Advertisement

ಸಂಕಷ್ಟಕ್ಕೀಡಾದ ಉದ್ಯಮಿಗಳಿಗೆ ಸಾಲ ನೀಡಲು ಸೂಚನೆ

08:19 AM Jun 17, 2020 | Suhan S |

ವಿಜಯಪುರ: ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟಕ್ಕಿಡಾದ ಉತ್ಪಾದನಾ ಮತ್ತು ಸೇವಾ ಘಟಕಗಳ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ಉದ್ಯಮಿದಾರರಿಗೆ ಸಕಾಲಕ್ಕೆ ಸಾಲ ನೀಡುವಲ್ಲಿ ನೆರವಾಗುವಂತೆ ಖಾಸಗಿ ಬ್ಯಾಂಕರ್‌ಗಳಿಗೆ ಜಿಲ್ಲಾಧಿಕಾರಿ ವೈ.ಎಸ್‌. ಪಾಟೀಲ ಸೂಚಿಸಿದ್ದಾರೆ.

Advertisement

ಮಂಗಳವಾರ ನಗರದ ಜಿಪಂ ಸಭಾಂಗಣದಲ್ಲಿ ನಡೆದ ಆತ್ಮನಿರ್ಭರ ಮತ್ತು ಎಮರ್ಜೆನ್ಸಿ ಕ್ರೆಡಿಟ್‌ ಲೈನ್‌ ಗ್ಯಾರಂಟಿ ಯೋಜನೆ ಕುರಿತು ಆಯೋಜಿಸಲಾಗಿದ್ದ ವಿವಿಧ ಉದ್ಯಮಿದಾರರ ಜತೆ ಸಂವಾದ ನಡೆಸಿದ ಅವರು ಮಾತನಾಡಿದರು. ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಉದ್ಯಮಿಗಳ ಪುನಶ್ಚೇತನಕ್ಕೆ ಸರ್ಕಾರ ಆತ್ಮನಿರ್ಭರ ಮತ್ತು ಎಮರ್ಜೆನ್ಸಿ ಕ್ರೇಡಿಟ್‌ ಲೈನ್‌ ಗ್ಯಾರಂಟಿ ಯೋಜನೆ ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಸಾಲಕ್ಕಾಗಿ ಮೀಸಲಿಟ್ಟಿರುವ 253 ಕೋಟಿ ರೂ. ಮೊತ್ತವನ್ನು ಬ್ಯಾಂಕ್‌ಗಳು. ಅರ್ಹ ಉದ್ಯಮಿಗಳಿಗೆ ನೀಡುವಂತೆ ಬ್ಯಾಂಕ್‌ ಅಧಿಕಾರಿಗಳಿಗೆ ಸೂಚಿಸಿದರು.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ತೀವ್ರ ಸಂಕಷ್ಟಕ್ಕೀಡಾದ ಜಿಲ್ಲೆಯ ಉದ್ಯಮಿದಾರರಿಗೆ ಬ್ಯಾಂಕ್‌ ಆಫ್‌ ಬರೋಡಾ, ಬ್ಯಾಂಕ್‌ ಆಫ್‌ ಇಂಡಿಯಾ, ಬ್ಯಾಂಕ್‌ ಆಫ್‌ ಮಹಾರಾಷ್ಟ್ರ, ಕೆನರಾ  ಬ್ಯಾಂಕ್‌, ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ, ಇಂಡಿಯನ್‌ ಬ್ಯಾಂಕ್‌, ಇಂಡಿಯನ್‌ ಒವರ್‌ಸಿಸ್‌ ಬ್ಯಾಂಕ್‌, ಪಂಜಾಬ್‌ ಮತ್ತು ಸಿಂಧ್‌ ಬ್ಯಾಂಕ್‌, ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ, ಯು.ಸಿ.ಓ ಬ್ಯಾಂಕ್‌ ಮತ್ತು ಯುನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗಳ ಮೂಲಕ ಸಾಲ ಮಂಜೂರು ಮಾಡಿದ್ದು ಈವರಗೆ 28 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಹೇಳಿದರು.

