ಮತ್ತು ಹಣ್ಣು ಮಾರಾಟ ಮಳಿಗೆ ಆರಂಭಗೊಂಡರೆ ನಾಗರಿಕರಿಗೆ ಗುಣಮಟ್ಟದ ತರಕಾರಿ ಹಾಗೂ ಹಣ್ಣು ಲಭ್ಯವಾಗಲಿದೆ. ಅಲ್ಲದೆ ನಿಗದಿಪಡಿಸಿದ ದರಕ್ಕೆ ಹಣ್ಣು ಮತ್ತು ತರಕಾರಿ ದೊರಕಲಿದೆ. ಈ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸರ್ಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ನಾಗರಿಕರಿಗೆ ತರಕಾರಿ ಹಾಗೂ ಹಣ್ಣು ಕೊಳ್ಳುವುದಕ್ಕೆ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಹಾಪ್‌ಕಾಮ್ಸ್ ವತಿಯಿಂದ ತರಕಾರಿ ಹಾಗೂ ಹಣ್ಣು ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ ಎಂದು ತಿಳಿಸಿದರು.
ಹಾಪ್‌ಕಾಮ್ಸ್ ವತಿಯಿಂದ 20 ವಾಹನಗಳಲ್ಲಿ ತರಕಾರಿ ಮಾರಾಟ ನಡೆಯುತ್ತಿದೆ. ಅಲ್ಲದೇ ಪಾಲಿಕೆ ವತಿಯಿಂದಲೂ 32ಕ್ಕೂ ಹೆಚ್ಚು ತಳ್ಳುಗಾಡಿಗಳಿಗೆ ತರಕಾರಿ ಮಾರಾಟ ಮಾಡುವುದಕ್ಕೆ ಅವಕಾಶ ನೀಡಲಾಗಿದೆ. ಇನ್ನಷ್ಟು ವಾಹನಗಳಲ್ಲಿ ತರಕಾರಿ ಮಾರಾಟ ಮಾಡಬೇಕೆಂಬ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಅದನ್ನು ಪರಿಶೀಲಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಈಗ ತರಕಾರಿ ಮತ್ತು ಹಣ್ಣು ಮಾರಾಟ ಮಾಡುತ್ತಿರುವ ವಾಹನ ಹಾಗೂ ತಳ್ಳುಗಾಡಿಗಳಲ್ಲಿ ವ್ಯವಹಾರ ಮಾಡುವ ನಾಗರಿಕರು ನಗದು ರೂಪದಲ್ಲಿ ವ್ಯವಹಾರ ಮಾಡಬೇಕಿದೆ. ಹಾಗಾಗಿ ಪೇಟಿಎಂ, ಫೋನ್ ಪೇ, ಗೂಗಲ್ ಪೇ ಮುಂತಾದ ಆ್ಯಪ್ ಮೂಲಕ ನಗದು ಪಾವತಿಸಲು ಅನುಕೂಲ ಮಾಡಿಕೊಡಬೇಕೆಂದು ಸಲಹೆ ಕೇಳಿಬಂದಿದೆ. ಮುಂದಿನ ದಿನದಲ್ಲಿ ಈ ಸಲಹೆಯನ್ನು ಪರಿಗಣಿಸಲಾಗುವುದು ಎಂದರು.
ಕೂಲಿ ಕಾರ್ಮಿಕರಿಗೆ, ಬಡಜನರಿಗೆ ತೊಂದರೆ ಉಂಟಾಗಬಾರದು ಎಂಬ ಉದ್ದೇಶದಿಂದ ಎರಡು ತಿಂಗಳಿಗಾಗುವಷ್ಟು ದವಸ ಧಾನ್ಯಗಳನ್ನು ಕೊಡುವ ತೀರ್ಮಾನ ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಬಿಸಿ ಊಟದ ಬದಲು ಅವರ ಮನೆಗೆ ದವಸ ಧಾನ್ಯ ತಲುಪಿಸುವ ವ್ಯವಸ್ಥೆ ಕೈಗೊಳ್ಳಲಾಗುತ್ತಿದೆ ಎಂದರು
ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಮಹಾನಗರ ಪಾಲಿಕೆ ಆಡಳಿತ ಪಕ್ಷ ನಾಯಕ ಎಸ್.ಎನ್. ಚನ್ನಬಸಪ್ಪ ಮತ್ತಿತರರು ಇದ್ದರು.