ಕೋವಿಡ್‌-19 ತೀವ್ರ ಸಂಕಷ್ಟ ಮತ್ತು ವಿಷಮ ಪರಿಸ್ಥಿತಿ ಇದಾಗಿದ್ದು ಆರ್‌ಬಿಐ ಮಾರ್ಗಸೂಚಿ ಮತ್ತು ನಿರ್ದೇಶನಗಳಂತೆ ಖಾಸಗಿ ಬ್ಯಾಂಕ್‌ಗಳು ಕೂಡಾ ಸಕಾಲಕ್ಕೆ ಅರ್ಹ ಉದ್ಯಮಿಗಳಿಗೆ ಸಾಲ ಮಂಜೂರಿ ಮಾಡಬೇಕು. ಕಷ್ಟದ ಈ ಪರಿಸ್ಥಿತಿಯಲ್ಲಿ ತೊಂದರೆ ಅನುಭವಿಸಿದ ಗ್ರಾಹಕರಿಗೆ ಸಕಾಲಕ್ಕೆ ನೆರವಾಗಬೇಕು. ಇದಕ್ಕೆ ಸ್ಪಂದಿಸದ ಬ್ಯಾಂಕ್‌ ಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾತಿಗೆ ಕ್ರಮ ಕೈಗೊಳ್ಳುವುದರ ಜೊತೆಗೆ ಸರ್ಕಾರದ ಗಮನಕ್ಕೂ ಸಹ ತರುವುದಾಗಿ ಎಚ್ಚರಿಕೆ ನೀಡಿದರು.

ಯೋಜನೆ ರೂಪುರೇಷೆ ಬಗ್ಗೆ ಖಾಸಗಿ ಬ್ಯಾಂಕ್‌ಗಳಿಗೆ ಮನವರಿಕೆ ಮಾಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಆರ್‌ಬಿಐ ಮಾರ್ಗಸೂಚಿ ಅನ್ವಯ ಕಾರ್ಯ ನಿರ್ವಹಿಸುವಂತೆ ಸೂಕ್ತ ತಿಳಿವಳಿಕೆ ನೀಡಬೇಕು. 2020ರ ಅಕ್ಟೋಬರ್‌ 31ರೊಳಗೆ ಈ ಯೋಜನೆ ಅಡಿ ಸೌಲಭ್ಯ ಕಲ್ಪಿಸಲು ಅವಕಾಶ ಇರುವುದರಿಂದ ಮತ್ತು ವ್ಯಾಪಾರ ವಹಿವಾಟಿಗೆ ಪ್ರೋತ್ಸಾಹದಾಯಕವಾಗಿದ್ದು, ಉದ್ಯಮಿಗಳಿಗೆ ಇದರ ಲಾಭ ಕಲ್ಪಿಸಬೇಕು ಎಂದು ನಿರ್ದೇಶನ ನೀಡಿದರು.

Advertisement

ಆತ್ಮನಿರ್ಭರ ಸೇರಿದಂತೆ ಕೇಂದ್ರದ ಯೋಜನೆಗಳ ಕುರಿತು ಸಭೆಗೆ ಮಾಹಿತಿ ನೀಡಿದ ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಸೋಮನಗೌಡ, ಕೇಂದ್ರ ಸರ್ಕಾರದ ಆತ್ಮನಿರ್ಭರ ಯೋಜನೆಯಡಿ 3 ಲಕ್ಷ ರೂ.ವರೆಗೆ ಸಾಲ ಪಡೆಯಲು ಅವಕಾಶವಿದೆ. ಅಕ್ಟೋಬರ್‌ 31ರೊಳಗೆ ಮೊದಲು ಬಂದವರಿಗೆ ಪ್ರಥಮ ಆದ್ಯತೆ ಮೇಲೆ ಸಾಲ ನೀಡಲಾಗುತ್ತಿದೆ. ಅರ್ಹ ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಿಗಳು ಬ್ಯಾಂಕ್‌ ಶಾಖೆಗಳಿಗೆ ಸಂಪರ್ಕಿಸಿ ಸಾಲ ಸೌಲಭ್ಯ ಪಡೆಯುವಂತೆ ಕೋರಿದರು.

ಇದೇ ಸಂದರ್ಭದಲ್ಲಿ ವಿವಿಧ ಉದ್ಯಮಿಗಳೊಂದಿಗೆ ಸಂವಾದ ನಡೆಸಿ ಸಮಸ್ಯೆ ಆಲಿಸಿದ ಜಿಲ್ಲಾ ಧಿಕಾರಿ ವೈ.ಎಸ್‌.ಪಾಟೀಲ, ಸೂಕ್ತ ಸ್ಪಂದನೆಯ ಭರವಸೆ ನೀಡಿದರು.

ಜಿಪಂ ಸಿಇಒ ಗೋವಿಂದರೆಡ್ಡಿ, ಜಿಲ್ಲಾ ಕೈಗಾರಿಕಾ ಕೇಂದ್ರ ಜಂಟಿ ನಿರ್ದೇಶಕ ಟಿ.ಸಿದ್ದಣ್ಣ, ವಿವಿಧ ಬ್ಯಾಂಕ್‌ಗಳ ಮುಖ್ಯಸ್ಥರು, ಉದ್ಯಮಿಗಳು ಸೇರಿದಂತೆ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next